Viral Video: ಮದುವೆ ಮಂಟಪದಲ್ಲೇ ರಮ್ ಕುಡಿದ ವರ.... ಆಮೇಲೆ ಆಗಿದ್ದೇ ಬೇರೆ! ವಿಡಿಯೊ ವೈರಲ್
ಮದುವೆಯಲ್ಲಿ ವೇದಿಕೆಯಲ್ಲಿ ಕುಳಿತಿರುವ ವರನಿಗೆ ಆತನ ಸ್ನೇಹಿತನೊಬ್ಬ ಫ್ರೂಟಿ ಜ್ಯೂಸ್ ಪ್ಯಾಕೆಟ್‍ನೊಳಗೆ ರಮ್ ಮಿಕ್ಸ್ ಮಾಡಿ ನೀಡಿದ್ದಾನೆ. ಈ ವಿಡಿಯೊ ಸೋಶೀಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ರೀತಿ ತಮಾಷೆ ಮಾಡಿದ್ದಕ್ಕೆ ವರನ ಸ್ನೇಹಿತನ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಾಂದರ್ಭಿಕ ಚಿತ್ರ

ಮದುವೆಯ ದಿನ ವರನ ಸ್ನೇಹಿತರು ತಮಾಷೆ ಮಾಡುವುದು, ವಧುವಿನ ಕಡೆಯವರು ವರನ ಚಪ್ಪಲಿ ಅಡಗಿಸಿಡುವುದು ಇವೆಲ್ಲಾ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಆದರೆ ಇಲ್ಲೊಬ್ಬ ವೇದಿಕೆಯಲ್ಲಿ ಕುಳಿತಿರುವ ವರನಿಗೆ ಫ್ರೂಟಿ ಜ್ಯೂಸ್ ಪ್ಯಾಕೆಟ್‍ನೊಳಗೆ ರಮ್ ತುಂಬಿಸಿ ನೀಡಿದ್ದಾನೆ. ಈ ವಿಡಿಯೊ ಸೋಶೀಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅಬೀರ್ ಬಿಸ್ವಾಸ್ ಎಂಬ ಇನ್‌ಸ್ಟಾಗ್ರಾಮರ್ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೊ ಶುರುವಿನಲ್ಲಿ ಅಬೀರ್ ಫ್ರೂಟಿ ಪ್ಯಾಕ್ ಅನ್ನು ರಮ್ ಬಾಟಲಿಯ ಪಕ್ಕದಲ್ಲಿ ಇಡುವುದು ಸೆರೆಯಾಗಿದೆ. ರಮ್ ಅನ್ನು ಜ್ಯೂಸ್ ಪ್ಯಾಕ್‍ಗೆ ಹಾಕಿ ವರನಿಗೆ ನೀಡಿದ್ದಾನೆ. ಆದರೆ ಜ್ಯೂಸ್ ತೆಗೆದುಕೊಂಡ ವರನು ಒಂದು ಗುಟುಕನ್ನು ಕುಡಿದು ಅದರಲ್ಲಿ ಆಲ್ಕೋಹಾಲ್ ಇರುವುದು ಗೊತ್ತಾಗಿ ಸ್ನೇಹಿತನಿಗೆ ನೀಡಿದ್ದಾನೆ.
ಸ್ನೇಹಿತನ ತಮಾಷೆಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ತಮಾಷೆಯಾಗಿ ಕಂಡರೆ, ಇತರರು ಮದುವೆಯ ಆಚರಣೆಗಳು ನಡೆಯುತ್ತಿದ್ದ ವೇದಿಕೆಗೆ ಮದ್ಯವನ್ನು ತಂದಿದಕ್ಕೆ ಖಂಡಿಸಿದ್ದಾರೆ. "ಹಾಗೆ ಮಾಡಬೇಡ. ಮದುವೆ ಸಮಾರಂಭವು ನಾಟಕವಲ್ಲ, ಅದು ಒಂದು ಆಚರಣೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಅವನು ಪೂಜೆಯಲ್ಲಿ ಕುಳಿತಿದ್ದಾನೆ. ಈ ವೇಳೆ ನೀವು ಅವನಿಗೆ ಮದ್ಯವನ್ನು ನೀಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತರರು ವಿಡಿಯೊಗೆ ‘ಸ್ಮೈಲ್’ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ವಿಶೇಷವೆಂದರೆ, ಈ ಇನ್‌ಸ್ಟಾಗ್ರಾಂ ರೀಲ್ 64 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.
ಮದುವೆಯ ದಿನ ಸ್ನೇಹಿತರು ತಮಾಷೆ ಮಾಡುವುದು ಇದೆ ಮೊದಲಲ್ಲ. ಈ ಹಿಂದೆ ವರನ ಕೆಲವು ಸ್ನೇಹಿತರು ಹೂವುಗಳಿಂದ ಅಲಂಕರಿಸಿದ ವಾಷಿಂಗ್ ಮೆಷಿನ್ ಚಿತ್ರವಿರುವ ದೊಡ್ಡ ಪೆಟ್ಟಿಗೆಯನ್ನು ಹೊತ್ತು ಅದನ್ನು ದಂಪತಿಗೆ ನೀಡಲು ಮದುವೆ ವೇದಿಕೆ ಮೇಲೆ ಬಂದಿದ್ದಾರೆ. ಕೊನೆಗೆ ಬಾಕ್ಸ್ ತೆರೆದಾಗ ಅದರಲ್ಲಿ ವಾಷಿಂಗ್ ಮೆಷಿನ್ ಇರದೇ ಖಾಲಿ ಬಾಕ್ಸ್ ಆಗಿತ್ತು ಇದನ್ನು ನೋಡಿ ವರನು ಜೋರಾಗಿ ನಕ್ಕಿದ್ದಾನೆ.
ಈ ಸುದ್ದಿಯನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ಮಂಟಪದಲ್ಲೇ ವರನ ರಂಪಾಟ; ಮದುವೆ ಕ್ಯಾನ್ಸಲ್ ಮಾಡಿದ ವಧುವಿನ ತಾಯಿ: ವಿಡಿಯೊ ವೈರಲ್
ಮದುವೆ ದಿನ ವರನೊಬ್ಬ ಕಂಠಪೂರ್ತಿ ಕುಡಿದು ವಿವಾಹ ಮಂಟಪದಲ್ಲಿ ರಂಪಾಟ ಮಾಡಿದ್ದಾನೆ. ಇದರಿಂದ ಮದುವೆಯೇ ರದ್ದಾಗಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಮಗಳ ಮುಂದಿನ ಜೀವನಕ್ಕಾಗಿ ವಧುವಿನ ತಾಯಿ ಮಹತ್ವದ ನಿರ್ಧಾರ ತೆಗೆದುಕೊಂಡು ಅದ್ದೂರಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ವಿಡಿಯೊ ನೋಡಿದ ಹಲವರು ವಧುವಿನ ತಾಯಿಯ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು,ಮದುವೆ ದಿನ ವರ ಹಾಗೂ ವರನ ಸ್ನೇಹಿತರು ಕುಡಿದು ಬಂದು ಗಲಾಟೆ ಮಾಡಿದ್ದಾರೆ. ವರನು ಮದುವೆ ಮನೆಗೆ ಕಂಠಪೂರ್ತಿ ಕುಡಿದು ಬಂದಿದ್ದು ಮಾತ್ರವಲ್ಲದೇ ಆರತಿ ತಟ್ಟೆಯನ್ನು ಎಸೆದು ಅಪಮಾನಿಸಿದ್ದಾನೆ. ಈ ಸಂದರ್ಭ ವಧು ತಾಯಿ ತಾಳ್ಮೆ ಕಳೆದುಕೊಂಡಿದ್ದು ತಮ್ಮ ಮಗಳ ಮುಂದಿನ ಜೀವನಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಲ್ಲೂ ಕ್ಷಮೆ ಕೋರಿ ಈ ಮದುವೆ ಮುರಿಯುವ ನಿರ್ಧಾರ ಮಾಡಿದ್ದೇವೆ. ನನಗೆ ನನ್ನ ಮಗಳ ಭವಿಷ್ಯವೇ ಮುಖ್ಯ. ಹೀಗಾಗಿ ಮದುವೆ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ. ವೈರಲ್ ವಿಡಿಯೊದಲ್ಲಿ ತಾಯಿ ಎಲ್ಲರ ಮುಂದೆ ಕೈಜೋಡಿಸಿ ವಿನಂತಿ ಮಾಡುತ್ತಿರುವುದು ಕಂಡು ಬಂದಿದೆ. ಕೆಲವರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಧುವಿನ ತಾಯಿ ಮದುವೆ ಕ್ಯಾನ್ಸಲ್ ಮಾಡುವ ಬಗ್ಗೆ ಖಚಿತ ನಿರ್ಧಾರ ಕೈಗೊಂಡಿದ್ದಾರೆ.