ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧದ ಕ್ರಿಮಿನಲ್ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
ಧೀರೇಂದ್ರಕುಮಾರ್ ಹಾಗೂ ನಿರ್ಮಲ್ ಸೇನ್ ಅವರು ತಮ್ಮ ಇಬ್ಬರೂ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ಕೊಡಿಸಿದ್ದರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಕೋಚ್ ಆಗಿರುವ ವಿಮಲ್ ಕುಮಾರ್ ಜತೆ ಸಂಚು ರೂಪಿಸಿ, ಮಕ್ಕಳ ವಯಸ್ಸು ತಿದ್ದುಪಡಿ ಮಾಡಿ ಜನನ ಪ್ರಮಾಣ ಪತ್ರ ಸೃಷ್ಟಿಸಿದ್ದರು.


ಬೆಂಗಳೂರು: ವಯಸ್ಸು ತಿದ್ದಿದ ಜನನ ಪ್ರಮಾಣ ಸೃಷ್ಟಿಸಿ ಸರ್ಕಾರ ಹಾಗೂ ಪ್ರತಿಭಾವಂತ ಆಟಗಾರರನ್ನು ವಂಚಿಸಿದ ಆರೋಪದಡಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್(Lakshya Sen), ಕುಟುಂಬ ಸದಸ್ಯರು ಹಾಗೂ ಕೋಚ್ ವಿಮಲ್ ಕುಮಾರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. 2022ರ ಡಿಸೆಂಬರ್‌ನಲ್ಲಿ ಇವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ದೂರುದಾರ ಎಂ.ಜಿ. ನಾಗರಾಜ್ ಅವರು ವಂಚನೆ ಕೃತ್ಯದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿತ್ತು. ಅದರನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಲಕ್ಷ್ಮ ಸೇನ್ ಅವರ ತಂದೆ ಧೀರೇಂದ್ರಕುಮಾರ್ ಸೇನ್, ತಾಯಿ ನಿರ್ಮಲ್ ಸೇನ್ ಸಹೋದರ ಚಿರಾಗ್ ಸೇನ್ ಮತ್ತು ಕೋಚ್ ವಿಮಲ್ ಕುಮಾರ್ ಅವರನ್ನು ಆರೋಪಿ ಎಂದು ಪರಿಗಣಿಸಲಾಗಿತ್ತು.
ತಮ್ಮ ವಿರುದ್ಧದ ಎಫ್ಐಆರ್ ಹಾಗೂ ಅದರ ಕುರಿತ ನಗರದ 8ನೇ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಲಕ್ಷ್ಯ ಸೇನ್, ಅವರ ತಂದೆ-ತಾಯಿ, ಸಹೋದರ ಮತ್ತು ಕೋಚ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ, ಪ್ರಕರಣ ಸಂಬಂಧ ದೂರುದಾರರು ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ಅಂಶಗಳು ಆರೋಪ ಸಂಬಂಧ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಾಗಿದ್ದು, ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ದಾಖಲಾಗಿರುವ ಎಫ್ಐಆರ್ ಆಧಾರ ರಹಿತವಾಗಿದೆ. ಅವರಿಗೆ ಕಿರುಕುಳ ನೀಡುವ ಸಲುವಾಗಿ ಈ ದೂರು ದಾಖಲಿಸಿದ್ದು, ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಕೋರಿದ್ದರು.
ಏನಿದು ಪ್ರಕರಣ?
ಧೀರೇಂದ್ರಕುಮಾರ್ ಹಾಗೂ ನಿರ್ಮಲ್ ಸೇನ್ ಅವರು ತಮ್ಮ ಇಬ್ಬರೂ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ಕೊಡಿಸಿದ್ದರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ ಕೋಚ್ ಆಗಿರುವ ವಿಮಲ್ ಕುಮಾರ್ ಜತೆ ಸಂಚು ರೂಪಿಸಿ, ಮಕ್ಕಳ ವಯಸ್ಸು ತಿದ್ದುಪಡಿ ಮಾಡಿ ಜನನ ಪ್ರಮಾಣ ಪತ್ರ ಸೃಷ್ಟಿಸಿದ್ದರು.
ನೈಜ ವಯಸ್ಸು ಮುಚ್ಚಿಟ್ಟಿದ್ದ ಲಕ್ಷ್ಯಸೇನ್, 2010ರಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ವಂಚನೆ ಮೂಲಕವೇ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅರ್ಹ ವಯಸ್ಸಿನ ಆಟಗಾರರಿಗೆ ಅನ್ಯಾಯವಾಗಿದೆ. ಆರೋಪಿಗಳ ಕೃತ್ಯದಿಂದಾಗಿ ಸರ್ಕಾರಕ್ಕೂ ವಂಚನೆಯಾಗಿದೆ ಎಂದು ಎಂ.ಜಿ. ನಾಗರಾಜ್ ದೂರು ನೀಡಿದ್ದರು.