Sajjan Kumar : 1984ರ ಸಿಖ್ ವಿರೋಧಿ ಗಲಭೆ ಕೇಸ್- ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ
1984ರ ಸಿಖ್ ವಿರೋಧಿ ಗಲಭೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಅಪರಾಧಿಯಾದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಜ್ಜನ್ ಅವರನ್ನು ದೋಷಿ ಎಂದು ಫೆ.12 ತೀರ್ಪು ನೀಡಿತ್ತು.

ಸಜ್ಜನ್ ಕುಮಾರ್

ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯಲ್ಲಿ(Anti-Sikh Riots Case) ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಅಪರಾಧಿಯಾದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ (Sajjan Kumar) ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸರಸ್ವತಿ ವಿಹಾರ್ ಪ್ರದೇಶದಲ್ಲಿ ನಡೆದ ತಂದೆ-ಮಗನ ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ದೂರುದಾರರು ಮಾಜಿ ಕಾಂಗ್ರೆಸ್ ಸಂಸದರಿಗೆ ಮರಣ ದಂಡನೆ ವಿಧಿಸಬೇಕೆಂದು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಮುಂದೆ ದೂರು ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಫೆ. 21 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಫೆ. 25 ಕ್ಕೆ ಮುಂದೂಡಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಲಾಗಿದೆ. 1984 ನವೆಂಬರ್ 1ರಂದು ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಮಾಜಿ ಸಂಸದ ಸಜ್ಜನ್ ಕುಮಾರ್ ದಂಗೆ ನಡೆಸಿದ ಗುಂಪನ್ನು ಮುನ್ನಡೆಸುತ್ತಿದ್ದರು ಎಂಬ ಆರೋಪವಿತ್ತು. ಸದರ ಪ್ರಚೋದನೆಯ ಮೇರೆಗೆ ಗುಂಪೊಂದು ಅಪ್ಪ ಮತ್ತು ಮಗನನ್ನು ಜೀವಂತವಾಗಿ ಸುಟ್ಟುಹಾಕಿತು ಎಂದು ಗಂಭೀರವಾಗಿ ಆರೋಪಿಸಲಾಗಿತ್ತು. ಹತ್ಯೆಯ ನಂತರವೂ ಸಂತ್ರಸ್ತರ ಮನೆಯನ್ನು ಲೂಟಿ ಮಾಡಿದ್ದು, ಮನೆಯಲ್ಲಿದ್ದ ಇತರ ಜನರನ್ನೂ ಥಳಿಸಿದ್ದರು ಎನ್ನಲಾಗಿತ್ತು. ನಂತರ ಸುದೀರ್ಘ ವಿಚಾರಣೆಯ ಬಳಿಕ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಫೆ.12 ತೀರ್ಪು ನೀಡಿತ್ತು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾರಕಾಸ್ತ್ರವನ್ನು ಹಿಡಿದ ಗುಂಪು ಸಿಖ್‌ರ ಮೇಲೆ ಹಲ್ಲೆ ಮಾಡಿತ್ತು. ಮನೆಗೆ ನುಗ್ಗಿದ್ದ ದಾಳಿಕೋರರು ಪತಿ ಹಾಗೂ ಮಗನ ಹತ್ಯೆ ಮಾಡಿ, ಲೂಟಿ ಮಾಡಿದ್ದಾರೆಂದು ಜಸ್ವಂತ್ ಅವರ ಪತ್ನಿ ಸಾಕ್ಷಿ ನುಡಿದಿದ್ದಾರೆಂದು ಪ್ರಾಸಿಕ್ಯೂಶನ್ ಆರೋಪಪಟ್ಟಿಯಲ್ಲಿ ಹೇಳಿದ್ದರು. ಹಿಂಸಾಚಾರ ಮತ್ತು ಅದರ ಪರಿಣಾಮಗಳ ತನಿಖೆಗಾಗಿ ಸ್ಥಾಪಿಸಲಾದ ನಾನಾವತಿ ಆಯೋಗವು, ದೆಹಲಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ 587 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ವರದಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Goa Murder Case: ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಸಂಸದರಾಗಿದ್ದ ಸಜ್ಜನ್ ಕುಮಾರ್, 1984 ರ ನವೆಂಬರ್ 1 ಮತ್ತು 2 ರಂದು ದೆಹಲಿಯ ಪಾಲಂ ಕಾಲೋನಿಯಲ್ಲಿ ನಡೆದ ಐದು ಜನರ ಹತ್ಯೆಯಲ್ಲಿಯೂ ಭಾಗಿಯಾಗಿದ್ದರು. ಆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.