Saturday, 14th December 2024

ದೇಶದ ವಿರುದ್ದ ಪಾಕ್‌ ಸುಮ್ಮನಿರುವುದಕ್ಕೆ ಕಾರಣ ರಾ

ಸಂವಾದ – ೩೩೯

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ರಾ…. ಈ ಹೆಸರು ಹೇಳಿದರೆ ಪಾಕಿಸ್ತಾನ ಬೆಚ್ಚಿಬೀಳುತ್ತದೆ. ಏನಿದು ‘ರಾ’ ಎಂದು ಕೆಲವರು ಪ್ರಶ್ನಿಸಬಹುದು. ಇದು ಭಾರತೀಯ ಗೂಢಾಚಾರ ಸಂಸ್ಥೆ. ಭಾರತದ ವಿರುದ್ಧ ಕಾಲು ಕೆರೆಯುತ್ತಲೇ ಇರುವ ಪಾಕಿಸ್ತಾನಕ್ಕೆ ಇಂದಿಗೂ ‘ರಾ’ ಗೂಢಾಚಾರರ ಬಗ್ಗೆ ಭಯ ಇದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ರಾ ಗೂಢಾಚಾರರ ಸಾಹಸಗಳು’ ವಿಚಾರದ ಕುರಿತು ಮಾತನಾಡಿದ ಅವರು, ‘ರಾ’ ಸ್ಥಾಪನೆ ಯಾಗಿದ್ದು, ಅದರ ಹಿಂದೆ ಇದ್ದ ಗೂಢಾ ಚಾರ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿದರು. ಅವರು ಒಟ್ಟಾರೆ ಹೇಳಿದ್ದು ಇಷ್ಟು…: ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರೂ ‘ರಾ’ ಗೂಢಾಚಾರ ಸಂಸ್ಥೆ ಆರಂಭ ವಾಗಿದ್ದು ೧೯೬೫ರ ಸೆಪ್ಟೆಂಬರ್‌ನಲ್ಲಿ.

ಹಾಗಾದರೆ ಅಲ್ಲಿಯವರೆಗೆ ಗೂಢಾಚಾರ ಸಂಸ್ಥೆಯೇ ಇರಲಿಲ್ಲವೇ ಎಂಬ ಪ್ರಶ್ನೆ ಹಲವ ರಲ್ಲಿ ಇರಬಹುದು. ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನವೇ ಭಾರತದಲ್ಲಿ ಗೂಢಾಚಾರ ಸಂಸ್ಥೆ ಇತ್ತು. ಆದರೆ, ಇದನ್ನು ಬ್ರಿಟಿಷರು ನಿರ್ವಹಿಸುತ್ತಿದ್ದರು. ಭಾರತ ವಿಭಜನೆಗೊಂಡು ಪಾಕಿಸ್ತಾನ ಹುಟ್ಟಿಕೊಂಡಾಗ ಗೂಢಾಚಾರ ಸಂಸ್ಥೆಯೂ ಎರಡು ಹೋಳಾಯಿತು. ಆಗ ಭಾರತದ ಗೂಢಾಚಾರ ಸಂಸ್ಥೆಯನ್ನು ಇಂಟೆಲಿಜೆನ್ಸ್ ಬ್ಯೂರೋ ಎಂದು ಕರೆಯಲಾಯಿತು.

ಅಖಂಡ ಭಾರತ ವಿಭಜನೆಯಾದ ಬಳಿಕ ಭಾರತದ ಮೇಲೆ ಗೂಢಾಚಾರಿಕೆ ನಡೆಸಲು ೧೯೪೮ ರಲ್ಲಿ ಐಎಸ್‌ಐ ಸ್ಥಾಪಿಸಲಾಯಿತು. ಇದರ ಉಗಮಕ್ಕೆ ಮತ್ತೊಂದು ಕಾರಣ ಎಂದರೆ, ೧೯೪೭ರಲ್ಲಿ ಭಾರತದ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ ಸೋಲ ಬೇಕಾ ಯಿತು. ಇದಕ್ಕೆ ಗೂಢಾಚಾರಿಕೆ ವೈಫಲ್ಯವೇ ಎಂದುಕೊಂಡ ಪಾಕಿಸ್ತಾನ ಪ್ರತ್ಯೇಕ ಗೂಢಾಚಾರಿಕಾ ಸಂಸ್ಥೆ ನೇಮಿಸಿ ಅದಕ್ಕೆ ಐಎಸ್‌ಐ ಎಂದು ಹೆಸರಿಟ್ಟಿತ್ತು.

ಇದರ ಕೆಲಸ ಎಂದರೆ ಪ್ರತಿ ಕ್ಷಣವೂ ಭಾರತದ ವಿರುದ್ಧ ಗೂಢಾಚಾರಿಕೆ ನಡೆಸುವುದು. ಭಾರತದ ಗೂಢಾಚಾರ ಸಂಸ್ಥೆ ಅತ್ಯಂತ ಕಾರ್ತತತ್ಪರವಾಗಿತ್ತು. ಸ್ವಾತಂತ್ರ್ಯಾನಂತರ ಚೀನಾ ಮತ್ತು ಪಾಕಿಸ್ತಾನ ಎರಡೂ ಸೇರಿ ಭಾರತ ವಿರುದ್ಧ ಇದ್ದುದರಿಂದ ಆ ಎರಡು ರಾಷ್ಟ್ರಗಳ ಬಗ್ಗೆ ಗಮನಹರಿಸಲೆಂದೇ ಪ್ರತ್ಯೇಕ ಎಕ್ಸ್‌ಟರ್ನಲ್ ಡಿವಿಷನ್ ನೇಮಿಸಲಾಗಿತ್ತು.

ಆ ಸಂದರ್ಭದಲ್ಲಿ ಪ್ರತ್ಯೇಕ ದೇಶಕ್ಕಾಗಿ ಈಶಾನ್ಯ ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿತ್ತು. ಮುಖ್ಯವಾಗಿ ನಾಗಾಲ್ಯಾಂಡ್‌ನಲ್ಲಿ ಈ ಹೋರಾಟ ತೀವ್ರವಾಗಿತ್ತು. ಇದಕ್ಕೆ ಪಾಕಿಸ್ತಾನವೂ ಕುಮ್ಮಕ್ಕು ನೀಡುತ್ತಿತ್ತು. ಮತ್ತೊಂದೆಡೆ ೧೯೬೨ರಲ್ಲಿ ಭಾರತದ ಮೇಲೆ ಚೀನಾ
ಆಕ್ರಮಣ ಮಾಡಿತ್ತು. ಭಾರತದ ಸಾಕಷ್ಟು ಭೂಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಇಂಟೆಲಿಜೆನ್ಸ್ ಬ್ಯೂರೋ ವೈಫಲ್ಯ ಕಂಡಿತು ಎಂಬ ಕಾರಣಕ್ಕೆ ಗೂಢಾಚಾರಿಕೆ ಬಲಪಡಿಸಲು ಡಿಜಿಎಸ್ ಸಂಸ್ಥೆ ಅಸ್ತಿತ್ವಕ್ಕೆ ಬಂತು.

೧೯೬೫ರಲ್ಲಿ ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿದಾಗ ಯುದ್ಧದಲ್ಲಿ ಅದನ್ನು ಹಿಮ್ಮೆಟ್ಟಿಸಿದ ಭಾರತ ಲಾಹೋರ್ ತನಕ ಪಾಕಿಸ್ತಾನ ಸೈನ್ಯವನ್ನು ಬೆನ್ನಟ್ಟಿಕೊಂಡು ಹೋಯಿತು. ಈ ವೇಳೆ ಪಾಕ್ ತನ್ನ ಕೆನಾಲ್ ಗೇಟ್ ತೆರೆಯುವ ಬಗ್ಗೆ ಭಾರತೀಯ
ಗೂಢಾಚಾರ ಸಂಸ್ಥೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆಂದೇ ಪ್ರತ್ಯೇಕ ಗೂಢಾಚಾರ ಸಂಸ್ಥೆ ಸ್ಥಾಪಿಸಬೇಕು ಎಂದು ತೀರ್ಮಾನಿಸಲಾಯಿತು. ಅಷ್ಟರಲ್ಲಿ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದು ಪ್ರತ್ಯೇಕ ಗೂಢಾಚಾರ ಸಂಸ್ಥೆ ‘ರಾ’ ಸ್ಥಾಪಿಸಿ ದರು.

ಈ ಸಂಸ್ಥೆ ನೇರವಾಗಿ ಪ್ರಧಾನಿ ಮತ್ತು ಸಚಿವ ಸಂಪುಟ ಕಾರ್ಯಾಲಯದ ಅಡಿ ಮಾತ್ರ ಇರಬೇಕು. ಬೇರೆ ಯಾರು ಕೂಡ ಮಧ್ಯೆ ಬರಬಾರದು ಎಂದು ತೀರ್ಮಾನಿಸಲಾಯಿತು.

ಪಾಕ್ ಆಕ್ರಮಣದ ಮುನ್ನೆಚ್ಚರಿಕೆ ನೀಡಿದ ‘ರಾ’ : ೧೯೭೧ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧ ಸಾರಿದ್ದು, ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಅದನ್ನು ವಿಭಜಿಸಿ ಬಾಂಗ್ಲಾದೇಶವನ್ನು ಭಾರತ ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಭಾರತದ ಮೇಲೆ ಪಾಕಿಸ್ತಾನ ಯುದ್ಧ ಆರಂಭಿಸಲಿದೆ ಎಂದು ಹೇಳಿದವರು ಶಂಕರನ್ ನಾಯರ್. ಪಾಕಿಸ್ತಾನ ಅಧ್ಯಕ್ಷರ ಕಚೇರಿಯಿಂದಲೇ ಅವರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ನೀಡಿದಾತ ‘ರಾ’ ಏಜೆಂಟ್. ಹೀಗಾಗಿಯೇ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಲು ಭಾರತಕ್ಕೆ ಸಾಧ್ಯವಾಯಿತು.

ವಿಕ್ರಾಂತ್ ಮೇಲೆ ದಾಳಿ ಬಗ್ಗೆ ಸೂಚನೆ ನೀಡಿದ್ದ ‘ರಾ’: ‘ರಾ’ ಸಂಸ್ಥೆಯಲ್ಲಿ ನನ್ನ ಮಿತ್ರರೊಬ್ಬರು ಇದ್ದರು. ಅವರು ಶ್ರೀಲಂಕಾ ದಲ್ಲಿ ಸಂಸ್ಥೆಯ ಪರ ಕೆಲಸ ಮಾಡುತ್ತಿದ್ದರು. ಅಲ್ಲಿನ ಬಂದರ್‌ನಲ್ಲಿ ಪಾಕ್ ನೌಕಾದಳದ ಸಮವಸ ಧರಿಸಿದವರು ಕೆಲಸ ಮಾಡು ತ್ತಿದ್ದುದನ್ನು ಗಮನಿಸಿ ಅವರು ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಪರಿಶೀಲಿಸಿದಾಗ ಪಾಕಿಸ್ತಾನದ ಸಬ್‌ಮೆರೀನ್ ಕರಾಚಿಯಿಂದ ಕೊಲಂಬೋಗೆ ಬಂದಿಳಿದಿದ್ದು ಗೊತ್ತಾಯಿತು.

ವಿಶಾಖಪಟ್ಟಣದಲ್ಲಿದ್ದ ಭಾರತದ ಹೆಮ್ಮೆಯ ವಿಕ್ರಾಂತ್ ನೌಕೆಯನ್ನು ಹೊಡೆದುರುಳಿಸಲು ಅದು ಬಂದಿತ್ತು. ಈ ಮಾಹಿತಿ  ತಿಳಿಯುತ್ತಿದ್ದಂತೆ ವಿಕ್ರಾಂತ್ ನೌಕೆ ಇದ್ದ ಜಾಗದಲ್ಲಿ ರಜಪೂತ್ ನೌಕೆ ನಿಲ್ಲಿಸಲಾಯಿತು. ಆ ಮೂಲಕ ಪಾಕಿಸ್ತಾನದ ಸಬ್‌ಮೆರಿನ್ ಅನ್ನು ನಾಶಪಡಿಸಲಾಯಿತು. ಈ ಎಲ್ಲಾ ಸಾಧನೆ ಆಗಬೇಕಾದರೆ ‘ರಾ’ ಏಜೆಂಟರ ಕಾರ್ಯಕ್ಷಮತೆಯೇ ಕಾರಣ ಎಂದು ವಿವರಿಸಿ ದರು.

***

? ಗೂಢಾಚಾರಿಕೆಗೆ ಸಂಬಂಧಿಸಿದಂತೆ ಇತರೇ ರಾಷ್ಟ್ರಗಳು ಇಂಟಲಿಜೆಂನ್ಸ್ ಎಂಬ ಪದ ಬಿಟ್ಟಿವೆ ಎಂಬ ಕಾರಣಕ್ಕೆ ೧೯೬೮ರಲ್ಲಿ ಗೂಢಾಚಾರ ದಳಕ್ಕೆ ‘ರಾ’ ಎಂದು ಹೆಸರಿಸಲಾಯಿತು.

? ‘ರಾ’ ಮೊದಲ ಮುಖ್ಯಸ್ಥ ರಾಮನಾಥ್ ಕಾವ್. ಉಪ ಮುಖ್ಯಸ್ಥ ಶಂಕರನ್ ನಾಯರ್ ಈ ಸಂಸ್ಥೆ ಹೆಚ್ಚು ಶಕ್ತಿಶಾಲಿ ಮತ್ತು
ಚಾಣಾಕ್ಷತೆಯಿಂದ ಕೆಲಸ ಮಾಡಲು ಕಾರಣ.

? ೧೯೭೧ರಲ್ಲಿ ಬಾಂಗ್ಲಾ ಉದಯವಾಗಲು ಮುಖ್ಯ ಕಾರಣ ನಮ್ಮ ‘ರಾ’ ಸಂಸ್ಥೆ. ಅದರ ಮೊಟ್ಟಮೊದಲ ಕಾರ್ಯಾಚರಣೆಯಲ್ಲೇ
ಯಶಸ್ಸು ಕಂಡಿತು.

? ನಮ್ಮ ರಾಷ್ಟ್ರದ ಗೂಢಾಚಾರರು ತಾವು ಮಾಡಿದ ಉತ್ತಮ ಕೆಲಸಗಳ ಬಗ್ಗೆ ಯಾರ ಬಳಿಯೂ ಹೇಳುವುದಿಲ್ಲ. ಅಷ್ಟು
ನಿಗೂಢವಾಗಿರುವುದಕ್ಕೆ ಸಂಸ್ಥೆ ಯಶಸ್ಸು ಕಾಣಲು ಸಾಧ್ಯವಾಯಿತು.

? ಪಾಕಿಸ್ತಾನವನ್ನು ಇಬ್ಭಾಗ ಮಾಡಿ ಬಾಂಗ್ಲಾದೇಶವನ್ನು ಸೃಷ್ಟಿಸಿದ್ದಕ್ಕೆ ೧೯೭೧ರಿಂದಲೂ ಪಾಕಿಸ್ತಾನ ಭಾರತದ ವಿರುದ್ಧ
ಹೋರಾಟಕ್ಕೆ ಪ್ರಯತ್ನಿಸುತ್ತಲೇ ಇದೆ. ಆದರೆ ‘ರಾ’ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ.

? ಪಾಕ್‌ಗೆ ನಮ್ಮ ಸೈನಿಕರಿಗಿಂತ ಹೆಚ್ಚಾಗಿ ‘ರಾ’ ಸಂಸ್ಥೆಯ ಮೇಲೆ ಹೆಚ್ಚು ಭಯ. ಏಕೆಂದರೆ, ಪಾಕಿಸ್ತಾನದ ಪ್ರತಿ ಸೋಲು, ಹಿನ್ನಡೆಗೂ ಕಾರಣವೇ ಆ ಸಂಸ್ಥೆ.

***

೫೩ ವರ್ಷದ ಹಿಂದೆ ಆರಂಭವಾದ ‘ರಾ’ ಪ್ರತಿಷ್ಠಿತ ಗೂಢಾಚಾರ ಸಂಸ್ಥೆ. ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಗುರುಪ್ರಸಾದ್ ಅವರು ಒಂದು ಪುಸ್ತಕ ಬರೆದು ಬಿಡುಗಡೆ ಮಾಡಿದ್ದಾರೆ. ಇದರ ಮುಖ್ಯ ಕರ್ತವ್ಯ ವಿದೇಶಗಳ ಬಗ್ಗೆ ಬೇಹುಗಾರಿಕೆ ಮಾಡುವುದು.
ಭಯೋತ್ಪಾದನೆ ಸಂಬಂಽ ಚಟುವಟಿಕೆಗಳ ಬಗ್ಗೆ ಎಚ್ಚರಿಸುವುದು ಮತ್ತು ನ್ಯೂಕ್ಲಿಯರ್ ಕಾರ್ಯಕ್ರಮಗಳ ಬಗ್ಗೆ ಕಣ್ಣಿಡುವುದು.
ಭಾರತವಿಂದು ಸುರಕ್ಷಿತವಾಗಿದ್ದರೆ ರಾ ಸಂಸ್ಥೆಯ ಯೋಗದಾನವೂ ಇದೆ. ಇದರ ಹಿಂದೆ ರೋಚಕವಾದ ಕಥೆಗಳಿವೆ. ಕನ್ನಡದಲ್ಲಿ
ಮೊಟ್ಟಮೊದಲ ಬಾರಿಗೆ ರಾ ಸಂಸ್ಥೆ ಬಗ್ಗೆ ಬಂದಿರುವ ಈ ಪುಸ್ತಕವನ್ನು ಎಲ್ಲರೂ ಓದಬೇಕು.

-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು, ವಿಶ್ವವಾಣಿ

ನಾನು‘ರಾ’ ಗೂಢಾಚಾರರ ಬಗ್ಗೆ ಪುಸ್ತಕ ಬರೆಯಲು ಮುಖ್ಯ ಕಾರಣ ವಿಶ್ವವಾಣಿ ಕ್ಲಬ್‌ಹೌಸ್. ಆದರೆ, ಮುಖ್ಯ ಪ್ರೇರಣೆ
ವಿಶ್ವವಾಣಿ ಕ್ಲಬ್‌ಹೌಸ್‌ನ ಶ್ರೋತೃ ಆಗಿರುವ ದಾವಣಗೆರೆಯ ಭಾರತಿ ಎನ್ನುವವರು. ಇವರಿಬ್ಬರ ಕಾರಣದಿಂದ ನಾನು ಆ ಪುಸ್ತಕ ಬರೆದೆ.
– ಡಾ.ಡಿ.ವಿ.ಗುರುಪ್ರಸಾದ್
ನಿವೃತ್ತ ಪೊಲೀಸ್ ಅಧಿಕಾರಿ