G Prathap Kodancha Column: ಅವರದ್ದು ಏನಿದ್ರೂ ಅಮೆರಿಕ ಫಸ್ಟ್.. ಬಾಕಿ ಎಲ್ಲಾ ನೆಕ್ಸ್ಟ್ !
ಆಡಳಿತಾರೂಢ ಸರಕಾರಗಳ, ರಾಜಕೀಯ ಮತ್ತು ಉದ್ಯಮ ಜಗತ್ತಿನ ಸ್ಥಾಪಿತ ಹಿತಾಸಕ್ತಿಗಳ ಎದುರು ಸೆಣಸಿ ಅವರು ದಕ್ಕಿಸಿಕೊಂಡ ಗೆಲುವು ಪ್ರಜಾಪ್ರಭುತ್ವದ ಗೆಲುವು ಕೂಡ. ಅಧಿಕಾರ ವಹಿಸಿಕೊಳ್ಳುತ್ತಲೇ ಟ್ರಂಪ್, ನಿರೀಕ್ಷೆಯಂತೆ ಸುಮಾರು 32 ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿದ್ದಾರೆ, ಮತ್ತಷ್ಟು ಹೊಮ್ಮುವ ನಿರೀಕ್ಷೆಯಿದೆ


ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ‘ಅತ್ಯಾಪ್ತ’ ಎನಿಸುವ ಛಾಯೆಯನ್ನು ಹೊಂದಿ ದ್ದರೂ, ಇದಕ್ಕೆ ಹಲವು ಮಜಲುಗಳಿವೆ ಎಂಬುದನ್ನು ನಾವು ಮರೆಯಬಾರದು. ಸ್ವಂತ ಶಕ್ತಿ-ಸಾಮರ್ಥ್ಯದಿಂದಾಗಿ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೊಂದಾಗಿ ಹೊಮ್ಮಿರುವ ಭಾರತವು, ತನ್ನ ಅಲಿಪ್ತನೀತಿಯ ಬಿಗಿಯನ್ನು ಸಡಿಲಿಸುತ್ತಿದ್ದರೂ, ಯಾರನ್ನು ಆಪ್ತವಾಗಿ ಅಪ್ಪಿಕೊಂಡಿದೆ ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ!
ಜಗದಗಲವೂ ಈಗ ‘ಅಬ್ ಕೀ ಬಾರ್, ಟ್ರಂಪ್ ಸರ್ಕಾರ್’ ಕುರಿತ ಸುದ್ದಿಗಳೇ ಹರಿದಾಡುತ್ತಿವೆ. ಕಳೆದ ಬಾರಿಯ ಸೋಲು, ಸೋಲನೊಪ್ಪಿಕೊಳ್ಳದ ನಡೆ-ನುಡಿ, ತದನಂತರ ಎದುರಿಸಬೇಕಾಗಿ ಬಂದ ಹಲವು ಕಾನೂನು ಹೋರಾಟಗಳಿಂದ ನೆಲಕಚ್ಚಿಯೇ ಬಿಟ್ಟರು ಎಂದು ಹಲವರು ಭಾವಿಸಿದ್ದ ಟ್ರಂಪ್, ‘ಜನತಾ ಜನಾರ್ದನ’ರ ಕೃಪೆಯಿಂದ ಪುಟಿದೆದ್ದಿದ್ದಾರೆ, ಒಂದು ಅವಧಿಯ ಹಿನ್ನಡೆಯ ನಂತರ ಅಮೆರಿಕದ ೪೭ನೇ ಅಧ್ಯಕ್ಷರಾಗಿ ಈ ಬಾರಿ ಸ್ವಲ್ಪ ಹೆಚ್ಚೇ ಸೆಟೆದು ನಿಂತಿದ್ದಾರೆ!
ವೃತ್ತಿಪರ ರಾಜಕಾರಣಿಯಲ್ಲದವರು ರಾಜಕೀಯ ವ್ಯೂಹದಲ್ಲಿ ಸೆಣಸಿ ಪ್ರಬಲರಾಗಿ ನೆಲೆಗೊಂಡ ಉದಾಹರಣೆಗಳು ಬಹಳಷ್ಟಿಲ್ಲ. ಆ ನೆಲೆಯಲ್ಲಿನ ಸಾಧನೆಯಿಂದಾಗಿ ಟ್ರಂಪ್ ಅಭಿನಂದನಾರ್ಹರು. ಆಡಳಿತಾರೂಢ ಸರಕಾರಗಳ, ರಾಜಕೀಯ ಮತ್ತು ಉದ್ಯಮ ಜಗತ್ತಿನ ಸ್ಥಾಪಿತ ಹಿತಾಸಕ್ತಿಗಳ ಎದುರು ಸೆಣಸಿ ಅವರು ದಕ್ಕಿಸಿಕೊಂಡ ಗೆಲುವು ಪ್ರಜಾಪ್ರಭುತ್ವದ ಗೆಲುವು ಕೂಡ. ಅಧಿಕಾರ ವಹಿಸಿಕೊಳ್ಳುತ್ತಲೇ ಟ್ರಂಪ್, ನಿರೀಕ್ಷೆಯಂತೆ ಸುಮಾರು 32 ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿದ್ದಾರೆ, ಮತ್ತಷ್ಟು ಹೊಮ್ಮುವ ನಿರೀಕ್ಷೆಯಿದೆ.
ಇದನ್ನೂ ಓದಿ: Narayana Yaaji Column: ಟ್ರಂಪ್ ತಂದಿಟ್ಟ ತಲೆನೋವು !
ಭಾರತದಲ್ಲಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲ ಸಂದರ್ಭಗಳಲ್ಲಿ ಹೊರಡಿಸುವ ಸುಗ್ರೀ ವಾಜ್ಞೆಗಳಿಗೆ ಸಮನಾದ ಆದೇಶಗಳಿವು. ಸಾಂವಿಧಾನಿಕ ಅಧಿಕಾರ ಬಳಸಿ ಅಧ್ಯಕ್ಷರು ಹೊರಡಿಸಿದ ಈ ಆದೇಶಗಳು, ಸೂಚಿತ ದಿನದಿಂದ ಜಾರಿಗೊಳ್ಳುತ್ತವೆ. ಇವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಮತ್ತು ಪರಿಪೂರ್ಣ ಕಾಯ್ದೆಯಾಗಿಸುವ ಮುನ್ನ, ನಿಗದಿತ ಸಮಯದೊಳಗೆ ಅಮೆರಿಕದ ಸಂಸತ್ತು ಚರ್ಚಿಸಿ, ಉಭಯ ಸದನಗಳ ಬೆಂಬಲ ಪಡೆಯುವುದು ಅವಶ್ಯಕ.
ಇಂಥ ಆದೇಶಗಳನ್ನು ಹಿಂಪಡೆಯುವ ಅಧಿಕಾರ ಅಧ್ಯಕ್ಷರಿಗೆ ಮಾತ್ರವಿದ್ದರೂ, ಅಮೆರಿಕದ ಶಾಸಕಾಂಗ ಮತ್ತು ನ್ಯಾಯಾಂಗಗಳಿಗೆ ಕಾರ್ಯಾಂಗದ ಆದೇಶಗಳ ಅನುಷ್ಠಾನವನ್ನು ತಿದ್ದಿತೀಡುವ ಅವಕಾಶಗಳಿವೆ. ಟ್ರಂಪ್ ಸಾಹೇಬರು ಈ ಬಾರಿ ಹೊರಡಿಸಿದ ಬಹುತೇಕ ‘ಅಧ್ಯಕ್ಷೀಯ’ ಆದೇಶಗಳು, ಚುನಾವಣಾ ಪ್ರಣಾಳಿಕೆಯ ಬತ್ತಳಿಕೆಯಲ್ಲಿದ್ದ ಗಡಿಭದ್ರತೆ, ಅಕ್ರಮ ವಲಸೆ ತಡೆ, ಭಯೋತ್ಪಾದನೆ ನಿಗ್ರಹ, ವಿಶ್ವಸಂಸ್ಥೆಯೆಡೆಗಿನ ಸಹಾಯಗಳ ಮರುಪರಿಶೀಲನೆ, ಪೌರತ್ವದ ಅರ್ಥ ಮತ್ತು ಮೌಲ್ಯ ಸಂರಕ್ಷಣೆ, ಶಕ್ತಿ ಸಂಪನ್ಮೂಲಗಳ ಉದಾರ ಬಳಕೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂಥವು.
ಮಿಕ್ಕವು, ಹಿಂದಿನ ಅಧ್ಯಕ್ಷರು ತಮ್ಮ ಅಧಿಕಾರಾವಧಿಯ ಕೊನೆ ದಿನದ ತನಕ ಹೊರಡಿಸುತ್ತಲೇ ಇದ್ದ ಅಧ್ಯಕ್ಷೀಯ ಆದೇಶಗಳ ಹಿಂಪಡೆಯುವಿಕೆ ಅಥವಾ ಮರುವಿಮರ್ಶೆಗೆ ಸಂಬಂಧಿಸಿದ್ದು. ಸರಕಾರವು ನಾಳೆಗೆ ಕೊನೆಯಾಗುತ್ತಿದೆ ಎಂಬುದು ಖಚಿತವಾದ ಮೇಲೆ, ಕೊನೆಯ ಗಳಿಗೆಯಲ್ಲಿ, ಯಾವ್ಯಾವುದೋ ಒತ್ತಡದಲ್ಲಿ (?!) ಕಡತಗಳಿಗೆ ಮುದ್ರೆ ಒತ್ತಿ ಆದೇಶ ಹೊರಡಿಸುವ ‘ಕಾರ್ಯತತ್ಪರ’ ನಾಯಕರು ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದ್ದಾರೆ ಎಂಬುದನ್ನು ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಜೋ ಬೈಡೆನ್ ಜಗಜ್ಜಾಹೀರು ಮಾಡಿದ್ದಾರೆ.
ಎಲ್ಲರಂತೆಯೇ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅವರಿಗೂ ‘ಸರಕಾರದ ಕೆಲಸ, ದೇವರ ಕೆಲಸ’ ಎಂಬುದು ಮನದಟ್ಟಾಗಿರಬೇಕು, ಪಾಪ! ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ‘ಅತ್ಯಾಪ್ತ’ ಎನಿಸುವ ಛಾಯೆಯನ್ನು ಹೊಂದಿದ್ದರೂ, ಇದಕ್ಕೆ ಹಲವು ಮಜಲುಗಳಿವೆ, ಸಂಕೀರ್ಣತೆ ಗಳಿವೆ ಎಂಬುದನ್ನು ನಾವು ಮರೆಯಬಾರದು. ಸ್ವಂತ ಶಕ್ತಿ-ಸಾಮರ್ಥ್ಯದಿಂದಾಗಿ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲೊಂದಾಗಿ ಹೊಮ್ಮಿರುವ ಭಾರತವು, ತನ್ನ ಅಲಿಪ್ತನೀತಿಯ ಬಿಗಿಯನ್ನು ಸಡಿಲಿಸು ತ್ತಿದ್ದರೂ, ಯಾರನ್ನು ಆಪ್ತವಾಗಿ ಅಪ್ಪಿಕೊಂಡಿದೆ ಎಂಬ ಗುಟ್ಟು ಬಿಟ್ಟುಕೊಡುತ್ತಿಲ್ಲ!
ಅಮೆರಿಕ ಹಿಂದಿನಿಂದಲೂ ವ್ಯಾಪಾರಿ ಮನೋಭಾವದ ಮೂಲಕ ಲಾಭ ಪಡೆಯುತ್ತಾ, ಜಗದಗಲ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮತ್ತು ಇತ್ತೀಚೆಗೆ ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸ್ವಘೋಷಿತ ದೊಡ್ಡಣ್ಣ! ವಲಸಿಗರು ಮತ್ತು ವಲಸೆಯ ಬುನಾದಿಯಿಂದಲೇ ಬೆಳೆದು ನಿಂತ ಅಮೆರಿಕದಲ್ಲಿ, ಭಾರತೀಯರು ಮತ್ತು ಭಾರತ ಮೂಲದ ವಲಸಿಗರ ಸಂಖ್ಯೆ ಗಣನೀಯವಾಗಿದೆ. ಒಂದು ಅಂದಾಜಿನ ಪ್ರಕಾರ, 55 ಲಕ್ಷ ಭಾರತೀಯ ಮೂಲದವರು ಅಮೆರಿಕದಲ್ಲಿದ್ದಾರೆ.
ಪ್ರಾಯಶಃ, ಮೆಕ್ಸಿಕನ್ ಮೂಲದ ಅಮೆರಿಕ ನಿವಾಸಿಗಳ ಪ್ರಮಾಣ ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವುದು ಅಮೆರಿಕದಲ್ಲಿರುವ ಭಾರತೀಯರು. ಇವರ ಪೈಕಿ ಶೇ.48ರಷ್ಟು ಮಂದಿ ಮಾತ್ರವೇ ಅಮೆರಿಕದ ಪೌರತ್ವವನ್ನು ಪಡೆದುಕೊಂಡವರು. ಉಳಿದವರು ಬಹುತೇಕವಾಗಿ ಉದ್ಯೋ ಗ ವೀಸಾ ಆಧಾರದಲ್ಲಿ ಅಮೆರಿಕದಲ್ಲಿ ತತ್ಕಾಲದ ಬದುಕು ಕಟ್ಟಿಕೊಳ್ಳುತ್ತಿರುವ ಕುಶಲ ವಲಸಿಗರು. ಇವರಿಗೂ ಪೌರತ್ವ ಪಡೆಯುವ ಮಾರ್ಗಗಳಿವೆಯಾದರೂ, ಅದು ಕ್ಷಿಪ್ರವಾಗಿ ತಲುಪಬಲ್ಲ ಗಮ್ಯ ವಲ್ಲ.
ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ ಸುಮಾರು 3.75 ಲಕ್ಷದಷ್ಟು (ಅಂದರೆ ಶೇ.3ರಷ್ಟು) ಭಾರತೀಯರು ಎಂಬುದು ಕೂಡ ಅಚ್ಚರಿಯ ವಿಷಯ. ಹುಟ್ಟಿನಿಂದ ಪೌರತ್ವ ಕೊಡುವ ಪ್ರಪಂಚದ ಸುಮಾರು 33 ದೇಶಗಳಲ್ಲಿ ಅಮೆರಿಕವೂ ಒಂದು. ಈ ಹಕ್ಕು ಅಕ್ರಮ ವಲಸಿಗರ ಮಕ್ಕಳಿಗೂ ಲಭ್ಯ. ಹಾಗಾಗಿ, ಉದ್ಯೋಗ ನಿಮಿತ್ತ ಅಮೆರಿಕದಲ್ಲಿರುವ ವಲಸಿಗರನ್ನು ಬಿಡಿ, ಅಕ್ರಮ ವಲಸಿಗರೂ ಇಲ್ಲಿ ಹೆತ್ತು, ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ಕೊಡಿಸಿ, ತನ್ಮೂಲಕ ಮುಂದೊಮ್ಮೆ ತಾವು ಅಮೆರಿಕ ನ್ನರಾಗುವ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿಯೇ ಬರುತ್ತಾರೆಂಬುದು ಬಹುಪಾಲು ನಿಜ.
ಅದಕ್ಕಾಗಿಯೇ ಅಮೆರಿಕ ಸೇರಿಕೊಳ್ಳುವುದಕ್ಕೆ ‘ಜನನ ಪ್ರವಾಸೋದ್ಯಮ’ (ಬರ್ತ್ ಟೂರಿಸಂ) ಎಂದು ಕೂಡ ಹೇಳಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅಕ್ರಮ ವಲಸೆ ತಡೆದು, ದೇಶವನ್ನು ಸುಭದ್ರ -ಸುರಕ್ಷಿತವಾಗಿಸುತ್ತೇವೆ ಎಂಬ ಆಶ್ವಾಸನೆಗಳೊಂದಿಗೆ ಚುನಾವಣೆ ಎದುರಿಸಿದ್ದ ಟ್ರಂಪ್, ಗದ್ದುಗೆ ಏರುತ್ತಲೇ ಹೊರಡಿಸಿದ ಅಧ್ಯಕ್ಷೀಯ ಆದೇಶಗಳಲ್ಲೊಂದು- ‘ಅಮೆರಿಕ ಪೌರತ್ವದ ಅರ್ಥ ಮತ್ತು ಮೌಲ್ಯವರ್ಧನೆಯ’ ಆದೇಶ. ಇದರಲ್ಲಿ, ಜನನದಿಂದ ಅಮೆರಿಕದ ಪೌರತ್ವ ಪಡೆದುಕೊಳ್ಳುವ ಅವಕಾಶವನ್ನೇ ಟ್ರಂಪ್ ಇಲ್ಲವಾಗಿಸಿದ್ದಾರೆ.
ಫೆಬ್ರವರಿ 20ರಿಂದ ಅನ್ವಯವಾಗಲಿರುವ ಈ ಆದೇಶವನ್ನು ಪ್ರಶ್ನಿಸಿ ಈಗಾಗಲೇ ಸುಮಾರು 22 ರಾಜ್ಯಗಳಲ್ಲಿ ಮೊಕದ್ದಮೆ ಹೂಡಲಾಗಿದೆ. ಪ್ರಸ್ತುತ ಸಿಯಾಟಲ್ ನ್ಯಾಯಾಲಯವೊಂದರಲ್ಲಿ ತಾತ್ಕಾಲಿಕ ತಡೆಯಾಜ್ಞೆಯೂ ದೊರಕಿದೆ. ಇದು ಭಾರತೀಯ ಮೂಲದ ಕ್ರಮಬದ್ಧ ವಲಸಿಗರ ವಲಯದಲ್ಲಿ ಆತಂಕ ಮೂಡಿಸಿದೆ. ಆದೇಶ ಜಾರಿಗೊಂಡರೆ ಉಂಟಾಗಬಹುದಾದ ಹಲವು ಕೊರತೆ ಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
‘ಇದು ಭಾರತೀಯರಿಗೆ ಟ್ರಂಪ್ ನೀಡಿದ ಮರ್ಮಾಘಾತ’ ಎಂಬರ್ಥದ ವಿಶ್ಲೇಷಣೆಗಳು ಭಾರತೀಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಡ್ಡಿ-ಆತಂಕಗಳನ್ನು ಬದಿ ಗಿಟ್ಟು ಆದೇಶದ ಮೂಲದತ್ತ ಇಣುಕಿದರೆ, ಕಳೆದ ಬಾರಿಯ ಟ್ರಂಪ್ ಆಡಳಿತದಲ್ಲಿ ಅಕ್ರಮ ವಲಸಿಗ ರನ್ನು ಹೊರದಬ್ಬುವ ಪ್ರಯತ್ನಗಳಿಗಾದ ಹಿನ್ನಡೆಯಿಂದ ತಪ್ಪಿಸಿಕೊಳ್ಳುವ ಯತ್ನವಿದು ಎನಿಸು ತ್ತಿದೆ.
ಕಳೆದ ಬಾರಿ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗಲೂ ವಲಸೆ ನೀತಿಯನ್ನು ಬಿಗಿಪಡಿಸಿ, ಅಕ್ರಮ ವಲಸಿಗರನ್ನು ಹೊರದಬ್ಬುವ ಪ್ರಯತ್ನ ಮಾಡಿದ್ದರು. ಅಕ್ರಮ ವಲಸಿಗರಾಗಿದ್ದರೂ ಇಲ್ಲಿ ಜನಿಸಿದ ಮಗುವಿನ ಪೋಷಕರಾಗಿದ್ದರಿಂದ ಅವರನ್ನು ದೇಶದಿಂದಾಚೆ ಕಳಿಸಿದರೆ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿದಂತಾಗುತ್ತದೆ ಎಂಬ ಅಂಶವು ಅಂದಿನ ಪ್ರಯತ್ನಕ್ಕೆ ತೊಡಕಾಗಿತ್ತು.
ಇಂಥ ಊರುಗೋಲಿನಿಂದ ಅಕ್ರಮ ವಲಸಿಗರನ್ನು ಹೊರದಬ್ಬಲಾಗದ ಪರಿಸ್ಥಿತಿ ಬರದಂತೆ ತಡೆ ಯಲು ಟ್ರಂಪ್ ಆಡಳಿತ ಈ ಹಾದಿ ಹಿಡಿದಿರಬೇಕು. ವಿಽಬದ್ಧ ಕಾಗದಪತ್ರಗಳಿಲ್ಲದಿದ್ದರೂ ಅಮೆರಿಕ ಬಿಡಲೊಪ್ಪದ, ಅಮೆರಿಕದತ್ತ ನುಸುಳಲಿರುವ ವಲಸಿಗರನ್ನು ನಿರಾಸೆಗೊಳಿಸಿ ಬಾರದಂತೆ ತಡೆಯುವ ಉಪಾಯವಿರಬೇಕು ಇದು.
ವಿಧಿಬದ್ಧ ವಲಸಿಗರಿಗೂ ಸಮಸ್ಯೆ ಉಂಟಾದರೂ, ಗುರಿ ಅವರಾಗಿರಲಿಕ್ಕಿಲ್ಲ ಎಂಬುದೊಂದು ವಾದ ವಿದೆ. ಹಾಗಿದ್ದರೆ ಅಕ್ರಮ ವಲಸಿಗರಿಗೆ ಮಾತ್ರ ಇದನ್ನು ‘ಲಾಗು’ ಮಾಡಬಹುದಿತ್ತಲ್ಲ ಎನಿಸು ವುದು ಸಹಜ. ಹೇಗೆ ಮಾಡಿದರೂ ನ್ಯಾಯಾಲಯದ ಮೆಟ್ಟಿಲು ಏರುವ ನಿರೀಕ್ಷೆ ಇದ್ದುದರಿಂದಲೇ, ಸಾರಾ ಸಗಟಾಗಿ ಜನ್ಮದತ್ತ ಪೌರತ್ವವನ್ನು ತೊಡೆದುಹಾಕುವ ಪ್ರಯತ್ನ ಮಾಡಲಾಗಿದೆ ಎಂಬ ಮಾತು ಗಳಿವೆ.
ಅದಾಗಲೇ ವಿವಿಧ ರಾಜ್ಯಗಳ ನ್ಯಾಯಾಲಯಗಳಲ್ಲಿ ಪ್ರಶ್ನಿಸಲ್ಪಟ್ಟ ಆದೇಶವು ಸುಪ್ರೀಂಕೋರ್ಟಿನ ಮೆಟ್ಟಿಲೇರುವುದು ಬಹುತೇಕ ಖಚಿತ. ವಾದ-ಪ್ರತಿವಾದಗಳು ನಡೆದು, ‘ಆದೇಶವೇನಿದ್ದರೂ ವಿಧಿ ಬದ್ಧವಲ್ಲದ ಅಕ್ರಮ ವಲಸಿಗರಿಗೆ ಸೀಮಿತ’ ಎನ್ನುವಂಥ ತೀರ್ಪು ಬರುವ ಲಕ್ಷಣಗಳಿವೆ. ಒಂದು ವರ್ಗಕ್ಕಷ್ಟೇ ಅನ್ವಯವಾಗುವ ಆದೇಶವಾಗಿದ್ದರೆ, ನ್ಯಾಯಾಲಯದಲ್ಲಿ ಹಿನ್ನಡೆ ಕಂಡು ಮೂಲೆ ಗುಂಪಾಗುವ ಬದಲು, ಬಯಸಿದ್ದಕ್ಕಿಂತ ಹೆಚ್ಚಿನ ವ್ಯಾಪ್ತಿಯ ಆದೇಶ ಹೊರಡಿಸಿ, ಅಕ್ರಮ ವಲಸಿಗ ರಿಗೆ ಮಾತ್ರ ಅನ್ವಯಗೊಳ್ಳಬಲ್ಲ ಪರಿಮಿತ ಆದೇಶಗಳನ್ನು ಕೋರ್ಟಿನ ಮೂಲಕವೇ ಜಾರಿಗೊಳಿ ಸುವ ಚಾಕಚಕ್ಯತೆಯನ್ನು ಕೂಡ ಅಲ್ಲಗಳೆಯುವಂತಿಲ್ಲ.
ಹೇಳಿ ಕೇಳಿ ವ್ಯಾವಹಾರಿಕ ನೈಪುಣ್ಯ, ಚರ್ಚೆ, ಸಂಧಾನಗಳ ಮೂಲಕ ತಮಗೆ ಬೇಕಾದ್ದನ್ನು ಗಳಿಸಿ ಕೊಳ್ಳುವ ಚಾಕಚಕ್ಯತೆ ಪ್ರದರ್ಶಿಸಿದಂಥ ಅಸಾಮಾನ್ಯ ವ್ಯಕ್ತಿ ಟ್ರಂಪ್! ಕಳೆದ ಬಾರಿಯೂ ತಮ್ಮ ಆಡಳಿತಕ್ಕಾದ ತೊಡಕುಗಳನ್ನು ನೆನಪಿಟ್ಟು, ಪುನಃ ಅಲ್ಲಿಯೇ ಎಡವದಂತೆ ನೋಡಿಕೊಳ್ಳುವ ಎಚ್ಚರದಲ್ಲಿ ಅವರಿದ್ದಂತಿದೆ. ನೇರಾನೇರ ಮಾತುಗಳಿಂದ ತಮಾಷೆಗೀಡಾದರೂ ತಲೆಕೆಡಿಸಿಕೊಳ್ಳದೆ, ‘ಆನೆ ನಡೆದದ್ದೇ ದಾರಿ’ ಎಂಬಂತೆ ಮುನ್ನುಗ್ಗುವ ಟ್ರಂಪ್ ಪ್ರವೃತ್ತಿಯು ಅಧಿಕಾರಿಶಾಹಿಯನ್ನೂ, ರಾಜಕೀಯ ವಲಯವನ್ನೂ, ಉದ್ಯಮ ಜಗತ್ತನ್ನೂ ತಳಮಳಗೊಳಿಸಿದೆ.
ಈ ನಡುವೆ, ‘ಟ್ರಂಪ್ ಅವರು ಮೋದಿಯವರ ಆತ್ಮೀಯ, ಭಾರತದ ಸ್ನೇಹಿತ; ಹೀಗಿದ್ದೂ ಇದೇಕೆ?’ ಎಂಬ ಚರ್ಚೆಗಳಿವೆ. ಅದೇನೇ ಇದ್ದರೂ, ತಮ್ಮ ಮತ್ತು ಅಮೆರಿಕದ ಹಿತಾಸಕ್ತಿಯೇ ಟ್ರಂಪ್‌ರ ಆದ್ಯತೆ. ಇವೆರಡರಲ್ಲಿ ಯಾವುದು ಮೊದಲು, ಯಾವುದು ನಂತರದ್ದು? ಎಂಬ ಗೊಂದಲಗಳಿದ್ದರೂ, ಅವರ ಬಾಕಿ ಎಲ್ಲ ಸ್ನೇಹ-ಸಂಬಂಧಗಳು ತದನಂತರದ್ದು!
‘ಏಲಿಯನ್ಸ್’ (ಅನ್ಯಗ್ರಹ ಜೀವಿಗಳು) ಎಂಬುದು ಅಮೆರಿಕದ ವಲಸಿಗರಿಗೆ ಬಳಸುವ ಶಬ್ದ! ಅಮೆರಿಕ ಮೂಲದವರಲ್ಲದ ಎಲ್ಲರೂ ಇವರಿಗೆ ಅನ್ಯಗ್ರಹ ಜೀವಿಗಳೇ! ಇದು ‘ವಿಧಿಬದ್ಧ’ ಮತ್ತು ‘ಅಕ್ರಮ’ ವಲಸಿಗರಿಬ್ಬರಿಗೂ ಅನ್ವಯಗೊಳ್ಳುವ ಪರಿಭಾಷೆ! ಹೀಗಿರುವಾಗ, ಅನ್ಯಗ್ರಹದ ಮಿತ್ರತ್ವದ ಚಿಂತೆ ಅವರಿಗೇಕೆ ಇರಬೇಕು ಹೇಳಿ? ವ್ಯಾಪಾರ, ಸ್ವಹಿತಾಸಕ್ತಿಗೆ ಮೀರಿದ ಆಸಕ್ತಿ ಅಮೆರಿಕಕ್ಕಿಲ್ಲ. ಸದ್ಯಕ್ಕೆ ಭಾರತವೂ ಬಲಶಾಲಿ ರಾಷ್ಟ್ರವಾಗಿ ನಿಂತಿರುವುದರಿಂದ, ಭಾರತ ಮತ್ತು ಭಾರತೀಯರನ್ನು ಅಮೆರಿಕ ಅಧ್ಯಕ್ಷರು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಉಪಯೋಗವಿದ್ದರೆ ಮಣೆ ಹಾಕುತ್ತಾರೆ, ಇಲ್ಲದಿದ್ದರೆ ಕಡೆಗಣಿಸುತ್ತಾರೆ. ಅವರದ್ದು ಏನಿದ್ದರೂ ‘ಅಮೆರಿಕ ಫಸ್ಟ್... ಬಾಕಿ ಎಲ್ಲ ನೆಕ್ಸ್ಟ್’....
(ಲೇಖಕರು ಹವ್ಯಾಸಿ ಬರಹಗಾರರು)