Wednesday, 11th December 2024

ವಿಶ್ವನಾಥ್ ಸಂದೇಶಕ್ಕೆ ಅರುಣ್ ಸಿಂಗ್ ಅಲುಗಾಡಿದರು

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ದಟ್ಟವಾಗುತ್ತಿದ್ದಂತೆಯೇ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತ
ಅರುಣ್ ಸಿಂಗ್ ಕರ್ನಾಟಕಕ್ಕೆ ಬಂದರು. ಪಕ್ಷದ ವರಿಷ್ಠರ ಆಣತಿಯಂತೆ ಇಲ್ಲಿ ಪಕ್ಷದ ನಾಯಕರು ಮತ್ತು ಶಾಸಕರ ಬಳಿ ಅಭಿಪ್ರಾಯ ಸಂಗ್ರಹಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಲ್ಲಿ ಅಭಿಪ್ರಾಯ ಸಂಗ್ರಹಿಸಬಹುದು ಎಂಬುದು ಯಡಿಯೂರಪ್ಪ ಅವರ ಇಂಗಿತವಾಗಿ ತ್ತಾದರೂ ಅರುಣ್ ಸಿಂಗ್ ಅವರು ಅದನ್ನು ಒಪ್ಪಲಿಲ್ಲ. ಯಾಕೆಂದರೆ ಶಾಸಕಾಂಗ ಸಭೆಯಲ್ಲಿ ಯಾರೂ ಮುಕ್ತ ಮನಸ್ಸಿನಿಂದ ತಮ್ಮ ಭಾವನೆಯನ್ನು ಹೇಳಲು ಸಾಧ್ಯವಿಲ್ಲ. ಹಾಗೇನಾದರೂ ಹೇಳಲು ಮುಂದಾದರೆ ಅಂಥವರ ವಿರುದ್ಧ ಮುಗಿಬೀಳಲು ಯಡಿಯೂರಪ್ಪ ಕ್ಯಾಂಪು ಸಿದ್ಧವಾಗಿರುತ್ತದೆ ಅಂತ ಮುಂಚೆಯೇ ಅವರಿಗೆ ಹೈಕಮಾಂಡ್ ಸಿಗ್ನಲ್ ನೀಡಿತ್ತು.

ಅಂದ ಹಾಗೆ ಅರುಣ್ ಸಿಂಗ್ ಇದುವರೆಗೆ ಯಡಿಯೂರಪ್ಪ ಅವರ ನಾಯಕತ್ವದ ಪರವಾಗಿಯೇ ಮಾತನಾಡುತ್ತಾ ಬಂದವರು. ಮಾತೆತ್ತಿದರೆ ಯಾವ ಕಾರಣಕ್ಕೂ ಕರ್ನಾಟಕದಲ್ಲಿ ನಾಯಕತ್ಬ ಬದಲಾವಣೆ ಇಲ್ಲ ಎನ್ನುತ್ತಿದ್ದವರು. ಹೀಗಾಗಿ ಪ್ರತ್ಯೇಕವಾಗಿ ಚರ್ಚಿಸಿದರೂ ಅವರ ಜತೆ ಮುಕ್ತವಾಗಿ ಮಾತನಾಡಲು ತುಂಬ ಜನ ಹಿಂಜರಿಯುತ್ತಾರೆ ಎಂದು ಯಡಿಯೂರಪ್ಪ ಕ್ಯಾಂಪು ಭಾವಿಸಿತ್ತು. ಆದರೆ ಹಿರಿಯ ನಾಯಕ ಹೆಚ್. ವಿಶ್ವನಾಥ್ ಅವರು ಈ ಕ್ಯಾಂಪಿನ ಭಾವನೆ ಸುಳ್ಳಾಗುವಂತೆ ಮಾಡಿದರು.

ಗುರುವಾರ ಬೆಳಗ್ಗೆ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ವಿಶ್ವನಾಥ್ ಮೊದಲು ಆಯಕಟ್ಟಿನ ಜಾಗಕ್ಕೇ ಚುಚ್ಚಿದರು. ಸಾರ್, ಈ ಸರಕಾರ ಪ್ರಧಾನಿ ನರೇಂದ್ರಮೋದಿ ಅವರ ಗುರಿಯ ವಿರುದ್ಧ ಕೆಲಸ ಮಾಡುತ್ತಿದೆ. ಮೋದಿಯವರ ಗುರಿ ಮತ್ತು ಸಾಧನೆಗಳ ಬಗ್ಗೆ ಎಲ್ಲೂ ಹೇಳದೆ ಕೇವಲ ಇದು ಯಡಿಯೂರಪ್ಪ ಅವರ ಸರಕಾರ ಎನ್ನುವ ಭಾವನೆ ಮೂಡುವಂತೆ ಮಾಡಲಾಗುತ್ತಿದೆ
ಎಂದರು.

ವಿಶ್ವನಾಥ್ ಅವರ ಮಾತು ಕೇಳಿದ ಅರುಣ್ ಸಿಂಗ್ ಅಚ್ಚರಿಯಿಂದ ನೋಡುತ್ತಿದ್ದಂತೆಯೇ ನಾನು ದೇವರಾಜ ಅರಸರ ಕಾಲದಿಂದ ರಾಜಕಾರಣ ಮಾಡುತ್ತಿರುವವನು. ನಂಬಿದ ಸಿದ್ಧಾಂತಗಳಿಗೆ ವ್ಯತಿರಿಕ್ತವಾದ ವಾತಾವರಣ ಇದ್ದಾಗ ಯಾವುದೇ ಮುಲಾಜಿಲ್ಲದೆ ಮುಕ್ತವಾಗಿ ಹೇಳಿದವನು. ಈಗಲೂ ಅಷ್ಷೇ. ಯಾವ ಕಾರಣಕ್ಕಾಗಿ ನಾನು ಜೆಡಿಎಸ್ ತೊರೆದು ಬಿಜೆಪಿಗೆ ಬಂದೆನೋ ಅದೇ ಕಾರಣಕ್ಕಾಗಿ ಇವತ್ತು ಯಡಿಯೂರಪ್ಪ ಅವರನ್ನು ವಿರೋಧಿಸುವ ಸ್ಥಿತಿ ಬಂದಿದೆ ಎಂದರು.

ನಾನು ಜೆಡಿಎಸ್ ಪಕ್ಷವನ್ನು ವಿರೋಧಿಸಲು ಅಲ್ಲಿರುವ ಕುಟುಂಬ ರಾಜಕಾರಣ ಮುಖ್ಯ ಕಾರಣ. ತಂದೆ – ಮಗನ ಹಿಡಿತದಲ್ಲಿರುವ ಪಕ್ಷ ಅದು. ಹೀಗಾಗಿ ಅದು ಪ್ರಜಾಸತಾತ್ಮಕವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ನನಗೆ ಪದೇ ಪದೆ ಮನದಟ್ಟಾಯಿತು. ಇದೇ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷವನ್ನು ವಿರೋಧಿಸಿ ಬಿಜೆಪಿಗೆ ಬಂದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಅದಕ್ಕಿಂತ ಕೆಟ್ಟದಾಗಿದೆ. ಯಾಕೆಂದರೆ ಇಲ್ಲಿ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರ ಮಾತೇ ಅಂತಿಮ. ನನಗೆ
ಯಡಿಯೂರಪ್ಪ ಅವರ ಬಗ್ಗೆ ತುಂಬ ಗೌರವವಿದೆ. ಆದರೆ ಅವರು ಕೆಲಸ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ.

ಅವರ ಈ ಅಸಹಾಯಕತೆಯನ್ನು ಬಳಕೆ ಮಾಡಿಕೊಂಡು ಅವರ ಪುತ್ರ ವಿಜಯೇಂದ್ರ ಆಡಳಿತ ನಡೆಸುತ್ತಿzರೆ. ಅಷ್ಟೇ ಅಲ್ಲ, ವಿಜಯೇಂದ್ರ ಅವರ ಮೂಲಕ ಯಡಿಯೂರಪ್ಪ ಅವರ ಕುಟುಂಬದ ಬಹುತೇಕರು ತಮ್ಮ ಪ್ರಭಾವ ಬಳಸಿ ಸರಕಾರವನ್ನು ತಮ್ಮಿಚ್ಛೆಯಂತೆ ನಡೆಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣದಂಥ ವ್ಯಾಧಿ ಮತ್ತೊಂದಿಲ್ಲ. ಅದು ಒಳಗಿಂದೊಳಗೇ ರಾಜ್ಯ ಬಿಜೆಪಿಗೆ ಗೆದ್ದಲು ಹಿಡಿಯುವಂತೆ ಮಾಡಿದೆ. ಈ ಗೆದ್ದಲು ಬಿಜೆಪಿಯ ನೆಲವನ್ನು ಯಾವ ಮಟ್ಟದಲ್ಲಿ ದುರ್ಬಲ ಗೊಳಿಸಿದೆ ಎಂದರೆ ಮುಂದಿನ ವಿಧಾನಸಭಾ ಚುನಾವಣೆಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೋದರೆ ನಾವು ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ.
ಯಡಿಯೂರಪ್ಪ ಅವರು ಪ್ರಬಲ ನಾಯಕ ಎಂಬುದರಲ್ಲಿ ಅನುಮಾನವೇನಿಲ್ಲ.

ಆದರೆ ಯುದ್ಧ ಭೂಮಿಯಲ್ಲಿ ನಾವು ನಿಂತ ನೆಲವೇ ಟೊಳ್ಳಾಗಿದ್ದರೆ ಎದುರಾಳಿಗಳನ್ನು ಸೋಲಿಸುವುದಿರಲಿ, ನೆಟ್ಟಗೆ ಹೋರಾಟ ಮಾಡಲೂ ಸಾಧ್ಯವಿಲ್ಲ ಎಂದು ವಿಶ್ವನಾಥ್ ಹೇಳಿದಾಗ ಅರುಣ್ ಸಿಂಗ್ ತನ್ಮಯತೆಯಿಂದ ಅದನ್ನು ನೋಟ್ ಮಾಡಿಕೊಳ್ಳು ತ್ತಿದ್ದರು.  ರುಣ್ ಸಿಂಗ್ ಅವರ ಉತ್ಸುಕತೆಯನ್ನು ನೋಡಿದ ವಿಶ್ವನಾಥ್, ಸಾರ್, ಮುಂದಿನ ವಿಧಾನಸಭಾ ಚುನಾವಣೆಗೆ
ಹತ್ತತ್ತಿರ ಎರಡು ವರ್ಷವಿದೆ. ಮೂರು ವರ್ಷಗಳಲ್ಲಿ ಸಂಸತ್ ಚುನಾವಣೆ ನಡೆಯುತ್ತದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಽಕಾರ ಹಿಡಿಯದೇ ಹೋದರೆ ಸಂಸತ್ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ವಿವರಿಸತೊಡಗಿದರು. ಇವತ್ತು ಯಡಿಯೂರಪ್ಪ ಅವರೇ ನಂಬರ್ ಒನ್ ಲಿಂಗಾಯತ ನಾಯಕ.

ಹೀಗಾಗಿ ಅವರೇ ಇರಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ ಲಿಂಗಾಯತ ನಾಯಕತ್ವ ಇರಲಿ, ಯಡಿಯೂರಪ್ಪ ಅವರ ನಾಯಕತ್ವ ಮಾತ್ರ ಬೇಡ ಎಂದರು. ಇದಕ್ಕೆ ಏನೇನು ಕಾರಣಗಳಿವೆ ಮಿಸ್ಟರ್ ವಿಶ್ವನಾಥ್ ಎಂದು ಅರುಣ್ ಸಿಂಗ್ ಪ್ರಶ್ನಿಸಿದಾಗ ಪುನಃ ಮಾತನಾಡಿದ ವಿಶ್ವನಾಥ್, ಯಾವುದೇ ಸಮುದಾಯದ ನಾಯಕ ಭ್ರಷ್ಟರಾದರೆ ಅದನ್ನು ಸಹಿಸಬಾರದು. ಬೇಕಿದ್ದರೆ
ಯಡಿಯೂರಪ್ಪ ಅವರ ಜಾಗಕ್ಕೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್
ಅವರನ್ನೋ, ಮುರುಗೇಶ್ ನಿರಾಣಿ ಅವರನ್ನೋ, ಅರವಿಂದ

ಬೆಲ್ಲದ್ ಅವರನ್ನೋ ತನ್ನಿ. ಯಾಕೆಂದರೆ ಪಕ್ಷದ ನೀತಿ, ಗುರಿಗಳ ಆಧಾರದ ಮೇಲೆ ಸರಕಾರ ನಡೆಯಬೇಕೇ ಹೊರತು ಒಂದು
ಕುಟುಂಬದ ನಿರ್ದೇಶನದ ಮೇಲೆ ಅಲ್ಲ. ಬೇಕಿದ್ದರೆ ನೀವೇ ಗಮನಿಸಿ ನೋಡಿ. ಬಿಜೆಪಿಯ ನಿಜವಾದ ಶಕ್ತಿ ಪ್ರಧಾನಿ ನರೇಂದ್ರ ಮೋದಿ. ಆದರೆ ಇಲ್ಲಿ ಯಡಿಯೂರಪ್ಪ ಅವರ ಸರಕಾರ ಮೋದಿಯವರ ಸಾಧನೆಯನ್ನು, ಚಿಂತನೆಗಳನ್ನು ಜನರಿಗೆ ಸಮರ್ಪಕ ವಾಗಿ ಹೇಳುತ್ತಿಲ್ಲ. ಈ ದೇಶದ ಇತಿಹಾಸದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ  ಮೋದಿಯವರಂತವರು ಪ್ರಧಾನಿಯಾಗಿರುವುದೇ ಒಂದು ಅಪರೂಪದ ಸಂದರ್ಭ.

ಮುಂದೆ ಹಿಂದುಳಿದ ವರ್ಗದಿಂದ ಇಂಥ ನಾಯಕರೊಬ್ಬರು ಪ್ರಧಾನಿ ಹುದ್ದಯ ಮೇಲೆ ಬಂದು ಕೂರುತ್ತಾರೆ ಎಂದು ಹೇಳುವುದೂ ಕಷ್ಟ. ಅಂಥ ಮೋದಿಯವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಏನು ಹೇಳಿದರು? ಈ ದೇಶಕ್ಕೆ ವಂಶಪಾರಂಪರ್ಯ
ರಾಜಕಾರಣ ಶಾಪವಿದ್ದಂತೆ. ಅದನ್ನು ತೊಡೆದು ಹಾಕುವುದೇ ನನ್ನ ಗುರಿ ಎಂದರು. ಯಾಕೆಂದರೆ ಕುಟುಂಬ ರಾಜಕಾರಣದಲ್ಲಿ ಕೇವಲ ಅಽಕಾರ ಮಾತ್ರ ಹಸ್ತಾಂತರವಾಗುವುದಿಲ್ಲ. ಬದಲಿಗೆ ಭ್ರಷ್ಟಾಚಾರವೂ ಹಸ್ತಾಂತರವಾಗುತ್ತದೆ. ಮೊದಲಿದ್ದವರಿಗಿಂತ ನಂತರ ಬಂದವರು ಮತ್ತಷ್ಟು ಭ್ರಷ್ಟರಾಗುತ್ತಾರೆ. ಇದು ತುಂಬ ಅಪಾಯಕಾರಿ ಎಂಬುದು ಮೋದಿಯವರ ಮಾತು.

ಇವತ್ತು ಇನಾಗುತ್ತಿದೆ? ಇಡೀ ಆಡಳಿತ ಯಂತ್ರ ಯಡಿಯೂರಪ್ಪ ಅವರ ಪುತ್ರನ ಕೈಯ್ಯಲ್ಲಿದೆ. ಆ ಮೂಲಕ ಅವರ ಕುಟುಂಬದ ಮುಷ್ಟಿಗೆ ಸಿಲುಕಿದೆ. ಬಹುತೇಕ ಸಚಿವರು ಇವತ್ತು ಮಾತನಾಡಲು ಹಿಂಜರಿಯಬಹುದು. ಆದರೆ ತಮ್ಮ ಖಾತೆಯನ್ನು ನೋಡಿ ಕೊಳ್ಳಲು ತಮಗೆ ಸಾಧ್ಯವಿಲ್ಲ ಎಂಬ ಬಗ್ಗೆ ಅವರಿಗೆಲ್ಲ ನೋವಿದೆ ಎಂದು ವಿಶ್ವನಾಥ್ ಹೇಳಿದಾಗ ಮಧ್ಯೆ ಪ್ರವೇಶಿಸಿದ ಅರುಣ್ ಸಿಂಗ್ ಈ ವಿಷಯದಲ್ಲಿ ಸ್ಪೆಸಿಫಿಕ್ ಆಗಿ ಏನಾದರೂ ಹೇಳಬಹುದಾ? ಎಂದು ಕೇಳಿದರು.

ಆಗ ನೇರವಾಗಿ ವಿಷಯ ಪ್ರಸ್ತಾಪಿಸಿದ ವಿಶ್ವನಾಥ್; ಸಾರ್, ಈಗ ಜಲಸಂಪನ್ಮೂಲ ಖಾತೆಯನ್ನೇ ತೆಗೆದುಕೊಳ್ಳಿ. ಆ ಖಾತೆಯ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಮೇಲೆ ಏನಾಗಿದೆ? ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಪೈಕಿ ನಾಲ್ಕು ಸಾವಿರ ಕೋಟಿ ರುಪಾಯಿಗಳ ಟೆಂಡರ್ ಅನ್ನು ಕರೆಯಲಾಗಿದೆ. ಇದು ಕಿಕ್ ಬ್ಯಾಕ್ ಅಲ್ಲದೆ ಮತ್ತೇನು ಸಾರ್?ಕೇಳಿದರೆ ನಾವು ಮೇಲಿನವರಿಗೆ ಕೊಡಬೇಕು ಎಂದು ಹೇಳಿಕೊಂಡು ಬರಲಾಗುತ್ತಿದೆ. ಈಗ ನೀವೇ ಹೇಳಿ ಸಾರ್, ನೀವು ಇವರಿಂದ ಕಿಕ್ ಬ್ಯಾಕ್ ಪಡೆಯುತ್ತಿದ್ದೀರಿ ಎಂಬ ರೂಮರ್ ಹರಡುತ್ತಿದೆ. ಇದು ನಿಜವಾ? ಎಷ್ಟು ಹಣವನ್ನು ನೀವು ಮತ್ತು ವರಿಷ್ಠರು ಇವರಿಂದ ಪಡೆದುಕೊಂಡಿದ್ದೀರಿ? ಎಂದು ನೇರವಾಗಿ ಕೇಳಿಯೇ ಬಿಟ್ಟರು.

ವಿಶ್ವನಾಥ್ ಅವರ ಮಾತು ಕೇಳಿ ಬೆಚ್ಚಿ ಬಿದ್ದ ಅರುಣ್ ಸಿಂಗ್; ನೋ, ನೋ, ಕಿಕ್ ಬ್ಯಾಕೂ ಇಲ್ಲ, ಏನೂ ಇಲ್ಲ. ಪಕ್ಷದ ವರಿಷ್ಠರು ಏನು ಹೇಳುತ್ತಾರೋ? ಅದನ್ನು ಮಾಡುವುದಷ್ಟೇ ನನ್ನ ಕೆಲಸ, ಅದನ್ನು ಬಿಟ್ಟು ಬೇರೆ ಯಾವುದೂ ನನಗೆ ಮುಖ್ಯವಲ್ಲ ಎಂದು ಸುಮ್ಮನೆ ಕುಳಿತುಬಿಟ್ಟರು.

ಮುಂದುವರಿದ ವಿಶ್ವನಾಥ್; ಸಾರ್, ಇದೇ ರೀತಿ ಜಿಂದಾಲ್ ಕಂಪನಿಗೆ ಭೂಮಿ ಕೊಟ್ಟ ವಿಚಾರವನ್ನೇ ತೆಗೆದುಕೊಳ್ಳಿ. ಕೇವಲ ಒಂದು ಲಕ್ಷ, ಹನ್ನೆರಡು ಸಾವಿರ ರುಪಾಯಿಗೆ ಒಂದು ಎಕರೆಯಂತೆ ಮೂರು ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಪರಭಾರೆ ಮಾಡಲು ನಿರ್ಧರಿಸಿದರಲ್ಲ? ಇದು ಕಿಕ್ ಬ್ಯಾಕ್ ಕೇಸ್ ಅಲ್ಲದೆ ಇನ್ನೇನು? ಎಂದು ಪ್ರಶ್ನಿಸಿದರು.

ಒಂದು ಕಾಲದಲ್ಲಿ ಜಿಂದಾಲ್‌ಗೆ ಭೂಮಿಯನ್ನು ಪರಭಾರೆ ಮಾಡುವುದನ್ನು ಯಡಿಯೂರಪ್ಪ ದೊಡ್ಡ ಮಟ್ಟದಲ್ಲಿ  ವಿರೋಧಿಸಿ ದ್ದರು. ಅಂಥ ಯಡಿಯೂರಪ್ಪನವರೇ ಈಗ ಆ ಕೆಲಸಕ್ಕೆ ಏಕೆ ಕೈ ಹಾಕಿದರು? ಇದು ಕಿಕ್ ಬ್ಯಾಕ್ ಉದ್ದೇಶವೇ? ರಾಜ್ಯದ ಹಿತಾಸಕ್ತಿ ರಕ್ಷಿಸುವ ಉದ್ದೇಶವೇ? ಅಂತ ವಿಶ್ವನಾಥ್ ಕೇಳಿದಾಗ ಅರುಣ್ ಸಿಂಗ್ ಅವರು ಮೌನವಾಗಿದ್ದರು. ಇಷ್ಟು ಹೇಳಿದ ವಿಶ್ವನಾಥ್ ಕೊನೆಗೊಮ್ಮೆ; ಸಾರ್, ನನಗೀಗ ಎಪ್ಪತ್ನಾಲ್ಕು ವರ್ಷ. ಎಲ್ಲವನ್ನೂ ನೋಡಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ, ಆದರೆ ಸಾರ್ವಜನಿಕ ಜೀವನದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಇರಬೇಕು ಎಂಬುದು ನನ್ನ ಉದ್ದೇಶ. ಹಾಗೆಯೇ ಉಳಿದು ಕೊಂಡಿದ್ದೇನೆ. ಹೀಗಾಗಿ ನಾಯಕತ್ವದ ವಿಷಯದಲ್ಲಿ ಏನು ಹೇಳಬೇಕೋ? ಅದನ್ನು ಹೇಳಿದ್ದೇನೆ.

ಮುಂದಿನದು ನಿಮಗೆ ಬಿಟ್ಟಿದ್ದು. ಆದರೆ ಮೋದಿಯವರಿಗಿಂತ ಯಡಿಯೂರಪ್ಪನವರೇ ಬಿಜೆಪಿಗೆ ಮುಖ್ಯ ಎಂದಾದರೆ, ಅವರನ್ನು ಬದಲಿಸಿದರೆ ಬಿಜೆಪಿಗಿಲ್ಲಿ ಭವಿಷ್ಯವೇ ಇಲ್ಲ ಎಂದು ಹೇಳುವುದಾದರೆ ಇನ್ನೆರಡು ವರ್ಷ ಕಳೆದ ಮೇಲೆ ಅವರ ಮಗನೇ ಬಿಜೆಪಿಗಿರುವ ಏಕೈಕ ಆಸರೆ ಎಂದಾಗುತ್ತದೆ. ಆನಂತರ ಅವರ ಕುಟುಂಬದ ಇನ್ಯಾರೋ ಆ ಜಾಗಕ್ಕೆ ಅನಿವಾರ್ಯವಾಗುತ್ತಾರೆ.
ಪಕ್ಷವನ್ನು ಇಂಥ ಹೀನಾಯ ಸ್ಥಿತಿಗೆ ತಳ್ಳುವುದಕ್ಕಿಂತ ಈಗಲೇ ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಬದಲಿಸುವುದು
ಸೂಕ್ತ. ಅವರು ಬದಲಾದರೆ ತಾನೇ ಮತ್ತೊಬ್ಬರು ನಾಯಕರಾಗಿ ಬೆಳೆದು ನಿಲ್ಲುವುದು? ಅದಕ್ಕೆ ಅವಕಾಶ ನೀಡದೆ ಯಥಾಸ್ಥಿತಿ ಮುಂದುವರಿಯಲಿ ಎಂದರೆ ರಾಜ್ಯದಲ್ಲಿ ಬಿಜೆಪಿ ದಯನೀಯ ಸ್ಥಿತಿಗೆ ತಲುಪುತ್ತದೆ ಎಂದಾಗ ಅರುಣ್ ಸಿಂಗ್ ಮೇಲೆದ್ದು ನಿಂತು ಅವರ ಕೈ ಕುಲುಕಿದರು.

ಅಷ್ಟೇ ಅಲ್ಲ, ಮಿಸ್ಟರ್ ವಿಶ್ವನಾಥ್, ಏನು ಹೇಳಬೇಕು ಎಂದು ನಿಮಗನ್ನಿಸಿತೋ? ಅದನ್ನು ಮುಕ್ತವಾಗಿ ಹೇಳಿದ್ದೀರಿ. ಇವತ್ತು ಸಾರ್ವಜನಿಕ ಜೀವನದಲ್ಲಿ ಹೀಗೆ ಮುಕ್ತವಾಗಿ ಮಾತನಾಡುವುದು ಬಹಳ ಕಷ್ಟ. ಆದರೆ ನೀವು ಹೇಳಬೇಕಾದ್ದನ್ನು ಹೇಳಿದ್ದೀರಿ. ಇದನ್ನು ನಿಶ್ಚಿತವಾಗಿ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿ ಬೀಳ್ಕೊಟ್ಟರು. ಹೀಗೆ ರಾಜ್ಯ ಬಿಜೆಪಿಯಲ್ಲಿ ಎದ್ದ ಅಸಮಾ ಧಾನದ ಕುರಿತು ಅರುಣ್ ಸಿಂಗ್ ಅವರಿಗೆ ವಿವರಿಸಿದ ವಿಶ್ವನಾಥ್ ಈಗ ನೆಮ್ಮದಿಯಾಗಿzರೆ. ಈ ದೂರಿನ ಆಧಾರದ ಮೇಲೆ
ನಿಶ್ಚಿತವಾಗಿಯೂ ಕ್ರಮವಾಗುತ್ತದೆ ಎಂಬುದು ಅವರ ನಂಬಿಕೆ.

ಆದರೆ ಅರುಣ್ ಸಿಂಗ್ ಅವರ ಮೂರು ದಿನಗಳ ಭೇಟಿಯ ನಂತರ ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದೆ ಎಂಬ
ತೀರ್ಮಾನಕ್ಕೆ ಬಂದಿರುವ ಕ್ಯಾಂಪು ಬೇರೆಯೇ ಲೆಕ್ಕಾಚಾರ ಹಾಕುತ್ತಿದೆ. ಅದರ ಪ್ರಕಾರ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಿದ ವಿಶ್ವನಾಥ್ ಸದ್ಯದ ಕಮಲ ಪಾಳೆಯದಿಂದ ಗೇಟ್ ಪಾಸ್ ಪಡೆಯಲಿದ್ದಾರೆ.

ಅಂದ ಹಾಗೆ ಈ ಎರಡು ಲೆಕ್ಕಾಚಾರಗಳ ಪೈಕಿ ಏನೇ ಆದರೂ ಒಂದು ಸ್ಪಷ್ಟ ಸಂದೇಶ ರವಾನೆಯಾಗುವುದು ಖಚಿತ. ವಿಶ್ವನಾಥ್ ಅಂದುಕೊಂಡಂತೆ ನಡೆದರೆ ಯಡಿಯೂರಪ್ಪ ಆದಷ್ಟು ಬೇಗ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಹಾಗಾಗದೆ ವಿಶ್ವನಾಥ್ ಅವರೇ ಕಮಲ ಪಾಳೆಯದಿಂದ ಕೈ ತೊಳೆದುಕೊಂಡು ಹೊರಬೀಳುವ ಸ್ಥಿತಿ ಬಂದರೆ ಯಡಿಯೂರಪ್ಪ ತಾತ್ಕಾಲಿಕ ವಾಗಿಯಾದರೂ ಬಚಾವಾಗುತ್ತಾರೆ.