Saturday, 27th April 2024

ಮನೆಯಲ್ಲೂ ಸಿಗದ, ಹಿತವಾದ spaceನ್ನು ಹೊಟೇಲ್ ಮಾತ್ರ ಕೊಡಬಲ್ಲುದು !

ನೂರೆಂಟು ವಿಶ್ವ

vbhat@me.com

ನಿಮ್ಮ ಅನುಭವವೇನೋ ಗೊತ್ತಿಲ್ಲ. ನನಗೆ ಕೆಲವು ಹೊಟೇಲುಗಳು ಎಂದೂ ಬತ್ತದ ನೆನಪಿನ ಭಾಗವಾಗಿಯೇ ಉಳಿದು ಬಿಟ್ಟಿವೆ. ಅವು ಮಾನವೀಯ ಸಂಬಂಧ ಕುದುರಿಸುವ ತಾಣಗಳಾಗಿ ತೋರುತ್ತವೆ. ಅಷ್ಟಕ್ಕೂ ಅವು ಕೇಳಿದಷ್ಟು ಹಣ ತೆತ್ತು ರಾತ್ರಿ ಬಿದ್ದು, ಬೆಳಗ್ಗೆ ಎದ್ದು ಬರುವ ಒಂದು ಆಶ್ರಯ ವ್ಯವಸ್ಥೆಯಾಗಿ ಕಾಣುವುದಿಲ್ಲ. ಇಂದಿಗೂ ಉಳಿದು ಕೊಂಡ ಒಂದೊಂದು ಹೊಟೇಲ್ ಸಹ ನೆನಪಿನ ಗಂಟಾಗಿ ಕೈ ಜಗ್ಗುವುದುಂಟು.

ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋಗುವಾಗ ಅಲ್ಲಿನ ಚರಿತ್ರೆಯನ್ನು ಓದಿಕೊಂಡು ಹೋಗುವುದು ರೂಢಿ. ನಾನು ಮೊದಲ ಬಾರಿಗೆ ಆಫ್ರಿಕಾದ ರವಾಂಡಕ್ಕೆ ಹೋದಾಗ ಆ ದೇಶದ ರಕ್ತಸಿಕ್ತ ಇತಿಹಾಸ ನನ್ನನ್ನು ಹಿಂಜಿಹಿಪ್ಪಲಿ ಮಾಡಿತ್ತು. 1994 ರಲ್ಲಿ ಆ ದೇಶದಲ್ಲಿ ನಡೆದ ಜನಾಂಗೀಯ ನರಮೇಧದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷ ಮಂದಿ ಹತ್ಯೆಗೀಡಾಗಿದ್ದರು. ಪ್ರತಿದಿನ ತಲಾ ಹತ್ತು ಸಾವಿರ ಜನರ ಮಾರಣಹೋಮ ನಡೆದಿತ್ತು. ಅಂತ್ಯಸಂಸ್ಕಾರ ಮಾಡಲು ಜಾಗವಿರಲಿಲ್ಲ.

ಕಂಡಕಂಡಲ್ಲಿ ಹೆಣಗಳ ರಾಶಿ ರಾಶಿಗಳೇ ಬಿದ್ದಿದ್ದವು. ಒಂದು ಲಕ್ಷಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದರು. ಮದ್ದು-ಗುಂಡುಗಳು ಸಿಗದೇ, ಜನ ರಸ್ತೆಗಳಲ್ಲಿ ಕಲ್ಲು, ಬಡಿಗೆಗಳಲ್ಲಿ ಹೊಡೆದು ಸತ್ತಿದ್ದರು. ಹುಟು ಮತ್ತು ಟುಟ್ಸಿ ಎಂಬ ಎರಡು ಕೋಮುಗಳ ಜನರ ವೈಷಮ್ಯ ಹತ್ತು ಲಕ್ಷ ಜನರನ್ನು ಬಲಿ ತೆಗೆದುಕೊಂಡಿತ್ತು. ಮಾನವ ಚರಿತ್ರೆಯ ಅದೊಂದು ಮರೆಯ ಲಾಗದ, ಅತ್ಯಂತ ಭೀಭತ್ಸ ಅಧ್ಯಾಯ.

ನಾನು ರವಾಂಡ ರಾಜಧಾನಿ ಕಿಗಾಲಿಯಲ್ಲಿ ಒಂದು ವಾರ ಹೇಗೆ ಕಳೆದೆನೋ ಗೊತ್ತಿಲ್ಲ. ನಾನು ಮತ್ತು ನನ್ನ ಸ್ನೇಹಿತ ಎರಡು ಪ್ರತ್ಯೇಕ ರೂಮುಗಳನ್ನು ಮುಂಗಡ ಕಾಯ್ದಿರಿಸಿದ್ದರೂ, ಕೊನೆಗೆ ಇಬ್ಬರೂ ಒಂದೇ ರೂಮಿನಲ್ಲಿ ಉಳಿದುಕೊಂಡಿದ್ದೆವು. ಅದಕ್ಕೆ ಕಾರಣವೂ ಇತ್ತು. ರವಾಂಡಕ್ಕೆ ಹೋಗುವ ಕೆಲ ದಿನಗಳ ಮೊದಲು, ನಾನು ಡಾನ್ ಚೀq ಅಭಿನಯದ, ಟೆರ್ರ‍ಿ ಜಾರ್ಜ್ ನಿರ್ದೇಶನದ ‘ಹೊಟೇಲ್ ರವಾಂಡ’ ಎಂಬ ಸಿನಿಮಾ ನೋಡಿದ್ದೆ. ಜನಾಂಗೀಯ ನರಮೇಧದ ಸಮಯದಲ್ಲಿ ಆ ಹೊಟೇಲಿನಲ್ಲಿ ಉಳಿದುಕೊಂಡ ಕೆಲವು ಮಂದಿಯನ್ನು ಸಾಯಿಸಲಾಗಿತ್ತು.

ನಾನು ಉಳಿದುಕೊಂಡ ಹೊಟೇಲಿನಲ್ಲೂ ನೂರಾರು ಜನ ಹತ್ಯೆಗೀಡಾಗಿರಬಹುದಾ ಎಂಬ ಭಾವನೆಯಿಂದ ನಮ್ಮಿಬ್ಬರಿಗೂ ನಿದ್ದೆಯೇ ಬಂದಿರಲಿಲ್ಲ. ನಾವು ಮೊದಲ ಎರಡು ದಿನ ರಾತ್ರಿಯಿಡೀ ಮಾತಾಡುತ್ತಲೇ ಕಳೆದು ಬಿಟ್ಟಿದ್ದೆವು. ಬೆಳಗಿನ ಜಾವ ನಿzಗೆ ಜಾರಿದ್ದೆವು. ಮೂರನೇ ದಿನ ಹೊಟೇಲ್ ಪರಿಚಾರಕೆಯೊಬ್ಬಳು ಬಂದು, ‘ಈ (ಸೆರಿನಾ) ಹೊಟೇಲ್ ನಲ್ಲಿ ನೀವು ಈ ಥರ ಭಯಭೀತರಾಗಬೇಕಿಲ್ಲ, ಇದನ್ನು ಜನಾಂಗೀಯ ನರಮೇಧ ನಡೆದ ನಂತರ ನಿರ್ಮಿಸಲಾಗಿದೆ’ ಎಂದು ಹೇಳಿದ ಬಳಿಕ ನಿಟ್ಟು ಸಿರುಬಿಟ್ಟಿದ್ದೆವು. ಆದರೂ ಹೊಟೇಲಿನ ಸುತ್ತಮುತ್ತ ಹತ್ಯೆಗಳಾಗಿರಬಹುದು ಎಂಬ ಭಯದ ನೆರಳು ನಮ್ಮನ್ನು ಆವರಿಸಿ ಕೊಂಡಿದ್ದು ಸುಳ್ಳಲ್ಲ.

ನಾನು ಎರಡನೇ ಬಾರಿಗೆ ಆ ದೇಶಕ್ಕೆ ಹೋದಾಗ, ‘ಡೆಸ್ ಮಿ ಕಾಲಿನ್ಸ್’ (Hotel of a thousand hills) ಎಂಬ ಹೊಟೇಲಿ
ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿ ನಾಲ್ಕು ದಿನಕ್ಕಾಗಿ ರೂಮು ಕಾದಿರಿಸಿದ್ದೆ. ಎರಡನೇ ದಿನ ರಾತ್ರಿ ಊಟ ಮಾಡುವಾಗ,
‘ಹೊಟೇಲ್ ರವಾಂಡ’ ಸಿನಿಮಾ ಶೂಟಿಂಗ್ ಆಗಿದ್ದು ಅ ಎಂಬುದು ಗೊತ್ತಾಯಿತು. ಅಂದ್ರೆ ಅದೇ ಹೊಟೇಲಿನಲ್ಲಿ ನೂರಾರು ಜನರ ಮಾರಣ ಹೋಮವಾಗಿತ್ತು. ಆ ವಿಷಯ ಗೊತ್ತಾಗುತ್ತಿದ್ದಂತೆ, ಮಲಗುವುದಾದರೂ ಹೇಗೆ? ಆ ರಾತ್ರಿ ನನ್ನ ಕಣ್ಣೊಳಗೆ ನಿದ್ದೆ ಇಳಿಯಲೇ ಇಲ್ಲ. ಮಧ್ಯರಾತ್ರಿ ನನ್ನ ಸ್ಥಿತಿಯನ್ನು ಡ್ಯೂಟಿ ಮ್ಯಾನೇಜರ್‌ಗೆ ವಿವರಿಸಿದೆ.

ಆತ ನನ್ನ ಧೈರ್ಯಕ್ಕೆಂದು ಒಬ್ಬನನ್ನು ಕಳಿಸಿದ. ಆತ ಅದೆಂಥ ಪರಮ ವಾಚಾಳಿಯೆಂದರೆ, ಆತನ ಮಾತು ಕೇಳಿಸಿಕೊಳ್ಳು ತ್ತಿದ್ದಂತೆ ನಾನು ಗೊರಕೆ ಹೊಡೆಯಲಾರಂಭಿಸಿದ್ದೆ. ಆ ಹೊಟೇಲಿನಲ್ಲಿ ಉಳಿದ ಮುಂದಿನ ಮೂರು ರಾತ್ರಿಗಳಲ್ಲೂ ಆತನೇ ಜತೆಗಾರನಾಗಿದ್ದ. ಒಂದು ವೇಳೆ ಆತನಿಲ್ಲದಿದ್ದರೆ, ಬೆಳಗು ಹಾಯಿಸುವುದು ಕಷ್ಟವಿತ್ತು. ಈಗಲೂ ಪ್ರತಿ ವರ್ಷ ನನಗೆ ಆ ಹೊಟೇಲಿನ ಜನರಲ್ ಮ್ಯಾನೇಜರ್ ನನ್ನ ಜನ್ಮದಿನ ದಂದು ಫೋನ್ ಮಾಡುತ್ತಾನೆ, ನನಗೆ ಜತೆಗಾರನಾಗಿದ್ದ ಹಕಿಜಿಮಾನಾ ಆಗಾಗ ಫೋನ್ ಮಾಡುತ್ತಾನೆ, ವಾಟ್ಸಾಪ್ ಮೆಸೇಜ್ ಕಳಿಸುತ್ತಾನೆ. ನಮ್ಮಿಬ್ಬರ ನಡುವಿನ ಲೈನ್ ಸದಾ ಆತ್ಮೀಯತೆಯಲ್ಲಿ ಎಂಗೇಜ್! ಕಳೆದ ಎರಡು ವರ್ಷಗಳಿಂದ ಬೇರೊಂದು ದೇಶದಲ್ಲಿ ಭೇಟಿಯಾಗಬೇಕೆಂದು ಇಬ್ಬರೂ ಪ್ಲಾನ್ ಮಾಡುತ್ತಿದ್ದೇವೆ. ಕರೋನಾ ಮತ್ತಿತರ ಕಾರಣಗಳಿಂದ ಈಡೇರಿಲ್ಲ.

ಪ್ರಾಯಶಃ ಈ ವರ್ಷ ಅದು ಸಾಧ್ಯವಾಗಬಹುದು. ನಾನು ಕಳೆದ ಮೂರು ಸಲವೂ ನ್ಯೂಯಾರ್ಕಿಗೆ ಹೋದಾಗ, ಮಿಡ್ ಟೌನ್ ಮ್ಯಾನ್ಹಟನ್‌ನ ನಲವತ್ತೇಳನೇ ಬೀದಿಯಲ್ಲಿರುವ ಹೊಟೇಲ್ ಎಡಿಸನ್‌ನಲ್ಲಿ ಉಳಿದುಕೊಂಡಿದ್ದೆ. ಕಾರಣ ಇಷ್ಟೇ. ಈ ಹೊಟೇಲ್ ’ಟೈಮ್ಸ್ ಸ್ಕ್ವೇರ್’ ಗೆ ಒಂದು ನಿಮಿಷ ಸನಿಹದಲ್ಲಿದೆ. ಮಧ್ಯರಾತ್ರಿ ಎರಡು ಗಂಟೆಗೆ ಎದ್ದು ಹೋದರೂ ಟೈಮ್ಸ್ ಸ್ಕ್ವೇರ್ ಗಿಜಗುಡುತ್ತಿರುತ್ತದೆ. ಈ ಸ್ಕ್ವೇರ್ ಎಂದೂ ನಿದ್ರಿಸುವುದಿಲ್ಲ. ಜಗತ್ತಿನ ಎಲ್ಲಿಂದಲೋ ಜನ ಇಲ್ಲಿಗೆ ಬರುತ್ತಾರೆ. ಅಲ್ಲಿ ಏನೂ ಮಾಡದೇ, ಬರುವ ಜನರನ್ನು ನೋಡುತ್ತಿದ್ದರೆ, ಹತ್ತು ದಿನ ಕಳೆದು ಹೋಗುತ್ತದೆ.

ಇದು ಸುಮಾರು ತೊಂಬತ್ತು ವರ್ಷಗಳ ಹಳೆಯ ಹೊಟೇಲ್. ಇಲ್ಲಿಗೆ ಬರುವವರೆಲ್ಲ ಹೆಚ್ಚಾಗಿ ರಿಪೀಟ್ ಕಸ್ಟಮರ್ಸ್. ಈ
ಹೊಟೇಲಿನ ಉದ್ಘಾಟನೆಯನ್ನು ಎಲೆಕ್ಟ್ರಿಕ್ ಬಲ್ಬ ಕಂಡುಹಿಡಿದ ಥಾಮಸ್ ಎಡಿಸನ್, ವಿದ್ಯುತ್ ದೀಪ ಬೆಳಗುವುದರ ಮೂಲಕ
ಮಾಡಿದ್ದ. ಈಗ ಇದರ ಮಾಲೀಕತ್ವವನ್ನು ಟ್ರಂಪ್ ಸಮೂಹ ಹೊಟೇಲ್ ಸಂಸ್ಥೆ ಹೊಂದಿದೆ. ಇದೊಂದು ಹೆರಿಟೇಜ್
ಹೊಟೇಲ್.

ಯಾವ ಹೊಟೇಲ್ ಸಹ ಸುಖಾಸುಮ್ಮನೆ ಗ್ರಾಹಕರ ಮನಸ್ಸಿನಲ್ಲಿ ನೆಲೆಸುವುದಿಲ್ಲ. ಒಮ್ಮೆ ಇಲ್ಲಿ ಉಳಿದವರು, ಬೇರೆ ಹೊಟೇಲ್‌ ಗಳನ್ನು ಇಷ್ಟಪಡುವುದಿಲ್ಲ. ನಾನು ಇಲ್ಲಿ ಉಳಿದುಕೊಂಡಾಗ, ರಾತ್ರಿ ಕಾರಿಡಾರಿನಲ್ಲಿ ಒಬ್ಬ ಜೋರಾಗಿ ಕಿರುಚಿಕೊಂಡ. ಆ ಸದ್ದಿಗೆ ಆ ಮಹಡಿಯಲ್ಲಿದ್ದವರೆಲ್ಲ ಎದ್ದು ಬಂದರು. ಕೆಲವರು ನಿzಗಣ್ಣಿನಲ್ಲಿ ಭಯಭೀತರಾಗಿದ್ದರು. ಆತ ಮಾನಸಿಕ ಅಸ್ವಸ್ಥ ನಾಗಿದ್ದ. ಮರುದಿನ ಬೆಳಗ್ಗೆ ಹೊಟೇಲ್ ಜನರಲ್ ಮ್ಯಾನೇಜರ್‌ನಿಂದ ಕ್ಷಮೆ ಕೋರುವ ಆ ಪತ್ರ. ಬಿಲ್ ನಲ್ಲಿ ನೂರು ಡಾಲರ್ ಕಡಿತಗೊಳಿಸುವುದಾಗಿ ಅದರಲ್ಲಿ ತಿಳಿಸಲಾಗಿತ್ತು. ಪ್ರಾಯಶಃ ಆ ಮಹಡಿಯಲ್ಲಿದ್ದವರೆಲ್ಲರಿಗೂ ಈ ‘ಪ್ರಾಯಶ್ಚಿತ ಹಣ’ ಸಂದಾಯವಾಗಿರಬಹುದು.

ಒಮ್ಮೆ ನಾನು ಆ ಹೊಟೇಲ್‌ನಲ್ಲಿ ನನ್ನ ಪ್ಯಾಂಟಿನ ಕಿಸೆಯಲ್ಲಿ ಉಂಗುರವನ್ನಿಟ್ಟು ಲಾಂಡ್ರಿಗೆ ಕೊಟ್ಟುಬಿಟ್ಟಿದ್ದೆ. ಎಷ್ಟು ಹುಡುಕಿ ದರೂ ಉಂಗುರ ಸಿಗಲಿಲ್ಲ. ಪ್ರಾಯಶಃ ದಾರಿಯ ಕಳಚಿ ಬಿದ್ದಿರಬಹುದು ಎಂದುಕೊಂಡೆ. ಪ್ಯಾಂಟಿನ ಜೇಬಿನಲ್ಲಿಟ್ಟಿರ ಬಹುದು ಎಂಬ ಸಣ್ಣ ಸಂದೇಹವೂ ಬಂದಿರಲಿಲ್ಲ. ಅಲ್ಲಿಗೆ ಆ ಉಂಗುರದ ಆಸೆಯನ್ನು ಬಿಟ್ಟಿದ್ದೆ. ಎರಡು ದಿನಗಳ ಬಳಿಕ ಪ್ಯಾಂಟ್ ಮತ್ತು ಜತೆಯಲ್ಲಿ ಉಂಗುರವನ್ನು ಡ್ಯೂಟಿ ಮ್ಯಾನೇಜರ್ ತಂದುಕೊಟ್ಟ. ನನಗೆ ಅತೀವ ಸಂತಸವಾಯಿತು. ಒಂದು ವೇಳೆ ಉಂಗುರವನ್ನು ಕೊಡದಿದ್ದರೂ, ನನಗೆ ಗೊತ್ತಾಗುತ್ತಿರಲಿಲ್ಲ ಮತ್ತು ಹೊಟೇಲಿನ (ಸಿಬ್ಬಂದಿ) ಬಗ್ಗೆ ಸಂದೇಹವೂ ಬರುತ್ತಿರಲಿಲ್ಲ. ಉಂಗುರ ಕಾಣೆಯಾದ ಬಗ್ಗೆ ನಾನು ದೂರನ್ನೂ ನೀಡಿರಲಿಲ್ಲ. ಆ ಹೊಟೇಲಿನ ರಚನೆಯಲ್ಲಿ ಅಡಕವಾದ ಪ್ರಾಮಾಣಿಕತೆ ಬಗ್ಗೆ ನನಗೆ ಅಭಿಮಾನ ಮೂಡಿತು. ಅದಾದ ಬಳಿಕ ನಾನು ಆ ಹೊಟೇಲಿನ ಕಾಯಂ ಗ್ರಾಹಕ. ತುಸು ದುಬಾರಿಯಾದರೂ, ಹಣ ಕೊಟ್ಟಿದ್ದಕ್ಕೆ ಬೇಸರವಿಲ್ಲ.

ನನಗೆ ಪ್ರತಿ ವಾರ ಈ ಹೊಟೇಲಿನ ‘ವೀಕ್ಲಿ ಬುಲೆಟಿನ್’ ಬರುತ್ತದೆ. ಅದರಲ್ಲಿ ಆ ಹೊಟೇಲಿನಲ್ಲಿ ಉಳಿದುಕೊಂಡ ಗ್ರಾಹಕರು ತಮಗಾದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈ ಬುಲೆಟಿನ್‌ನಲ್ಲಿ ಎರಡು ವಾರಗಳ ಹಿಂದೆ, ನನ್ನ ‘ಉಂಗುರದ ಕಥೆ’ಯೂ ಪ್ರಕಟವಾಗಿತ್ತು. ನಾನು ಮುಂದೆ ಎಷ್ಟು ಸಲ ನ್ಯೂಯಾರ್ಕಿಗೆ ಹೋದರೂ ನನ್ನ ಮೊದಲ ಆಯ್ಕೆ ಅದೇ ಎಡಿಸನ್!

ಶಿವರಾಮ ಕಾರಂತರು, ಸಂತೋಷಕುಮಾರ ಗುಲ್ವಾಡಿ ಸೇರಿದಂತೆ ಬೇರೆ ಊರಿನಿಂದ ಬೆಂಗಳೂರಿಗೆ ಬರುವ ಹೆಚ್ಚಿನ
ಸಾಹಿತಿ, ಲೇಖಕರ ಮೆಚ್ಚಿನ ಹೊಟೇಲ್ ಅಂದ್ರೆ ಶಿವಾನಂದ ಸರ್ಕಲ್ ಹತ್ತಿರವಿರುವ ಜನಾರ್ದನ ಹೊಟೇಲ್ ಆಗಿತ್ತು. ಅವರೆಲ್ಲ ಆ ಹೊಟೇಲಿನಲ್ಲಿ ಇಪ್ಪತ್ತು-ಮೂವತ್ತು ವರ್ಷಗಳಿಂದ ಉಳಿಯುತ್ತಾ ಬಂದವರು. ಒಮ್ಮೆ ನಾನು ಈ ಬಗ್ಗೆ ಗುಲ್ವಾಡಿಯವರನ್ನು ಕೇಳಿದಾಗ, ‘ಈ ಹೊಟೇಲಿನ ಮಾಲೀಕರು ನನ್ನ ಸ್ನೇಹಿತರು. ನಾವು ಯಾವ ಹೊಟೇಲಿನಲ್ಲಿ ಉಳಿದುಕೊಳ್ಳುತ್ತೇವೋ ಅಂದು ಭಾವನಾತ್ಮಕ ಸಂಗತಿ ಇರಬೇಕು.

ಮನುಷ್ಯನಾದವನು ಅಪರಿಚಿತ ನೆಲೆಯಲ್ಲಿ ವಾಸಿಸಲು ಬಯಸುವುದಿಲ್ಲ. ಆತನಿಗೆ ಏನಾದರೊಂದು (ಭಾವನಾತ್ಮಕ) ನೆಪ
ಬೇಕು’ ಎಂದು ಹೇಳಿದ್ದರು. ಒಮ್ಮೆ ಕಾರಂತರನ್ನು ಧಾರವಾಡದ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದಾಗ, ‘ನನಗೆ
ಅಪರಿಚಿತರ ಮನೆಯಲ್ಲಿ, ಅಪರಿಚಿತ ಜಾಗದಲ್ಲಿ ಉಳಿದು ಅಭ್ಯಾಸವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ನಾವು ಯಾವ
ಹೊಟೇಲಿನಲ್ಲಿ ಉಳಿಯುತ್ತೇವೋ, ಅದು ನಮ್ಮ ಭಾವತಂತುಗಳನ್ನು ತಟ್ಟಿರಬೇಕು. ಅನಿವಾರ್ಯ ಪ್ರಸಂಗಗಳಲ್ಲಿ ಇದು
ಬೇರೆ. ನಮ್ಮ ಮನೆಯಲ್ಲಿಯೇ ಬೇರೆ ಕೋಣೆಯಲ್ಲಿ ಮಲಗಲು ಒಪ್ಪದ ಮನಸ್ಸು, ಗೊತ್ತು-ಪರಿಚಯವಿಲ್ಲದ, ಭಾಷೆ-
ಸಂಸ್ಕೃತಿ ಪರಿಚಯವಿಲ್ಲದ ಜಾಗದಲ್ಲಿ ಹೇಗೆ ಮಲಗೀತು? ಹೀಗಾಗಿ ನಾವು ಆಯ್ದುಕೊಳ್ಳುವ ಹೊಟೇಲು, ನಮಗೆ ಮನೆ
ಯಂತೆ ಅಲ್ಲದಿದ್ದರೂ homely ಎನಿಸುವ ಪರಿಸರವನ್ನು ನೀಡಬೇಕು.

ಈ ಮಾತನ್ನು ಹೇಳುವಾಗ ನನಗೆ ಲೀಲಾ ಹೊಟೇಲ್ ಮಾಲೀಕರಾದ ಕ್ಯಾಪ್ಟನ್ ಸಿ.ಪಿ.ಕೃಷ್ಣನ್ ನಾಯರ್ ನೆನಪಾಗುತ್ತಾರೆ. ನಿವೃತ್ತರಾದ ಬಳಿಕ ಲೀಲಾ ಗ್ರೂಪ್ ಹೊಟೇಲುಗಳನ್ನು ಸ್ಥಾಪಿಸಿದ (1981ರಲ್ಲಿ) ಅವರಿಗೆ ನಾನು, ‘ಕ್ಯಾಪ್ಟನ್, ನೀವೇಕೆ
ನಿಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ನಲ್ಲಿ ಹೊಟೇಲ್ ಉದ್ಯಮ ಆರಂಭಿಸಲು ನಿರ್ಧರಿಸಿದಿರಿ?’ ಎಂದು ಕೇಳಿದ್ದಕ್ಕೆ ಹೇಳಿದ್ದರು
– ‘ನನ್ನ ದೃಷ್ಟಿಯಲ್ಲಿ ಹೊಟೇಲ್ ಅಂದ್ರೆ ನನ್ನ ಮನೆ. ಇಲ್ಲಿಗೆ ಬರುವವರೆಲ್ಲ ನನ್ನ ಅತಿಥಿಗಳು. ಈ ಭಾವನೆಯಿರುವವರು
ಮಾತ್ರ ಹೊಟೇಲ್ ಆರಂಭಿಸಬೇಕು. ನನ್ನಲ್ಲಿ ಆ ಭಾವ ಯಾವತ್ತೂ ಇತ್ತು. ಹೀಗಾಗಿ ನನಗೆ ಇಷ್ಟದ ಈ ಉದ್ಯಮಕ್ಕೆ ಕಾಲಿಟ್ಟೆ.’ ಇದರಲ್ಲಿ ಸ್ವಲ್ಪವೂ ಉತ್ಪ್ರೇಕ್ಷೆ ಇರಲಿಲ್ಲ. ಆ ಮನುಷ್ಯ ಆತಿಥ್ಯಕ್ಕೆ ಮತ್ತೊಂದು ಹೆಸರಿನಂತೆ ಇದ್ದರು.

ಅವರಲ್ಲಿ ಪ್ರೀತಿ, ಮಮತೆ, ಧಾರಾಕಾರ ನಗು ಮತ್ತು ಸಕಾರಾತ್ಮಕ ಸಂಗತಿಗಳ ಹೊರತಾಗಿ ಬೇರೇನೂ ಇರಲಿಲ್ಲ. ಅವರ ಆತಿಥ್ಯ, ಆಗ ತಾನೇ ಮದುವೆ ಮುಗಿಸಿ ಮೊದಲ ಬಾರಿಗೆ ಮಾವನ ಮನೆಗೆ ಬಂದ ಅಳಿಯನ ಸತ್ಕಾರವನ್ನು ಮೀರಿಸು ವಂತಿರುತ್ತಿತ್ತು. ಇದನ್ನು ನಾನು ಒಂದೆರಡು ಸಲ ಅಲ್ಲ, ಹತ್ತಾರು ಸಲ ಸಾಕ್ಷಾತ್ ನೋಡಿದ್ದೇನೆ, ಅನುಭವಿಸಿದ್ದೇನೆ. ಒಮ್ಮೆ ಅವರ ಅತಿಥಿಯಾಗಿ ಮುಂಬೈಯ ಲೀಲಾ ಕೆಂಪೆನ್ಸ್ಕಿ ಹೊಟೇಲಿನಲ್ಲಿ ತಂಗಿದ್ದೆ.

ಸ್ವತಃ ಕ್ಯಾಪ್ಟನ್ ನಾಯರ್, ನನ್ನೊಂದಿಗೆ ಊಟ ಮಾಡಿ, ತಮ್ಮ ಸಿಬ್ಬಂದಿ ಮುಂದೆ ನನ್ನನ್ನು ‘ದೊಡ್ಡ ಮನುಷ್ಯ’ನನ್ನಾಗಿ ಮಾಡಿದ್ದರು. ಈಗ ಕ್ಯಾಪ್ಟನ್ ನಾಯರ್ ಬದುಕಿಲ್ಲ. ಆದರೆ ಇಂದಿಗೂ ನಾನು ಮುಂಬೈಗೆ ಹೋದರೆ ಆ ಹೋಟೆಲ್ಲಿಗೆ ಹೋಗದೇ ಬರುವುದಿಲ್ಲ. ಹಾಗಂತ ನಾನು ಕ್ಯಾಪ್ಟನ್ ನಾಯರ್‌ಗೆ ಬಿಡಿಗಾಸು ಸಹಾಯ ಮಾಡಿದವನಲ್ಲ. ಇಬ್ಬರ ಮಧ್ಯೆ ಅದೇನೋ ಅವರ್ಣನೀಯ ಸ್ನೇಹ-ಸಲುಗೆ. ಕಾರಣವಿಲ್ಲದೇ ಪ್ರೀತಿಸುವುದನ್ನು, ಮನಃಪೂರ್ತಿ ಪ್ರೀತಿಸುವುದನ್ನು ಕಲಿಸಿಕೊಟ್ಟ ಮಹಾನು ಭಾವ!

ಇದು ನನ್ನದೊಬ್ಬನ ಅಭಿಪ್ರಾಯ ಅಲ್ಲ, ಅವರ ಸ್ನೇಹದ ಚಕ್ರದಲ್ಲಿ ತಿರುಗಿ ಬಂದವರೆಲ್ಲರೂ ಅವರ ಬಗ್ಗೆ ಇಂಥ ಹತ್ತಾರು ಪ್ರಸಂಗಗಳನ್ನು ಹೇಳುತ್ತಾರೆ. ಕೆಲವು ಹೊಟೇಲುಗಳು ನಮಗೆ homely ಎನಿಸುತ್ತವೆ. ಕಾರಣ ಅಲ್ಲಿನ ಐಷಾರಾಮಿತನ ವೊಂದೇ ಅಲ್ಲ, ಅಲ್ಲಿನ ವಾತಾವರಣ, ಸ್ವಚ್ಛತೆ, ಆತಿಥ್ಯ, ಉಪಚಾರ ಮತ್ತು ಸಿಬ್ಬಂದಿ. ಈ ಮಾತನ್ನು ಕ್ಯಾಪ್ಟನ್ ನಾಯರ್ ಯಾವತ್ತೂ ಹೇಳುತ್ತಿದ್ದರು. ನಾನೂ ಇದನ್ನು ಗಮನಿಸಿದ್ದೇನೆ. ಹೊಟೇಲ್ ಅಂದ್ರೆ ಬರೀ ಕೋಣೆಗಳಲ್ಲ, ಅಲ್ಲಿ ಆತಿಥ್ಯ, ಆತ್ಮೀ ಯತೆ ಇಲ್ಲದಿದ್ದರೆ ಅವು ಬರೀ ಕೋಣೆಗಳೇ. ನಾನು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿರುವ ಗ್ರಾಂಡ್ ಡ್ಯಾಡಿ ಹೊಟೇಲಿನಲ್ಲಿ ಮೊದಲ ಬಾರಿಗೆ ಕಾಲಿಟ್ಟಾಗ, ಅಂದು ಆತ್ಮೀಯತೆಯ ಬಳ್ಳಿ ನನ್ನನ್ನು ಸುತ್ತಿಕೊಂಡಿತು. ಅದಾದ ಬಳಿಕ ನಾನು ಆ ನಗರಕ್ಕೆ ಮತ್ತೆರಡು ಸಲ ಹೋಗಿ ಬಂದೆ. ಆಗಲೂ ಅಲ್ಲಿಯೇ ಉಳಿದಿದ್ದೆ.

ಮೂರನೇ ಸಲ ಹೋದಾಗ, ಆ ಹೊಟೇಲ್ ಸ್ವಕೀಯ ಭಾವವನ್ನು ನನ್ನಲ್ಲಿ ಮೂಡಿಸಿತ್ತು. ಈಗಲೂ ನನಗೆ ವರ್ಷಕ್ಕೊಮ್ಮೆ ಆ ಹೊಟೇಲಿನಿಂದ ಹೊಸ ವರ್ಷದ ಗ್ರೀಟಿಂಗ್ಸ್ ಮತ್ತು ಉಡುಗೊರೆಯಾಗಿ ಟಿ-ಶರ್ಟ್ ತಪ್ಪದೇ ಬರುತ್ತದೆ. ಆ ಹೊಟೇಲಿನಿಂದ ಬರುವಾಗ, ನಾನು ನನ್ನ ಪಾಸ್ ಪೋರ್ಟನ್ನು ಮರೆತು ಬಂದಿದ್ದೆ. ಅದನ್ನು ಹೊಟೇಲ್ ಸಿಬ್ಬಂದಿ, ನಾನು ಡರ್ಬಾನ್‌ನಲ್ಲಿ ಉಳಿದುಕೊಂಡ ಹೊಟೇಲಿಗೆ ಸುರಕ್ಷಿತವಾಗಿ ಕೊರಿಯರ್ ಮೂಲಕ ಕಳಿಸಿದ್ದರು.

ಸುಮಾರು ಎಂಟು ವರ್ಷಗಳ ಹಿಂದೆ, ಸ್ವಿಟ್ಜರ್‌ಲ್ಯಾಂಡಿಗೆ ಹೋದಾಗ ಜ್ಯುರಿಕ್ ನಗರದಲ್ಲಿ ಮೇರಿಯಟ್ ಹೊಟೇಲಿನಲ್ಲಿ
ವಾಸವಾಗಿz. ರಿಸೆಪ್ಶನ್ ಪಕ್ಕದಲ್ಲಿ ಒಂದು ಸೂಚನಾ ಪೆಟ್ಟಿಗೆಯಿತ್ತು. ನನ್ನ ಸರದಿಗಾಗಿ ಕಾಯುವ ವೇಳೆ, ಏನಾದರೂ
ಬರೆದು ಆ ಡಬ್ಬಿಯೊಳಗೆ ಹಾಕಬೇಕೆಂದು ಅನಿಸಿತು. ‘ನಿಮ್ಮ ಹೊಟೇಲಿನ ಬಾತರೂಮಿನಲ್ಲಿ ಶಾಂಪೂ, ಶಾವರ್ ಜೆಲ್,
ಕಂಡಿಷನರ್ ಬಾಟಲಿಗಳನ್ನು ಇಟ್ಟಿದ್ದೀರಲ್ಲ, ಆ ಪೈಕಿ ಯಾವುದು ಏನು ಎಂಬುದನ್ನು ಓದದಷ್ಟು ಸಣ್ಣ ಅಕ್ಷರಗಳಲ್ಲಿ ಮುದ್ರಿಸಿ ದ್ದೀರಿ.

ಸ್ನಾನ ಮಾಡುವಾಗ ಯಾರೂ ಕನ್ನಡಕ ಧರಿಸಿರದ ಕಾರಣ ಅದನ್ನು ಓದಲಾಗದೇ ಬಹಳ ಕಿರಿಕಿರಿಯಾಗುತ್ತದೆ. ದಯವಿಟ್ಟು ಆ ಬಾಟಲಿಗಳಲ್ಲಿ ಏನಿದೆ ಎಂಬುದನ್ನು ದೊಡ್ಡ ಹಾಗೂ ದಪ್ಪಕ್ಷರಗಳಲ್ಲಿ ಪ್ರಕಟಿಸಿ’ ಎಂದು ಬರೆದಿದ್ದೆ. ಮರುದಿನ ನನಗೆ ಒಂದು ಅಚ್ಚರಿ ಕಾದಿತ್ತು. ಆ ಹೊಟೇಲಿನ ಜನರಲ್ ಮ್ಯಾನೇಜರ್ ನನ್ನನ್ನು ಭೇಟಿ ಮಾಡಿ, ‘ಮಿಸ್ಟರ್ ಭಟ, ನೀವು ನೀಡಿದ ಸಲಹೆ ಅತ್ಯಂತ ಉಪಯುಕ್ತ ಮತ್ತು ನಮ್ಮ ಕಣ್ಣು ತೆರೆಸುವಂತಿದೆ. ಈ ಸಂಗತಿ ನಮ್ಮ ಗಮನಕ್ಕೆ ಬಂದಿರಲಿಲ್ಲ ಮತ್ತು ಬೇರೆ ಅತಿಥಿ ಗಳೂ ಈ ಕುರಿತು ಹೇಳಿರಲಿಲ್ಲ. ಈ ಸಲಹೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ಈ ಸಲಹೆಯಿತ್ತ ನಿಮಗೆ ನಮ್ಮ ಕಡೆಯಿಂದ, ನಮ್ಮ ಯಾವುದೇ ಹೊಟೇಲಿನಲ್ಲಿ ಮೂರು ರಾತ್ರಿ ಸಪತ್ನಿಕರಾಗಿ ಉಚಿತವಾಗಿ ವಾಸಿಸಬಹುದು’ ಎಂದು ಹೇಳಿದ.

ಸಲಹೆ ಕೊಟ್ಟವರಿಗೆ ಈ ರೀತಿಯ ಕೊಡುಗೆ ಕೊಡುತ್ತಾರಾ ಅಥವಾ ನಾನಿತ್ತ ಸಲಹೆ ಅವರಿಗೆ ಅಷ್ಟು ಉಪಯುಕ್ತವಾಯಿತಾ
ಗೊತ್ತಿಲ್ಲ, ಆದರೆ ಆ ಹೊಟೇಲಿನ gesture ಮತ್ತು attitude ನನಗೆ ಬಹಳ ಹಿಡಿಸಿತು. ಆ ಉಚಿತ ಆಫರ್ ಕೊಡುತ್ತಾರೆ ನ್ನುವುದು ನನಗೆ ಗೊತ್ತಿರಲಿಲ್ಲ. ಆ ಆಸೆಯಿಂದ ನಾನು ಆ ಸಲಹೆಯನ್ನೂ ನೀಡಿರಲಿಲ್ಲ. ಆದರೆ ನನ್ನ ಆ ಪುಟ್ಟ ಸಲಹೆಗೆ ಆ ಹೊಟೇಲಿನ ಮ್ಯಾನೇಜರ್ ಸ್ಪಂದಿಸಿದ ರೀತಿ ವಿಶಿಷ್ಟವಾಗಿತ್ತು. ಈ ಪ್ರಸಂಗ ನಡೆದ ಮೂರು ವರ್ಷಗಳ ಬಳಿಕ ನಾನು ಮತ್ತೊಮ್ಮೆ ಆ ನಗರಕ್ಕೆ ಹೋದಾಗ, ಅದೇ ಹೊಟೇಲಿನಲ್ಲಿ ಉಳಿದಿದ್ದೆ.

ನಾನು ನೀಡಿದ ಸಲಹೆ ಕಾರ್ಯರೂಪಕ್ಕೆ ಬಂದಿತ್ತು! ನಾನು ಆ ಹೊಟೇಲಿನ ಕಾಯಂ ಅತಿಥಿಯಾಗಿದ್ದೆ. Consumers are statistics. Guests are my people ಎಂದು ಕ್ಯಾಪ್ಟನ್ ನಾಯರ್ ಹೇಳುತ್ತಿದ್ದರು. ಹೊಟೇಲ್ ಉದ್ಯಮದಲ್ಲಿ ರುವವರೆಲ್ಲ ನೆನಪಿಟ್ಟುಕೊಳ್ಳಬೇಕಾದ ಮಾತಿದು. . A soul of hospitality and a heart of humanity is a house of love,
peace, freedom, liberty, and justice ಎಂಬ ಮಾತು ಹೊಟೇಲ್ ಉದ್ಯಮಕ್ಕೆ ಹೇಳಿ ಮಾಡಿಸಿದಂತಿದೆ.

ನನಗೆ ಮನೆಯಲ್ಲೂ ಸಿಗದ ಒಂದು ಅಂದವಾದ, ಹಿತವಾದ, ಅಚ್ಚುಕಟ್ಟಾದ space ನ್ನು ಹೊಟೇಲ್ ಮಾತ್ರ ಕೊಡಬಲ್ಲುದು!

error: Content is protected !!