Friday, 13th December 2024

ಇಬ್ಬರು ಜೈನರ ವೃತ್ತಾಂತ

ರಾವ್ ಭಾಜಿ

journocate@gmail.com

ಈ ಬಾರಿ ಅಂಕಣಕ್ಕೆ ಬರೆಯಲು ಕೂಡುವುದು ತಡವಾಗಿದೆ. ಬರೆಯಬೇಕಾದ ವಸ್ತುವನ್ನು ಬಿಟ್ಟು ಉಳಿದೆಲ್ಲ ವಿಷಯಗಳು, ವೀಡಿಯೊ ಗೇಮ್ಸ್‌ನ ಕಾರುಗಳಂತೆ, ತಲೆಯಲ್ಲ ಓಡಾಡುತ್ತಿವೆ.

ಇದೀಗಷ್ಟೆ ಸಂಬಂಧಿಯೊಬ್ಬರಿಂದ ಕುತೂಹಲಕಾರಿ ಮಾಹಿತಿ ಬಂತು. ಅವರ ಹತ್ತಿರದ ಒಬ್ಬ ಮಹಿಳೆ, ನಿವೃತ್ತಿಗೆ ಹತ್ತಿರದ ವಯಸ್ಸು. ಮೊಮ್ಮಕ್ಕಳ ಜತೆ ಆಟ ಆಡುವಾಗ, ಅಜ್ಜಿಯನ್ನು ‘ಆ’ ಮಾಡಲು ಹೇಳಿದವಂತೆ. ಆಕೆ ಅಗಲವಾಗಿ ಬಾಯಿ ತೆರೆದಾಗ ಗಂಟಲ ಬಳಿ ಅದೇನೋ ಇದೆ ಎಂದು ಹೇಳಿದ ವಂತೆ. ದೊಡ್ಡವರಾರೋ ಬಂದು ನೋಡಿದಾಗ ಕಂಡದ್ದು ಗುಳ್ಳೆಯಂತಿದ್ದ ಗ್ರಂಥಿ. ಆಕೆಗೆ ಕ್ಯಾನ್ಸರ್ ಪತ್ತೆಯಾದದ್ದು ಹೀಗೆ.

ಆರಂಭದ ಪತ್ತೆಯಾದ್ದರಿಂದ ಸಂಪೂರ್ಣ ಗುಣವಾದರಂತೆ. ಜಗತ್ತಿನ ಕೌತುಕಗಳಿಗೆ ಕೊನೆಯೇ ಇಲ್ಲ. ದಶಕದ ಹಿಂದಿನ ಮಾತು. ಧರ್ಮಸ್ಥಳ ವಿದ್ಯಾ ಸಂಸ್ಥೆಗಳ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಸುಧಾ ರಾವ್ ಮನೆಗೆ ಬಂದಿದ್ದರು. ಆ ಮುನ್ನ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವರನ್ನು ಒಮ್ಮೆ ಭೇಟಿ ಮಾಡಿದ್ದೇನಾದ್ದರಿಂದ ಅವರ ಪರಿಚಯವಿತ್ತು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಸಾಧನೆ ಕುರಿತು ಇಂಗ್ಲಿಷ್‌ನಲ್ಲಿ ಪುಸ್ತಕ ಬರೆಯಲು ಕೋರಿ ಕೊಂಡರು.

ನಾನು ಧರ್ಮಸ್ಥಳವನ್ನು ನೋಡಿಲ್ಲ, ಭೇಟಿ ಮಾಡಿ, ಖಾವಂದರನ್ನು ಸಂದರ್ಶಿಸಿ ಅನಂತರ ನಿರ್ಧರಿಸುವುದಾಗಿ ಹೇಳಿದೆ. ಹೆಗ್ಗಡೆ ಅವರ ಬಗ್ಗೆ ಓದಿದ್ದೆ, ಅವರಲ್ಲಿಗೇ ಹೋಗಿ ಮಾತನಾಡಿ, ಅವರ ಕಾರ್ಯವೈಖರಿ ಯನ್ನೂ, ಯೋಜನೆಗಳ ವಿಸ್ತಾರವನ್ನೂ, ಅವರು ಮುಟ್ಟಿರುವ ಜೀವಗಳ ಸಂಖ್ಯೆಯನ್ನೂ ತಿಳಿದು ಬೆರಗಾದೆ. ಅವರ ಕಾರ್ಯ ವ್ಯಾಪ್ತಿಯ ನೇರ ಪರಿಚಯ ತಡವಾಗಿ ಆಗಿದ್ದಕ್ಕೆ ಬೇಸರವಾಯಿತಾದರೂ, ಆ ಕುರಿತು ಬರೆಯಲಿಕ್ಕೆ ಮತ್ತು ವಿಶ್ವಾದ್ಯಂತ ಓದುಗರಿಗೆ ತಿಳಿಸಲು ಈಗ ಅವಕಾಶ ಸಿಕ್ಕಿತಲ್ಲ ಎಂದು ಖುಷಿಯಾಯಿತು.

ನಾನು ಓದಿದ್ದು (ಪುಣ್ಯಕ್ಕೆ) ಕಾನ್ವೆಂಟ್‌ನಲ್ಲಲ್ಲ, ಆದರೂ ಪರಿಸರ ನನ್ನ ಮೇಲೆ ಅದೆಷ್ಟು ಅನಪೇಕ್ಷಣೀಯ ಪ್ರಭಾವ ಬೀರಿದೆ ಯೆಂದರೆ ನಮ್ಮದೇ ದೇಶದ ಅಸಾಮಾನ್ಯರ ಬಗ್ಗೆ ನನಗೆ ಅಭಿಮಾನ ಮೂಡಲಾರಂಭಿಸಿದ್ದು ತಡವಾಗಿ. ಚಿಕ್ಕಂದಿನಿಂದಲೇ ರೀಡರ್ಸ್ ಡೈಜೆಸ್ಟ್ ಓದಲಾರಂಭಿಸಿದ ಪ್ರಭಾವದಿಂದಲೋ ಏನೋ ಸಾಹಸ, ಸಾಧನೆ ಎಂದರೆ ಅದು ಪಾಶ್ಚಿಮಾತ್ಯರ ಹೆಚ್ಚು ಎನ್ನುವಂಥ ಧೋರಣೆ ತಳೆದಿದ್ದೆ.

ಸಾಹಿತ್ಯದ ಸಂದರ್ಭದಲ್ಲಿ, ನಾನು ಓದುತ್ತಿದ್ದ ಕನ್ನಡದ ಆಧುನಿಕ ಲೇಖಕರೆಲ್ಲರೂ ಉದುರಿಸುತ್ತಿದ್ದುದು ಜಾನ್ ಡ್ರೈಡನ್, ಶೇಕ್ಸ್‌ ಪಿಯರ್, ಮಿಲ್ಟನ್, ರಾಬರ್ಟ್ ಫ್ರಾಸ್ಟ್, ಹೆಮಿಂಗ್ವೇ, ಮಾರ್ಕ್ವಿಜ್, ಅಯಾನ್ ರ‍್ಯಾಂಡ್ ಮುಂತಾದ ಹೆಸರುಗಳನ್ನೇ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಬಾಣ, ಭಾಸ, ದಂಡಿಗಳ ಮಾತು ಬಿಡಿ, ಜಯದೇವ, ವಿಶಾಖದತ್ತ, ಭಾರವಿ ಮುಂತಾದವರಾರೂ ಇವರಿಗೆ
ಉಲ್ಲೇಖಾರ್ಹರಲ್ಲವೇ? (ಸಹಜವಾಗಿ, ಈ ರೋಗದಿಂದ ನಾನೂ ಅಬಾಧಿತನಲ್ಲ!) ಮೆಕಾಲೆಯ ಕರಾಳ ಛಾಯೆ ಸ್ವಾತಂತ್ರೋತ್ತರ ಭಾರತದ ಉದ್ದಗಲಕ್ಕೂ ಮುಂದುವರಿದಿರುವುದು ದುರಂತವೇ ಸರಿ.

ಅಂತಹ ದುರಂತಮಯ ಸನ್ನಿವೇಶವನ್ನು ಕಿರಿದಾಗಿಯಾದರೂ ಬದಲಾಯಿಸುವ ಅವಕಾಶ ನನಗೆ ಸಿಕ್ಕಿದೆ, ಅದರ ಪೂರ್ಣ ಪ್ರಯೋಜನ ಪಡೆಯಬೇಕೆಂದು ಪುಸ್ತಕಕ್ಕೆ ತಯಾರಿ ನಡೆಸಿದೆ. ಚೈತನ್ಯದ ಚಿಲುಮೆಯೂ, ಹಿರಿಯ ಮಿತ್ರರೂ ಆದ ಕೆಆರ್‌ಎಸ್ ಮೂರ್ತಿಯನ್ನು ಸಂಪರ್ಕಿಸಿದೆ. ಪುಸ್ತಕದ ಬಗ್ಗೆ ಕೇಳಿಕೊಂಡ ಅವರು ಬನ್ನಿ, ನಮ್ಮ ಊರ ಜೈನ ಮಂದಿರವಿದೆ. ಸ್ಥಳೀಯ ಜೈನ ಸಮುದಾಯವನ್ನು ಸೇರಿಸುತ್ತೇನೆ, ಪುಸ್ತಕವನ್ನು ಇಲ್ಲೇ ಬಿಡುಗಡೆ ಮಾಡೋಣ ಎಂದು ಕ್ಯಾಲಿಫೋರ್ನಿಯಾಗೆ ಆಹ್ವಾನವಿತ್ತರು. ಅದು ಅವರ ಕಾರ್ಯಕ್ಷಮತೆ. ಪುಸ್ತಕದ ಒಂದು ಸಾಲು ಬರೆಯುವುದಕ್ಕೂ ಮುನ್ನವೇ ಅದರ ಬಿಡುಗಡೆಗೂ ಚಿಂತನೆ ನಡೆಸಿದ್ದೆ.

ಹೆಗ್ಗಡೆ ಅವರ ಸಹೋದರ ಸುರೇಂದ್ರ ಕುಮಾರರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿಯಾಗಿತ್ತು. ಅದೇನಾಯಿತೋ ಕಾಣೆ, ಖಾವಂದರಿಗೆ ತಮ್ಮ ಕುರಿತಾದ ಪುಸ್ತಕ ಸದ್ಯಕ್ಕೆ ಬೇಡವಂತೆ ಎಂಬ ಮಾಹಿತಿಯನ್ನು ಅವರು ಫೋನ್ ಮಾಡಿ ತಿಳಿಸಿದರು.
ಇದೀಗ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸ ತಂದಿತು. ಎಂದೋ ಸಲ್ಲಬೇಕಿದ್ದ ಗೌರವ ವಿದು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಾಪ್ತವಾದ ಸಮಯದಲ್ಲಿ ಎಡಪಂಥದೊಂದಿಗೆ ಗುರುತಿಸಿಕೊಂಡಿರುವ ಪತ್ರಕರ್ತ ರೊಬ್ಬರು ನನ್ನ ಮುಂದೆ ಹೆಗ್ಗಡೆಯವರ ಕುರಿತು ಕೊಂಕುನುಡಿದಿದ್ದರು.

ಹೆಗ್ಗಡೆಯವರು ಮೇಲ್ಮನೆಗೆ ಆಯ್ಕೆಯಾದ ದಿನವೇ (ಜುಲೈ ) ಧೀರಜ್ ಲಾಲ್ ಹೀರಾ ಭಾಯ್ ಅಂಬಾನಿ ನಿಧನರಾಗಿದ್ದು. ಅವರೂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನ ರಾದವರು. ಧೀರೂಬಾಯ್ ಅಂಬಾನಿ ಎಂದೇ ಖ್ಯಾತಿ ಹೊಂದಿದ್ದ ಅವರ ದಂತಕಥೆ ಯನ್ನು ಇಲ್ಲಿ ಮತ್ತೆ ಹೇಳಿ ಸ್ಥಳ ಪೋಲು ಮಾಡುವುದಿಲ್ಲ, ನಿಮ್ಮ ತಾಳ್ಮೆಯನ್ನೂ ಕೆಡಿಸುವುದಿಲ್ಲ. ಹೆಗ್ಗಡೆಯವರಂತೆ ಅಂಬಾ ನಿಯೂ ಜಿನಧರ್ಮದ ವರು (ಇಬ್ಬರೂ ಕೃಷ್ಣನ ಪರಮಭಕ್ತರು). ನಾಡಿನ ನಕಲೀ ಚಿಂತಕರಿಗೆ ಅಂಟಿಕೊಂಡಿರುವುದು ಬ್ರಾಹ್ಮಣ ದ್ವೇಷವೆಂಬ ಜಾಡ್ಯವಷ್ಟೇ ಅಲ್ಲ. ಜೈನರನ್ನು ಕಂಡರೂ ಅಸಹನೆಯಿದೆ. ಇದೊಂದು ರೀತಿಯ secondary infection! ಅವರನ್ನೂ ಶೋಷಕರೆಂದೂ, ರಕ್ತಪಿಪಾಸುಗಳೆಂದೂ ಬಿಂಬಿಸುತ್ತಾರೆ. ಆಳದಲ್ಲಿರುವುದು ಅವರ ಸಂಪತ್ತನ್ನು ಕಂಡು ಅಸೂಯೆ.

ಎಪ್ಪತ್ತರ ದಶಕದಲ್ಲಿ ಟೆರಿಲೀನ್ ಬಟ್ಟೆ ಜನಪ್ರಿಯವಾಗಿತ್ತು. ಟೆರಿಕಾಟ್ ಧರಿಸುವುದು ಅಂತಸ್ತಿನ ಸಂಕೇತವಾಗಿತ್ತು. ಡೆನಿಮ್ ಆಗಷ್ಟೆ ಮಾರುಕಟ್ಟೆಗೆ ಕಾಲಿಟ್ಟಿತ್ತು. ಅಂತಹ ಕಾಲಘಟ್ಟದಲ್ಲಿ ಪಾಲಿಯೆಸ್ಟರ್ ಪರಿಚಯಿಸಿ ಅದನ್ನು ಶ್ರೀಸಾಮನ್ಯನಿಗೂ ಎಟುಕುವ ದರಗಳಲ್ಲಿ ಮಾರಾಟ ಮಾಡಿ ಎಂಬತ್ತರ ದಶಕದಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿದ್ದ ನಸ್ಲಿ ವಾಡಿಯಾ ಮಾಲೀಕತ್ವದ ಬಾಂಬೆ ಡೈಯಿಂಗ್‌ಗೆ ಸೆಡ್ಡು ಹೊಡೆದು ನಿಂತದ್ದು Only Vimal ನಾನು ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ
ಆರಾಧಕನಲ್ಲ. ಆ ಪತ್ರಿಕೆಯ ಆಕ್ರಮಣಕಾರೀ ಮಾರುಕಟ್ಟೆ ರಣನೀತಿಗೆ ಪ್ರತಿಸ್ಪರ್ಧಿಗಳು ಧೂಳೀಪಟವಾದವು.

ಬೆಂಗಳೂರಿನಲ್ಲಿ ನಡೆಸಿದ ಪ್ರಯೋಗವನ್ನೇ ಅದು ವಿವಿಧೆಡೆ ವಿಸ್ತರಿಸಿ ಬಹುಪಾಲು ಯಶಸ್ಸನ್ನೂ ಕಂಡಿತು. ಬೆಂಗಳೂರೇ ಆ ಪತ್ರಿಕೆಯಿಂದ ಹಾಳಾಯಿತೋ, ಹಾಳಾಗಿದ್ದರಿಂದಲೇ ಪತ್ರಿಕೆ ಜನಪ್ರಿಯವಾಯಿತೋ ಕಾಣೆ. ಆದರೆ, ಅದರ ಮಾರುಕಟ್ಟೆ ತಂತ್ರಗಳನ್ನು ನೀತಿಬಾಹಿರವೆಂದು ಬೊಬ್ಬೆ ಹೊಡೆದ ಪತ್ರಿಕೆಗಳೆಲ್ಲವೂ ಕಾಲಾಂತರದಲ್ಲಿ ಅವುಗಳನ್ನೇ ಅನುಸರಿಸಲಾ ರಾಂಭಿಸಿದವು. ಅಲ್ಲಿಗೆ ಸರ್ವ ನಾಶ. ಅಂಬಾನಿಯ ರಿಲಯನ್ಸ್ ತಾನು ಘೋಷಿಸಿದ್ದಕ್ಕಿಂತ ಹೆಚ್ಚು ಸಾಮರ್ಥ್ಯದ ಮೆಷಿನರಿಗಳನ್ನು ಆಮದು ಮಾಡಿಕೊಂಡು ಬೊಕ್ಕಸಕ್ಕೆ ತೆರಿಗೆ ವಂಚನೆ ಮಾಡಿತೆಂದು ಅರುಣ್ ಶೌರಿಯ ಇಂಡಿಯನ್ ಎಕ್ಸ್‌ಪ್ರೆಸ್ ಸರಣಿ ಪಟಾಕಿ
ಯಂತೆ ಸುದ್ದಿ ಸಿಡಿಸಿತು. ನಾನಿಷ್ಟ ಪಡುವ ಎಸ್.ಗುರು ಮೂರ್ತಿಯೂ ರಿಲಯನ್ಸ್ ವಿರುದ್ಧ ತನಿಖಾ ವರದಿಗಳನ್ನು
ಬರೆದರು.

ರಿಲಯನ್ಸ್ ವಿರುದ್ಧ ಅದರ ಪ್ರತಿಸ್ಪರ್ಧಿಗಳು ಸಂಸತ್ ಪಡಸಾಲೆಯಲ್ಲಿ ಲಾಬಿ ಮಾಡಿದರು, ಪ್ರಯೋಜನ ವಾಗಲಿಲ್ಲ. ರಿಲಯನ್ಸ್ ಕಂಪನಿಯ ಷೇರು ಬೆಲೆ ಏರುತ್ತ ಹೋಯಿತು. ಭಾರತದ ಅತ್ಯಂತ ಲಾಭದಾಯಕ ಉದ್ಯಮವಾಗಿ ಅದು ಬೆಳೆಯಿತು. ತೆರಿಗೆ
ಪಾವತಿಯಲ್ಲೂ ಹಿಂದೆ ಬೀಳಲಿಲ್ಲ. ರಫ್ತಿನಲ್ಲೂ ದಾಖಲೆ ಸೃಷ್ಟಿಸಿತು. ಸಾರ್ವಜನಿಕರ ಸಂಪತ್ತೆಂದರೆ ಉಡಾಯಿಸಲಿಕ್ಕಷ್ಟೆ ಎಂದು ನಂಬಿ ಅದನ್ನು ಬುದ್ಧಿಮಾಂದ್ಯ ಯೋಜನೆಗಳಿಗೆ ವಿತರಿಸಿ ಚುನಾಯಿತನಾಗುವುದಲ್ಲದೆ ಆರ್ಥಿಕ ತಜ್ಞನೆಂಬ ಬಿರುದನ್ನೂ ಗಿಟ್ಟಿಸಿಕೊಳ್ಳಬಲ್ಲ ರಾಜಕಾರಣಿಗೆ ಸಮಾಜವಾದ ವೆಂಬ ಪರಿಕಲ್ಪನೆ ವಿಶ್ವಾದ್ಯಂತ ನೆಲಕ್ಕೊರಗಿರುವುದು ತಿಳಿದು ಬಂದಂತಿಲ್ಲ.

ಅದು ಹೇಗೋ ನೊಬೆಲ್ ಪಾರಿತೋಷಕ ಪಡೆದು ಅಚ್ಚರಿ ಹುಟ್ಟಿಸಿದ ಅಮಾರ್ತ್ಯ ರಾಕ್ಷಸನ ಲೆಕ್ಕಾಚಾರ ಬುಡಮೇಲಾದರೂ ತನ್ನ ನಂಬಿಕೆ ಬದಲಾಗಿಲ್ಲ. ತೆರಿಗೆಯ ಮೂಲಕ ಬೊಕ್ಕಸಕ್ಕೆ ಸಂಪನ್ಮೂಲ ಹರಿಸುವುದಕ್ಕೆ ತೆರಿಗೆ ತೆರುವವರು ಬೇಕಲ್ಲ! ಖಾಸಗಿ ವಲಯ ದಲ್ಲಿನ ತೀವ್ರ ಪೈಪೋಟಿಯೇ ಸಾರ್ವಜನಿಕ ಸಂಪತ್ತಿನ ಮೂಲಾಧಾರ. ಆ ಸಂಪತ್ತನ್ನು ಸೃಷ್ಟಿಸುವಲ್ಲಿ ಕಾರ್ಮಿಕರ ದುಡಿತ, ಕಾರ್ಯ ಕ್ಷಮತೆ ಬಹುಮುಖ್ಯ. ಧೀರೂಬಾಯ್ ಅಂಬಾನಿ ಕಾಲದ ಅವರ ನರೋಡಾ ಕಾರ್ಖಾನೆಗೆ ಭೇಟಿ ನೀಡಿದ ವಿಶ್ವ ಬ್ಯಾಂಕ್ ತಂಡವೊಂದು ಅದನ್ನು ಜಗತ್ತಿನ ಅತ್ಯಂತ ಸಮರ್ಥ ಜವಳಿ ಸ್ಥಾವರವೆಂದು ಪ್ರಶಂಸಿಸಿತ್ತು.

ಬ್ರಿಟಿಷರ  ಆಳ್ವಿಕೆಯಲ್ಲಿ ಇದ್ದುದಕ್ಕಿಂತ ಹಿಂಸಾತ್ಮಕ ಲೈಸೆನ್ಸಿಂಗ್ ನೀತಿಯಿಂದ ದೇಶದ ಉದ್ಯಮಪತಿಗಳ ಉಸಿರುಗಟ್ಟಿಸಿದ್ದ
ಕಾಂಗ್ರೆಸ್ ಸರಕಾರದ ಆಳ್ವಿಕೆಯಲ್ಲೂ ಧೀರೂಭಾಯಿ ಅಂಬಾನಿ ಆ ಬಗೆಯ ಏಳಿಗೆಯನ್ನು ಕಂಡದ್ದು ಸಾಧನೆಯೇ. ಕಾಂಗ್ರೆಸಿಗರ ರಣಹಸಿವನ್ನೂ ನೀಗಿಸಬೇಕಾದ ಅನಿವಾರ್ಯ ವಿಲ್ಲದಿದ್ದರೆ ಅವರ ಉದ್ಯಮ ಇನ್ನೆಷ್ಟು ಬೆಳೆದಿರುತ್ತಿತ್ತೋ! ಯಾವುದೇ ದೇಶದ ಆರ್ಥಿಕ ವ್ಯವಸ್ಥೆಗೆ ಬಂಡವಾಳ ಶಾಹಿಗಳ ಬೃಹತ್ ಕೊಡುಗೆ ಇದ್ದೇ ಇರುತ್ತದೆ. ಕೊಡುಗೆಯ ಪ್ರಮಾಣವನ್ನು ಪಕ್ಷದ ಬೊಕ್ಕಸಕ್ಕೆ ತುಂಬಿಸಿಕೊಳ್ಳಲು ಅದರ ಹರಿವಿನ ದಿಕ್ಕನ್ನೇ ಕಾಂಗ್ರೆಸ್ ಪಕ್ಷ ಬದಲಾಯಿಸಿದ್ದು ಎಂದೂ ರಹಸ್ಯವಾಗಿರಲಿಲ್ಲ. ಅಂಬಾನಿಯ ಅನ್ನವನ್ನೂ ತಿಂದೂ, ಇಂದು ಮಾತುಮಾತಿಗೆ ನರೇಂದ್ರ ಮೋದಿ ಅಂಬಾನಿಯ ಮಗ ಮುಕೇಶ್‌ಗೆ ದೇಶವನ್ನು ಮಾರುತ್ತಿದ್ದಾರೆ ಎಂದು ಪ್ರಚಾರ ಮಾಡುವುದು ಕದ್ದು ತಿಂದದ್ದನ್ನು ಕುರಿಮೂತಿಗೆ ಒರೆಸಿದಂತಷ್ಟೆ ಅಲ್ಲ, ಕಂಠಮಟ್ಟ ಉಣಿಸಿದ ಮನೆಗೆ ಎರಡು
ಬಗೆದಂತೆ. ಹಾಗೆ ಕದ್ದದ್ದು ಸಾರ್ವಜನಿಕರಿಗೆ ಸೇರಬೇಕಾದದ್ದು.

ಕದಿಯದೇ ಇದ್ದಿದ್ದರೆ ಇಂದು ದೇಶದಲ್ಲಿ ಅನ್ನ ಭಾಗ್ಯದಂಥ ಯೋಜನೆಗಳ ಅಗತ್ಯವೇ ಬೀಳುತ್ತಿರಲಿಲ್ಲ. ಹೆಗ್ಗಡೆಯವರಾಗಲಿ, ಅಂಬಾನಿಯಾಗಲಿ ರೂಪಿಸಿದ್ದು ಅಂತಹ ಅಗ್ಗದ ಚಿಂತನೆಯ ಸ್ಕೀಮುಗಳಲ್ಲ. ಏಕೆಂದರೆ, ಇಬ್ಬರೂ ಶ್ರಮದ ಮಹತ್ವ ವನ್ನರಿತವರು. ಜಡತ್ವದಿಂದ ದೂರವಾದವರು, ಚಲನಶೀಲತೆಯೇನೆಂದು ಬಲ್ಲವರು. ಆದರೂ, ಬಂಡವಾಳಶಾಹಿ ಒದಗಿಸುವ ಸಕಲ ಸವಲತ್ತು ಗಳನ್ನೂ ಅನುಭೋಗಿಸುತ್ತ, ಅಪ್ರಸ್ತುತತೆಯ ಕಾರಣಕ್ಕೆ ನಶಿಸಿಹೋದ ಸಮಾಜವಾದವೆಂಬ ಪರಿಕಲ್ಪನೆಯನ್ನು
ಶವಾಗಾರದಿಂದ ಎಳೆದುತರಲು ಪ್ರಯತ್ನಿಸುತ್ತಿರುವ ಅದರ ವಾರಸುದಾರರು ಇವರಿಬ್ಬರು ಮಹನೀಯರನ್ನು ಅನಾದರಿಸಿದ್ದೇ ಹೆಚ್ಚು.

ಹೆಗ್ಗಡೆ ಅವರಿಗೆ ದೊರಕಬೇಕಾದ ಆದರದ ಪ್ರಮಾಣ ಕಡಿಮೆಯಾಗಲು ಕಾರಣ ಮೆಕಾಲೆ ನಿರ್ಮಿಸಿದ ಆತ್ಮನಿರ್ಭರತೆ-ವಿರೋಧಿ ಪರಿಸರ. ಅಂಬಾನಿಯ ವಿರುದ್ಧ ಮಾಧ್ಯಮದವರು ಪ್ರತಿರೋಧ ತೋರುವುದಕ್ಕೆ ಕಾರಣ ತಮ್ಮ ಮನದಾಳದಲ್ಲಿ ನೆಲೆಸಿರುವ ಅಳಿದುಳಿದ ಕಲಬೆರಕೆ ಮಾರ್ಕ್ಸಿಸಂ ಇನ್ನೂ ಜೀವಂತವಾಗಿದೆಯೇ ಎಂದು ತಿವಿದು ನೋಡಿಕೊಳ್ಳುವುದೇ ಆಗಿರುತ್ತದೆ. ಮಾರ್ಕ್ಸನ್ನು ಮರೆತ ಪಾಪಪ್ರಜ್ಞೆಗೆ ಕೊಡುವ ತಿವಿತವದು. ರೇಡಿಯೇಷನ್ ನೀಡಿದ ನಂತರವೂ ಮರುಕಳಿಸಿದ ಕ್ಯಾನ್ಸರ್ ಕಣಗಳಂತೆ ಕಲಬೆರಕೆ ಮಾರ್ಕ್ಸಿಸಂ ಜೀವಂತವಾಗಿರುತ್ತವೆ.

ಮಾರ್ಕ್ಸ್ ವಾದದ ಉದ್ಘೋಷ ಆಗಿಂದಾಗ್ಗೆ ಹೊರಹೊಮ್ಮುತ್ತಿರುತ್ತದೆ. ಆ ಸಂದರ್ಭದಲ್ಲಿ ತೆರೆದ ಬಾಯತ್ತ ನಾವು ಒಂದು
ಕಣ್ಣನ್ನಾದರೂ ಇಟ್ಟಿರಬೇಕು.