Saturday, 27th April 2024

ಸಿದ್ದರಾಮೋತ್ಸವಕ್ಕೆ ಉಡುಗೊರೆ ಸಿದ್ದ

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಕದಡಿದ ಸೌಹಾರ್ದದ ಕೆರೆಯಲ್ಲಿ ಮೀನು ಹಿಡಿಯುವ ಪ್ರಯತ್ನ, ಮಹಾದೇವರದ್ದು. ಪುಸ್ತಕದ ಮೌಲ್ಯವೇನೇ ಇರಲಿ, ಇಲ್ಲದಿರಲಿ, ಸಿದ್ದರಾಮೋತ್ಸವ ಆಚರಿಸಿಕೊಳ್ಳುವ ದಿಟ್ಟತನ ತೋರಿರುವ ಅವರದ್ದೇ ಊರಿನ ಮಾಜಿ ಮುಖ್ಯಮಂತ್ರಿಗೆ ಮುಂಗಡ ಹುಟ್ಟುಹಬ್ಬದ ಉಡುಗೊರೆ ಇದು ಇದ್ದ ಹಾಗಿದ್ದೆ.

ಬಹಿರಂಗವಾಗಿ ಉಚ್ಚೆ ಹುಯ್ಯುವವರನ್ನು ಕಂಡಾಗ ನನಗನ್ನಿಸುವುದು ಈ ದುರಭ್ಯಾಸ ತಪ್ಪಿದ ದಿನ ಭಾರತ ಭ್ರಷ್ಟಾಚಾರ ದಿಂದಲೂ ವಿಮುಕ್ತಿ ಪಡೆಯುತ್ತದೆ ಎಂದು. ಈ ಎರಡೂ ಕ್ರಿಯೆಗಳು ಘನತೆಮುಕ್ತ. ಆದರೆ, ನಾವು ಹೇಸಿಗೆಯ ಬಗ್ಗೆ ಎಂದೋ ನಾಚಿಕೆ ಕಳೆದುಕೊಂಡಿದ್ದೇವೆ. ಸಿಗಲಾರದಂತೆ ಕಳೆದುಕೊಳ್ಳಬಹುದಾದ ಅಮೂಲ್ಯ ವಸ್ತುಗಳಲ್ಲಿ ಘನತೆಯೂ ಒಂದು.

ಕೆಲವರಂತೂ, ರಸ್ತೆಬದಿಯಲ್ಲಿ ಬೈಕ್ ನಿಲ್ಲಿಸಿ, ಎಂಜಿನ್ ಆಫ್ ಮಾಡದೆ, ಬಿಡುಬೀಸಾಗಿ ಜಲಬಾಧೆಯನ್ನು ತೀರಿಸಿಕೊಳ್ಳುತ್ತಾರೆ. ಹುಡುಗಾಟಕ್ಕೆ ಅವರ ಬೈಕ್ ಓಡಿಸಿಕೊಂಡು ಹೋಗುವುದನ್ನು ಕಲ್ಪಿಸಿಕೊಳ್ಳುತ್ತೇನೆ. ಹುಡುಗಾಟವಾಡಿದರೂ, ಅವರು ತಮ್ಮ
ಅವಸರದ ಕೈಂಕರ್ಯವನ್ನು ಅರ್ಧಕ್ಕೇ ಬಿಟ್ಟು ಅಟ್ಟಿಸಿಕೊಂಡು ಬರಲಾರರು ಎಂಬ ವಿಶ್ವಾಸ. ವ್ಯಾಸೋಪ್ರೆಸ್ಸಿನ್ ಎಂಬ ಹಾರ್ಮೋನ್ ಇದೆ.

ಅವಶ್ಯವಾದ ನೀರಿನ ಅಂಶವನ್ನು ಹೊರಹಾಕದೆ ಉಳಿಸಿಕೊಳ್ಳುವಂತೆ ಕಿಡ್ನಿಗೆ ತಿಳಿಯ ಹೇಳುವುದು ಅದರ ಕೆಲಸ. ಮದ್ಯ ಸೇವಿಸಿ ದಾಗ ಕಿಡ್ನಿಗೆ ತಲುಪಬೇಕಾದ ಸಂದೇಶ ಏರುಪೇರಾಗಿ ಜಲಬಾಧೆ ಹೆಚ್ಚಾಗುತ್ತದೆ. ಹಾಗಾಗಿ ಮದ್ಯ ಮೂತ್ರಸಂವರ್ಧಕ. ಕಾಕ್‌ ಟೇಲ್ ಪಾರ್ಟಿಗಳಲ್ಲಿ ನೀವೊಂದು ಅಂಶ ವನ್ನು ಗಮನಿಸಿರುತ್ತೀರಿ. ಸಾಮಾನ್ಯವಾಗಿ ಸೀಮಿತವಾಗಿ ಕುಡಿಯುವವರೂ ತಮ್ಮ ಸೀಮಾರೇಖೆಯನ್ನು ಮೀರುವ ಸಾಧ್ಯತೆ ಅಂತಹ ಕೂಟಗಳಲ್ಲಿ ಹೆಚ್ಚು. ಅದಕ್ಕೆ ಕಾರಣ ಲಭ್ಯವಿರುವ ಉಚಿತ ಹೆಂಡ. ಆ ನಂತರದ ಅವಘಡಗಳನ್ನು ಆ ಕಾರಣಕ್ಕಾಗಿಯೇ ಅನುಭವೀ ಆತಿಥೇಯರು ಶರಾಬಿನ ಕೌಂಟರನ್ನು ಬೇಗ ಬಂದ್ ಮಾಡಲು ಮುನ್ಸೂಚನೆ ನೀಡಿರುತ್ತಾರೆ.

ಮದಿರೆಯ ಹೊಳೆ ಹರಿಸಿದ ನಂತರದ ಅವಘಡಗಳನ್ನು ಅವರು ನೋಡಿರುತ್ತಾರೆ. ಸ್ಕಾಚ್ ವ್ಯವಸ್ಥೆ ಇದ್ದರಂತೂ, ಕೌಂಟರ್
ಬಳಿಯ ಹಾಹಾಕಾರವನ್ನು ನೋಡಿಯೇ ತಿಳಿಯಬೇಕು. ಜೀವನದ ನಶ್ವರತೆಯ ಪಾಠವನ್ನು ಸ್ಕಾಚ್ ಕಲಿಸುತ್ತದೆ. ದುಬಾರಿ ಪೇಯ ವಾದ್ದರಿಂದ ನಾಳೆ ತಾನಿರುತ್ತೀನೋ ಇಲ್ಲವೋ ಎಂಬಂತೆ ಸ್ಪರ್ಧಾತ್ಮಕವಾಗಿ ಅದನ್ನು ಹೊಟ್ಟೆಗೆ ಸುರುವಿಕೊಳ್ಳುತ್ತಾರೆ. ಸ್ಕಾಚನ್ನು ಯಾವ ರೀತಿ ಕುಡಿಯಬಾರದೆಂಬುದರ ಪಾಠ ಅಲ್ಲಿ ಪುಕ್ಕಟೆಯಾಗಿ ದೊರಕುತ್ತದೆ. ಅತಿಯಾಗಿ ಒಮ್ಮೆಗೇ ಮದ್ಯಸಾರ ಹೊಕ್ಕ ಕಾರಣದಿಂದಲೇ, ಸಾಮಾನ್ಯವಾಗಿ ತೊದಲದಿರುವವರೂ ಅಲ್ಲಿ ತೊದಲುತ್ತಾರೆ. ನೆಟ್ಟಗೆ ನಡೆಯುವವರೂ ಓಲಾಡುತ್ತಾರೆ. ಆ ಸ್ಥಿತಿಯಲ್ಲಿ ಅವರಿಗೆ ಸ್ಕಾಚ್ ಅಲ್ಲದೆ ಬೇರೊಂದು ವಿಸ್ಕಿಯನ್ನು ಕೊಟ್ಟರೂ ಅದು ಸಮ್ಮತವೇ.

ಕೆಲವರು ‘ಏ ದಿಲ್ ಮಾಂಗೇ ಮೋರ್’ ಎಂದು ಬರಗೆಟ್ಟು ಕುಡಿದರೆ, ಮತ್ತೆ ಕೆಲವರು ಮೋಸದ ಅರಿವಿಲ್ಲದೆ ಅಗ್ಗದ ವಿಸ್ಕಿಯನ್ನೇ ಕೆಳಗಿಳಿಸುತ್ತಾರೆ. ಸ್ಕಾಚ್ ಹೌದೋ ಅಲ್ಲವೋ ಎಂದು ತಿಳಿಯಲಿ, ತಿಳಿಯದಿರಲಿ, ಪರಿಣಾಮ ಒಂದೇ – ಸ್ಥಿಮಿತ ಕಳೆದು ಕೊಳ್ಳುವುದು. ಮೊನ್ನೆ, ವಾಕ್ ಮಾಡುವಾಗ ಅಷ್ಟೇನೂ ದೂರವಲ್ಲದ ಸ್ನಾತಕ್ಕೋತ್ತರ ತರಗತಿಯಿಂದ ಯಾರೋ, ಉಪನ್ಯಾಸಕ ರಿರಬೇಕು, acted upon ಎಂದು ಹೇಳಿದ್ದು ಕಿವಿಗೆ ಬಿತ್ತು. ನಾನು ಅದನ್ನು ಮೊದಲ ಬಾರಿ ಕೇಳಿದ್ದು ನ್ಯೂಟನ್ನಿನ ನಿಯಮ ಗಳನ್ನು ಪಾಠ ಮಾಡುತ್ತಿದ್ದ ಭೌತಶಾಸ ಮೇಸ್ಟರ ಬಾಯಲ್ಲಿ. ನನ್ನ ಆರಂಭಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಆಗಿದ್ದರಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೊಂದಿಕೊಳ್ಳಲು ತ್ರಾಸ ಪಡುತ್ತಿದ್ದೆ. ಅಭ್ಯಾಸವಾದ ನಂತರ ಸರಳವೆಂದು ಗೊತ್ತಾದ ಅನೇಕ ಪದಗಳನ್ನು ಅರ್ಥಮಾಡಿಕೊಳ್ಳಲಾಗುತ್ತಿರಲಿಲ್ಲ.

Acted upon ಎಂಬೆರಡು ಪದಗಳನ್ನು ನಾನೇ, ನನ್ನದೇ ಸ್ವಂತ ವಾಕ್ಯದಲ್ಲಿ ಬಳಸುವಷ್ಟು ಭಾಷಾ ಪ್ರಭುತ್ವ ಗಳಿಸಲು ವರ್ಷಗಳೇ ಬೇಕಾ ಗಿದ್ದುದು ನೆನಪಾಯಿತು. ಇದೀಗ ನನ್ನ ಕಿವಿಗೆ ಆ ಶಬ್ದವನ್ನು ಬೀಳಿಸಿದ ಆ ವ್ಯಕ್ತಿಯೂ ನಾನೆದುರಿಸಿದ ಭಾಷಾ ನ್ಯೂನತೆ ಗಳನ್ನು ಅನುಭವಿಸಿರಬಹುದಾ? ಅವರನ್ನು ಭೇಟಿ ಮಾಡಿ, ಎಲ್ಲಿ, ನೀವೊಮ್ಮೆ ಅದನ್ನು ನಿಮ್ಮದೇ ವಾಕ್ಯ ದಲ್ಲಿ ಬಳಸಿರೆಂದು ಕೇಳಲೇ? ಎಂದೆಲ್ಲ ಅನಿಸಿತು. ಇದೇ ಚಿಂತನೆ ಮುಂದುವರೆದು ಕ್ಷಣಾರ್ಧದಲ್ಲಿ ಒಂದೆರಡು ಹೊಳಹುಗಳ ಕಾಣ್ಕೆಯಾಯಿತು.

ನಾವು ಬಳಸುವ ಬಹಳಷ್ಟು ಪದಗಳ ಅರ್ಥ ನಮಗೆ ತಿಳಿದಿರುವುದಿಲ್ಲ. ನಮ್ಮ ಈ ಭಾಷಾದೌರ್ಬಲ್ಯ, ನಮ್ಮದಲ್ಲದ ಭಾಷೆ ಗಳಿಗಷ್ಟೆ ಅಲ್ಲದೆ ನಮ್ಮ ಮಾತೃಭಾಷೆಗೂ ಅನ್ವಯಿಸುತ್ತದೆ. ಇತ್ತೀಚೆಗಷ್ಟೆ, ಅನೇಕ ವಿಷಯಗಳಲ್ಲಿ ಅಪೂರ್ವ ಸಾಧನೆ ಮಾಡಿ ರುವ ಸಿಲಿಕಾನ್ ವ್ಯಾಲಿಗ ಕೆಆರ್‌ಎಸ್ ಮೂರ್ತಿ ಫೋನ್ ಮಾಡಿದಾಗ ಪದೋತ್ಪತ್ತಿ ಶಾಸ್ತ್ರದ ತಮ್ಮ ಇತ್ತೀಚಿನ ಗೀಳನ್ನು ಹೇಳಿ ದರು. ನನ್ನ ಹೆಸರಿನ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ನನ್ನ ಹೆಸರನ್ನು ಅಷ್ಟು ತೀಕ್ಷ್ಣ ವಿಶ್ಲೇಷಣೆಗೆ ನಾನೇ ಒಡ್ಡಿರಲಿಲ್ಲ.

ತಾಲೂಕಾಫೀಸಿನಲ್ಲಿ ವಿವಿಧೋದ್ದೇಶಗಳಿಗೆ ಸಂಬಂಧ ಪಟ್ಟಂತೆ ನೀವು ಗುಜರಾಯಿಸುವ ಅರ್ಜಿಯನ್ನು ಟೈಪಿಸಿ ಕೊಡುವ ಬೆರಳಚ್ಚುಗಾರನಿಗೆ ನೀವೇ ತಪ್ಪಿಲ್ಲದೆ ತಯಾರಿಸಿದ ಅರ್ಜಿಯನ್ನು ತೋರಿಸಿ ಅದನ್ನೇ ಛಾಪಾಕಾಗದದ ಮೇಲೆ ಟೈಪ್ ಮಾಡಿ ಕೊಡಲು ಹೇಳಿ. ಅದು ಹಾಗಲ್ಲ, ಹೀಗೆ ಅಂತ ತನ್ನ ಮನಸ್ಸಿನಲ್ಲಿ ಅಚ್ಚಾಗಿರುವ ನಾಲ್ಕು ಸಾಲುಗಳನ್ನೇ ಟೈಪ್ ಮಾಡಿಕೊಡು ತ್ತಾನೆ. ಅದು ಆತನಿಗೆ ಕಲಿಯುವ ಮನಸ್ಸಿನಿಂದಲೋ, ಕಲಿಕೆಯಿಂದಲೋ ಲಭಿಸಿದ ಜ್ಞಾವಲ್ಲ. ಅದಾರೋ ಸೀನಿಯರ್ ಟೈಪಿಸ್ಟ್ ಟೈಪ್ ಮಾಡುವಾಗ ನೋಡಿ ಮನಸ್ಸು ಹೊಕ್ಕಿದ್ದು, ಹೊರಬಾರದೆ ಅ ಉಳಿದುಕೊಂಡು ಬಿಟ್ಟ ನಾಲ್ಕು ಸಾಲುಗಳು. ಆ ನಾಲ್ಕು ಸಾಲುಗಳು ಅವನ ಸರ್ವಸ್ವ.

ಅದು ಆತನ ಜಗತ್ತಿನ ಪರಿಧಿ. ಅದು ಅವನೇ ಎಳೆದದ್ದು. ಅಲ್ಲಿ ಹೊಸಪ್ರಯೋಗಕ್ಕೆ ಅವಕಾಶವಿಲ್ಲ. ಹೊಸತೇನೇ ಬಂದರು ಅದು ನಿಷಿದ್ಧ. ಹಾಗೆಂದು ಅವನಿಗೆ ಭಾಷಾ ಪ್ರಭುತ್ವ ಇದೆಯೆಂದಲ್ಲ. ಆ ನಾಲ್ಕು ಸಾಲುಗಳು ಸರಿಯಾಗಿರುವುದಕ್ಕೂ ಅವನು ಕಾರಣ ವಲ್ಲ. ಅವುಗಳಲ್ಲಿ ಒಂದೆರಡು ತಪ್ಪುಗಳೇ ಇದ್ದರೂ, ಅದಕ್ಕೂ ಅವನು ಬಾಧ್ಯನಲ್ಲ, ಯಾಕೆಂದರೆ ಅದು ಅವನು ತಲೆಮಾರು ಗಳಿಂದ ಪಡೆದದ್ದು. ಅವನು ಬರೆದದ್ದನ್ನು ಯಾರೂ ತಿರಸ್ಕರಿಸಿಲ್ಲವಾದ್ದರಿಂದ ಅವನು ಸರಿ ಎಂಬ ನಂಬಿಕೆ ಅವನದ್ದು. ಅದನ್ನು ಯಾರೂ ಬದಲಿಸಲಾರರು.

ಪದವಿಪೂರ್ವದಲ್ಲಿ ನಾನು ಕ್ಯಾಲ್ಕುಲಸ್ ಕಲಿತದ್ದೂ ಹಾಗೇನೇ. ಇಂಗ್ಲಿಷ್ ಮಾಧ್ಯಮ ನನ್ನ ಕಲಿಕೆಯ ಮುಂದೆ ನಿರ್ಮಿಸಿದ್ದ ಅಡ್ಡಗೋಡೆಯನ್ನು ಕೆಡವಲಾರಂಭಿಸಿದ್ದೆ. ಇಂಗ್ಲಿಷ್‌ನಲ್ಲಿ ಬೋಧಿಸಲಾಗುತ್ತಿದ್ದ ಎಲ್ಲ ವಿಷಯಗಳೂ ಅರ್ಥವಾಗುತ್ತಿತ್ತು, ಆದರೆ ಕ್ಯಾಲ್ಕುಲಸ್ ಉಪನ್ಯಾಸಕರ ಪಾಠ ಆಕರ್ಷಕವಾಗಿರಲಿಲ್ಲ. ದ್ವಿತೀಯ ಪಿಯು ಪರೀಕ್ಷೆಗೆ ಒಂದು ತಿಂಗಳಿತ್ತು. ಕ್ಯಾಲ್ಕ್ಯುಲಸ್ ಅನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದ್ದೆ. ಆಗ ನನ್ನ ನೆರೆಯಲ್ಲಿ ವಾಸವಿದ್ದ ಎಂಜಿನಿಯರಿಂಗ್ ಪದವಿ ಪಡೆದಿದ್ದ ನನ್ನ ಸಂಬಂಧಿಕ ನನ್ನ ನಿರ್ಧಾರ ತಪ್ಪೆಂದು ಹೇಳಿ ತಾನೇ ನನಗೆ ಹೇಳಿಕೊಡಲು ಮುಂದಾದ.

d by dx of x square … ಎಂದು ಹೇಳಲು ಶುರುಮಾಡಿದ. ನಾನು ಮಧ್ಯದಲ್ಲಿ ಬಾಯಿ ಹಾಕಿ d by dx of x square is 2x to the power of 2 minus 1 and that is 2x ಅದು ನನಗೆ ಗೊತ್ತು, ಆದರೆ ಅದೆಲ್ಲ ಏನು, ಅದು ಎಲ್ಲಿ ಉಪಯೋಗಕ್ಕೆ ಬರುತ್ತದೆ ಹೇಳು ಎಂದೆ. ನೋಡೋ, ಅದೆಲ್ಲ ತಲೆ ಕೆಡಿಸ್ಕೊಬೇಡ. ಅದೇನು ಅಂತ ನಂಗೂ ಗೊತ್ತಿಲ್ಲ. ಪರೀಕ್ಷೆ ಹತ್ತಿರ ಬಂತು. ಸುಮ್ನೆ ನಾನು ಎಷ್ಟು ಹೇಳ್ತೀನೋ ಅಷ್ಟು ಕಲಿತ್ಕೊ ಅಂದ.

ನಾವು ಕಲಿಯುವ ಅಥವಾ ಕಲಿತೆವೆಂದು ಭಾವಿಸುವ ಸುಮಾರು ವಿಷಯಗಳ ಆರಂಭ ಹೀಗೇ ಇರುತ್ತದೆ. ಮೊದಲು ನಮಗೆ ಪರಿಚಯವಾಗುವುದು ಶಬ್ದ, ಅದರ ಅರ್ಥವಲ್ಲ. ಇದು ಎಲ್ಲ ಕಲಿಕೆಗೂ, ಎಲ್ಲ ವಿಷಯಗಳಿಗೂ, ಎಲ್ಲ ವಯಸ್ಸಿನವರಿಗೂ ಅನ್ವಯಿಸುತ್ತದೆ. ನಾವು ಪರಿಣತಿ ಸಾಽಸಿ ದ್ದೇವೆಂದುಕೊಳ್ಳುವ ವಿಷಯಗಳೂ ಇದಕ್ಕೆ ಹೊರತಲ್ಲ. ನಾವು ಅಮರಕೋಶ  ಕಲಿ ತದ್ದೂ ಹೀಗೆಯೇ. ಶಬ್ದಗಳನ್ನು ಕಂಠಪಾಠ ಮಾಡುತ್ತೇವೆ. ಶಬ್ದಗಳನ್ನಷ್ಟೇ ಉಂಡುಂಡೆಯಾಗಿ ನುಂಗುತ್ತೇವೆ. ಅವು ಅಂತರ್ಗತ ವಾಗುವುದು ಇನ್ನೆಂದೋ.

ಓದಿನ ಆಳ, ಅಗಲ ಹೆಚ್ಚಿದಂತೆ, ಅನುಭವಲೋಕ ವಿಸ್ತಾರವಾದಂತೆ ಶಬ್ದ ಕಿವಿಗೆ ಬಿzಡನೆ ಅದರ ವಿವಿದಾರ್ಥಗಳು ಹೊಳೆದು ಸಾಹಿತ್ಯಿಕ ಅನುಭೂತಿಯಾಗುತ್ತದೆ. ಇದು ಬೆಳೆದಂತೆ ಅದಾಗದೆ ದಕ್ಕುವುದಿಲ್ಲ. ನಾನು ಕಂಡ ಒಬ್ಬ ವ್ಯಕ್ತಿ ನಾಲ್ಕು ದಶಕಗಳ ಹಿಂದೆ ಮಾಡುತ್ತಿದ್ದ ಭಾಷೆಗೆ ಸಂಬಂಧಪಟ್ಟ ಎಲ್ಲ ತಪ್ಪುಗಳನ್ನು ಚಾಚೂತಪ್ಪದೆ ಈಗಲೂ ಮಾಡುತ್ತಾನೆ. ಅವನ ಆಗಿನ ನಿರ್ಭಿಡೆ ಇಂದಿಗೂ ಸ್ವಲ್ಪವೂ ಮಾಸಿಲ್ಲ. ಹಾಗೆಂದು ಆತ ಬೆಳೆದಿಲ್ಲವೆಂತಲ್ಲ. ಹಣ ಮಾಡಿದ್ದಾನೆ.

ವಿಶ್ವ ಪರ್ಯಟನೆ ಮಾಡಿzನೆ. ಸೋಜಿಗದ ವಿಷಯವೆಂದರೆ ಅವನಿಗೆ ತನ್ನ ತಪ್ಪುಗಳ ಪರಿವೆಯೇ ಇಲ್ಲ. ಅಮರಕೋಶದ ಉದಾ ಹರಣೆ ಈ ಸಂದರ್ಭಕ್ಕೆ ಏತಕ್ಕೆ ಸೂಕ್ತವಲ್ಲ ಎಂಬುದು ನಿಮಗೆ ಸದ್ಯದ ಗೊತ್ತಾಗಲಿದೆ. ಹೊರಗಿನ ಪ್ರಪಂಚದ ಪರಿಚಯದ ಹೊಸತರ, ನಮ್ಮ ಪರಿಸರಕ್ಕೆ ತಕ್ಕಂತೆ, ನಮ್ಮ ಕಿವಿಯ ಮೇಲೆ ಅಯಾಚಿತವಾಗಿ ಬೀಳುವ ಬೈಗುಳಗಳ ಅರ್ಥವೂ ನಮಗೆ ತಿಳಿ ದಿರುವುದಿಲ್ಲ.

ಅರ್ಥವೇ ತಿಳಿಯದೆ, ಅದು ಬೈಗುಳವೆಂಬುದನ್ನಷ್ಟೇ ಅರಿತು, ಅದನ್ನು ನಾವೂ ಬಳಸುವ ಸಂದರ್ಭವೂ ಉಂಟು. ಮುಂದೆಂದೋ ಅದರರ್ಥ ತಿಳಿದು ಮುಜುಗರ ಪಡುವವರೂ ಉಂಟು, ಪಡದಿರುವವರೂ ಉಂಟು. ಅರ್ಥವಾಗದೆ ಬಳಸುವ ಪದಗಳು ಒಂದು ರೀತಿ ಹಲ್ಲಿನಿಂದ ತಪ್ಪಿಸಿಕೊಂಡು ಉದರದಾಳಕ್ಕೆ ಜಾರಿದ ಇಡೀ ಅವರೆಕಾಳನ್ನು ವಿಸರ್ಜಿಸಿದಂತೆ. ಮತ್ತಷ್ಟು ಸುತ್ತು-ಬಳಸು ಬೇಡ, ನಾನು ಹೇಳುತ್ತಿರುವುದು ನಮ್ಮ ದೇವನೂರು ಮಹದೇವರ ಕುರಿತೇ. ಅವರು ಎಂದೋ, ಎ ಓದಿದ್ದನ್ನೋ, ಕೇಳಿದ್ದ ನ್ನೋ ಅಂತರ್ಗತವಾಗಿಸಿಕೊಳ್ಳದೆ ಹಾಗೆಯೇ ಹೊರಬಿಟ್ಟಿದ್ದಾರೆ.

ಅವರ ಲೇಟೆಸ್ಟ್ ಪುಸ್ತಿಕೆಯ ಬಗ್ಗೆ ಹೆಚ್ಚೇನೂ ಹೇಳುವುದಕ್ಕಿಲ್ಲ. ಈ ಲೇಖನದ ಮೊದಲ ಕೆಲವು ಪ್ಯಾರಾಗಳ ತಾತ್ಪರ್ಯ ಇಲ್ಲಿದೆ.
ಮಹಾದೇವರ ಮೇರುಕೃತಿ ಕುಸುಮಬಾಲೆಯನ್ನು ಕನ್ನಡಕ್ಕೆ ಭಾಷಾಂತರಿಸಬೇಕೆಂದು ಆಡಿಕೊಂಡವರು ಅವರ ಹಿತಚಿಂತಕರೇ. ಅದೇನೇ ಇರಲಿ. ಅದನ್ನು ಸ್ಕಾಚ್ ಎಂದು ಆಸ್ವಾದಿಸಿದವರೂ ಇದ್ದಾರೆ. ಅದರ ಅಮಲಿನಲ್ಲಿದ್ದವರ ಗ್ಲಾಸಿಗೆ ಮಹಾದೇವ, ಯಾಮಾರಿಸಿ, ಅಗ್ಗದ ವಿಸ್ಕಿ ಸುರಿದಿದ್ದಾರೆ. ಆರ್‌ಎಸ್‌ಎಸ್: ಆಳ, ಅಗಲ ಪುಸ್ತಿಕೆ, ಪ್ರಚಾರಕರು ಹೇಳಿಕೊಂಡಂತೆ, ‘ಏ ದಿಲ್ ಮಾಂಗೆ ಮೋರ್’ ರೀತಿ ಹುಚ್ಚಾಪಟ್ಟೆ ಮಾರಾಟವಾಗುತ್ತಿದ್ದರೆ, ಅದು ಅವರಿಗೆ ಸಂತಸದ ಸುದ್ದಿಯೇ.

ಮಹಾದೇವರ ಸಂತೋಷಕ್ಕೆ ಕಾರಣ ಮಾರಾಟದಿಂದ ಬಂದಿರುವ, ಬರಬಹುದಾದ ಹಣವಲ್ಲ, ಅದು ಪುಡಿಗಾಸು. ಮುಸ್ಲಿಂ ಓಲೈಕೆಯಲ್ಲಿ ಪ್ರಚೋದನಾತ್ಮಕ ರೀತಿಯಲ್ಲಿ ನಿರತರಾಗಿರುವ ಅವರ ಅಜೆಂಡಾ ಈಡೇರುತ್ತಿರುವುದಕ್ಕೆ. ಹರ್ಷನ ಬರ್ಬರ ಹತ್ಯೆಯ ದುರಂತವನ್ನು ಹಲಾಲ್ ಮಾಂಸವನ್ನು ಭುಜಿಸುವುದರ ಮೂಲಕ ಶುಭ ಮಾಡಿಕೊಂಡ ಮಹಾದೇವ ಇದೀಗ ಹಿಂದೂ ಗಳ ಮತ್ತೆರಡು ಹೆಣ ಉರುಳಿದ್ದಕ್ಕೆ ಆತಂಕ ವ್ಯಕ್ತಪಡಿಸದೆ ಪುಸ್ತಕದ ಜನಪ್ರಿಯತೆಯನ್ನು ಸಂಭ್ರಮಿಸುತ್ತಿದ್ದಾರೆ.

ಮೆದುಳಿನಲ್ಲಿ ‘ಕಿಡ್ನಿ’, ಎದೆಯಲ್ಲಿ ಹೃದಯವಿರುವವರು ವರ್ತಿಸುವ ರೀತಿ ಇದಲ್ಲ. ಕದಡಿದ ಸೌಹಾರ್ದದ ಕೆರೆಯಲ್ಲಿ ಮೀನು ಹಿಡಿಯುವ ಪ್ರಯತ್ನ, ಮಹಾದೇವರದ್ದು. ಪುಸ್ತಕದ ಮೌಲ್ಯವೇನೇ ಇರಲಿ, ಇಲ್ಲದಿರಲಿ, ಸಿದ್ದರಾಮೋತ್ಸವ ಆಚರಿಸಿಕೊಳ್ಳುವ ದಿಟ್ಟತನ ತೋರಿರುವ ಅವರದ್ದೇ ಊರಿನ ಮಾಜಿ ಮುಖ್ಯಮಂತ್ರಿಗೆ ಮುಂಗಡ ಹುಟ್ಟುಹಬ್ಬದ ಉಡುಗೊರೆ ಇದು ಇದ್ದ ಹಾಗಿದೆ.

ಉಡುಗೊರೆ ಕೊಡಲೆಂದು, ಆತುರಾತುರವಾಗಿ ಮಹಾದೇವ ಈ ಪುಸ್ತಕವನ್ನು ರಚಿಸದೇ, ತಮ್ಮ ಓದಿನ ಆಳ, ಅಗಲಗಳನ್ನೆಲ್ಲ ಬಳಸಿ, ಹದಿನಾಲ್ಕು ವರ್ಷ ಸವೆಸಿ, ಬರೆದಿದ್ದರೂ ಸದರಿ ಪುಸ್ತಕಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ. ಏಕೆಂದರೆ, ಪುಸ್ತಕದ ವಿಷಯವೇ
ಅವರಿಗೆ ಅಂತರ್ಗತವಾಗಿಲ್ಲ, ಆಗುವುದೂ ಇಲ್ಲ. ಅಂತರ್ಗತವಾಗುವುದು ಅವರಿಗೆ ಬೇಡವೇ ಬೇಡ. ಉಡುಗೊರೆ ಪಡೆದವರಿಗೆ ಮಾತ್ರ ಅದು ಮೌಲ್ಯಯುತವೇ. ಆಪತ್ಕಾಲದಲ್ಲಿ ಹುಲ್ಲುಕಡ್ಡಿಯೂ ಆಸರೆಯಾಗಬಲ್ಲದು. ಬಹಿರಂಗವಾಗಿ ಉಚ್ಚೆ ಹುಯ್ಯು ವವರೂ, ಭ್ರಷ್ಟರೂ ಸಹ್ಯವಾಗುತ್ತಿದ್ದಾರೆ, ಮಹಾದೇವರ ಕಾರಣದಿಂದ.

error: Content is protected !!