Sunday, 19th May 2024

ಅತ್ಯಾಚಾರ; ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿ

ಅಭಿವ್ಯಕ್ತಿ

ಸರಸ್ವತಿ ವಿಶ್ವನಾಥ್ ಪಾಟೀಲ್

ಅತ್ಯಾಚಾರಗಳು ಖಚಿತವಾಗಿ ಮಾನವ ಜಗತ್ತಿನ ವಿಕೃತ ಬೆಳವಣಿಗೆಗಳು. ಹಿಂಸೆ ಅಥವಾ ಕ್ರೌರ್ಯವೆಂಬುದು ವಿಶ್ವಕ್ಕೆ ಹೊಸ ದಲ್ಲ. ಪ್ರಾಣಿಪ್ರಪಂಚವೂ ಅದಕ್ಕೆ ಹೊರತಲ್ಲ. ಆದರೆ, ಸೃಷ್ಟಿಯ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿ ಬೆಳೆದ ಮಾನವ ಇನ್ಯಾವ ಜೀವಜಂತುವೂ ಕಂಡು ಕೇಳರಿಯದ ವಿಕೃತತೆಯನ್ನೂ ಬೆಳೆಸಿದ್ದಾನೆ.

ಬಲಾತ್ಕಾರದ ಲೈಂಗಿಕತೆ ಮತ್ತು ಅದಕ್ಕಾಗಿ ನಡೆಯುವ ಹಿಂಸೆಯೆಂಬುದನ್ನು ಇಡೀ ಜೀವಸೃಷ್ಟಿಯಲ್ಲಿ ಮನುಷ್ಯಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಅತ್ಯಾಚಾರ ಎಂಬುದು ಮನುಷ್ಯನ ವಿಕೃತಿಯ ಪಿಡುಗಾಗಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಸಂಬಂಧ ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ರೀತಿಯ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾಲೇಜು, ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಹೊಲ – ಗದ್ದೆ ಬಯಲು, ಪಾಳು ಬಿದ್ದ ಕಟ್ಟಡ, ಮಿಲ್, ಕೈಗಾರಿಕಾ ಪ್ರದೇಶ, ರೈಲು ಬೋಗಿ, ಬಸ್, ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್, ಬಾರ್ – ಹೀಗೆ ಎಲ್ಲೆಂದರಲ್ಲಿ ನಡೆಯುವ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಂತಿದೆ.

ಎಷ್ಟೋ ಅತ್ಯಾಚಾರಗಳು ಕಣ್ಮರೆಯಾಗಿ ಹೋಗುತ್ತವೆ. ಆದರೆ ಕೆಲವು ಮಾತ್ರ ಕಣ್ಣಿಗೆ ಬೀಳುತ್ತವೆ. ಇಡೀ ಸಮಾಜವೇ ಅತ್ಯಾಚಾ ರದ ಘಟನೆಯ ವಿರುದ್ಧ ದನಿಯೆತ್ತಬೇಕಾದರೆ, ಕೆಲವು ಸಮಾಜ ಸುಧಾರಕರು, ಕೂಗುಮಾರಿಗಳೂ ಹೋರಾಟ ಕ್ಕಿಳಿಯಬೇಕೆಂದರೆ ಅತ್ಯಾಚಾರಿ ಕ್ರೂರಿಗಳಲ್ಲಿ ಒಬ್ಬನಾದರೂ ಮುಸ್ಲಿಮನಿರಬೇಕು, ಆ ಘಟನೆ ಅತ್ಯಂತ ಕ್ರೂರವಾಗಿರಬೇಕು, ಆ ಮಹಿಳೆ ಪಡಬಾರದ ಹಿಂಸೆಯನುಭವಿಸಿ ಸಾವಿಗೀಡಾಗಿರಬೇಕು, ಆಕೆ ಸಮಾಜದ ಪ್ರಬಲ ವರ್ಗಗಳಿಗೆ ಸೇರಿದ್ದರಂತೂ ಎಲ್ಲರ ಗಮನ ಆ ಕಡೆ ಹರಿಯು ವುದು ಖಚಿತ. ಇದು ನಮ್ಮ ದೇಶದ ದೊಡ್ಡ ದುರಂತ.

ಸಾಮಾನ್ಯವಾಗಿ ಕೇಳಿಬರುತ್ತಿದ್ದ ಮಾತುಗಳೆಂದರೆ ಅತ್ಯಾಚಾರಕ್ಕೆ ಹೆಣ್ಣುಮಕ್ಕಳೇ ಕಾರಣ, ಮಹಿಳೆಯರು ಧರಿಸುವ ಉಡುಪುಗಳ ಕಾರಣಕ್ಕೆ ಅತ್ಯಾಚಾರಗಳು ನಡೆಯುತ್ತವೆ, ಹೆಣ್ಣಮಕ್ಕಳು ಸಂಜೆ – ರಾತ್ರಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೊರಹೋಗದೆ ಭದ್ರ ವಾಗಿ ಮನೆಯಲ್ಲೇ ಇದ್ದರೆ ಇಂತಹವೆಲ್ಲ ನಡೆಯುವುದಿಲ್ಲ. ಇವೇ ಮೊದಲಾದ ವಾದಗಳು ಕೇಳಿ ಬರುತ್ತವೆ. ಒಂಟಿಯಾಗಿ ಹೊರಗೆ ಹೋಗಿದ್ದೆ ಅತ್ಯಾಚಾರಕ್ಕೆ ಕಾರಣ ಎಂದಾದರೆ, ಮೊನ್ನೆ ಮೊನ್ನೆ ಅಷ್ಟೇ ಅತ್ಯಾಚಾರಕ್ಕೆ ತುತ್ತಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ  ಯುವತಿಯನ್ನು ಹಾಡು ಹಗಲೆ ಗುಂಪು ಅತ್ಯಾಚಾರಗೈದ ನಾಲ್ಕು ಜನ ಯುವಕರು ಅವಳ ನಾಲಿಗೆಯನ್ನು ಕತ್ತರಿಸಿ ಅವಳ ಬೆನ್ನುಮೂಳೆಯನ್ನು ಮುರಿದು ಮತ್ತು ಅವಳನ್ನು ಹತ್ಯೆ ಮಾಡಿದರು. ಇದಕ್ಕೆ ಉತ್ತರ ಯಾರ ಬಳಿಯಾದರೂ ಇದೆಯೇ? ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಹಿಳೆಯರು ದಲಿತರು ಮತ್ತು ದುರ್ಬಲ ವರ್ಗದವರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಾಚಾರ, ಕೊಲೆ ಪ್ರಕರಣಗಳು, ದೌರ್ಜನ್ಯಗಳು ಹೆಚ್ಚಾಗಿದೆ.

ಕಾಮಾತುರಾಣಾಂನ ಲಜ್ಜಾ ನಭಯ ಎಂಬ ಮಾತು ಮನುಷ್ಯನಿಗೆ ಅನ್ವಯಿಸುತ್ತದೆ. ಮಾನವ ಇಂದು ದಾನವನಾಗಿದ್ದಾನೆ. ಹೀಗಾಗಿ ನಾವಿಂದು ಮಾಡಬಾರದ್ದನ್ನು ಮಾಡುತ್ತಿದ್ದೇವೆ, ನೋಡಬಾರದ್ದನ್ನು ನೋಡುತ್ತಿದ್ದೇವೆ, ಕೇಳಬಾರದ್ದನ್ನು ಕೇಳು ತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಣ್ಣಿಗೆ ರಾಚುವಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ನಿಜ. ಆದರೆ ಕರ್ನಾಟಕ ದಲ್ಲಂತೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟಿಗೆ ಹಸುಳೆಗಳಿಂದ ವೃದ್ಧರವರೆಗೂ ಅತ್ಯಾಚಾರ ನಡೆಯುತ್ತಲೇ ಇದೆ. ಆದರೆ ಈ ಬಗ್ಗೆೆ ಮೌನವಹಿಸುತ್ತಿರುವ ಸರಕಾರವನ್ನು ಸೂಕ್ಷ್ಮವಾಗಿ ಗಮನಿಸುವುದಾದರೇ, ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರಕಾರ ಕೆಲಸ ಮಾಡುತ್ತಿದೆ ? ಎಂಬಿತ್ಯಾದಿ ಪ್ರಶ್ನೆಗಳನ್ನು ಸೃಷ್ಟಿ ಮಾಡು ವಂತೆ ಮಾಡುತ್ತಿದೆ.

ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂದು ಸರಕಾರ ಆಘಾತಕಾರಿ ವರದಿ ನೀಡಿದೆ. 2019ರಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಕುರಿತು ವರದಿ ಬಿಡುಗಡೆ ಮಾಡಿದ್ದು, ಈ ಆಘಾತಕಾರಿ ಅಂಶ ಹೊರಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ7ರಷ್ಟು ಹೆಚ್ಚಿದೆ ಎಂದು ತಿಳಿಸಿದೆ. ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದ್ದು, 2018ಕ್ಕೆ ಹೋಲಿಸಿದರೆ, ಮಹಿಳೆಯರ ಮೇಲಿನ ದೌರ್ಜನ್ಯ ಸಂಖ್ಯೆೆ ಅಧಿಕಗೊಂಡಿದೆ. ದೇಶದಲ್ಲಿ ಪ್ರತಿನಿತ್ಯ ಅದೆಷ್ಟೋ ಹಿಂಸಾಚಾರಗಳು, ಅನಾಚಾರಗಳು ನಡೆಯುತ್ತಿರುವ ಜೊತೆ ಜೊತೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆಗಳಿಗೆ ಕೊನೆ ಎಂದು ಎನ್ನುವ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದರು ಕೂಡ, ಎಲ್ಲೂ ಈ ಬಗ್ಗೆೆ ಸೂಕ್ತ ಕಾನೂನುಗಳು ಈವರೆಗೆ ಬಂದೇ ಇಲ್ಲ. ಅದರಲ್ಲೂ ಏನೂ ಅರಿಯದ ಪುಟ್ಟ ಕಂದಮ್ಮಗಳನ್ನೇ ಹಾಡಹಗಲೇ ಅತ್ಯಾಚಾರ ಎಸಗುವ ದುರುಳ ರಕ್ಕಸರು, ಕಾನೂನಿನ ಕೈಗೆ ಸಿಲುಕಿ ಸುಮಾರು ಒಂದೆರಡು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ದರೂ ಕೂಡ ತಮ್ಮ ಹಳೇ ಚಾಳಿಯನ್ನು ಬಿಡುತ್ತಾರೆ ಎಂದರೆ ಅದು ನಂಬಲಸಾಧ್ಯ.

ಏನು ಅರಿಯದ ಮುಗ್ಧ ಕಂದಮ್ಮಗಳ ಮೇಲೆ ಅತ್ಯಾಚಾರ ಎಸಗುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದರು ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ ಎನ್ನುವುದೇ ಬೇಸರದ ಸಂಗತಿ. ಆದರೆ ಈ ಬಗ್ಗೆೆ ಕಾನೂನಾಗಲಿ ಯಾವುದೇ ಸರಕಾರವಾಗಲಿ ಕಂದಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಮಟ್ಟ ಹಾಕಲು ಯೋಚಿಸಿದ್ದೇ ಇಲ್ಲ. ಪ್ರಸ್ತುತ ದಿನಗಳಲ್ಲಿ ದಿನಪತ್ರಿಕೆಗಳನ್ನಾಗಲಿ, ಸುದ್ದಿ
ವಾಹಿನಿಗಳಲ್ಲೇ ಆಗಿರಲಿ, ಅಷ್ಟೇ ಯಾಕೆ ಸಾಮಾಜಿಕ ಜಾಲ ತಾಣಗಳಲ್ಲಿಯೇ ಇರಲಿ. ಅತ್ಯಾಚಾರದ ಪ್ರಕರಣಗಳೇ ಪ್ರತಿನಿತ್ಯವೂ ರಾರಾಜಿಸುತ್ತಿರುವುದಂತೂ ಅಕ್ಷರಶಃ ನಿಜ.

ಅದರಲ್ಲೂ ತಂದೆಯೇ ತನ್ನ ಅಪ್ರಾಪ್ತ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರ ಎಸಗುವ ಸುದ್ದಿ, ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿದ ತಾತ, ಸೋದರ ಮಾವನೇ ಹಸುಗೂಸಿನ ಮೇಲೆ ಅತ್ಯಾಚಾರ, ಮಗನೇ ತಾಯಿಯ ಮೇಲೆ ಅತ್ಯಾಚಾರ ಹೀಗೆ
ಅತ್ಯಾಚಾರದ ವಿಚಾರಗಳು ಇಂದು ಹೆಣ್ಣು ಮಕ್ಕಳಿಗೆ ಭಯದ ಕೂಪದಂತೆ ಕಾಡುತ್ತಿದೆ. ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿತ್ತು. ಹಾಗಾಗಿ ಅಪ್ರಾಪ್ತ ಬಾಲಕಿ ಯರ 12 ವರ್ಷದೊಳಗಿನ ಮೇಲೆ ಅತ್ಯಾಚಾರ ಎಸಗುವ ಆರೋಪಿಗೆ ಮರಣದಂಡನೆ ಶಿಕ್ಷೆ ಮಸೂದೆಯನ್ನು ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಿ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಉಗ್ರಶಿಕ್ಷೆ ನೀಡುತ್ತಿರುವ ಸರಕಾರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟೇ ಅಲ್ಲ ಹುಡುಗಿಯರನ್ನು ಹಿಂಬಾಲಿಸುವುದು, ಪ್ರೀತಿಸುವಂತೆ ಪೀಡಿಸು ವುದು ಜಾಮೀನು ರಹಿತ ಅಪರಾಧ, ಅಂಥವರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು.

ಮನುಷ್ಯ ಪಶುವಿಗಿಂತ ಕಡೆಯಾಗಿದ್ದಾನೆ. ಮೈಥುನ ಕ್ರಿಯೆಯನ್ನು ಪ್ರಾಣಿಗಳು ನಿಸರ್ಗದ ನಿಯಮದ ಪ್ರಕಾರ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಅನುಸರಿಸುತ್ತವೆ. ಆದರೆ ಮಾನವ? ಮೈಥುನ ಕ್ರಿಯೆಯಲ್ಲಂತೂ ಮನುಷ್ಯನನ್ನು ಮೀರಿಸುವ ಪ್ರಾಣಿ ಈ ಜಗತ್ತಿನಲ್ಲಿ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ. ಸಣ್ಣವರು – ದೊಡ್ಡವರು, ಮಕ್ಕಳು,
ಅಕ್ಕ – ತಂಗಿಯರು, ತಾಯಂದಿರು, ಗುರು – ಹಿರಿಯರೆಂಬ ಗೌರವ ಭಾವನೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲಷ್ಟೇ ಅಲ್ಲ ಸ್ವಂತ ತಾವೇ ಹಡೆದ ಚಿಕ್ಕಮಕ್ಕಳ ಮೇಲೆ ಸುಶಿಕ್ಷಿತ ತಂದೆಯೇ ಅತ್ಯಾಚಾರ ಮಾಡುತ್ತಿರುವುದನ್ನು ಪತ್ರಿಕೆಗಳಲ್ಲಿ ಓದಿದಾಗ, ಕೇಳಿದಾಗ ಇದಕ್ಕಿಂತ ಹೆಚ್ಚಿನ ನೈತಿಕ ಅಧಃಪತನ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ. ತೀರಾ ಸಣ್ಣ ಕಾರಣಕ್ಕಾಗಿ ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದು ಇದೆ. ಇಂಥ ಸ್ಥಿತಿಗೆ ಕಾರಣ ಏನು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಈಗ ಸಮಾಜದ ಮುಂದೆ ಸವಾಲಾಗಿ ನಿಂತಿದೆ.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವೇಷ ಭೂಷಣ, ಆಹಾರ ಪದ್ಧತಿ, ಸಿನಿಮಾ ಮತ್ತು ಟಿವಿ ಸಂಸ್ಕೃತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂಥ ಕೃತ್ಯಕ್ಕೆೆ ಕೊಡುಗೆ ನೀಡುತ್ತವೆ. ವಿಶ್ವಾದ್ಯಂತ ಅತ್ಯಾಚಾರ ದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸದೇ ಇರುವುದು ರೇಪಿಸ್ಟ್ ‌‌ಗಳು ಸ್ವೇಚ್ಚೆಯಿಂದ ವರ್ತಿಸಲು
ಮುಖ್ಯ ಕಾರಣ ಎನ್ನಬಹುದು. ಆದ್ದರಿಂದ ಇದನ್ನು ಅಪಮಾನ ಎಂದು ಭಾವಿಸದೇ ದೂರು ನೀಡಬೇಕು. ನಿಜಕ್ಕೂ ಅಪಮಾನ ಕಾರಿ ಕೃತ್ಯ ಎಸಗಿದ್ದು ಆ ಆತ್ಯಾಚಾರಿ. ಹೀಗಾಗಿ ಆ ಮೂಲಕವಾದರೂ ರೇಪಿಸ್ಟನ್ನು ಸಾರ್ವಜನಿಕವಾಗಿ ಅಪಮಾನ ಮಾಡಬೇಕು.

ಅತ್ಯಾಚಾರಕ್ಕೆ ಒಳಗಾಗಿ ನರಕ ಯಾತನೆ ಅನುಭವಿಸುವ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ. ಆಕೆಯ ಶಿಕ್ಷಣ, ಉದ್ಯೋಗ, ಖಾಸಗಿ ವೈವಾಹಿಕ ಭವಿಷ್ಯ ಆತಂಕದಲ್ಲಿರುತ್ತದೆ. ಆಕೆಗೆ ಎಷ್ಟರ ಮಟ್ಟಿ ಮನೋ ವೈಜ್ಞಾನಿಕ ಸಲಹೆ, ಚಿಕಿತ್ಸೆ ಬೇಕಾಗುತ್ತದೆ ಎಂಬುದು ಆಪ್ತ ಸಮಾಲೋಚಕರು ನಿರ್ಧರಿಸಬೇಕು. ಇನ್ನು ಆಕೆಯ ಹೆತ್ತವರು ಅನುಭವಿಸುವ ಸಂಕಟ, ನೋವು ಮತ್ತು ಯಾತನೆ ಹೇಳತೀರದು. ಜೊತೆಗೆ ತನ್ನದಲ್ಲದ ತಪ್ಪಿಗಾಗಿ ಆಕೆ ಸಮಾಜದಲ್ಲಿ ಅತ್ಯಾಚಾರಕ್ಕೆ ಒಳಗಾದವಳು ಎಂಬ ಹಣೆಪಟ್ಟಿ ಆಕೆಯ ಜೀವನದಲ್ಲಿ ಎಂದೂ ಅಳಿಸಲಾರದಂಥ ಕಪ್ಪು ಚುಕ್ಕೆಯಾಗುತ್ತದೆ.

ಆಕೆ ಇದರಿಂದ ಎಷ್ಟು ಮಾನಸಿಕ ಹಿಂಸೆ ಅನುಭವಿಸಬೇಕಾಗಬಹುದು ಎಂಬುದು ಅದನ್ನು ಅನುಭವಿಸಿದ ರೇಪ್ ವಿಕ್ಟಿಮ್‌ಗಳು ಮತ್ತು ನತದೃಷ್ಟೆಯರಿಗಷ್ಟೇ ಗೊತ್ತು. ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿ ದಂತೆ ಅನೇಕ ಅಧ್ಯಯನಗಳು ನಡೆದಿವೆ. ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ.

ಬಸ್‌ಗಳಲ್ಲಿ, ರೇಲ್ವೆ ಬೋಗಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ಸಿಸಿ ಟಿವಿಗಳನ್ನು ಅಳವಡಿಸಬೇಕು. ಮಹಿಳಾ ಸುರಕ್ಷತೆಗೆ ಸಂಬಂಧಪಟ್ಟ ಮಸೂದೆಗಳನ್ನು ಅಂದರೆ ಮಹಿಳೆಯರ ವಿರುದ್ಧ ಆಕೆಯ ಕಾರ್ಯಸ್ಥಳ ಹಾಗೂ ಇತರೆಡೆ
ನಡೆಯಬಹುದಾದ ಲೈಂಗಿಕ ಕಿರುಕುಳ, ಅತ್ಯಾಚಾರದಂಥ ದೌರ್ಜನ್ಯಗಳನ್ನು ತಡೆಗಟ್ಟಲು ಇರುವ ಮಸೂದೆಗಳನ್ನು ಕೂಡಲೇ ಜಾರಿಗೊಳಿಸಬೇಕು.

ಸಾಧಾರಣವಾಗಿ ಇಂಥ ಕೃತ್ಯ ನಡೆದಾಗ ಸಮಾಜ ರೊಚ್ಚಿಗೇಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ವಿಚಾರಣೆ ತಡವಾಗುತ್ತದೆ. ಇದರಿಂದಾಗಿ ಶಿಕ್ಷೆ ಅಪರಾಧಿಗಳ ಬಳಿ ಸುಳಿಯುವುದಿಲ್ಲ. ಮುಂದೆ ಅತ್ಯಾಚಾರಿಗಳು ರಾಜಾರೋಷದಿಂದ ಓಡಾಡಿಕೊಂಡು ಇರುತ್ತಾರೆ. ದೆಹಲಿ ಮತ್ತು ಮುಂಬೈನಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣಗಳು ಹೆಣ್ಣು ಮಗಳೊಬ್ಬಳ ಬಾಳಿಗಷ್ಟೇ ಕಪ್ಪು ಚುಕ್ಕೆ ಅಲ್ಲ. ಅದು ಈಗ ವಿಶ್ವದ ಕಣ್ಣಿನಲ್ಲಿ ಇಡೀ ಭಾರತ ದೇಶಕ್ಕೆ ದೊಡ್ಡ ಕಪ್ಪು ಚುಕ್ಕೆ. ಅತ್ಯಾಚಾರಿಗೆ ಏನು ಶಿಕ್ಷೆ ನೀಡಬೇಕು ಎಂದು ಚರ್ಚಿ ಸುವುದಕ್ಕಿಂತ ಅದಕ್ಕೆ ಆಸ್ಪದವೇ ನೀಡದಂತೆ ಅತ್ಯಾಚಾರ ನಡೆಯುವುದನ್ನು ತಡೆಗಟ್ಟು ವುದೇ ಸೂಕ್ತ ಪರಿಹಾರ. ಅತ್ಯಾಚಾರ ವನ್ನು ಹೇಗೆ ತಡೆಗಟ್ಟಬೇಕು, ಅತ್ಯಾಚಾರಿಗಳಿಗೆ ಎಂಥ ಶಿಕ್ಷೆ ನೀಡಬೇಕು ಎಂಬುದು ಸಮಾಜಕ್ಕೆ, ಕಾನೂನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಆದರೆ, ಅಂತರ್ಜಾಲದ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ, ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಂಬುದು ತಿಳಿಯುತ್ತದೆ. ಗಲ್ಲು ಶಿಕ್ಷೆ ತೀರಾ ಸರಳ. ಆದ್ದರಿಂದ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಜನನಾಂಗ ಛೇದನ ಮಾಡುವುದೇ ಸೂಕ್ತ ಶಿಕ್ಷೆ. ಕೋರ್ಟ್‌ಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಅತ್ಯಾಚಾರದ ಹಳೇ ಪ್ರಕರಣಗಳನ್ನು ಕೂಡಲೇ ಹೊರ ತೆರೆದು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿ ಸಬೇಕು. ಶಿಕ್ಷೆ ಎಷ್ಟರ ಮಟ್ಟಿಗೆ ಇರಬೇಕೆಂದರೆ ಇಂಥ ಘೋರ ಕೃತ್ಯ ಎಸಗುವವರಿಗೆ ಇದರ ಭಯ ತಟ್ಟಿ, ಅವರು ಈ ರೀತಿಯ ಹೀನ ಕೆಲಸಗಳಿಗೆ ಕೈ ಹಾಕಲು ಹಿಂಜರಿಯಬೇಕು.

Leave a Reply

Your email address will not be published. Required fields are marked *

error: Content is protected !!