ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Shanubhogara Magalu Movie: ಕೂಡ್ಲು ರಾಮಕೃಷ್ಣ ನಿರ್ದೇಶನದ ʼಶಾನುಭೋಗರ ಮಗಳುʼ ಚಿತ್ರ ಯಶಸ್ವಿ ಪ್ರದರ್ಶನ

Shanubhogara Magalu Movie: ಕೂಡ್ಲು ರಾಮಕೃಷ್ಣ ನಿರ್ದೇಶನದ, ನಟಿ ರಾಗಿಣಿ ಪ್ರಜ್ವಲ್, ಕಿಶೋರ್, ನಿರಂಜನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ʼಶಾನುಭೋಗರ ಮಗಳುʼ ಚಿತ್ರ ಕಳೆದ ವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತ ವಿವರ ಇಲ್ಲಿದೆ.

ʼಶಾನುಭೋಗರ ಮಗಳುʼ ಚಿತ್ರ ಯಶಸ್ವಿ ಪ್ರದರ್ಶನ

Profile Siddalinga Swamy Feb 28, 2025 5:43 PM

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಸಾಧ್ವಿ ಹೆಣ್ಣುಮಗಳು ಶರಾವತಿಯ ಕಥೆಯನ್ನು ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ʼಶಾನುಭೋಗರ ಮಗಳುʼ ಚಿತ್ರದ (Shanubhogara Magalu Movie ) ಮೂಲಕ ತೆರೆಮೇಲೆ ತಂದಿದ್ದಾರೆ. ಪತ್ರಕರ್ತೆ ಹಾಗೂ 33ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಂತಹ ಭಾಗ್ಯ ಕೃಷ್ಣಮೂರ್ತಿ ಅವರ ಇದೇ ಹೆಸರಿನ ಕಾದಂಬರಿಯನ್ನಾಧರಿಸಿ ʼಶಾನುಭೋಗರ ಮಗಳುʼ ಚಿತ್ರ ತಯಾರಾಗಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ. ನಾರಾಯಣ್, ಈ ಚಿತ್ರವನ್ನು ನಿರ್ಮಿಸಿದ್ದಾರೆ. ‌ ನಟಿ ರಾಗಿಣಿ ಪ್ರಜ್ವಲ್, ಕಿಶೋರ್, ನಿರಂಜನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಕಳೆದವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

ಚಿತ್ರ ನೋಡಿದ ಎಲ್ಲರೂ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ‌ ಎಂದೇ ಹೇಳುತ್ತಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಬರುತ್ತಿಲ್ಲ ಎಂದು ನಿರ್ದೇಶಕ ಕೂಡ್ಲು ರಾಮಕೃಷ್ಣ ಹೇಳಿದರು. ಲೇಖಕಿ ಭಾಗ್ಯ ಕೃಷ್ಣಮೂರ್ತಿ ಕೂಡ ಅದೇ ಮಾತನ್ನು ಹೇಳಿ ಮಾಧ್ಯಮದವರು ಪ್ರೋತ್ಸಾಹಿಸಿದರೆ, ನಮ್ಮ ಚಿತ್ರ ಇನ್ನಷ್ಟು ಜನರಿಗೆ ತಲುಪುತ್ತದೆ. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೋರಿದರು.

ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಬರುತ್ತಿರುವ ಚಿತ್ರಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಮಹಿಳಾ‌ ಪ್ರಧಾನ ಚಿತ್ರವೊಂದು ಬಂದಿದೆ. ಚಿತ್ರದಲ್ಲಿ ಇತಿಹಾಸ, ಕಾಲ್ಪನಿಕ‌ ಇತಿಹಾಸ‌ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ವಿಷಯಗಳನ್ನು ತೋರಿಸಲಾಗಿದೆ. ಚಿತ್ರ ಚೆನ್ನಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕಿಶೋರ್.

ನಾಯಕಿ ರಾಗಿಣಿ ಪ್ರಜ್ವಲ್ ಮಾತನಾಡಿ ಈ ವಾರ 11 ಸಿನಿಮಾ ಬಂದಿದೆ. ಅದರ ನಡುವೆ ನಮ್ಮ ಚಿತ್ರವನ್ನು ಜನ ಇಷ್ಟಪಟ್ಟಿದ್ದಾರೆ. ಎಲ್ಲಾ ವರ್ಗದ ಜನರಿಗೂ ನಮ್ಮ ಸಿನಿಮಾ ಕನೆಕ್ಟ್ ಆಗುತ್ತೆ. ಮುಖ್ಯವಾಗಿ ನಾನು ಈ ಸಿನಿಮಾ ಒಪ್ಪಿದ್ದೇ ಕಥೆ ಹಾಗೂ ಕೂಡ್ಲು ಅವರ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ. ಮೊನ್ನೆ ಆಡಿಯನ್ಸ್ ಜತೆ ಸಿನಿಮಾ ನೋಡಿದೆ. ಅವರ ರಿಯಾಕ್ಷನ್ ಕಂಡು ಖುಷಿಯಾಯ್ತು. ಪ್ರಜ್ವಲ್ ಕೂಡ ನನ್ನ ಜತೆ ಬಂದು ಸಿನಿಮಾ ನೋಡಿದರು. ಅತ್ತೆ ಮಾವ ಅವರಿಗೂ ಸಿನಿಮಾ ತೋರಿಸುತ್ತೇನೆ. ಶರಾವತಿ ಪಾತ್ರದ ಮೂಲಕ ಲಾಟ್ ಆಫ್ ಎಮೋಷನ್ಸ್ ಕನೆಕ್ಟ್ ಆದೆ. ಚಿತ್ರದ ಯಾವುದೇ ಅಳುವ ಸೀನ್‌ನಲ್ಲಿ ನಾನು ಗ್ಲಿಸರಿನ್ ಹಾಕಿಲ್ಲ ಎಂದರು.

ಛಾಯಾಗ್ರಾಹಕ ಜೈ ಆನಂದ್ ಮಾತನಾಡಿ, ಇದು ನನ್ನ 30ನೇ ಸಿನಿಮಾ. ಇದರಲ್ಲಿ ಯಾವುದೇ ಸಿಜಿ ಉಪಯೋಗ ಮಾಡಿಲ್ಲ. 35 ದಿನ ಶೂಟ್ ಮಾಡಿದ್ದೇವೆ. ಮೊದಲು ಪ್ರಜ್ವಲ್ ಅವರಿಗೆ ಈ ಸಬ್ಜೆಕ್ಟ್ ಬಗ್ಗೆ ಹೇಳಿದ್ದೆ. ಅವರು ರಾಗಿಣಿ ಮೇಡಂ ಒಪ್ಪಿಸಿದರು ಎಂದರು.ನಿರಂಜನ್ ಶೆಟ್ಟಿ‌ ಮಾತನಾಡುತ್ತ. ಈ ಹಿಂದೆ ಕೂಡ್ಲು ಅವರ ಮಾರ್ಚ್ 22 ಚಿತ್ರದಲ್ಲಿ ಆಕ್ಟ್ ಮಾಡಬೇಕಿತ್ತು. ಆಗಿರಲಿಲ್ಲ. ಇಂಥ ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ ಎಂದರು.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಮಾ.2 ರಂದು ʼಬೆಟ್ಟದ ಹೂವುʼ ಕೃತಿ ಲೋಕಾರ್ಪಣೆ

ಅಸೋಸೊಯೇಟ್ ಡೈರೆಕ್ಟರ್ ನಾಗರಾಜ್ ಮಾತನಾಡಿ, ನಿರ್ಮಾಪಕರು ಸಿ.ಎಂ.ನಾರಾಯಣ್ ಅವರು ನೀಡಿದ ಸಹಕಾರವೇ ಸಿನಿಮಾ ಈ ಹಂತಕ್ಕೆ ಬರಲು ಕಾರಣ‌. ಜನತೆ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದರು. ಹಿರಿಯ ನಿರ್ದೇಶಕ ಜೊಸೈಮನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.