Stock Market: ಟ್ರಂಪ್ ಟ್ರೇಡ್ ವಾರ್-ಸೆನ್ಸೆಕ್ಸ್, ನಿಫ್ಟಿ ನಿಲ್ಲದ ಕುಸಿತ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ ಆಮದು ತೆರಿಗೆಯನ್ನು ಹೆಚ್ಚಿಸುವ ಆತಂಕ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 199 ಅಂಕ ಕಳೆದುಕೊಂಡು 75,939 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಸೆನ್ಸೆಕ್ಸ್-ನಿಫ್ಟಿ

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಭಾರತದ ವಿರುದ್ಧ ಆಮದು ತೆರಿಗೆಯನ್ನು ಹೆಚ್ಚಿಸುವ ಆತಂಕ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಮುಂಬಯಿ ಷೇರು ಮಾರುಕಟ್ಟೆ(Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ(ಫೆ.14) 199 ಅಂಕ ಕಳೆದುಕೊಂಡು 75,939 ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 102 ಅಂಕ ಕಳೆದುಕೊಂಡು 22,929ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
13 ಪ್ರಮುಖ ಸೆಕ್ಟರ್‌ಗಳು ನಷ್ಟಕ್ಕೀಡಾಯಿತು. ಅದಾನಿ ಎಂಟರ್ ಪ್ರೈಸಸ್, ಭಾರತ್ ಎಲೆಕ್ಟ್ರಾನಿಕ್ಸ್, ಅದಾನಿ ಪೋರ್ಟ್ಸ್, ಸನ್ ಫಾರ್ಮಾ, ಟ್ರೆಂಟ್ ಷೇರುಗಳು ನಿಫ್ಟಿಯಲ್ಲಿ ನಷ್ಟಕ್ಕೀಡಾಯಿತು. ಬ್ರಿಟಾನಿಯಾ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ನೆಸ್ಲೆ ಇಂಡಿಯಾ, ಇನ್ಫೋಸಿಸ್, ಟಿಸಿಎಸ್ ಷೇರುಗಳು ಲಾಭ ಗಳಿಸಿತು. ನಿಫ್ಟಿ ಮಿಡ್ ಕ್ಯಾಪ್ ಇಂಡೆಕ್ಸ್ 2.4% ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್ 3.5% ಇಳಿಕೆ ದಾಖಲಿಸಿತು. ಮೀಡಿಯಾ, ಮೆಟಲ್, ಆಯಿಲ್, ಗ್ಯಾಸ್, ಪಿಎಸ್‌ಯು ಬ್ಯಾಂಕ್, ರಿಯಾಲ್ಟಿ, ಕನ್‌ಸ್ಯೂಮರ್ ಡ್ಯೂರಬಲ್ಸ್, ಆಟೊ, ಎನರ್ಜಿ ಸೆಕ್ಟರ್ ಷೇರುಗಳು ದರ ಕುಸಿತ ದಾಖಲಿಸಿತು.
ಈ ಸುದ್ದಿಯನ್ನೂ ಓದಿ:Stock Market: 1000 ಕ್ಕೂ ಹೆಚ್ಚು ಷೇರುಗಳ ದರ 30% ಇಳಿಕೆ, ಖರೀದಿಗೆ ಯಾವುದು ಬೆಸ್ಟ್?
ಸತತ ಎಂಟು ದಿನಗಳಿಂದ ಷೇರು ಸೂಚ್ಯಂಕಗಳು ಇಳಿಯುತ್ತಿವೆ. ಶುಕ್ರವಾರ ನಿಫ್ಟಿ ಮತ್ತು ಸೆನ್ಸೆಕ್ಸ್ ಉತ್ತಮ ಆರಂಭ ದಾಖಲಿಸಿದರೂ, ಮಧ್ಯಂತರದಲ್ಲಿ ಕುಸಿಯಿತು. ಕಳೆದ ಎರಡು ವರ್ಷಗಳಲ್ಲಿಯೇ ಮೊದಲ ಬಾರಿಗೆ ಸತತ ಎಂಟನೇ ದಿನ ಷೇರು ಸೂಚ್ಯಂಕ ಮುಗ್ಗರಿಸಿದೆ. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯ 400 ಲಕ್ಷ ಕೋಟಿ ರುಪಾಯಿಗಿಂತ ಕೆಳಕ್ಕಿಳಿದಿದೆ.
ಒಂದು ಕಡೆ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತಕ್ಕೀಡಾಗಿದ್ದರೆ, ಮತ್ತೊಂದು ಕಡೆ ಬಂಗಾರದ ದರ ತೀವ್ರ ಏರಿದೆ. ಹೀಗಿದ್ದರೂ, ಕೆಲವು ಷೇರುಗಳು ಟ್ರಂಪ್ ಆಟಾಟೋಪದ ಎಫೆಕ್ಟ್ ಹೊರತಾಗಿಯೂ ಲಾಭ ಗಳಿಸಿವೆ. ಅವುಗಳು ಯಾವುವು ಎಂದರೆ- ಎಸ್‌ಆರ್‌ಎಫ್, ನವೀನ್ ಫ್ಲೋರೈನ್ ಇಂಟರ್ ನ್ಯಾಶನಲ್, ಯುಪಿಎಲ್, ಎಸ್‌ಬಿಐ ಕಾರ್ಡ್ಸ್ ಆಂಡ್ ಪೇಮೆಂಟ್ ಸರ್ವೀಸ್, ಬಜಾಜ್ ಫೈನಾನ್ಸ್, ಮಾರುತಿ ಸುಜುಕಿ, ಜೆನ್ಸಾರ್ ಟೆಕ್ನಾಲಜೀಸ್, ರೆಡಿಂಗ್ಟನ್, ಬಜಾಕ್ ಫಿನ್ ಸರ್ವ್, ಟಾಟಾ ಕನ್‌ಸ್ಯೂಮರ್. ಬಿಇಎಲ್ ಷೇರುಗಳ ದರದಲ್ಲಿ 4% ಇಳಿಕೆ ದಾಖಲಾಯಿತು. ಔಷಧ ವಲಯದ ಬಹುತೇಕ ಷೇರುಗಳು ಮುಗ್ಗರಿಸಿತು. ನ್ಯಾಟ್ಕೊ ಫಾರ್ಮಾ ಮತ್ತು ಲೌರುಸ್ ಲ್ಯಾಬ್ಸ್ ಷೇರು ದರ 9%ಕ್ಕೂ ಹೆಚ್ಚು ಕುಸಿಯಿತು. ನಿಫ್ಟಿ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಇಳಿಯಿತು. ನಿಫ್ಟಿ ಮಿಡ್ ಕ್ಯಾಪ್ ಕೂಡ ಇಳಿಮುಖವಾಗಿತ್ತು.