Friday, 26th April 2024

ಹಿಜಾಬ್‌ ನಿಷೇಧ: ಆ.29ರಂದು ಮೇಲ್ಮನವಿಗಳ ವಿಚಾರಣೆ

ವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗಳನ್ನು ನಿಷೇಧಿಸುವ ರಾಜ್ಯ ಸರಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ನಡೆಸಲಿದೆ.

ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಪೀಠದಲ್ಲಿದ್ದಾರೆ. ಪೀಠವು ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ.

ಆಗಿನ ಸಿಜೆಐ ಎನ್‌. ವಿ. ರಮಣ ನೇತೃತ್ವದ ಪೀಠದ ಮುಂದೆ ಹಲವಾರು ಸಂದರ್ಭಗಳಲ್ಲಿ ತುರ್ತು ವಿಚಾರಣೆಗಾಗಿ ಅರ್ಜಿ ಗಳನ್ನು ಉಲ್ಲೇಖಿಸಲಾಗಿತ್ತು. ಆದರೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ.

ಶಾಲಾ-ಕಾಲೇಜುಗಳ ಏಕರೂಪದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲು ನಿರ್ದೇಶಿಸಿದ ಕರ್ನಾಟಕ ಸರಕಾರದ ಆದೇಶವನ್ನು ಎತ್ತಿಹಿಡಿ ಯುವ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಉನ್ನತ ನ್ಯಾಯಾಲಯದ ಮೇಲ್ಮನವಿಗಳಲ್ಲಿ ಒಂದು “ಸರಕಾರಿ ಅಧಿಕಾರಿಗಳ ಮಲತಾಯಿ ವರ್ತನೆಯು ವಿದ್ಯಾರ್ಥಿಗಳ ನಂಬಿಕೆಯ ಮೇಲೆ ಕೆಟ್ಟ ಪರಿಣಾ ಬೀರುತ್ತದೆ ಮತ್ತು ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಕಾರಣವಾಗುತ್ತದೆ” ಎಂದು ಆರೋಪಿಸಿದೆ.

“ಹಿಜಾಬ್ ಅಥವಾ ಶಿರಸ್ತ್ರಾಣವನ್ನು ಧರಿಸುವುದು ಇಸ್ಲಾಂ ಧರ್ಮದ ಆಚರಣೆಗೆ ಅಗತ್ಯವಾದ ಅಭ್ಯಾಸವಾಗಿದೆ” ಎಂದು ಅದರಲ್ಲಿ ಸೇರಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಮಾರ್ಚ್‌ನಲ್ಲಿ, ಸಮವಸ್ತ್ರದ ಆದೇಶ ಸಮಂಜಸವಾದ ನಿರ್ಬಂಧವಾಗಿದೆ ಎಂದು ಹೇಳಿತ್ತು.

ರಾಜ್ಯದಲ್ಲಿ ಈ ವರ್ಷದ ಜನವರಿಯಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜು ಹಿಜಾಬ್ ಧರಿಸಿದ ಆರು ಹುಡುಗಿಯರನ್ನು ಪ್ರವೇಶಿಸದಂತೆ ನಿರ್ಬಂಧಿಸಿದಾಗ ಹಿಜಾಬ್ ವಿವಾದ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರವೇಶ ನಿರಾಕರಿಸಿದ್ದಕ್ಕೆ ಮುಸ್ಲಿಂ ಬಾಲಕಿಯರು ಕಾಲೇಜಿನ ಹೊರಗೆ ಕುಳಿತು ಪ್ರತಿಭಟನೆ ನಡೆಸಿದರು.

ಇದಾದ ನಂತರ ಉಡುಪಿಯ ಹಲವಾರು ಕಾಲೇಜುಗಳ ಹುಡುಗರು ಕೇಸರಿ ಸ್ಕಾರ್ಫ್ ಧರಿಸಿ ತರಗತಿಗಳಿಗೆ ಹಾಜರಾಗಲು ಆರಂಭಿಸಿದರು. ಈ ಪ್ರತಿಭಟನೆಯು ರಾಜ್ಯದ ಇತರ ಭಾಗಗಳಿಗೆ ಹರಡಿತ್ತು.

ಬಳಿಕ ಸರಕಾರವು ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಬದ್ಧವಾಗಿರಬೇಕು ಮತ್ತು ತಜ್ಞರ ಸಮಿತಿಯು ಈ ವಿಷಯದ ಬಗ್ಗೆ ನಿರ್ಧರಿಸುವವರೆಗೆ ಹಿಜಾಬ್ ಮತ್ತು ಕೇಸರಿ ಸ್ಕಾರ್ಫ್ ಎರಡನ್ನೂ ನಿಷೇಧಿಸಿದೆ ಎಂದು ಆದೇಶಿಸಿತ್ತು.

error: Content is protected !!