Saturday, 14th December 2024

ಡಿ.9ಕ್ಕೆ ಇಂಚಗೇರಿ ಶಾಖಾಮಠದಲ್ಲಿ 49ನೇ ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ

ಕಲಬುರಗಿ: ಇಂಚಗೇರಿ ಸಂಪ್ರದಾಯದ ಸದ್ಗುರು ಮತ್ತು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪರಸ್ಕೃತ ಇಂಚಗೇರಿ ಮಠದ ಶ್ರೀ ಸದ್ಗುರು ಮಾಧವನಂದ ಪ್ರಭುಜೀಯವರ ಸ್ಮರಣಾರ್ಥ “ಆಧ್ಯಾತ್ಮ ಸಪ್ತಾಹ ಪ್ರಾರಂಭೋತ್ಸವ” ಕಾರ್ಯಕ್ರಮ ಇದೇ ಡಿ.9 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ  ಆಳಂದ ರಸ್ತೆ (ರುಕ್ಮತೋಲ ದರ್ಗಾ ರಸ್ತೆಯ) ಮಾಧವಾನಂದ ನಗರದಲ್ಲಿರುವ ಶ್ರೀ ಸದ್ಗುರು ಮಾಧವಾನಂದ ಪ್ರಭುಜಿ ಇಂಚಗೇರಿ ಶಾಖಾಮಠದಲ್ಲಿ ನಡೆಯಲಿದೆ.

ಚಡಚಣ ಶ್ರೀಕ್ಷೇತ್ರ ಇಂಚಗೇರಿ ಮಠದ ಪೂಜ್ಯ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ನೇತೃತ್ವ ಮತ್ತು ಕಲಬುರಗಿಯ ಚೌದಾಪುರಿ ಹಿರೇಮಠದ ಪೂಜ್ಯ ಶ್ರೀ ಮ.ನಿ.ಪ್ರ. ರಾಜ ಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ವನ್ನು ಆಂಧ್ರಪ್ರದೇಶದ ಶ್ರೀ ಸಾರಂಗ ಮಠದ ಜಗದ್ಗುರು ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸ ಲಿದ್ದಾರೆ.

ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಂಕರಪ್ಪ ಮಹಾರಾಜರು ಕೌಜಲಗಿ, ಅಪ್ಪಾಸಾಬ್ ದಿವಾನಮಾಳ ಮಹಾರಾಜರು, ಕಲಬುರಗಿ ಮಹಾನಗರ ಪಾಲಿಕೆಯ ವಲಯ-೧ ಆಯುಕ್ತ ಮದನಿ ಕಾಂತ ಶೃಂಗೇರಿ, ಸದಾಶಿವ ಮಹಾರಾಜರು ರಡ್ಡೆರಟ್ಟಿ, ಗುರುಸ್ವಾಮಿ ಕಲಬುರಗಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಅವರು ಭಾಗವಹಿಸುವರು.

ಭವ್ಯ ಮೆರವಣಿಗೆ: ಅಂದು ಮಧ್ಯಾಹ್ನ ೩ ಗಂಟೆಗೆ ಶ್ರೀ ಸದ್ಗುರು ಮಾಧವಾನಂದ ಪ್ರಭುಜಿಯವರ ಭಾವಚಿತ್ರದ ಭವ್ಯ ಮೆರವಣಿಗೆ ಶ್ರೀ ಶರಣಬಸವೇಶ್ವರ ದೇವಸ್ಥಾನಿದಿಂದ ಇಂಚಗೇರಿ ಶಾಖಾ ಮಠದ ವರೆಗೆ ನಡೆಯಲಿದೆ.

ರಾಷ್ಟ್ರೀಯ ಭಾವೈಕ್ಯ ಮತ್ತು ಕೋಮು ಸೌಹಾರ್ದತೆ ಸಮಾರಂಭ: ಆಧ್ಯಾತ್ಮ ಸಪ್ತಾಹದ ಅಂಗವಾಗಿ ಅಂದು ಸಾಯಂಕಾಲ 6 ಗಂಟೆಗೆ ರಾಷ್ಟ್ರೀಯ ಭಾವೈಕ್ಯ ಮತ್ತು ಕೋಮು ಸೌಹಾರ್ದತೆ ಸಮಾರಂಭ ಆಯೋಜಿಸಲಾಗಿದೆ. ಚಡಚಣ ಶ್ರೀಕ್ಷೇತ್ರ ಇಂಚಗೇರಿ ಮಠದ ಪೂಜ್ಯ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ನೇತೃತ್ವ ಮತ್ತು ಕಲಬುರಗಿಯ ಏಕದಂಡಿ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಸುರೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಈ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಲಿಂಗರಾಜ ತಾರಫೈಲ್, ಕುಡಚಿಯ ನಾಮದೇವ ಮಹಾರಾಜರು, ಮಮದಾಪೂರದ ಕೆಂಚಪ್ಪ ಮಹಾರಾಜರು, ಸಂಕೋನಟ್ಟಿಯ ಸಂಗಮೇಶ ಧರಿಗೌಡರ್, ಕೋಜನವಾಡಿಯ ಗಿರಿಮಲ್ಲಪ್ಪ ಸಂತಿ ಮಹಾರಾಜರು, ಕಲಬುರಗಿಯ ಸಮಾಜ ಸೇವಕ ಪ್ರಭು ಬಾಳಿ ಭಾಗವಹಿಸಲಿದ್ದಾರೆ.

ಡಿ.10ಕ್ಕೆ ಮಂಗಲೋತ್ಸವ: ಅಧ್ಯಾತ್ಮ ಸಪ್ತಾಹದ ಮಂಗಲೋತ್ಸವ ಕಾರ್ಯಕ್ರಮ ಡಿ.10 ರಂದು ಬೆಳಿಗ್ಗೆ 10 ಗಂಟೆಗೆ ಶಾಖಾ ಮಠದಲ್ಲಿ ನಡೆಯಲಿದೆ. ಚಡಚಣ ಶ್ರೀಕ್ಷೇತ್ರ ಇಂಚಗೇರಿ ಮಠದ ಪೂಜ್ಯ ಶ್ರೀ ಸ.ಸ.ರೇವಣಸಿದ್ದೇಶ್ವರ ಮಹಾರಾಜರ ಘನ ನೇತೃತ್ವ ಮತ್ತು ಸಿಂದಗಿಯ ಆಸಂಗಿಹಾಳದ ಆರೂಢ ಮಠದ ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯ ಲಿರುವ ಈ ಸಮಾರೋಪ ಸಮಾರಂಭವನ್ನು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸ ಲಿದ್ದು, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಿದ್ದಾರೆ.

ಮಳಖೇಡದ ಪೂಜ್ಯ ಶ್ರೀ ಸಜ್ಜಾದ ಸಹೇಬರು ಸೈಯ್ಯದ್ ಶಹಾ ಮುಸ್ತಫಾ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ನಾಗನೂರಿನ ರಾಮಣ್ಣ ಮಹಾರಾಜರು, ಹೊಸಟ್ಟಿಯ ಭೀಮಣ್ಣ ಮಹಾರಾಜರು, ಪತ್ರಕರ್ತ ಟಿ.ಕೆ.ಮಲಕೊಂಡ, ಹಿರಿಯ ಪತ್ರಕರ್ತ ಮಾಣಿಕರಾವ ಪಸಾರ್, ಬಿ.ಜೆ.ಪಿ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೂರಜ ಪ್ರಸಾದ ತಿವಾರಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜು ದೇವದುರ್ಗ, ಸುನೀಲಕುಮಾರ ಬನಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಲಲಿತ ಕಲೆ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟç ಪ್ರಶಸ್ತಿ ಪುರಸ್ಕೃತ ಕಲಬುರಗಿಯ ಪ್ರಭು ಹರಸೂರ ಅವರಿಗೆ ಗಣ್ಯರಿಂದ ವಿಶೇಷ ಸನ್ಮಾನ ಸಹ ಜರುಗಲಿದೆ.