Sunday, 19th May 2024

ಮೇ.3 ರವರೆಗೆ ಲಾಕ್ ಡೌನ್ ಯತಾಸ್ಥಿತಿಯಲ್ಲಿ ಮುಂದುವರೆಯಲಿದೆ: ಆರ್.ಗಿರೀಶ್

ಹಾಸನ:

ತುರ್ತು ಆರೊಗ್ಯ ಚಿಕಿತ್ಸೆ, ಜೊತೆಗೆ ರಾಜ್ಯ ಸರ್ಕಾರ ಕೆಲವೊಂದು ಕ್ಷೇತ್ರದ ನಿರ್ದಿಷ್ಟ ಸೇವೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಮೇ.3 ರವರೆಗೆ ಲಾಕ್ ಡೌನ್ ಯತಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳ ಪ್ಯಾಕೇಟ್‍ಗಳನ್ನು ತಯಾರಿಸುವ ಕೈಗಾರಿಕೆಗಳ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ, ಉಳಿದ ಎಲ್ಲಾ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಹೋಟೆಲ್‍ಗಳು, ರೆಸಾರ್ಟ್‍ಗಳು, ಹೋಂ ಸ್ಟೇಗಳು ಕಡ್ಡಾಯವಾಗಿ ತೆರೆಯುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನವಿದೆ ಎಂದು ಹೇಳಿದರು.
ಕೃಷಿ ತೋಟಗಾರಿಕೆ ಚಟುವಟಿಕೆಗಳು, ಬ್ಯಾಂಕ್ ಚಟುವಟಿಕೆಗಳು, ಸರಕುಗಳ ಸಾಗಣೆ ಇವುಗಳಿಗೆ ಹಿಂದಿನಂತೆಯೇ ಯಾವುದೇ ನಿರ್ಬಂಧವಿಲ್ಲ. ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳನ್ನು ಕೂಡ ಪ್ರಾರಂಭಿಸಲಾಗುತ್ತದೆ. ಜೊತೆಗೆ ಸಾರ್ವಜನಿಕರಿಗೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಎಲೆಕ್ಟ್ರೀಷಿಯನ್ಸ್, ಪ್ಲಂಬರ್, ಕಾರ್ಪೆಂಟರ್ ಇತರೆ ಸ್ವ ಉದ್ಯೋಗ ಮಾಡುವವರಿಗೆ ಪಾಸ್‍ಗಳನ್ನು ನೀಡಿ, ಸಾರ್ವಜನಿಕರು ಕರೆ ಮಾಡಿದಾಗ ಮಾತ್ರ ಹೋಗಿ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ದಿನೇ ದಿನೇ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆಯು ಕ್ರಮವಹಿಸಿ ಹೆಚ್ಚಿನ ದಂಡ ವಸೂಲಿ ಮಾಡಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1000 ರೂಪಾಯಿ ದಂಡ ಹಾಕಲಾಗುತ್ತದೆ. ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣಗಳು ವರದಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಕೊರೋನಾ ನಿಯಂತ್ರಣಕ್ಕೆ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಿರಂತರ ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದವರನ್ನೂ ಸಹ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆರ್. ಗಿರೀಶ್ ಹೇಳಿದರು.
ಸುಮಾರು 18 ಸಂಘ ಸಂಸ್ಥೆಗಳು ಸ್ವ-ಪ್ರೇರಣೆಯಿಂದ ನಿರಾಶ್ರಿತರಿಗೆ ಆಹಾರ ನೀಡುವ ಕಾರ್ಯವನ್ನು ಉತ್ತಮವಾಗಿ ಮಾಡುತ್ತಿವೆ. ಅಧಿಕಾರಿಗಳ ತಂಡವೂ ಸಹ ಪ್ರತಿದಿನ ನಿರಾಶ್ರಿತ ಕೇಂದ್ರಗಳಿಗೆ ತೆರಳಿ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಮಾಡುವುದು ಹಾಗೂ ಊಟದ ವ್ಯವಸ್ಥೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹೊರ ರಾಜ್ಯಗಳಿಂದ ಬಂದು ನಿರಾಶ್ರಿತರ ಕೇಂದ್ರದಲ್ಲಿರುವ ಸುಮಾರು 7300 ಜನರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೊರೋನಾ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ವಸ್ತುಗಳನ್ನು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದು ಈಗಾಗಲೇ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂದು ಸಕಲೇಶಪುರ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸುತ್ತಿದ್ದು ನಾಳೆ ಹಾಸನ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಇಲ್ಲಿಯವರೆಗೆ ಅಗತ್ಯ ವಸ್ತುಗಳ ಮಾರಾಟ ಅವಧಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
******

Leave a Reply

Your email address will not be published. Required fields are marked *

error: Content is protected !!