Saturday, 14th December 2024

ಪರಿಷತ್ ಸದಸ್ಯ ಅರವಿಂದ ಕುಮಾರ್ ತಾಯಿ ಅಪಘಾತದಲ್ಲಿ ಸಾವು

ಕಲಬುರಗಿ: ರಸ್ತೆ ದಾಟುವಾಗ ಬೈಕ್​​ ಡಿಕ್ಕಿ ಹೊಡೆದ ಪರಿಣಾಮ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಮೃತಪಟ್ಟಿದ್ದಾರೆ.

ಅಪಘಾತ ಎಸೆಗಿರುವ ವ್ಯಕ್ತಿ ಬೈಕ್​ ಸಮೇತ ಪರಾರಿಯಾಗಿದ್ದಾನೆ. ಈ ಘಟನೆ ಸೇಡಂ ರಸ್ತೆಯ ಟೊಯೋಟಾ ಶೋರೂಂ ಹತ್ತಿರ ನಡೆದಿದೆ. ಬೀದರ್ ಜಿಲ್ಲೆ ಹಳ್ಳಿಖೇಡ (ಬಿ) ಗ್ರಾಮದವರಾದ ಸುಮಿತ್ರಾಬಾಯಿ ಶಾಮರಾವ್​ ಅರಳಿ (75) ಮೃತಪಟ್ಟವರು.

ಬೈಕ್ ಗುದ್ದಿದ ರಭಸಕ್ಕೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸ ಲಾಯಿತಾದರೂ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸುಮಿತ್ರಾಬಾಯಿ ಅರಳಿ ಅವರು ಕಲಬುರಗಿ ನಗರದ ಬಡೇಪುರ ಕಾಲೋನಿಯಲ್ಲಿರುವ ಮಗಳು ಶೀಲಾದೇವಿ ಅರಸ ಅವರ ಮನೆಗೆ ಬಂದಿದ್ದರು. ಅಪಘಾತ ಎಸಗಿರುವ ಆರೋಪಿಗಾಗಿ ಪೊಲೀಸರು ತನಿಖೆ ನಡೆಸು ತ್ತಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ಪುತ್ರ, ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರು ತಾಯಿ ವಿಷಯ ತಿಳಿಯು ತ್ತಿದ್ದಂತೆಯೇ ಕಲಬುರಗಿಗೆ ದೌಡಾಯಿಸಿದ್ದಾರೆ. ಹಾಗೆಯೇ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸುಮಿತ್ರಬಾಯಿ ಅರಳಿ ಅವರ ನಿಧನಕ್ಕೆ ರಾಜಕೀಯ ಗಣ್ಯರು, ಮಠಾಧೀಶರು ಸೇರಿದಂತೆ ಮತ್ತಿತರರು ಶೋಕ ವ್ಯಕ್ತಪಡಿಸಿದ್ದಾರೆ.