Friday, 13th December 2024

ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ(79) ಬುಧವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಈ ಮೂಲಕ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಸಂತ ಬಂಗೇರ ಇನ್ನಿಲ್ಲವಾಗಿದ್ದಾರೆ.

ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕೇದೆ ಸುಬ್ಬ ಪೂಜಾರಿ ಹಾಗೂ ದೇವಕಿ ದಂಪತಿಯ ಪುತ್ರರಾಗಿ ವಸಂತ ಬಂಗೇರ ಅವರು ಜನವರಿ 15, 1946ರಲ್ಲಿ ಜನಿಸಿದ್ದರು.

1972ರಲ್ಲೇ ಚುನಾವಣಾ ರಾಜಕೀಯಕ್ಕೆ ಧುಮುಕಿದ ವಸಂತ ಬಂಗೇರ ಅವರು, ಕುವೆಟ್ಟು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ, ಸದಸ್ಯರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1983ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಕಣಕ್ಕೆ ಇಳಿದರು. ಪ್ರಥಮ ಬಾರಿಗೆ ವಿಧಾನ ಸಭೆಯ ಸದಸ್ಯರಾಗಿಯೂ ಪ್ರವೇಶ ಮಾಡಿದ್ದರು. 1989ರಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧಿಸಿದ ಅವರು ಸೋಲು ಕಂಡಿದ್ದರು. 1994ರಲ್ಲಿ ಜೆಡಿಎಸ್ ನಿಂದ ಮತ್ತೆ ಸ್ಪರ್ಧಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೇ ಅವಧಿಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕರಾಗಿಯೂ ಸೇವೆ ಸಲ್ಲಿಸಿದ್ದರು.

2008ರಲ್ಲಿ ಜೆಡಿಎಸ್ ತೊರೆದು, ಕಾಂಗ್ರೆಸ್ ಪಕ್ಷ ಸೇರಿ ನಾಲ್ಕನೇ ಅವಧಿಗೆ ಬೆಳ್ತಂಗಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿ ಅವರು ಸಿದ್ಧರಾಮಯ್ಯ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂದು ವರ್ಗದವರನ್ನು ಅಗಲಿದ್ದಾರೆ. ನಾಳೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ, ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾವೆ.