Sunday, 19th May 2024

ಭದ್ರಾವತಿಯಲ್ಲಿ ಅರ್ಧ ಗಂಟೆಯೊಳಗೆ ಮೂರು ಕಡೆ ದರೋಡೆ

ಶಿವಮೊಗ್ಗ: ಶನಿವಾರ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿ ಮೂರು ಕಡೆ ದರೋಡೆ ಮಾಡಿದ್ದಾರೆ. ಭದ್ರಾವತಿಯಲ್ಲಿ ಅರ್ಧ ಗಂಟೆಯೊಳಗೆ ಮೂವರನ್ನು ಬೆದರಿಸಿ ಹಣ, ಮೊಬೈಲ್, ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಗಮಿಸಿದ ಪರಶುರಾಮ ಎಂಬವರು ಬೆಳಗ್ಗೆ ಭದ್ರಾವತಿ ನಗರಸಭೆ ಬಳಿ ಇಳಿದು ಕೊಂಡಿದ್ದಾರೆ. ಆಸ್ಪತ್ರೆ ಕ್ರಾಸ್ ಬಳಿ ತೆರಳು ತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪರಶುರಾಮರನ್ನು ತಡೆದು ತರೀಕರೆಗೆ ಹೇಗೆ ಹೋಗಬೇಕು ಎಂದು ಕೇಳಿದ್ದಾರೆ. ಬಳಿಕ ಚಾಕು ತೋರಿಸಿ ಒಂದು ಮೊಬೈಲ್, ಜೇಬಿನಲ್ಲಿದ್ದ 10,220 ರೂ. ನಗದು, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ಘಟನೆಯಲ್ಲಿ ಪರಶುರಾಮ ಅವರ ಕೈಗೆ ಚಾಕುವಿನಿಂದ ಗಾಯಗೊಳಿಸಿದ್ದಾರೆ.

ಬಳ್ಳಾರಿಯಿಂದ ಬಸ್‌ನಲ್ಲಿ ಭದ್ರಾವತಿಗೆ ಆಗಮಿಸಿದ್ದ ಉಮಾವತಿ ಎಂಬವರು ಎನ್‌ಎಸ್‌ಟಿ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಬೆಳಗ್ಗೆ ಬೈಕಿನಲ್ಲಿ ಬಂದ ಮೂವರು ಯುವಕರು, ಸಾಗರಕ್ಕೆ ಹೇಗೆ ಹೋಗಬೇಕು ಎಂದು ವಿಚಾರಿಸಿದ್ದಾರೆ. ಬಳಿಕ ಬೈಕ್‌ನಲ್ಲಿದ್ದ ಒಬ್ಬಾತ ಚಾಕು ತೋರಿಸಿ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ಆಗ ಉಮಾವತಿ ಅವರು ಮಾಂಗಲ್ಯ ಸರವನ್ನು ಹಿಡಿದುಕೊಂಡಿದ್ದಾರೆ. ಕುಪಿತರಾದ ಉಳಿದ ಇಬ್ಬರು ಉಮಾವತಿಯನ್ನು ತಳ್ಳಿದ್ದಾರೆ. ಕೆಳಗೆ ಬಿದ್ದ ಉಮಾವತಿಯವರ ಮೊಣಕೈಗೆ ಗಾಯವಾಗಿದೆ. ಮಾಂಗಲ್ಯ ಸರ ತುಂಡಾಗಿದ್ದು, ಅರ್ಧ ಭಾಗವನ್ನು ಕಳ್ಳರು ಕಸಿದುಕೊಂಡು ಹೋಗಿದ್ದಾರೆ.

ರಘು ಎಂಬುವವರು ತರೀಕೆರೆ ರಸ್ತೆಯಲ್ಲಿರುವ ಇ-ಕಾಮ್ ಎಕ್ಸ್‌ಪ್ರೆಸ್ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ  ಲೋಡ್ ಬಂದಿದ್ದರಿಂದ ಕಚೇರಿಗೆ ತೆರಳಿ ಅನ್‌ಲೋಡ್ ಮಾಡಿಸಿ, ರಿಪೋರ್ಟ್ ಬರೆಯುತ್ತಿದ್ದರು. ಆಗ ಬೈಕಿನಲ್ಲಿ ಬಂದ ಯುವಕರ ಪೈಕಿ ಒಬ್ಬಾತ ರಘು ಕಚೇರಿ ಒಳ ಬಂದು ಟೇಬಲ್ ಮೇಲಿದ್ದ ಮೊಬೈಲ್ ಎತ್ತುಕೊಂಡಿದ್ದಾನೆ. ಇದನ್ನು ತಡೆಯಲು ಮುಂದಾದಾಗ ರಘುಗೆ ಚಾಕು ಚುಚ್ಚಲು ಮುಂದಾಗಿದ್ದಾನೆ. ದಾಳಿ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಿದ್ದರಿಂದ ರಘು ಕೈಬೆರಳಿಗೆ ಗಾಯವಾಗಿದೆ. ಜೊತೆಯಲ್ಲಿದ್ದ ಇನ್ನಿಬ್ಬರು ದುಷ್ಕರ್ಮಿಗಳು ಕಚೇರಿ ಬಳಿ ಬಂದು ರಘು ಅವರನ್ನು ಹಿಡಿದುಕೊಂಡು ಮೂರು ಸಾವಿರ ನಗದು ಕಸಿದುಕೊಂಡಿದ್ದಾರೆ. ಶನಿವಾರ ಬೆಳಗಿನ ಜಾವ 4.25ರ ಹೊತ್ತಿಗೆ ಘಟನೆ ಸಂಭವಿಸಿದೆ.

ಭದ್ರಾವತಿಯ ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಈ ಕೃತ್ಯಗಳನ್ನು ಎಸಗಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!