Humaira Asghar Ali: ಹುಮೈರಾ ಅಸ್ಗರ್ ಅಲಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; 9 ತಿಂಗಳ ಹಿಂದೆಯೇ ಮೃತಪಟ್ಟಿದ್ದ ಪಾಕ್ ನಟಿ: ಇನ್ನೂ ಬಯಲಾಗದ ನಿಗೂಢತೆ
ಜು. 8ರಂದು ಕರಾಚಿಯ ಅಪಾರ್ಟ್‌ಮೆಂಟ್‌ನಲ್ಲಿ ಪಾಕ್ ನಟಿ ಹುಮೈರಾ ಅಸ್ಗರ್ ಅಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು 9 ತಿಂಗಳ ಹಿಂದೆಯೇ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ.

ಹುಮೈರಾ ಅಸ್ಗರ್ ಅಲಿ.

ಇಸ್ಲಾಮಾಬಾದ್: ಪಾಕಿಸ್ತಾನದ ಜನಪ್ರಿಯ ನಟಿ ಹುಮೈರಾ ಅಸ್ಗರ್ ಅಲಿ (Humaira Asghar Ali) ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅವರು 9 ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಜು. 8ರಂದು ಕರಾಚಿಯ ಅಪಾರ್ಟ್‌ಮೆಂಟ್‌ನಲ್ಲಿ ಹುಮೈರಾ ಅಸ್ಗರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರಬ್ ನ್ಯೂಸ್ ಪ್ರಕಾರ ಅವರು 2024ರ ಅಕ್ಟೋಬರ್‌ನಲ್ಲಿ ಅಸುನೀಗಿದ್ದಾರೆ. ಅವರು ಒಂಟಿಯಾಗಿ ವಾಸವಾಗಿದ್ದರಿಂದ ಈ ಸುದ್ದಿ ಹೊರ ಬಂದಿರಲಿಲ್ಲ ಎಂದು ಊಹಿಸಲಾಗಿದೆ.
ಪೋಸ್ಟ್ ಮಾರ್ಟಂ ನಡೆಸಿದ ಕರಾಚಿಯ ಶಸ್ತ್ರಚಿಕಿತ್ಸಕ ಡಾ. ಸುಮ್ಮಯ್ಯ ಸೈಯದ್ ಅವರ ಪ್ರಕಾರ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು (Advanced stage of decomposition). ಇದರಿಂದ ಮೃತಪಟ್ಟು ಸುಮಾರು 9 ತಿಂಗಳು ಕಳೆದಿರಬೇಕೆಂದು ಲೆಕ್ಕ ಹಾಕಲಾಗಿದೆ.
"ಕರೆ ವಿವರ ದಾಖಲೆ (CDR) ಪ್ರಕಾರ ಅವರು ಕೊನೆಯ ಬಾರಿ 2024ರ ಅಕ್ಟೋಬರ್‌ನಲ್ಲಿ ಕಾಲ್ ಮಾಡಿದ್ದಾರೆ" ಎಂದು ಉಪ ಪೊಲೀಸ್ ಮಹಾನಿರ್ದೇಶಕ ಸೈಯದ್ ಅಸಾದ್ ರಜಾ ತಿಳಿಸಿದ್ದಾರೆ. ನೆರೆಹೊರೆಯವರು ಕೂಡ ಹುಮೈರಾ ಅಸ್ಗರ್ ಅವರನ್ನು ಕೊನೆಯ ಬಾರಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನೋಡಿದ್ದಾಗಿ ತಿಳಿಸಿದ್ದಾರೆ. ತಮಗೆ ಯಾವುದೇ ವಾಸನೆ ಬಂದಿಲ್ಲ ಎಂದೂ ಹೇಳಿದ್ದಾರೆ. ಅಲ್ಲದೆ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಅವರ ಫ್ಲ್ಯಾಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ʼʼಹುಮೈರಾ ವಾಸವಿದ್ದ ಪಕ್ಕದ ಫ್ಲ್ಯಾಟ್‌ನಲ್ಲಿ ಯಾರೂ ವಾಸವಿರಲಿಲ್ಲ. ಕೆಲವರು ಫೆಬ್ರವರಿಯಲ್ಲಿ ಅಕ್ಕ ಪಕ್ಕದ ಫ್ಲ್ಯಾಟ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಅಷ್ಟರಲ್ಲಾಗಲೇ ದುರ್ವಾಸನೆ ನಿಂತಿತ್ತು. ಇದು ಪ್ರಕರಣ ಬೆಳಕಿಗೆ ಬಾರದಿರಲು ಮುಖ್ಯ ಕಾರಣʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Humaira Asghar Ali: ಪಾಕಿಸ್ತಾನದ ಜನಪ್ರಿಯ ನಟಿ ಹುಮೈರಾ ಅಸ್ಗರ್ ಅಲಿ ಮೃತದೇಹ ಪತ್ತೆ; ಸಾವಿನ ಕಾರಣ ನಿಗೂಢ
ಹುಮೈರಾ ಅವರ ಮೃತದೇಹವನ್ನು ಪಡೆಯಲು ಆರಂಭದಲ್ಲಿ ಮನೆಯವರು ನಿರಾಕರಿಸಿದ್ದರು. ಬಳಿಕ ಹುಮೈರಾ ಅವರ ಸಹೋದರ ನವೀದ್ ಅಸ್ಗರ್ ಆಗಮಿಸಿ ಮೃತದೇಹವನ್ನು ಪಡೆದುಕೊಂಡಿದ್ದಾರೆ. ಉರುತು ಪತ್ತೆಗೆ ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗಿದೆ. ʼʼಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹವನ್ನು ಸ್ವೀಕರಿಸಿದ್ದೇವೆʼʼ ಎಂದು ನವೀದ್ ಹೇಳಿದ್ದಾರೆ. 7 ವರ್ಷಗಳ ಹಿಂದೆ ಲಾಹೋರ್‌ನಿಂದ ಕರಾಚಿಗೆ ಬಂದಿದ್ದ ಹುಮೈರಾ ಬಳಿಕ ಮನೆಯವರೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು ಎಂದೂ ಅವರು ತಿಳಿಸಿದ್ದಾರೆ. ಯಾವುದಾದರೂ ಹಬ್ಬ, ವಿಶೇಷ ಸಂದರ್ಭ ಇದ್ದರೆ ಮಾತ್ರ ಅವರು ಮನೆಗೆ ಭೇಟಿ ನೀಡುತ್ತಿದ್ದರು ಎಂದು ನವೀದ್ ವಿವರಿಸಿದ್ದಾರೆ. ಅಲ್ಲದೆ ಒಂದೂವರೆ ವರ್ಷದಲ್ಲಿ ಒಮ್ಮೆಯೂ ಹುಮೈರಾ ಮನೆಗೆ ತೆರಳಿರಲಿಲ್ಲವಂತೆ. ಈ ಎಲ್ಲ ಕಅರನಕ್ಕೆ ಅವರ ತಂದೆ ಮೃತದೇಹ ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗಿದೆ.
ಹಲವು ಸಮಯಗಳಿಂದ ಬಾಡಿಗೆ ನೀಡಿದ ಹಿನ್ನೆಲೆಯಲ್ಲಿ ಫ್ಲ್ಯಾಟ್ ಮಾಲಕ ದೂರು ನೀಡಿದ ಬಳಿಕ ಪರಿಶೀಲನೆಗಾಗಿ ಅಧಿಕಾರಿಗಳು ತೆರಳಿದಾಗ ಹುಮೈರಾ ಮೃತದೇಹ ಕಂಡು ಬಂದಿತ್ತು.
ಯಾರು ಈ ಹುಮೈರಾ?
32 ವರ್ಷದ ಹುಮೈರಾ ಅಸ್ಗರ್ ಅಲಿ ನಟಿ, ಮಾಡೆಲ್ ಮತ್ತು ರಿಯಾಲಿಟಿ ಶೋ ಕಲಾವಿದೆ. ಲಾಹೋರ್‌ನಲ್ಲಿ ಜನಿಸಿದ ಇವರು ಮಾಡೆಲ್ ಆಗಿ 2013ರಲ್ಲಿ ಬಣ್ಣದ ಲೋಕ್ಕೆ ಕಾಲಿಟ್ಟರು. ಬಳಿಕ ಕಿರುತೆರೆ ಪ್ರವೇಶಿಸಿದರು. ʼಲಾಲಿʼ, ʼಬೆನಾಮ್ʼ, ʼಚಲ್ ದಿಲ್ ಮೇರೆʼ ಮತ್ತು ʼಸಿರಾತ್-ಎ-ಮುಸ್ತಕೀಮ್ʼ ಮುಂತಾದ ಶೋ ಮೂಲಕ ಜನಪ್ರಿಯರಾದರು. 2021ರಲ್ಲಿ ರಿಲೀಸ್ ಆದ ʼಲವ್ ವಾಕ್ಸಿನ್ʼ ಅವರು ನಟಿಸಿದ ಕೊನೆಯ ಚಿತ್ರ.