ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

World Obesity Day: ಇಂದು ವಿಶ್ವ ಬೊಜ್ಜು ದಿನ: ತನು ಕರಗದವರಲ್ಲಿ…!

ವಿಶ್ವದೆಲ್ಲೆಡೆ ಇರುವಂಥ ಸ್ಥೂಲದೇಹಿಗಳ ಅಂಕಿ-ಅಂಶಗಳನ್ನು ನೋಡಿದರೆ, ಹೆಚ್ಚಿನ ಜನರು ವಿಶ್ವದ 8 ದೇಶಗಳಲ್ಲಿ ಪ್ರಮುಖವಾಗಿ ಕಂಡುಬರುತ್ತಾರೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ಆದರೆ ಜಾಗತಿಕ ಸಂಖ್ಯೆಗಳನ್ನು ನೋಡಿದರೆ, ಸುಮಾರು 2 ಶತಕೋಟಿ ಜನ ಬೊಜ್ಜಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳ 4ನೇ ದಿನದಂದು ಆಚರಿಸಲಾಗುವ ವಿಶ್ವ ಬೊಜ್ಜು ದಿನ ಹಿಂದೆಂದಿಗಿಂತ ಮಹತ್ವ ಪಡೆಯುತ್ತಿದೆ.

ಇಂದು ವಿಶ್ವ ಬೊಜ್ಜು ದಿನ; ಏನಿದರ ಮಹತ್ವ? ಏಕೆ ಆಚರಣೆ?

Profile Rakshita Karkera Mar 4, 2025 3:46 PM

ಪ್ರಧಾನಮಂತ್ರಿ ನರೇಂದ್ರ ಮೋದಿಯವರು(PM Narendra Modi) ದೇಶದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯ(World Obesity Day) ಬಗ್ಗೆ ಇತ್ತೀಚೆಗಷ್ಟೇ ಕಳವಳ ವ್ಯಕ್ತಪಡಿಸಿ, ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಪ್ರತಿಪಾದಿಸಿದ್ದರು. ವಿಶ್ವದೆಲ್ಲೆಡೆ ಇರುವಂಥ ಸ್ಥೂಲದೇಹಿಗಳ ಅಂಕಿ-ಅಂಶಗಳನ್ನು ನೋಡಿದರೆ, ಹೆಚ್ಚಿನ ಜನರು ವಿಶ್ವದ 8 ದೇಶಗಳಲ್ಲಿ ಪ್ರಮುಖವಾಗಿ ಕಂಡುಬರುತ್ತಾರೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ಆದರೆ ಜಾಗತಿಕ ಸಂಖ್ಯೆಗಳನ್ನು ನೋಡಿದರೆ, ಸುಮಾರು 2 ಶತಕೋಟಿ ಜನ ಬೊಜ್ಜಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳ 4ನೇ ದಿನದಂದು ಆಚರಿಸಲಾಗುವ ವಿಶ್ವ ಬೊಜ್ಜು ದಿನ ಹಿಂದೆಂದಿಗಿಂತ ಮಹತ್ವ ಪಡೆಯುತ್ತಿದೆ.

ಇತ್ತೀಚೆಗಿನ ಸಮೀಕ್ಷೆಗಳನ್ನು ಗಮನಿಸಿದರೆ, 25 ವರ್ಷಕ್ಕಿಂತ ಮೇಲ್ಪಟ್ಟವರು 2.1 ಶತಕೋಟಿ ಮಂದಿ ಬೊಜ್ಜು ಹೊಂದಿದ್ದರೆ, 5ರಿಂದ 24 ವರ್ಷದ ವಯೋಮಾನದವರಲ್ಲಿ 493 ದಶಲಕ್ಷ ಮಂದಿ ಬೊಜ್ಜು ತುಂಬಿಕೊಂಡಿದ್ದಾರೆ. ಚೀನಾ, ಅಮೆರಿಕ, ಭಾರತ, ಬ್ರೆಜಿಲ್‌ ಸೇರಿದಂತೆ ವಿಶ್ವದ ಎಂಟು ದೇಶಗಳಲ್ಲಿ ಸ್ಥೂಲದೇಹಿಗಳ ಸಂಖ್ಯೆ ಸಾಂದ್ರವಾಗಿದೆ. 1990ರಿಂದ 2021ರವರೆಗಿನ ಅಂಕಿ-ಸಂಖ್ಯೆಗಳು ಸಹ ಬೊಜ್ಜು ತುಂಬಿಸಿಕೊಳ್ಳುತ್ತಿರುವವರ ಸಂಖ್ಯೆ ವಿಶ್ವದೆಲ್ಲೆಡೆಯಲ್ಲಿ ಕ್ಷಿಪ್ರ ಗತಿಯಲ್ಲಿ ಏರುತ್ತಿದೆ ಎಂಬುದನ್ನೇ ಒತ್ತಿ ಹೇಳುತ್ತಿದೆ. ಹೀಗಾಗುವುದಕ್ಕೆ ಕಾರಣಗಳೇನು?

ಆಹಾರ: ಈ ಸಮಸ್ಯೆಗೆ ಪ್ರಧಾನವಾದ ಕಾರಣವೆಂದರೆ ದೇಹದ ಚಯಾಪಚಯದಲ್ಲಿನ ದೋಷ. ಏಕೆ ದೋಷ ಕಾಣಿಸಿಕೊಳ್ಳುತ್ತಿದೆ? ಬಿಸಿಯಾದ, ತಾಜಾ ಆಹಾರವನ್ನು ಮನೆಯಲ್ಲೇ ಮಾಡಿ ತಿನ್ನುವ ಕ್ರಮವನ್ನು ಪಾಲಿಸುವವರೇ ಅಪರೂಪ ಎನ್ನುವಂತಾಗಿದೆ. ಸಿಕ್ಕಿದ್ದನ್ನು, ಸಿಕ್ಕಿದಲ್ಲಿ ತಿಂದು ಓಡುತ್ತೇವೆ. ಅದಕ್ಕೆ ಬಳಸಲಾದ ವಸ್ತುಗಳೇನು, ಎಣ್ಣೆ ಯಾವುದು, ಬಣ್ಣ, ಘಮ ಮುಂತಾದ ರಾಸಾಯನಿಕಗಳನ್ನು ಹಾಕಲಾಗಿದೆಯೆ ಎಂಬಂಥ ವಿಷಯಗಳತ್ತ ಗಮನ ಕೊಡುವ ವ್ಯವಧಾನ ಯಾರಿಗೂ ಇರುವುದಿಲ್ಲ. ಇವೆಲ್ಲ ಕ್ರಮೇಣ ದೇಹದ ಜೀರ್ಣಾಂಗಗಳನ್ನು ಹಾಳು ಮಾಡುತ್ತವೆ. ಅದರಲ್ಲೂ ಫಾಸ್ಟ್‌ ಫುಡ್‌ನಂಥ ತಿನಿಸುಗಳಲ್ಲಿ ಕ್ಯಾಲರಿ ಸಿಕ್ಕಾಪಟ್ಟೆ, ಆದರೆ ಸತ್ವ ಅತಿ ಕಡಿಮೆ. ಇದರ ಫಲವಾಗಿ ಹೆಚ್ಚೆಚ್ಚು ತಿನ್ನಬೇಕೆನಿಸುತ್ತದೆ. ತೂಕ ಹೆಚ್ಚುತ್ತಲೇ ಹೋಗುತ್ತದೆ.

ಜಡ ಜೀವನ: ತಂತ್ರಜ್ಞಾನದ ಮೇಲಿನ ಅವಲಂಬನೆ ಹೆಚ್ಚಿದಂತೆ ಜೀವನಶೈಲಿಯೂ ಜಡವಾಗುತ್ತಿದೆ. ಬೀದಿ ತುದಿಯ ಅಂಗಡಿಯಿಂದ ಹಾಲು ತರಬೇಕೆಂದರೆ ವಾಹನ ಬೇಕು ನಮಗೆ; ನಾವು ನಡೆಯುವವರಲ್ಲ. ಒಂದೆರಡು ಮಹಡಿ ಹತ್ತುವುದಕ್ಕೂ ಲಿಫ್ಟ್‌ ಬೇಕು ನಮಗೆ, ಮೆಟ್ಟಿಲಲ್ಲ. ಕೂತಲ್ಲೇ ಟಿವಿ, ಫ್ಯಾನು, ಎಸಿ, ಎಲ್ಲದಕ್ಕೂ ರಿಮೋಟ್‌ ಇಟ್ಟುಕೊಳ್ಳುತ್ತೇವೆ, ಎದ್ದು ಹೋಗಿ ಗೋಡೆ ಮೇಲಿನ ಬಟನ್‌ ಒತ್ತುವವರಲ್ಲ. ಜೀವನಶೈಲಿಯೇ ಇಷ್ಟು ಜಡವಾಗಿದೆ. ಇದರ ಜೊತೆಗೆ ವ್ಯಾಯಾಮವೂ ನಾಸ್ತಿ, ಗುಜರಿ ತಿಂಡಿಗಳೂ ಜಾಸ್ತಿ ಎಂದಾದರೆ ಮೈಯ ಮೂಲೆ-ಮೂಲೆಗಳಲ್ಲಿ ಕೊಬ್ಬು ಸೇರದೆ ಇನ್ನೇನಾಗುವುದಕ್ಕೆ ಸಾಧ್ಯ?

ವಂಶವಾಹಿಗಳು: ಕೆಲವೊಮ್ಮೆ ಆನುವಂಶಿಕವಾಗಿ ಸ್ಥೂಲ ಶರೀರಗಳು ಬರಬಹುದು. ಇದಕ್ಕಾದರೂ ಕಟ್ಟುನಿಟ್ಟಾದ ಆಹಾರ ಮತ್ತು ವ್ಯಾಯಾಮಗಳನ್ನು ಅನುಸರಿಸಿದರೆ, ಪರಿಸ್ಥಿತಿ ಕೈ ಮೀರದಂತೆ ಕಾಪಾಡಿಕೊಳ್ಳಬಹುದು. ಒಂದೊಮ್ಮೆ ಜೀವನಶೈಲಿಯ ಬಗ್ಗೆ ಗಮನ ನೀಡದಿದ್ದರೆ ಕಾದಿರುವ ಅನಾರೋಗ್ಯಗಳನ್ನು ತಡೆಯಲು ನಿಜಕ್ಕೂ ಕಷ್ಟವಾಗುತ್ತದೆ.

ಈ ಸುದ್ದಿಯನ್ನೂ ಓದಿ: Health Tips: ಜೀರಿಗೆ ನೀರಿಗೆ, ನಿಂಬೆ ರಸ ಬೆರೆಸಿ ಕುಡಿದ್ರೆ ಎಷ್ಟೆಲ್ಲಾ ಆರೋಗ್ಯ ಲಾಭ ಇದೆ ಗೊತ್ತಾ?

ಮಾಹಿತಿಯಿಲ್ಲ: ಹೆಚ್ಚಿನವರಲ್ಲಿ ಪೌಷ್ಟಿಕಾಂಶದ ಬಗೆಗಿನ ಅರಿವಿನ ಕೊರತೆಯಿದೆ. ಸಂಸ್ಕರಿತ ಆಹಾರವೆಂದರೇನು ಎನ್ನುವ ಬಗ್ಗೆಯೇ ಸರಿಯಾದ ಜ್ಞಾನ ಇರುವುದಿಲ್ಲ. ಮನೆಯಲ್ಲಿ ಮಾಡಿದ್ದಾದರೆ ಏನನ್ನಾದರೂ ತಿನ್ನಬಹುದು ಎನ್ನುವ ತೀರ್ಮಾನಕ್ಕೆ ಬಂದಿರುತ್ತಾರೆ. ಫ್ರೆಂಚ್‌ ಫ್ರೈಸ್‌ ಮನೆಯಲ್ಲೇ ಮಾಡಿದ್ದಾದರೂ ಆರೋಗ್ಯಕ್ಕೆ ಹಾನಿಯೆ, ಇದರಲ್ಲಿ ವ್ಯತ್ಯಾಸವಿಲ್ಲ. ಇನ್ನು ಕೆಲವರಿಗೆ ಬೊಜ್ಜುಭರಿತ ಶರೀರದಿಂದ ಆಗುವ ಹಾನಿಯ ಬಗ್ಗೆಯೇ ಮಾಹಿತಿ ಇರುವುದಿಲ್ಲ.

ನಗರೀಕರಣ: ಎಲ್ಲರಿಗೂ ಯೋಗ, ಪಿಲಾಟೆ, ಜಿಮ್‌ ಎಂದೆಲ್ಲಾ ಕ್ಲಾಸುಗಳಿಗೆ ಹೋಗುವ ಸಾಧ್ಯತೆ ಇರುವುದಿಲ್ಲ. ಮನೆಯಲ್ಲೇ ಒಂದಿಷ್ಟು ವ್ಯಾಯಾಮ ಮಾಡಿಕೊಳ್ಳೋಣವೆಂದರೆ, ಇಂದಿನ ನಗರಗಳ ಕಿಷ್ಕಿಂಧೆಯಂಥ ಮನೆಗಳಲ್ಲಿ ಅಷ್ಟೊಂದು ಜಾಗವಿರುವುದು ಕಡಿಮೆ. ಇರುವುದರಲ್ಲಿಯೇ ಮನೆಯ ಸುತ್ತಮುತ್ತ ವಾಕಿಂಗ್‌ ಹೋಗೋಣವೆಂದರೆ, ಕಾಂಕ್ರೀಟ್‌ ಕಾಡುಗಳಲ್ಲಿ ಹತ್ತಿರದಲ್ಲಿ ಉದ್ಯಾನಗಳು ಇರುವುದಿಲ್ಲ; ರಸ್ತೆಯ ಮೇಲೆ ಜೀವಭಯ ಹುಟ್ಟಿಸುವ ಟ್ರಾಫಿಕ್.‌ ದೇಹಕ್ಕೆ ಚಟುವಟಿಕೆ ಎಲ್ಲಿಂದ ಬರಬೇಕು?