ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Actor Karthi: ಮೈಸೂರಿನಲ್ಲಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ ತಮಿಳು ನಟ ಕಾರ್ತಿಗೆ ಅಪಘಾತ

ಕಾಲಿವುಡ್‌ ಸೂಪರ್‌ ಸ್ಟಾರ್‌ ಕಾರ್ತಿ ಸದ್ಯ ಮೈಸೂರಿನಲ್ಲಿ ಬಹು ನಿರೀಕ್ಷಿತ ʼಸರ್ದಾರ್‌ 2ʼ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಚಿತ್ರದ ಪ್ರಮುಖ ಭಾಗವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಾರ್ತಿಗೆ ಅಪಘಾತ ಸಂಭವಿಸಿದ್ದು, ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ.

ಮೈಸೂರಿನಲ್ಲಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ ತಮಿಳು ನಟ ಕಾರ್ತಿಗೆ ಗಾಯ

ಕಾರ್ತಿ.

Profile Ramesh B Mar 4, 2025 3:51 PM

ಮೈಸೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಕಾರ್ತಿ (Actor Karthi) ಸದ್ಯ ಬಹು ನಿರೀಕ್ಷಿತ ʼಸರ್ದಾರ್‌ 2ʼ (Sardar 2) ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಜನಪ್ರಿಯ ನಿರ್ದೇಶಕ ಪಿ.ಎಸ್‌.ಮಿತ್ರನ್‌ (PS Mithran) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಆಶಿಕಾ ರಂಗನಾಥ್‌ (Ashika Ranganath) ನಟಿಸುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಈ ಮಧ್ಯೆ ಚಿತ್ರದ ಪ್ರಮುಖ ಭಾಗವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕಾರ್ತಿಗೆ ಅಪಘಾತ ಸಂಭವಿಸಿದ್ದು, ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ವೈದ್ಯರು 1 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಕಾರ್ತಿಗೆ ಸೂಚಿಸಿದ್ದಾರೆ. ಇದೀಗ ಚಿತ್ರತಂಡ ಶೂಟಿಂಗ್‌ ಅನ್ನು ಅರ್ಧಕ್ಕೆ ನಿಲ್ಲಿಸಿ ಚೆನ್ನೈಗೆ ಹಿಂತಿರುಗಲು ಸಿದ್ಧತೆ ನಡೆಸುತ್ತಿದೆ. ಕಾರ್ತಿ ಸಂಪೂರ್ಣ ಚೇತರಿಸಿಕೊಂಡ ಬಳಿಕ ಶೂಟಿಂಗ್‌ ಪುನರಾರಂಭಗೊಳ್ಳಲಿದೆ ಎನ್ನಲಾಗಿದೆ. ಅಪಘಾತದ ಬಗ್ಗೆ ಕಾರ್ತಿಯಾಗಲೀ, ಚಿತ್ರತಂಡವಾಗಲೀ ಇದುವರೆಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.



ಇತ್ತೀಚೆಗೆ ಚೆನ್ನೈಯ ಸ್ಟುಡಿಯೋವೊಂದರಲ್ಲಿ ʼಸರ್ದಾರ್‌ 2ʼ ಚಿತ್ರದ ಕ್ಲೈಮ್ಯಾಕ್ಸ್‌ ಭಾಗದ ಶೂಟಿಂಗ್‌ ಪೂರ್ಣಗೊಂಡಿತ್ತು. ಬಳಿಕ ಮೈಸೂರಿನಲ್ಲಿ ಬೀಡುಬಿಟ್ಟ ಸಿನಿಮಾ ತಂಡ ಕಾರ್ತಿ ಮತ್ತು ಎಸ್‌.ಜೆ.ಸೂರ್ಯ ಅವರನ್ನೊಳಗೊಂಡ ಬಹುಮುಖ್ಯ ಭಾಗದ ಚಿತ್ರೀಕರಣ ನಡೆಸುತ್ತಿತ್ತು. ʼಆವೇಶಂʼ ಖ್ಯಾತಿಯ ಚೇತನ್‌ ರಾಂಶಿ ಡಿʼಸೋಜಾ ಆ್ಯಕ್ಷನ್‌ ದೃಶ್ಯಗಳ ಶೂಟಿಂಗ್‌ ನಡೆಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

2022ರಲ್ಲಿ ತೆರೆಕಂಡು ಗಮನ ಸೆಳೆದ ʼಸರ್ದಾರ್‌ʼ ಚಿತ್ರದ ಸೀಕ್ವೆಲ್‌ ಇದು. ಮೊದಲ ಭಾಗದಂತೆ ಇದರಲ್ಲಿಯೂ ಕಾರ್ತಿ ದ್ವಿಪಾತ್ರ ನಿರ್ವಹಿಸುತ್ತಿದ್ದಾರೆ. 2 ವಿವಿಧ ಕಾಲಘಟ್ಟಗಳಲ್ಲಿ ಕಥೆ ನಡೆಯಲಿದೆ. 2024ರಲ್ಲಿ ಆರಂಭವಾದ ಈ ಚಿತ್ರವನ್ನು ಸದ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಭಾಗದಲ್ಲಿ ನಾಯಕಿಯಾಗಿದ್ದ ರಜಿಶಾ ವಿಜಯನ್‌ ಪಾತ್ರ ಇಲ್ಲೂ ಮುಂದುವರಿದಿದ್ದು, ಮತ್ತೊಬ್ಬ ನಾಯಕಿಯಾಗಿ ಕನ್ನಡತಿ ಆಶಿಕಾ ರಂಗನಾಥ್‌ ಅಭಿನಯಿಸುತ್ತಿದ್ದಾರೆ. ಎಸ್‌.ಜೆ.ಸೂರ್ಯ, ಮಾಳವಿಕಾ ಮೋಹನನ್‌ ಕೂಡ ತಾರಾಗಣದಲ್ಲಿದ್ದಾರೆ. ಈಗಾಗಲೇ ಶೇ. 80ರಷ್ಟು ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕಾರ್ತಿ ಸಂಪೂರ್ಣ ಚೇತರಿಸಿಕೊಂಡ ಬಳಿಕ ಶೂಟಿಂಗ್‌ ಮತ್ತೆ ಆರಂಭಗೊಳ್ಳುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Dr. Rajkumar: ಕೆಟ್ಟ ಮೇಲೆ ಬುದ್ಧಿ ಬಂತು; ಡಾ. ರಾಜ್‌ ಕುಮಾರ್‌ ಧ್ವನಿಗೆ ವ್ಯಂಗ್ಯವಾಡಿ ಕೊನೆಗೆ ಕ್ಷಮೆ ಕೋರಿದ ಗಾಯಕ

ಸದ್ಯ ಕಾರ್ತಿ ʼಸರ್ದಾರ್‌ 2ʼ ಚಿತ್ರದ ಜತೆಗೆ ʼವಾ ವಾದಿಯಾರ್‌ʼ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ನಳನ್‌ ಕುಮಾರಸ್ವಾಮಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸುತಿದ್ದಾರೆ. ಸತ್ಯರಾಜ್‌, ಆನಂದರಾಜ್‌, ರಾಜಕಿರಣ್‌, ಶಿಲ್ಪಾ ಮಂಜುನಾಥ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೂ ಕೂಡ ಈ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಕಳೆದ ವರ್ಷ ತೆರೆಕಂಡ ಕಾರ್ತಿ-ಅರವಿಂದ್‌ ಸ್ವಾಮಿ ಅಭಿನಯದ ‘ಮೆಯ್ಯಳಗನ್’ ಸಿನಿಮಾ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಾಡಿತ್ತು. ಇವರಿಬ್ಬರ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದಲ್ಲದೆ ಭಾಷೆಯ ಗಡಿಯನ್ನೂ ಮೀರಿ ಎಲ್ಲರ ಗಮನ ಸೆಳೆದಿತ್ತು.