ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

D. Imman: ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರ ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼಗೆ ಸಂಗೀತ ನಿರ್ದೇಶಕರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಿ.ಇಮ್ಮಾನ್‌ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ಇಮ್ಮಾನ್‌ ಸಂಗೀತ

ಡಿ.ಇಮ್ಮಾನ್‌.

Profile Ramesh B Mar 4, 2025 2:05 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ (Tharun Sudhir) ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ, ನೈಜ ಘಟನೆ ಆಧಾರಿತ ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼ ಚಿತ್ರಕ್ಕೆ ಈಗ ಸಂಗೀತ ನಿರ್ದೇಶಕರು ಸಿಕ್ಕಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ (D. Imman) ತರುಣ್ ನಿರ್ಮಾಣದ ಈ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ.

ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಡಿ.ಇಮ್ಮಾನ್ ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2', ಪುನೀತ್ ಅಭಿನಯದ ʼನಟಸಾರ್ವಭೌಮʼ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಸಪ್ತ ಸ್ವರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ರಕ್ಷಿತಾ ಪ್ರೇಮ್ ಸಹೋದರ ಎಂಟ್ರಿ

ಚಾಮರಾಜನಗರದ ಮೂಲದ ಈ ಪ್ರೇಮ ಕಥೆಯಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼ ಎನ್ನುವ ಟ್ಯಾಗ್‌ ಲೈನ್‌ ಇರುವ ಹೆಸರಿಡದ ಚಿತ್ರಕ್ಕೆ ಮಹಾನಟಿ ಖ್ಯಾತಿಯ ಪ್ರಿಯಾಂಕ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಚಿತ್ರವನ್ನು ತರುಣ್ ಅವರು ಅಟ್ಲಾಂಟಾ ನಾಗೇಂದ್ರ ಎಂಬವರ ಜತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಇರಲಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.

ಈ ಸುದ್ದಿಯನ್ನೂ ಓದಿ: Seetha Payana Movie: ಅರ್ಜುನ್‌ ಸರ್ಜಾ ನಿರ್ದೇಶನದ ʼಸೀತಾ ಪಯಣʼ ಚಿತ್ರಕ್ಕೆ ಪುತ್ರಿ ಐಶ್ವರ್ಯಾ ನಾಯಕಿ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ

ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿರುವ ಈ ಚಿತ್ರಕ್ಕೆ ಸಂಗೀತ ನೀಡಲು ಡಿ.ಇಮ್ಮಾನ್ ಆಗಮಿಸುತ್ತಿರುವುದು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇವರು 2019ರಲ್ಲಿ ತೆರೆಕಂಡ ʼವಿಶ್ವಾಸಂʼ ತಮಿಳು ಚಿತ್ರದ ಸಂಗೀತಕ್ಕಾಗಿ ಪ್ರತಿಷ್ಠಿತ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಶಿವ ನಿರ್ದೇಶನದ ಈ ಚಿತ್ರದಲ್ಲಿ ಅಜಿತ್‌, ನಯನತಾರಾ ನಟಿಸಿದ್ದರು. ಜತೆಗೆ ಈ ಚಿತ್ರದಲ್ಲಿ ಜಗಪತಿ ಬಾಬು, ವಿವೇಕ್‌ ಯೋಗಿ ಬಾಬು ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಕ್ಸ್‌ ಆಫೀಸ್‌ನಲ್ಲಿ 180 ಕೋಟಿ ರೂ. ದೋಚಿಕೊಂಡಿದ್ದ ಈ ಸಿನಿಮಾದ ಸಂಗೀತವೂ ಸಿನಿಪ್ರಿಯರ ಗಮನ ಸೆಳದಿತ್ತು. ಸದ್ಯ ಇಮ್ಮಾನ್‌ ಹಲವು ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ. ಕನ್ನಡದ ಜತೆಗೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಅವರು ಸಂಗೀತ ನಿರ್ದೇಶನದ ಜತೆಗೆ ಹಾಡಿಗೆ ‍ಧ್ವನಿಯನ್ನೂ ನೀಡುತ್ತಾರೆ. ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನೂ ನೀಡುತ್ತಾರೆ. ಈ ಹಿಂದೆ ಅವರು ಸಂಗೀತ ನೀಡಿದ ಕನ್ನಡದ ʼಕೋಟಿಗೊಬ್ಬ-2', ʼನಟಸಾರ್ವಭೌಮʼ ಚಿತ್ರಗಳ ಹಾಡುಗಳು ಗಮನ ಸೆಳೆದು ಹಿಟ್‌ ಲಿಸ್ಟ್‌ ಸೇರಿದ್ದವು. ಇದೀಗ ಮತ್ತೆ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿರುವುದರಿಂದ ಮತ್ತೆ ನಿರೀಕ್ಷೆ ಮೂಡಿಸಿದೆ.