Skin Care: ಕಾಂತಿಯುಕ್ತ ತ್ವಚೆ ಬೇಕೆ? ಈ ಪಾನೀಯ ಬಳಸಿ
ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಹೆಚ್ಚು ಹೊಳಪುಯುಕ್ತವಾಗಿಸಲು ಡಿಟಾಕ್ಸ್ ನೀರು ಬಳಕೆ ಮಾಡುವುದು ಒಳ್ಳೆಯದು. ಡಿಟಾಕ್ಸ್ ನೀರನ್ನು ತ್ವಚೆಯ ಆರೈಕೆಗೆ ಬಳಸುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಹೊಳೆಯುವ ತ್ವಚೆಯನ್ನು ಪಡೆಯಬೇಕು ಎಂದುಕೊಂಡಿರುವವರು ಡಿಟಾಕ್ಸ್ ನೀರನ್ನು ನಿತ್ಯ ಸೇವಿಸಬೇಕು.

ಸಾಂದರ್ಭಿಕ ಚಿತ್ರ.

ನವದೆಹಲಿ: ತಮ್ಮ ಮುಖ ಹೆಚ್ಚು ಗ್ಲೋ ಆಗಿ ಕಾಣಬೇಕು ಎಂದು ಬಹುತೇಕ ಮಹಿಳೆಯರು ನಾನಾ ರೀತಿಯ ಕ್ರೀಂ, ಫೇಸ್‌ವಾಶ್ ಎಲ್ಲವನ್ನು ಬಳಸುತ್ತಾರೆ. ಆದರೆ ಅದೆಷ್ಟು ಮೇಕಪ್ ಮಾಡಿದರೂ ಯಾವುದೂ ಕೂಡ ನೈಸರ್ಗಿಕ ವಿಧಾನದಷ್ಟು ಪರಿಣಾಮಕಾರಿ ಆಗಲಾರದು. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಹೆಚ್ಚು ಹೊಳಪುಯುಕ್ತವಾಗಿಸಲು ಡಿಟಾಕ್ಸ್ ನೀರು ಬಳಕೆ ಮಾಡುವುದು ಒಳ್ಳೆಯದು. ಡಿಟಾಕ್ಸ್ ನೀರನ್ನು ತ್ವಚೆಯ ಆರೈಕೆಗೆ ಬಳಸುವುದರಿಂದ ಚರ್ಮ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಪಶಮನ ಆಗುತ್ತದೆ (Skin Care Tips). ಹಾಗಾಗಿ ಹೊಳೆಯುವ ತ್ವಚೆಯನ್ನು ಪಡೆಯಬೇಕು ಎಂದುಕೊಂಡವರು ಡಿಟಾಕ್ಸ್ ನೀರನ್ನು ನಿತ್ಯ ಸೇವಿಸಿದರೆ ಸುಂದರ, ಕೋಮಲ ತ್ವಚೆ ನಿಮ್ಮದಾಗುತ್ತದೆ.
ಡಿಟಾಕ್ಸ್ ನೀರು ಎಂದರೇನು?
ಡಿಟಾಕ್ಸ್ ನೀರನ್ನು ತಾಜಾ ಹಣ್ಣು , ತರಕಾರಿ ಹಾಗೂ ಗಿಡಮೂಲಿಕೆಯಿಂದ ತಯಾರು ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಜನರು ಫ್ರುಟ್ ಸಲಾಡ್ ವಾಟರ್ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ. ಡಿಟಾಕ್ಸ್ ನೀರಿನ ಸೇವನೆ ತೂಕ ಕಡಿಮೆ ಆಗುವ ಜತೆಗೆ ದೇಹದ ಆರೋಗ್ಯದ ಮೇಲೆ ಅನೇಕ ಉತ್ತಮ ಪರಿಣಾಮ ಬೀರುತ್ತದೆ. ಅದರಂತೆ ಚರ್ಮದ ಆರೈಕೆಗೂ ಡಿಟಾಕ್ಸ್ ನೀರು ಬಹಳ ಪ್ರಭಾವ ಬೀರುವ ಒಂದು ಉಪಯುಕ್ತ ಕ್ರಮ. ಡಿಟಾಕ್ಸ್ ನೀರಿನಲ್ಲಿಯೂ ಅನೇಕ ಪ್ರಕಾರದಲ್ಲಿದ್ದು, ನಿಮ್ಮ ತ್ವಚೆ ಯಾವ ತರಹದ್ದು ಎಂಬುದರ ಮೇಲೆ ಬಳಕೆ ಮಾಡಬಹುದು.
ಯಾವೆಲ್ಲ ಡಿಟಾಕ್ಸ್ ನೀರನ್ನು ಬಳಸಬಹುದು?
*ಚರ್ಮದ ಆರೈಕೆ ಮಾಡುವವರಿಗೆ ನಿಂಬೆ ಮತ್ತು ಸೌತೆಕಾಯಿ ಡಿಟಾಕ್ಸ್ ನೀರು ಅತ್ಯುತ್ತಮ ಔಷಧ ಎನಿಸಿಕೊಳ್ಳಲಿದೆ. ಒಂದು ಲೀಟರ್ ನೀರಿಗೆ ಒಂದು ಸೌತೆಕಾಯಿ ಮತ್ತು ಒಂದು ಲಿಂಬೆ ಹಣ್ಣು ತುಂಡು ಮಾಡಿ ಸೇರಿಸಿ ಅದನ್ನು ಒಂದು ರಾತ್ರಿ ಹಾಗೆ ಬಿಡಬೇಕು. ಮರುದಿನ ಇದರ ಸೇವನೆ ಮಾಡಬೇಕು. ಇದರಿಂದ ಒಣತ್ವಚೆ ಸಮಸ್ಯೆ ನಿವಾರಣೆಯಾಗುತ್ತದೆ.
*ಒಂದು ಲೀಟರ್ ನೀರಿಗೆ ಒಂದು ತುಂಡು ಶುಂಠಿ ಮತ್ತು 5-6 ಪುದಿನ ಎಲೆ ಸೇರಿಸಿ 8 ಗಂಟೆಗಳ ಕಾಲ ನೆನೆಸಿಟ್ಟರೆ ಅಥವಾ ಫ್ರಿಡ್ಜ್‌ನಲ್ಲಿ ಇಟ್ಟು ಸೇವಿಸಿದರೆ ಚರ್ಮದ ಅಲರ್ಜಿ ಸಮಸ್ಯೆ ನಿವಾರಣೆಯಾಗುತ್ತದೆ.
*ನೀರಿಗೆ 5 ತುಳಸಿ ಎಲೆ, ಕತ್ತರಿಸಿದ್ದ ಸ್ಟ್ರಾಬೆರಿ, 2 ಕತ್ತರಿಸಿದ ಕಿವಿ ಹಣ್ಣು, ಮಿಶ್ರ ಮಾಡಿ 8 ಗಂಟೆ ಬಿಟ್ಟು ಸೇವಿಸುವುದರಿಂದ ತ್ವಚೆಯಲ್ಲಿ ಜಿಡ್ದು , ಒಣ ತ್ವಚೆ ಸಮಸ್ಯೆ ಬರಲಾರದು.
*ಒಂದು ಲೀಟರ್ ನೀರಿಗೆ ಒಂದು ಕಪ್ ಕತ್ತರಿಸಿದ ನೇರಳೆ ಹಣ್ಣು, ಒಣಗಿದ ಲ್ಯಾವೆಂಡರ್ ಪುಡಿ ಬೆರೆಸಿ ಕೆಲ ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಬಳಿಕ ಸೇವಿಸಿದರೆ ಚರ್ಮದಲ್ಲಿನ ಎಣ್ಣೆ ಪಸೆ ಸಮಸ್ಯೆ ನಿವಾರಣೆ ಮಾಡಬಹುದು.
*ಒಂದು ಕಪ್ ಕತ್ತರಿಸಿದ ಆ್ಯಪಲ್ ಜತೆ ಒಂದು ದಾಲ್ಚಿನ್ನಿ ಸೇರಿಸಿ ಒಂದು ಲೀಟರ್ ನೀರಿಗೆ ಬೆರೆಸಿ ಸೇವಿಸಿದರೆ ಚರ್ಮದ ತುರಿಕೆ, ಕೆಂಪು ಕಲೆ ಇತ್ಯಾದಿ ಸಮಸ್ಯೆ ನಿವಾರಿಸಬಹುದು.
*ಒಂದು ಕಪ್ ಕಲ್ಲಂಗಡಿ ಹಣ್ಣು, 5-6 ಪುದಿನ ಎಲೆ, ಒಂದು ಲಿಂಬೆ ಹಣ್ಣು ತುಂಡರಿಸಿ ಲೀಟರ್ ನೀರಿಗೆ ಬೆರೆಸಿ 7-8 ಗಂಟೆ ಬಳಿಕ ಸೇವಿಸಿದರೆ ತ್ವಚೆಯಲ್ಲಿ ಅತಿಯಾಗಿ ಬೆವರುವಿಕೆ ಪ್ರಮಾಣ ಕಡಿಮೆಯಾಗಿ, ಅಲರ್ಜಿ, ರಾಷ್ ಸಮಸ್ಯೆ ಬರಲಾರದು.
*ಒಂದು ಕಪ್ ಕತ್ತರಿಸಿದ ದ್ರಾಕ್ಷಿ ರಸಕ್ಕೆ ಒಂದು ಚಿಗುರು ರೋಸ್ಮರಿ ಬಳಸಿ ಒಂದು ಲೀಟರ್ ನೀರಿನಲ್ಲಿ ನೆನೆಹಾಕಿ ಕೆಲ ಗಂಟೆಗಳ ಬಳಿಕ ಸೋಸಿ ಕುಡಿಯುವುದರಿಂದ ಮೊಡವೆ, ಅಲರ್ಜಿ, ಸುಕ್ಕಾಗುವ ಸಮಸ್ಯೆ ನಿವಾರಣೆಯಾಗುತ್ತದೆ.
ಉಪಯೋಗ ಏನು?
*ಡಿಟಾಕ್ಸ್ ನೀರನ್ನು ಸೇವಿಸುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.
*ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಡಿಟಾಕ್ಸ್ ನೀರು ಬಹಳ ಸಹಕಾರಿ.
*ಜೀರ್ಣಕ್ರಿಯೆ ಸುಧಾರಿಸುವ ನೆಲೆಯಲ್ಲಿ ಕೂಡ ಡಿಟಾಕ್ಸ್ ವಾಟರ್ ಬಹಳ ಉಪಯುಕ್ತ.
*ಡಿಟಾಕ್ಸ್ ನೀರಿನಲ್ಲಿ ಜೀವಸತ್ವ ಹಾಗೂ ಖನಿಜಾಂಶಗಳು ಹೇರಳವಾಗಿದ್ದು ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ.
*ಡಿಟಾಕ್ಸ್ ನೀರಿನ ಸೇವನೆಯಿಂದ ಉರಿಯೂತ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನು ಓದಿ: Health Tips: ಹೊರಾಂಗಣ vs ಒಳಾಂಗಣ: ನಡಿಗೆಗೆ ಯಾವುದು ಸೂಕ್ತ?
ಈ ವಿಚಾರ ನೆನಪಿಡಿ:
ಡಿಟಾಕ್ಸ್ ನೀರಿನ ಸೇವನೆ ಕೆಲ ಸಂದರ್ಭದಲ್ಲಿ ಅಜೀರ್ಣ, ಹೊಟ್ಟೆ ಉರಿ ಸಮಸ್ಯೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು ಕೆಲವರು ಎರಡು ದಿನ ಇಟ್ಟು ಅದೇ ನೀರನ್ನು ಸೇವಿಸುತ್ತಾರೆ. ಆದರೆ ಇದರಿಂದ ಹೊಟ್ಟೆ ಹಾಳಾಗಬಹುದು. ಅನೇಕ ಸಂದರ್ಭದಲ್ಲಿ ಕೆಟ್ಟು ಹೋದ ಡಿಟಾಕ್ಸ್ ನೀರು ಕುಡಿದು ವಾಂತಿ ಭೇದಿ ಆಗುವ ಸಾಧ್ಯತೆ ಇದೆ. ಹಾಗಾಗಿ ಡಿಟಾಕ್ಸ್ ನೀರಿನ ಸೇವನೆಯನ್ನು ಹವ್ಯಾಸವಾಗಿ ರೂಢಿಸಿಕೊಳ್ಳುವ ಮೊದಲು ತಜ್ಞರ ಹಾಗೂ ವೈದ್ಯಕೀಯ ಸಲಹೆ ಪಡೆದು ಅನುಸರಿಸುವುದು ಉತ್ತಮ ಕ್ರಮ.