40% Commission: 40% ಕಮಿಷನ್ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ತೀರ್ಮಾನ
40% Commission: ನ್ಯಾ. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಇತ್ತೀಚೆಗೆ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದೆ. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ತನಿಖೆಗಾಗಿ ಎಸ್‌ಐಟಿ ರಚಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.


ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ 40% ಕಮಿಷನ್ (40% Commission) ಆರೋಪದ ಬಗ್ಗೆ ತನಿಖೆಗೆ ಎಸ್‌ಐಟಿ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. 40% ಕಮಿಷನ್ ಪ್ರಕರಣ ತನಿಖೆಗೆ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಇತ್ತೀಚೆಗೆ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನು ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ವರದಿ ಆಧರಿಸಿ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಕುರಿತ ವಿಚಾರಣಾ ಆಯೋಗದ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆಯೋಗದ ವರದಿ ಆಧರಿಸಿ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೆ ಸರ್ಕಾರ ನಿರ್ಧಾರ ಮಾಡಿದೆ.

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರು, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ನೇತೃತ್ವದ ವಿಚಾರಣಾ ಆಯೋಗದ ವರದಿಯನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದ್ದು, ಎರಡು ತಿಂಗಳೊಳಗಾಗಿ ತನ್ನ ವರದಿಯನ್ನು ನೀಡಲು ಸೂಚಿಸುವುದಾಗಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ನ್ಯಾ. ಎಚ್.ಎನ್. ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗ ತನ್ನ ವರದಿಯನ್ನು ಸಲ್ಲಿಸಿದ್ದು, ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಚಾರಣಾ ಆಯೋಗ ದೂರುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. 3 ಲಕ್ಷ ಕಾಮಗಾರಿಗಳಲ್ಲಿ ಪೈಕಿ ಆಯೋಗವು 1729 ಕಾಮಗಾರಿಗಳ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸಲಾಗಿದೆ. ಕೆಲವುಗಳಲ್ಲಿ ಕಾಮಗಾರಿಗಳಲ್ಲಿ ಅನುದಾನಕ್ಕಿಂತ ಹೆಚ್ಚು ಕಾಮಗಾರಿಯನ್ನು ನೀಡಲಾಗಿದೆ. ಕೆಲವುಗಳಲ್ಲಿ ಅಲ್ಪ ಅನುದಾನ ಬಿಡುಗಡೆಯಾಗಿದ್ದರೂ, ಅದಕ್ಕೂ ಮೀರಿದ ಪಾವತಿಯಾಗಿದೆ. ಕೆಲವುಗಳಲ್ಲಿ ಕಾಮಗಾರಿ ನಿರ್ವಹಿಸಿರುವುದರ ಬಗ್ಗೆ ಸಂಶಯವಿದೆ. ಕೆಲವುಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಬೇರೆಯವರಿಂದ ಹಸ್ತಕ್ಷೇಪವಾಗಿರುವುದನ್ನು ಆಯೋಗವು ಮಾಹಿತಿ ತಿಳಿಸಿದೆ.
ಸಚಿವ ಸಂಪುಟ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ವಿಚಾರಣಾ ಆಯೋಗದ ವರದಿಯ ಮೇಲೆ ಎಸ್ ಐ ಟಿಯನ್ನು ರಚಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಅಗತ್ಯವಿರುವ ಪರಿಣಿತರನ್ನು ನಿಯೋಜಿಸಿ, ಎರಡು ತಿಂಗಳಲ್ಲಿ ವರದಿಯನ್ನು ಸಲ್ಲಿಸಲು ಎಸ್ ಐ ಟಿಗೆ ಸೂಚನೆ ನೀಡಲು ಸಚಿವಸಂಪುಟ ತೀರ್ಮಾನ ಕೈಗೊಂಡಿದ್ದು ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಅಪೂರ್ಣ ಮಾಹಿತಿಗಳಿರುವ ಬಗ್ಗೆ ವಿಚಾರಣಾ ಆಯೋಗ ತಿಳಿಸಿರುವುದರಿಂದ, ಸಂಬಂಧಪಟ್ಟ ಇಲಾಖೆಯವರೂ ಎಸ್ ಐ ಟಿ ಯವರು ಈ ಬಗ್ಗೆ ಕೇಳುವ ಮಾಹಿತಿಗಳನ್ನು ಒದಗಿಸಲು ಸೂಚನೆಯನ್ನು ನೀಡಲಾಗಿದೆ ಎಂದರು.
40% ಕಮೀಷನ್‌ನ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ವ್ಯವಹಾರ ನಡೆದಿರುವ ಬಗ್ಗೆ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ದೂರು ಬಂದಿರುವ ಇಲಾಖೆಗಳ ಕಾಮಗಾರಿಗಳ ಬಗ್ಗೆ ಆಯೋಗವು ಪರಿಶೀಲನೆ ನಡೆಸಿದೆ. ಆಯೋಗವು ಗುತ್ತಿಗೆದಾರ ದೂರುಗಳನ್ನು ಪರಿಗಣಿಸಿ, ವಿಚಾರಣೆ ನಡೆಸಿದೆ ಎಂದರು.
ಈ ಸುದ್ದಿಯನ್ನೂ ಓದಿ | BJP's Jan Akrosh Yatra: ಬೆದರು ಬೊಂಬೆ ರೀತಿ ಜಾತಿ ಗಣತಿ ಬಳಕೆ; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಕಿಡಿ
ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ) ವರದಿ ಅನುಷ್ಠಾನ (Caste census) ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ಜಾತಿ ಗಣತಿ ವರದಿಯ ಜಾರಿಯ ಸಾಧ್ಯಾಸಾಧ್ಯತೆ ಬಗ್ಗೆ ಸುದೀರ್ಘ ಚರ್ಚೆ ನಡಸಲಾಗಿದ್ದು, ಅಂತಿಮವಾಗಿ ಮುಂದಿನ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು. ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಲಕೋಟೆ ತೆರೆಯಲಾಗಿದ್ದು, ಸಚಿವರ ಕೈಗೆ ಜಾತಿ ಗಣತಿ ದತ್ತಾಂಶ ನೀಡಿದ ಬಳಿಕ ಆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ಏ.17ಕ್ಕೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜಾತಿ ಗಣತಿ ವರದಿಯನ್ನು 2024ರ ಫೆಬ್ರವರಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದಾದ ನಂತರ ಜಾತಿ ಗಣತಿ ವರದಿ ಸೋರಿಕೆಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರ ಏಪ್ರಿಲ್ 11 ರಿಂದ ಮೇ 30 ರವರೆಗೆ ಸಮೀಕ್ಷೆ ನಡೆಸಿತ್ತು. ಜಾತಿ ವಿವರವೂ ಒಳಗೊಂಡಂತೆ 54 ಮಾನದಂಡಗಳ ಅಧಾರದಲ್ಲಿ ಸಮೀಕ್ಷೆ ಮಾಡಿತ್ತು. ಕಾಂತರಾಜ ಆಯೋಗ ಅವಧಿ ಮುಕ್ತಾಯದಿಂದ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹೀಗಾಗಿ ಕಾಂತರಾಜ್ ಸಮೀಕ್ಷೆಯ ದತ್ತಾಂಶ ಬಳಸಿಕೊಂಡು ಅಂತಿಮ ವರದಿ ಸಲ್ಲಿಕೆ ಮಾಡುವಂತೆ ಕೆ. ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗಕ್ಕೆ 2023ರಲ್ಲಿ ಸರ್ಕಾರ ಪತ್ರ ಬರೆದಿತ್ತು. ಅದರಂತೆ 2015ರ ಸಮೀಕ್ಷೆಯ ಆಧಾರದ ಮೇಲೆ 2024ರ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾಗಿತ್ತು.
ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ 2024ರ ಫೆಬ್ರವರಿ 29ರಂದು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಿತ್ತು. ಇಂದು ಈ ವರದಿಯು ಸಂಪುಟ ಸಭೆಯಲ್ಲಿ ಮಂಡನೆ ಆಗಿದೆ. ಆದರೆ ಯಾವುದೇ ನಿರ್ಧಾರವನ್ನು ಸಭೆ ತೆಗೆದುಕೊಂಡಿಲ್ಲ.