Summer Tips: ಕಬ್ಬಿನ ರಸ ಇಷ್ಟವೇ? ಹಾಗಿದ್ರೆ ಜಗಿದು ತಿನ್ನಿ
Summer Tips: ಬಿಸಿಲಿನಲ್ಲಿ ಆಯಾಸಗೊಂಡಾಗ ಒಂದು ಗ್ಲಾಸ್ ಕಬ್ಬಿನ ಹಾಲು ದೊರೆತರೆ ಅಮೃತವೇ ದೊರೆತಷ್ಟು ಆನಂದವಾಗುವುದು ಇದೇ ಕಾರಣಕ್ಕೆ. ಆದರೆ ಒಂದೊಮ್ಮೆ ನಿಜವಾಗಿ ಸ್ವಚ್ಛತೆ ಕಾಪಾಡಿಕೊಳ್ಳದ ಜಾಗದಲ್ಲಿ ಇದನ್ನು ಕುಡಿದರೆ ಹೊಟ್ಟೆ ಹಾಳಾಗುವುದು ನಿಶ್ಚಿತ. ಹಾಗೆಂದು ಮನೆಯಲ್ಲಿ ಇದರ ರಸ ಹಿಂಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾದರೆ ಈ ರಸವನ್ನು ಕುಡಿಯುವ ಬದಲು ಕಬ್ಬಿನ ಜಲ್ಲೆಯನ್ನೇ ಜಗಿದು ತಿನ್ನಬಹುದಲ್ಲವೇ? ಇದರಿಂದೇನಾದರೂ ಹೆಚ್ಚುವರಿ ಲಾಭಗಳಿವೆಯೇ?


ನವದೆಹಲಿ: ಬೇಸಿಗೆಯಲ್ಲಿ ಕಬ್ಬಿನ ಹಾಲು ಅಥವಾ ಕಬ್ಬಿನ ರಸ (Sugarcane Juice) ಕುಡಿಯುವುದು ಎಲ್ಲರಿಗೂ ಇಷ್ಟ. ನೈಸರ್ಗಿಕವಾಗಿ ಸಿಹಿ ಇರುವ ಈ ಪೇಯ, ಶಕ್ತಿ ಹೆಚ್ಚಿಸಿ ಬೇಸಿಗೆಯ ಆಯಾಸವನ್ನು ಕಡಿಮೆ ಮಾಡಬಲ್ಲದು. ಬಿಸಿಲಿನಲ್ಲಿ ಆಯಾಸಗೊಂಡಾಗ ಒಂದು ಗ್ಲಾಸ್ ಕಬ್ಬಿನ ಹಾಲು ದೊರೆತರೆ ಅಮೃತವೇ ದೊರೆತಷ್ಟು ಆನಂದವಾಗುವುದು ಇದೇ ಕಾರಣಕ್ಕೆ. ಆದರೆ ಎಲ್ಲೆಲ್ಲೋ ಕಬ್ಬಿನ ಹಾಲು ಕುಡಿಯುವಾಗ, ಇದನ್ನು ಸ್ವಚ್ಛವಾದ ರೀತಿಯಲ್ಲಿ ಹಿಂಡಿದ್ದಾರೋ ಇಲ್ಲವೋ ಎನ್ನುವ ಅನುಮಾನ ಬಹಳಷ್ಟು ಜನರಿಗೆ ಬರಬಹುದು. ಒಂದೊಮ್ಮೆ ನಿಜವಾಗಿ ಸ್ವಚ್ಛತೆ ಕಾಪಾಡಿಕೊಳ್ಳದ ಜಾಗದಲ್ಲಿ ಇದನ್ನು ಕುಡಿದರೆ ಹೊಟ್ಟೆ ಹಾಳಾಗುವುದು ನಿಶ್ಚಿತ. ಹಾಗೆಂದು ಮನೆಯಲ್ಲಿ ಇದರ ರಸ ಹಿಂಡಿಕೊಳ್ಳುವುದು ಕಷ್ಟಸಾಧ್ಯ. ಹಾಗಾದರೆ ಈ ರಸವನ್ನು ಕುಡಿಯುವ ಬದಲು ಕಬ್ಬಿನ ಜಲ್ಲೆಯನ್ನೇ ಜಗಿದು ತಿನ್ನಬಹುದಲ್ಲವೇ? ಇದರಿಂದೇನಾದರೂ ಹೆಚ್ಚುವರಿ ಲಾಭಗಳಿವೆಯೇ?
ನೀರಿನಾಂಶ: ಕಬ್ಬಿನ ಜಲ್ಲೆಯನ್ನು ಜಗಿದು ತಿನ್ನುವುದು ಹಳೆಯ ಕಾಲದ ಆಲೆಮನೆಗಳಲ್ಲಿ ಮಾಮೂಲಿ ದೃಶ್ಯವಾಗಿತ್ತು. ಆದರೀಗ ಗಟ್ಟಿ ವಸ್ತುಗಳನ್ನು ಅಗಿಯುವುದೇ ಅಪರೂಪ ಎನ್ನುವಂತಾಗಿದೆ. ಕಬ್ಬನ್ನು ತುಂಡಾಗಿಸಿಕೊಂಡು ಅಗಿದು ತಿನ್ನುವುದರಿಂದ, ನಮ್ಮ ಜೊಲ್ಲು ರಸದೊಂದಿಗೆ ನಿಧಾನವಾಗಿ ಬೆರೆತು ಹೊಟ್ಟೆ ಸೇರುವುದಲ್ಲದೆ, ದೇಹಕ್ಕೆ ಬೇಕಾದ ನೀರಿನಂಶವನ್ನು ನಿಧಾನಕ್ಕೆ ಪೂರಣ ಮಾಡುತ್ತದೆ. ಹಾಗೆಂದು ಯಾವುದೇ ಕೃತಕ ಸಿಹಿಯ ಜ್ಯೂಸ್‌ಗಳಿಗಿಂತಲೂ ಆರೋಗ್ಯಕರ ರೀತಿಯಲ್ಲಿ ಮತ್ತು ತ್ವರಿತವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
ಹಲ್ಲುಗಳು ಸಬಲ: ಹಲ್ಲು ಮತ್ತು ಒಸಡುಗಳಿಗೆ ಆಹಾರವನ್ನು ಅಗಿಯುವ ಕ್ರಿಯೆಯೇ ವ್ಯಾಯಾಮ ಮಾಡಿದಂತೆ. ಅದರಲ್ಲೂ ಮೊದಲಿನಂತೆ ಗಟ್ಟಿಯಾದ ಆಹಾರಗಳನ್ನೆಲ್ಲ ಬಿಟ್ಟು ಕೇವಲ ಬ್ರೆಡ್, ಪಾಸ್ತಾ, ನೂಡಲ್ಸ್ ಎನ್ನುತ್ತಾ ಮೃದುವಾದ ಆಹಾರಗಳನ್ನೇ ತಿನ್ನುತ್ತಿರುವುದರಿಂದ ಹಲ್ಲು ಮತ್ತು ಒಸಡುಗಳ ಸಮಸ್ಯೆ ಸಾರ್ವತ್ರಿಕವಾಗಿ ಹೆಚ್ಚುತ್ತಿದೆ. ಗಟ್ಟಿಯಾದ ಆಹಾರಗಳನ್ನು ಕಚ್ಚಿ, ಅಗಿದು ತಿನ್ನುವುದು ಸಹ ಹಲ್ಲು ಮತ್ತು ಒಸಡುಗಳನ್ನು ಗಟ್ಟಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜೀರ್ಣಕಾರಿ: ಕಬ್ಬಿನ ರಸದಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ನಷ್ಟವಾಗಿರುತ್ತದೆ. ಆದರೆ ಕಬ್ಬನ್ನು ಅಗಿದು ತಿಂದಾಗ ಒಂದಿಷ್ಟು ನಾರೂ ಹೊಟ್ಟೆ ಸೇರುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖವಾದ ಅಂಶ. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಕಾಡುವ ಹೊಟ್ಟೆಯ ತೊಂದರೆಯನ್ನು ಶಮನ ಮಾಡಿ, ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ.
ಪ್ರತಿರೋಧಕತೆ ಹೆಚ್ಚು: ಕಬ್ಬಿನಲ್ಲಿ ವಿಟಮಿನ್ ಸಿ, ಕ್ಯಾಲ್ಶಿಯಂ, ಕಬ್ಬಿಣದಂಥ ಅಗತ್ಯ ಪೋಷಕಾಂಶಗಳು ಇರುವುದಿಂದ ರೋಗ ನಿರೋಧಕತೆ ಹೆಚ್ಚಿಸಿ, ಬೇಸಿಗೆಯ ಸೋಂಕುಗಳನ್ನು ದೂರ ಇರಿಸಲು ಇದು ಸಹಕಾರಿ. ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಗಾಯಗಳನ್ನು ಬೇಗನೆ ಗುಣಪಡಿಸುವುದಕ್ಕೂ ನೆರವಾಗುತ್ತದೆ.
ಯಕೃತ್‌ಗೆ ಪೂರಕ: ನಮ್ಮ ಯಕೃತ್ತನ್ನು ನಿರ್ವಿಷಗೊಳಿಸಲು ಅಥವಾ ಡಿಟಾಕ್ಸಿಫೈ ಮಾಡಲು ಕಬ್ಬನ್ನು ಬಳಕೆ ಮಾಡುವುದು ಭಾರತದ ಪರಂಪರಾಗತ ವೈದ್ಯ ಪದ್ಧತಿಯನ್ನು ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಡಿಟಾಕ್ಸ್ ಮಾಡುವುದರ ಜೊತೆಗೆ ಪಿತ್ತಜನಕಾಂಗದ ಸಾಮರ್ಥ್ಯವನ್ನು ಸಹ ವೃದ್ಧಿಸುತ್ತದೆ. ಕಬ್ಬಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ ಕಡಿಮೆ ಮಾಡುವಲ್ಲಿ ನೆರವಾಗುತ್ತವೆ. ಇದರ ಸತ್ವಗಳು ಸಹ ಯಕೃತ್ ಮೇಲಿನ ಒತ್ತಡ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.
ಇದನ್ನು ಓದಿ: Health Tips: ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರವೇನು?
ಕಿಡ್ನಿ ಕ್ಷಮತೆ ಹೆಚ್ಚಳ: ಮೂತ್ರ ಉತ್ಪಾದನೆ ಹೆಚ್ಚಿಸುವಂಥ ಡೈಯುರೇಟಿಕ್ ಸತ್ವಗಳು ಕಬ್ಬಿನಲ್ಲಿವೆ. ಇದರಿಂದ ಮೂತ್ರ ಪಿಂಡದಲ್ಲಿರುವ ಬೇಡದ ಅಂಶಗಳನ್ನು ಹೊರಗೆ ಹಾಕಲು ಇದು ಅನುಕೂಲ ಕಲ್ಪಿಸುತ್ತದೆ. ಇದರಿಂದ ಮೂತ್ರನಾಳದ ಸೋಂಕು ಉಂಟಾಗದಂತೆ ತಡೆಯಲು ಸಹಾಯವಾಗುತ್ತದೆ. ಮಾತ್ರವಲ್ಲ, ಕಿಡ್ನಿ ಕ್ಷಮತೆಯನ್ನು ಹೆಚ್ಚಿಸಿ ಬೇಡದ್ದನ್ನು ಹೊರಗೆ ಹಾಕುವುದರಿಂದ ಅಲ್ಲಿ ಕಲ್ಲುಗಳು ಬೆಳೆಯುವುದನ್ನು ತಡೆಯುವುದಕ್ಕೂ ಸಹಕಾರಿ.
ಸಕ್ಕರೆಯಂಶ: ಇದರಲ್ಲಿರುವ ನೈಸರ್ಗಿಕ ಸಕ್ಕರೆಯಂಶ ಇತರ ಯಾವುದೇ ಸಂಸ್ಕರಿತ ಸಿಹಿಯಂತೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಏರಿಸುವುದಿಲ್ಲ. ಬದಲಿಗೆ, ಸಮೃದ್ಧವಾದ ನಾರು ಮತ್ತು ಉರಿಯೂತ ಶಾಮಕಗಳಿಂದ ಕೂಡಿರುವ ಕಬ್ಬು ತಿನ್ನುವುದರಿಂದ ಚಯಾಪಚಯ ವೃದ್ಧಿಸುತ್ತದೆ. ಈ ಮೂಲಕ ರಕ್ತದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಏರುವುದನ್ನು ತಡೆಯುತ್ತದೆ. ಮಧುಮೇಹಿಗಳು ಇದನ್ನು, ವೈದ್ಯರ ಸಲಹೆಯ ಮೇರೆಗೆ, ಮಿತ ಪ್ರಮಾಣದಲ್ಲಿ ತಿಂದರೆ, ಉಳಿದ ಸಂಸ್ಕರಿತ ಸಕ್ಕರೆಯಂತೆ ತೀವ್ರಗಾಮಿ ಪರಿಣಾಮಗಳನ್ನು ಬೀರುವುದಿಲ್ಲ.