Lakshmi Hebbalkar Column: ಸಮಾನತೆಯ ಹರಿಕಾರ, ಆಧುನಿಕ ಬಸವಣ್ಣ
ಸತ್ಯ, ಸಮಾನತೆ, ಸಹಿಷ್ಣುತೆ ಮಾನವಧರ್ಮದ ದೊಡ್ಡ ಆಸ್ತಿಗಳು ಎಂದು ಭಾವಿಸಿ, ಅದನ್ನು ಎಲ್ಲರಲ್ಲೂ ಕಾಣುವ ಕನಸನ್ನು ಹೊತ್ತವರು ಬಸವಣ್ಣ ಮತ್ತು ಅಂಬೇಡ್ಕರ್ ಅವರು. ಸಮಾಜ ದಲ್ಲಿನ ಅಸಮಾನತೆಯನ್ನು ಕಂಡು ಅಂಬೇಡ್ಕರ್ ಅವರಿಗೆ ಬಹಳ ದೊಡ್ಡ ಮಟ್ಟದ ಅಸಮಾಧಾನ ವಿತ್ತು. ಆದರೆ ಅದಕ್ಕಾಗಿ ಅವರೆಂದೂ ತಾಳ್ಮೆ ಕಳೆದುಕೊಳ್ಳಲಿಲ್ಲ, ಅಹಿಂಸೆಯ ಮಾರ್ಗ ತುಳಿಯಲಿಲ್ಲ.


ಲಕ್ಷ್ಮೀ ಹೆಬ್ಬಾಳ್ಕರ್
ಈ ಭೂಮಿಯಲ್ಲಿ, 12ನೇ ಶತಮಾನದಲ್ಲಿ ಸಮಾನತೆಯ ಸಂದೇಶ ಸಾರಿಹೋದ ಬಸವಣ್ಣ ಹಾಗೂ 20ನೇ ಶತಮಾನದಲ್ಲಿ ಅದೇ ಸಂದೇಶವನ್ನು ಜಾರಿಗೊಳಿಸಲು ತಮ್ಮನ್ನು ತೊಡಗಿಸಿಕೊಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ಇಬ್ಬರಲ್ಲೂ ನನಗೆ ಹಲವು ಸಾಮ್ಯತೆಗಳು ಕಂಡುಬರುತ್ತವೆ. ಇಬ್ಬರ ಧ್ಯೇಯೋದ್ದೇಶಗಳು ಒಂದೇ ಆಗಿದ್ದವು. ಸಮಾಜದಲ್ಲಿ ಮೇಲು-ಕೀಳು ಎನ್ನುವ ಭಾವನೆ ಇರಬಾರದು. ಬದುಕಿನ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗಬೇಕು, ನೈಸರ್ಗಿಕ ಸಂಪನ್ಮೂಲಗಳ ಬಳಕೆಗೆ ಸಮಾನ ಅಧಿಕಾರವಿರಬೇಕು. ಎಲ್ಲ ಹಕ್ಕುಗಳೂ ಸಮಾನವಿರಬೇಕು ಎನ್ನುವ ಉದ್ದೇಶ ದೊಂದಿಗೆ ಅರಿವಿನ ಸಮಾಜವನ್ನು ನಿರ್ಮಿಸಿ, ಹೊಸ ಬೆಳಕನ್ನು ಕಾಣುವ ಕನಸು ಹೊತ್ತವರು ಈ ಇಬ್ಬರೂ. ಬಸವಣ್ಣ ಸಾರಿದ ಸಂದೇಶವನ್ನು ಅಕ್ಷರಶಃ ಜಾರಿಗೆ ತರಲು ಅಂಬೇಡ್ಕರ್ ತಮ್ಮ ಜೀವಿತಾವಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡರು.
ಸತ್ಯ, ಸಮಾನತೆ, ಸಹಿಷ್ಣುತೆ ಮಾನವಧರ್ಮದ ದೊಡ್ಡ ಆಸ್ತಿಗಳು ಎಂದು ಭಾವಿಸಿ, ಅದನ್ನು ಎಲ್ಲರಲ್ಲೂ ಕಾಣುವ ಕನಸನ್ನು ಹೊತ್ತವರು ಬಸವಣ್ಣ ಮತ್ತು ಅಂಬೇಡ್ಕರ್ ಅವರು. ಸಮಾಜ ದಲ್ಲಿನ ಅಸಮಾನತೆಯನ್ನು ಕಂಡು ಅಂಬೇಡ್ಕರ್ ಅವರಿಗೆ ಬಹಳ ದೊಡ್ಡ ಮಟ್ಟದ ಅಸಮಾಧಾನ ವಿತ್ತು. ಆದರೆ ಅದಕ್ಕಾಗಿ ಅವರೆಂದೂ ತಾಳ್ಮೆ ಕಳೆದುಕೊಳ್ಳಲಿಲ್ಲ, ಅಹಿಂಸೆಯ ಮಾರ್ಗ ತುಳಿಯಲಿಲ್ಲ.
ಅರಿವನ್ನು ಮೂಡಿಸಲು ಅತ್ಯಂತ ಸಮಾಧಾನದಿಂದಲೇ ಪ್ರಯತ್ನಿಸಿದರು. ಅದೇ ತತ್ವದ ಆಧಾರದ ಮೇಲೆಯೇ ಸಂವಿಧಾನವನ್ನು ರಚಿಸಿದರು. ಅವರು ಜೀವಿತದುದ್ದಕ್ಕೂ ಯಾರನ್ನೂ ದ್ವೇಷಿಸಲಿಲ್ಲ, ಯಾರ ಹಕ್ಕುಗಳನ್ನೂ, ಅಧಿಕಾರವನ್ನೂ ಕಸಿದುಕೊಳ್ಳಲು ಬಯಸಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದಷ್ಟೇ ಅವರ ಬಯಕೆಯಾಗಿತ್ತು. ಮನುಷ್ಯನಾಗಿ ಹುಟ್ಟಿದಾತ ಹೇಗೆ ಬದುಕ ಬಹುದು ಎಂಬುದನ್ನು ತೋರಿಸುವ ಮೂಲಕ ಇಡೀ ಮಾನವ ಕುಲಕ್ಕೆ ಆದರ್ಶರಾದರು. ಅಂಬೇಡ್ಕರ್ ಅವರನ್ನು ಉಲ್ಲೇಖಿಸುವಾಗ ನಾವು ಕೇವಲ ‘ಸಂವಿಧಾನ ಶಿಲ್ಪಿ’ ಎಂದರೆ ಸಾಕಾಗುವು ದಿಲ್ಲ, ‘ಮಹಾನ್ ಮಾನವತಾವಾದಿ’ ಎಂದರೂ ಪೂರ್ಣವಾಗುವುದಿಲ್ಲ.
ಇದನ್ನೂ ಓದಿ: R T Vittalmurthy Column: ವಿಜಯ ಯಾತ್ರೆ, ಇವರಿಗೆಲ್ಲ ಮಾತ್ರೆ !
ಒಬ್ಬ ವ್ಯಕ್ತಿ ಏನೆಲ್ಲ ಆಗಬಹುದು, ಸಮಾಜಕ್ಕೆ ಏನೆಲ್ಲ ಒಳಿತು ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಜೀವಿಸಿದ ಅಂಬೇಡ್ಕರ್, ಕಾನೂನುತಜ್ಞರಾಗಿ, ಸಮಾಜ ಸುಧಾರಕರಾಗಿ, ಅರ್ಥಶಾಸ್ತ್ರಜ್ಞ ರಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ ತಮ್ಮ ಇರುವಿಕೆಯನ್ನು ತೋರ್ಪಡಿಸಿದವರು.
ಹಾಗಾಗಿಯೇ ಅವರ ಹೆಸರೇ ನಮಗೆಲ್ಲ ಸ್ಫೂರ್ತಿ, ಸಾಧನೆಗೆ ಪ್ರೇರಣೆ. ಅವರ ಬದುಕು, ತತ್ವಾದರ್ಶ ಗಳು ನಮ್ಮೆಲ್ಲರ ಪಾಲಿಗೆ ಸಾರ್ವಕಾಲಿಕ ಮಾರ್ಗದರ್ಶಕ. ಸಮಾನತೆಯಿಂದಲೇ ಪ್ರಗತಿ ಎನ್ನುವುದು ಅವರ ಪರಮೋಚ್ಚ ನಂಬಿಕೆಯಾಗಿತ್ತು. 1920ರ ದಶಕದಲ್ಲೇ ಎರಡೆರಡು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮಹಾನ್ ಚೇತನ ಅವರು. ಸಮಾಜದಲ್ಲಿ ಅಸಮಾನತೆ-ಅಸ್ಪೃಶ್ಯತೆ ತಾಂಡವ ವಾಡುತ್ತಿದ್ದ ಅಂದಿನ ದಿನಗಳಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಡಾಕ್ಟರೇಟ್ ಪದವಿ ಪಡೆದರು ಎಂದರೆ ಅವರ ಜೀವನೋತ್ಸಾಹ ಹೇಗಿತ್ತು ಎಂಬುದನ್ನು ನಾವು ಊಹಿಸಬಹುದು. ಡಾಕ್ಟರೇಟ್ ಪದವಿ ಪಡೆದು ಹಿಂದಿರುಗಿದ ಅಂಬೇಡ್ಕರ್ ಮೊದಲಿನ ಷರತ್ತಿನಂತೆ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು.
ಆದರೆ, ಆಸ್ಥಾನಿಕ ಹಿರಿಯ ಮಂತ್ರಿಗಳು ಮಹಾರಾಜರಿಗೆ ತಿಳಿಯದಂತೆ ಇವರೊಂದಿಗೆ ಅಸ್ಪೃಶ್ಯತೆ ಆಚರಣೆ ನಡೆಸಿ ಕಿರುಕುಳ ನೀಡುತ್ತಿದ್ದರು. ಸಾಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಅಂಬೇಡ್ಕರ್‌ರಿಗೆ ಆಸ್ಥಾನದಲ್ಲಿ ಉಳಿಯಲು ಜಾಗ ನೀಡಲಿಲ್ಲ ಮತ್ತು ಅವರು ಉಳಿದಿದ್ದ ಪಾರ್ಸಿ ಹೋಟೆಲ್‌ನಿಂದ ಹೊರದಬ್ಬಿದರು. ಹೀಗಾಗಿ ಅಲ್ಲಿ ಕೆಲಸ ಮಾಡದೆ ಅಂಬೇಡ್ಕರ್ ಮುಂಬೈಗೆ ಬಂದರು, ಬದುಕಿನ ಗುರಿಸಾಧನೆಗಾಗಿ ಕೆಲಸ ಮಾಡುತ್ತಲೇ ಸಾಮಾಜಿಕ ಸಮಾನತೆಗಾಗಿ ಮತ್ತು ಅಸ್ಪೃಶ್ಯತೆಯ ವಿರುದ್ಧವಾಗಿ ಹೋರಾಟ ನಡೆಸಿದರು.
ಆದರೆ ತಾವು ವಿಶ್ವಾಸವಿಟ್ಟಿದ್ದ ಜನರು ಕೂಡ ಸ್ವಾರ್ಥಕ್ಕೆ ಬಲಿಯಾದಾಗ ಅಂಬೇಡ್ಕರರ ದುಃಖ ಇಮ್ಮಡಿಯಾಯಿತು. ಸಂವಿಧಾನದ ಮೂಲಕವೂ ಸಮಾನತೆಯನ್ನು ಸಾಧಿಸಲು ಯತ್ನಿಸಿದರು, ಆದರೆ ಜನರ ಮನಸ್ಥಿತಿಯಲ್ಲಿ ಅಂಥ ಬದಲಾವಣೆ ಕಾಣದಿದ್ದಾಗ ಒಂದು ರೀತಿಯಲ್ಲಿ ಅವರು ನಿರಾಶರಾಗಿದ್ದರು. ಅನಾರೋಗ್ಯದ ಕಾರಣದಿಂದಾಗಿ ತಮ್ಮ ಹೋರಾಟವನ್ನು ಮುಂದುವರಿಸ ಲಾಗುತ್ತಿಲ್ಲ ಎಂಬ ನೋವನ್ನೂ ತೋಡಿಕೊಂಡರು. ಕೊನೆಗೆ, ತಮ್ಮದೇ ಸಮುದಾಯದ ಸ್ವಾರ್ಥಿಗಳ ಬಗ್ಗೆಯೂ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರ ಹಾಕಿ, “ನನ್ನ ಇದುವರೆಗಿನ ಸಾಧನೆಯ ಫಲವನ್ನು, ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಮಂದಿ ಅನುಭವಿಸಿ ಮಜಾ ಮಾಡು ತ್ತಿದ್ದಾರೆ. ಈ ಚಳವಳಿಯನ್ನು ಮುನ್ನಡೆಸಬಲ್ಲರು ಎಂಬುದಾಗಿ ನಾನು ನಂಬಿದ್ದವರೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದಾರೆ" ಎಂದು ಆಕ್ರೋಶಗೊಂಡಿದ್ದರು.
ಹೀಗೆ ತಮ್ಮ ನಂಬಿಕೆಗೆ ಅಪಚಾರವಾದಾಗ, ಅಂತಿಮವಾಗಿ ಬೌದ್ಧಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದರು. “ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ, ಎಲ್ಲ ಮನುಷ್ಯರನ್ನೂ ಸಮಾನವಾಗಿ ಕಾಣುತ್ತೇನೆ. ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಸೇವಿಸುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ. ಜ್ಞಾನ-ಸಹಾನುಭೂತಿ-ಕರ್ತವ್ಯ ಎಂಬ 3 ಪ್ರಮುಖ ತತ್ವಗಳನ್ನು ಆಧರಿಸಿರುವ ಬೌದ್ಧಧರ್ಮವೇ ನಿಜವಾದ ಧರ್ಮ ಎಂದು ನಂಬಿದ್ದೇನೆ.
ಅಂತೆಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ" ಎಂದು ಪ್ರಮಾಣಗೈದರು. ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ, ಕಾನೂನುತಜ್ಞ, ನ್ಯಾಯಶಾಸ್ತ್ರಜ್ಞ, ಪತ್ರಕರ್ತ, ಸಾಹಿತಿಯಾಗಿ, ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್‌ರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ, ಅಮೋಘ.
ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನಮ್ಮೆಲ್ಲರಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ಅಂಬೇಡ್ಕರ್‌ರು ಕೊಟ್ಟ ಭಾರತದ ಸಂವಿಧಾನವು ಇಡೀ ವಿಶ್ವದಲ್ಲೇ ಶ್ರೇಷ್ಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಥ ನಾಡಿನಲ್ಲಿ ಜೀವಿಸುತ್ತಿರುವುದೇ ನಮಗೆಲ್ಲ ಹೆಮ್ಮೆಯ ಸಂಗತಿ. ಸೂರ್ಯ-ಚಂದ್ರರಿರುವರೆಗೂ ಅವರ ಬದುಕು ಮತ್ತು ಸಾಧನೆ ಈ ಭೂಮಿಯ ಮೇಲಿರುವವರಿಗೆ ಪ್ರೇರಣೆ ಯಾಗಬೇಕು, ಆದರ್ಶವಾಗಬೇಕು. ಇಂದಿನ ಯುವಪೀಳಿಗೆ ಅಂಬೇಡ್ಕರ್‌ರ ಆದರ್ಶವನ್ನು ಪಾಲಿಸ ಬೇಕು. ಇದೇ ಅವರಿಗೆ ನಾವು ನಿಜವಾಗಿ ನೀಡಬಹುದಾದ ಕೊಡುಗೆ, ಇದೇ ನನ್ನ ಆಶಯ ಕೂಡ.
(ಲೇಖಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು)