#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Micro Finance: ‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು’ ರಾಜ್ಯಪಾಲರಿಗೆ ಮರು ರವಾನೆ

ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳ ತಪ್ಪಿಸುವ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆʼಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ವಾಪಸ್ ಕಳುಹಿಸಿದ್ದು, ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡು’ ರಾಜ್ಯಪಾಲರಿಗೆ ಮರು ರವಾನೆ

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ಹರೀಶ್‌ ಕೇರ ಹರೀಶ್‌ ಕೇರ Feb 10, 2025 6:38 PM

ಬೆಂಗಳೂರು: ಮೈಕ್ರೋ ಫೈನಾನ್ಸ್ ಕುರಿತ ಸುಗ್ರೀವಾಜ್ಞೆಯನ್ನು (Micro Finance Ordinance) ರಾಜ್ಯಪಾಲರು (Governor Thawar Chand Gehlot) ಕೇಳಿದ ಸಮಗ್ರ ವಿವರಣೆಗಳೊಂದಿಗೆ ವಾಪಸ್ ರಾಜ್ಯಪಾಲರಿಗೆ ರವಾನಿಸಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೊಳಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಅದರಂತೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಸೂಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯಪಾಲರು ಹಲವು ಸ್ಪಷ್ಟನೆ ಕೋರಿ ಮಸೂದೆಯನ್ನು ವಾಪಾಸ್ ಕಳುಹಿಸಿದ್ದರು.

ಈ ಮಸೂದೆಯ ಅಂಶಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆಯ ಜೊತೆಗೆ ರಾಜ್ಯಪಾಲರಿಗೆ ಅಂಕಿತಕ್ಕೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಕಾಯ್ದೆಯನ್ನು ಮರು ರವಾನೆ ಮಾಡಿದೆ. ರಾಜ್ಯ ಸರ್ಕಾರದಿಂದ ರಾಜ್ಯಪಾಲರು ವಾಪಸ್ಸು ಕಳುಹಿಸಿದ್ದ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸುಗ್ರೀವಾಜ್ಞೆಗೆ ಎಲ್ಲಾ ಆಕ್ಷೇಪಣೆಗಳಿಗೆ ಕಾನೂನು ಇಲಾಖೆಯಿಂದ ಸೂಕ್ತ ಸ್ಪಷ್ಟೀಕರಣ ಸಿದ್ಧಪಡಿಸಲಾಗಿದೆ. ಈ ಸ್ಪಷ್ಟೀಕರಣದೊಂದಿಗೆ ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಕರಡನ್ನು ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಮರು ರವಾನೆ ಮಾಡಲಾಗಿದೆ.

ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳ ತಪ್ಪಿಸುವ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆʼಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ವಾಪಸ್ ಕಳುಹಿಸಿದ್ದು, ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಜ್ಯಪಾಲರ ಆಕ್ಷೇಪಗಳಿಗೆ ಸ್ಪಷ್ಟನೆ ನೀಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಹೇಳಿದ್ದಾರೆ.

ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ 5 ಲಕ್ಷ ರೂ. ದಂಡವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ/ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Micro Finance Ordinance: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮೂಲಭೂತ ಹಕ್ಕಿನ ವಿರುದ್ಧವಲ್ಲ: ರಾಜ್ಯಪಾಲರ ಆಕ್ಷೇಪಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ