Micro Finance Ordinance: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮೂಲಭೂತ ಹಕ್ಕಿನ ವಿರುದ್ಧವಲ್ಲ: ರಾಜ್ಯಪಾಲರ ಆಕ್ಷೇಪಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ
ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ 5 ಲಕ್ಷ ರೂ. ದಂಡವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
![ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ: ರಾಜ್ಯಪಾಲರಿಗೆ ಸರ್ಕಾರದ ಸ್ಪಷ್ಟನೆ](https://cdn-vishwavani-prod.hindverse.com/media/original_images/Vidhana_soudha.jpg)
ಸಾಂದರ್ಭಿಕ ಚಿತ್ರ
![ಹರೀಶ್ ಕೇರ](https://cdn-vishwavani-prod.hindverse.com/media/images/Harish_Kerargylr_YyRvY8Q.2e16d0ba.fill-100x100.jpg)
ಬೆಂಗಳೂರು: ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ 2025 (micro finance ordinance) ಅನ್ನು ರಾಜ್ಯ ಸರ್ಕಾರ (State Government) ಸಮರ್ಥಿಸಿಕೊಂಡಿದ್ದು, ಇದು ವ್ಯಕ್ತಿಯ ಮೂಲಭೂತ ಹಕ್ಕನ್ನು (Fundamental rights) ನಿರ್ಬಂಧಿಸುವುದಿಲ್ಲ. ಸಾಲದಾತರ ಹಿತಾಸಕ್ತಿಯನ್ನು ನಿರ್ಲಕ್ಷಿಸಿಲ್ಲ ಹಾಗೂ ಸಾಲ ವಸೂಲಾತಿಯನ್ನು ನಿರ್ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳ ತಪ್ಪಿಸುವ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆʼಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ವಾಪಸ್ ಕಳುಹಿಸಿದ್ದು, ಸುಗ್ರೀವಾಜ್ಞೆಯು ಸಹಜ ಹಾಗೂ ಸಾಲ ನೀಡುವವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಆಕ್ಷೇಪಗಳಿಗೆ ಸ್ಪಷ್ಟನೆ ನೀಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಹೇಳಿದ್ದಾರೆ.
ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ. ಬೇರೆ ಯಾವುದೇ ಅಕ್ರಮ ಸಾಲ ಮತ್ತು ಬಡ್ಡಿ ವಸೂಲಾತಿ ಅರ್ಜಿಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ವಸೂಲಾತಿಗೆ ಅವಕಾಶ ನೀಡಿದರೆ ಸಂವಿಧಾನದ ಬಹುದೊಡ್ಡ ರಕ್ಷಣೆಯು ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಅಕ್ರಮವಾಗಿ ಕಾನೂನುಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿ. ಜೊತೆಗೆ ಸಮಾಜಕ್ಕೆ ಕಂಟಕ ತರುವಂತಹ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಾನೂನಾತ್ಮಕವಾಗಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲವೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಸುಗ್ರೀವಾಜ್ಞೆಯಲ್ಲಿ ಸರ್ಕಾರ ಎಲ್ಲಿಯೂ ಹೇಳಿಲ್ಲ. ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು/ನಿಷೇಧಿಸಲು ಸುಗ್ರೀವಾಜ್ಞೆ ಪ್ರಸ್ತಾಪಿಸುತ್ತದೆ.
ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ 5 ಲಕ್ಷ ರೂ. ದಂಡವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ/ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.
ಸಾಲ ವಸೂಲಾತಿಯ ಸಂದರ್ಭದಲ್ಲಿ ಕೈಗೊಳ್ಳಬಹುದಾದ ನಿರ್ದಿಷ್ಟ ಅಪರಾಧಗಳನ್ನು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ. ಬೇರೆ ಬೇರೆ ಕಾನೂನುಗಳಲ್ಲಿ ಏನೇ ಅವಕಾಶಗಳಿದ್ದರೂ ಅಕ್ರಮ ಸಾಲ ವಸೂಲಾತಿಯ ಸಂದರ್ಭದಲ್ಲಿ ಮಾಡಲಾದ ಅಪರಾಧಗಳನ್ನು ನಿರ್ದಿಷ್ಟಪಡಿಸುವುದು ಮತ್ತು ಅವುಗಳಿಗೆ ದಂಡನೆ ವಿಧಿಸುವುದು ಸರ್ಕಾರದ ಉದ್ದೇಶವಾಗಿದೆ. ಸಾಲ ನೀಡುವ ಸಂಸ್ಥೆಗಳು ತಾವು ನೀಡಿದ ಸಾಲಕ್ಕೆ ಯಾವುದೇ ಭದ್ರತೆ ಪಡೆಯದಂತೆ ಮತ್ತು ಈಗಾಗಲೇ ಪಡೆದಿರುವ ಭದ್ರತೆಗಳನ್ನು ಹಿಂದಿರುಗಿಸುವಂತೆ ಕಾನೂನಿನಲ್ಲಿ ಅವಕಾಶ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಿರು ಸಾಲ ನೀಡುವ ಸಂಸ್ಥೆಗಳು ಯಾವುದೇ ಭದ್ರತೆಯನ್ನು ಪಡೆಯದೇ ಸಾಲ ನೀಡಬೇಕೆಂಬುದು ರಿಸರ್ವ್ ಬ್ಯಾಂಕಿನ ನಿಯಮಗಳಲ್ಲಿ ಸ್ಪಷ್ಟವಾಗಿ ವಿಧಿಸಲಾಗಿದೆ. ಆದ್ದರಿಂದ ಭದ್ರತೆ ಪಡೆಯದೇ ಕಿರು ಸಾಲ ನೀಡಬೇಕು ಹಾಗೂ ಒಂದು ವೇಳೆ ಅಕ್ರಮವಾಗಿ ಭದ್ರತೆ ಪಡೆದಿದ್ದರೆ ಅಂತಹ ಭದ್ರತೆಗಳನ್ನು ವಾಪಸ್ ನೀಡುವುದು ಕಿರು ಸಾಲ ನೀಡುವ ಸಂಸ್ಥೆಯ ಕರ್ತವ್ಯವಾಗಿದೆ. ಕಿರು ಸಾಲ ನೀಡುವ ವ್ಯವಸ್ಥೆಯು ಬ್ಯಾಂಕಿಂಗ್ ತಲುಪದ ದೂರದ ಪ್ರದೇಶಗಳಿಗಾಗಿ ರೂಪಿಸಲಾಗಿದೆ. ಕಿರು ಸಾಲ ನೀಡುವ ಮತ್ತು ಸಾಲ ನೀಡುವುದರ ಮೇಲೆ ಪರಿಣಾಮ ಬೀರುವ ಯಾವುದೇ ಅಡೆತಡೆಯನ್ನು ಈ ಸುಗ್ರೀವಾಜ್ಞೆ ಉಂಟು ಮಾಡುವುದಿಲ್ಲ.
ಸ್ವಸಹಾಯ ಸಂಘಗಳ ವ್ಯಾಪಾರದ ಭವಿಷ್ಯದ ಮೇಲೆ ಸುಗ್ರೀವಾಜ್ಞೆಯ ಪರಿಣಾಮ ಇರುವುದಿಲ್ಲ ಅಥವಾ ಅದು ಶೂನ್ಯವಾಗುತ್ತದೆ. ಕೇವಲ ಸಾಲ ನೀಡಿದ ಸಂಸ್ಥೆಯ ವಸೂಲಾತಿಯ ಕಾನೂನು ಬಾಹಿರ ಕ್ರಮಗಳನ್ನು ಮಾತ್ರ ದಂಡನಿಯ ಅಪರಾಧವೆಂದು ಪರಿಗಣಿಸಲಾಗಿದೆ. ನೋಂದಾಯಿತ ಸಂಸ್ಥೆಗಳ, ಬ್ಯಾಂಕುಗಳ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಾಲ ನೀಡುವಿಕೆ ಮತ್ತು ವಸೂಲಾತಿ ಪ್ರಕ್ರಿಯೆಯನ್ನು ಬಗ್ಗೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಿಲ್ಲ.
ಹಾಲಿ ಎಲ್ಲಾ ಕಾಯ್ದೆಗಳಲ್ಲಿ ಯಾವುದೇ ಗಂಭೀರ ಮತ್ತು ನಿಯಂತ್ರಣ ಮಾಡುವ ಪರಿಣಾಮಕಾರಿಯಾದ ಅಸ್ತ್ರ ಇಲ್ಲದೇ ಇದ್ದುದರಿಂದ ಸಮಾಜದ ಕೆಳಸ್ತರದ ವ್ಯಕ್ತಿಗಳಿಗೆ ಮತ್ತು ಅಬಲರಿಗೆ ಸಬಲವಾದ ಅಸ್ತ್ರವನ್ನು ಕಾನೂನಾತ್ಮಕವಾಗಿ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ. ಈಗಿರುವ ಪರಿಹಾರಗಳು ಕಠಿಣಾತಿ ಕಠಿಣ ಕ್ರಮಗಳ ಬಗ್ಗೆ ಮತ್ತು ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಪ್ರಸ್ತುತ ಕಾಯ್ದೆಗಳಲ್ಲಿ ವಿಫುಲವಾದ ಅವಕಾಶವಿಲ್ಲ. ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳು ನೋಂದಾವಣೆ ನಿಬಂಧನೆಗಳು ಕೇವಲ ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತವೆ. ಬೇರೆ ಬೇರೆ ಕಾನೂನುಗಳು ನಿರ್ದಿಷ್ಟವಾದ ಅಪರಾಧಗಳನ್ನು ನಿರ್ದಿಷ್ಟವಾಗಿ ದಂಡಿಸುವ ಅವಕಾಶವಿರುವುದಿಲ್ಲ.
ತುರ್ತು ಸಂದರ್ಭದಲ್ಲಿ ಸರ್ಕಾರ ಲಭ್ಯವಿರುವ ಎಲ್ಲಾ ಸ್ಥರದಲ್ಲಿ ಸಮಾಲೋಚನೆಗಳನ್ನು ಹಲವಾರು ಸುತ್ತಿನಲ್ಲಿ ಕೈಗೊಂಡು ಈ ಸುಗ್ರೀವಾಜ್ಞೆ ಕರಡು ಸಿದ್ಧಪಡಿಸಿದೆ. ಮುಖ್ಯಮಂತ್ರಿಯವರೆಗಿನ ಎಲ್ಲಾ ಹಂತಗಳಲ್ಲೂ ಸಮಾಲೋಚನೆಗಳನ್ನು ವಿಸ್ತೃತವಾಗಿ ಕೈಗೊಳ್ಳಲಾಗಿದೆ.
ಸಾಲ ನೀಡುವವರ ಹಿತಗಳನ್ನು ನಿಯಮಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಸಾಲ ವಸೂಲಾತಿಯನ್ನು ನಿಷೇಧಿಸಿಲ್ಲ. ನಿಷೇಧಿತ ಚಟುವಟಿಕೆಗಳ ಮೂಲಕ ಸಾಲ ವಸೂಲಾತಿಯನ್ನು ತಡೆಯಲು ತುರ್ತಾಗಿ ಸುಗ್ರೀವಾಜ್ಞೆ ಅಂತಿಮಗೊಳಿಸಿದೆ. ಈ ಸುಗ್ರೀವಾಜ್ಞೆಯು ಮಸೂದೆಯಾಗಿ ವಿಧಾನಮಂಡಲದಲ್ಲಿ ಚರ್ಚೆಗೆ ಸಹಜವಾಗಿ ಮಂಡಿಸಲಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ.
ಸರ್ಕಾರ ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆಯ ಮೂಲಕ ಜನರ ನೆರವಿಗೆ ಬರಬೇಕಾದ ಸಂವಿಧಾನದತ್ತ ಅವಕಾಶ ಲಭ್ಯವಿರುವುದರಿಂದ ಅಂತಹ ಅವಕಾಶವನ್ನು ಬಳಕೆ ಮಾಡಿಕೊಂಡು ಈ ಸುಗ್ರೀವಾಜ್ಞೆ ಜಾರಿಗೆ ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಸುಗ್ರೀವಾಜ್ಞೆ/ಕಾನೂನು ರಚಿಸಲು ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Micro Finanace Torture: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಒಂದೇ ದಿನ ನಾಲ್ವರು ಬಲಿ