Turuvekere News: ಗಣಿಗಾರಿಕೆಯಿಂದ ರಂಗನಾಥ ಸ್ವಾಮಿ ದೇವಾಲಯ ಉಳಿಸಲು ಆಗ್ರಹ
Turuvekere News: ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಪುರಾತನ ಶ್ರೀರಂಗನಾಥ ಸ್ವಾಮಿಯ ದೇವಾಲಯವನ್ನು ರಕ್ಷಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


ತುರುವೇಕೆರೆ: ಕಲ್ಲು ಗಣಿಗಾರಿಕೆಯಿಂದ ಪುರಾತನ ಶ್ರೀರಂಗನಾಥ ಸ್ವಾಮಿಯ ದೇವಾಲಯವನ್ನು ರಕ್ಷಿಸುವಂತೆ ತಾಲೂಕಿನ (Turuvekere News) ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟಿಕೆರೆ, ಕಲ್ಲುನಾಗತಿಹಳ್ಳಿ, ಹರಳಹಳ್ಳಿ, ಜನತಾಕಾಲೋನಿ, ಡಣನಾಯಕನಪುರದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದೊಡ್ಡಶೆಟ್ಟಿಕೆರೆ ಸರ್ವೆ ನಂ. 20ರ ಆವರಣದಲ್ಲಿ ಕಲ್ಲು ಗಣಿಗಾರಿಕೆಗೆ ಖಾಸಗಿ ವ್ಯಕ್ತಿಗೆ ಅನುಮತಿ ದೊರೆತಿದ್ದು, ಅದನ್ನು ಹಿಂಪಡೆಯಬೇಕೆಂದು ಭಕ್ತರು ಆಗ್ರಹಿಸಿದರು.
ಈ ವೇಳೆ ನಿವೃತ್ತ ಸೇನಾ ಅಧಿಕಾರಿ ತಿಪ್ಪಣ ಮಾತನಾಡಿ, ಕಲ್ಲುಗಣಿಗಾರಿಕೆ ಜಾಗವು ದೊಡ್ಡಶೆಟ್ಟಿಕೆರೆ ಬೆಟ್ಟದ ಮೇಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಕೂದಲೆಳೆ ಅಂತರದಲ್ಲಿದೆ. 2014ರಿಂದಲೂ ವಿರೋಧಿಸುತ್ತಾ ಬರುತ್ತಿದ್ದೇವೆ, ಆದರೂ ಕೆಲವು ಪ್ರಭಾವಿ ಉದ್ಯಮಿಗಳು ಸತತವಾಗಿ ಪ್ರಯತ್ನಿಸುತ್ತಾ ಸರ್ಕಾರದ ಮೇಲೆ ಒತ್ತಡ ಬೀರಿ ಗಣಿಗಾರಿಕೆಗೆ ಮಂಜೂರು ಪಡೆಯುವ ಹಂತವನ್ನು ತಲುಪಿದೆ. ಇದಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಬಾರದು ಎಂದರು.
ಈ ದೇವಾಲಯವು 12ನೇ ಶತಮಾನದಲ್ಲಿ ಶ್ರೀ ರಾಮಾನುಜಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದು, ಇದಕ್ಕೆ ಲಭ್ಯವಿರುವ ಶಾಸನ ಪುರಾವೆಗಳಿವೆ. ಇತಿಹಾಸ ಪ್ರಸಿದ್ಧ ಶ್ರೀ ಮಹದೇಶ್ವರ ದೇವಸ್ಥಾನವೂ 700 ಮೀಟರ್‌ಗಳ ಸಮೀಪದಲ್ಲಿರುತ್ತದೆ, ಇಲ್ಲಿ ಪ್ರತಿ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ದನಗಳ ಸಂತೆ ಮತ್ತು ವಾರ್ಷಿಕ 8 ದಿನಗಳ ಜಾತ್ರೆಯೂ ನಡೆದುಕೊಂಡು ಬರುತ್ತಿದೆ ಎಂದರು.
ದೊಡ್ಡಶೆಟ್ಟಿಕೆರೆ ಗ್ರಾಮದ ಸರ್ವೆ ನಂ.131ರಲ್ಲಿ 8.18 ಎಕರೆ ಭೂಮಿಯನ್ನು ಆಶ್ರಯ ಯೋಜನೆಯಡಿಯಲ್ಲಿ ಬಡವರಿಗೆ ನಿವೇಶನಗಳನ್ನು ನೀಡುವ ಉದ್ದೇಶದಿಂದ ಸರ್ಕಾರವು ಮಂಜೂರು ಮಾಡಿರುವ ಪ್ರದೇಶವೂ ಉದ್ದೇಶಿತ ಕಲ್ಲು ಗಣಿಗಾರಿಕೆ ಪ್ರದೇಶದಿಂದ ಬೆರಳೆಣಿಕೆ ಮೀಟರ್ ಸಮೀಪದಲ್ಲಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ ಬಡಜನರು ಜೀವಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಸಂದರ್ಭದಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿ ರಾಮಚಂದ್ರಯ್ಯ, ಮಾಯಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ರಂಗಸ್ವಾಮಿ, ಶಿವಕುಮಾರ್, ರಂಗರಾಮ, ಮಂಜುನಾಥ್ , ಗಿರಿಯಪ್ಪ ಗೌಡ, ರಂಗನಾಥ್ , ದರ್ಶನ್, ಶೀಲಾ ಕುಮಾರಿ, ಮೋಹನ ಕುಮಾರಿ, ಗಂಗಮ್ಮ, ರಂಗಪ್ಪ, ಶಂಕರಪ್ಪ ಹಾಗೂ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Bus Fare Hike: ಬಸ್ ಟಿಕೆಟ್ ದರ ಏರಿಕೆ ಸಹಜ ಪ್ರಕ್ರಿಯೆ ಎಂದ ಸಚಿವ ಭೋಸರಾಜು