ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Gold ETF: ಮಾಸಿಕ 10,000 ರುಪಾಯಿ ಹೂಡಿಕೆ, 9 ಲಕ್ಷ ಲಾಭ! ಗೋಲ್ಡ್‌ ಇಟಿಎಫ್‌ ಅಂದ್ರೆ ಏನ್‌ ಗೊತ್ತಾ?

ಗೋಲ್ಡ್‌ ಇಟಿಎಫ್‌ಗಳು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಾಗಿವೆ. ಇವುಗಳು ಬಂಗಾರದ ದರವನ್ನು ಆಧರಿಸಿ ನಡೆಯುತ್ತವೆ. ಆದ್ದರಿಂದ ಚಿನ್ನದ ದರ ಏರಿದಾಗ ಇವುಗಳಲ್ಲಿ ನಿಮ್ಮ ಹೂಡಿಕೆಯೂ ಲಾಭದಾಯಕವಾಗುತ್ತದೆ. ಭೌತಿಕ ಬಂಗಾರದಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಇದು ಸುಲಭ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌

ಗೋಲ್ಡ್‌ ಇಟಿಎಫ್‌ ಬಗ್ಗೆ ನಿಮಗಷ್ಟು ಗೊತ್ತು?

Profile Rakshita Karkera Feb 20, 2025 12:02 PM

ಬೆಂಗಳೂರು: ನೀವು ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌(Gold ETF)ಗಳ ಬಗ್ಗೆ ಕೇಳಿರಬಹುದು. ಗೋಲ್ಡ್‌ ಇಟಿಎಫ್‌ ಎಂದೂ ಇವುಗಳು ಜನಪ್ರಿಯವಾಗಿವೆ. ಅಂದ ಹಾಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಗೋಲ್ಡ್‌ ಇಟಿಎಫ್‌ಗಳು ಹೂಡಿಕೆದಾರರಿಗೆ ಲಾಭವನ್ನು ಕೊಟ್ಟಿವೆ. ಎಚ್‌ಡಿಎಫ್‌ಸಿ ಗೋಲ್ಡ್‌ ಇಟಿಎಫ್‌ ಮತ್ತು ಎಕ್ಸಿಸ್‌ ಗೋಲ್ಡ್‌ ಇಟಿಎಫ್‌ ಅನ್ನೇ ತೆಗೆದುಕೊಳ್ಳೋಣ. ಎಚ್‌ಡಿಎಫ್‌ಸಿ ಗೋಲ್ಡ್‌ ಇಟಿಎಫ್‌ನಲ್ಲಿ ನೀವು ಐದು ವರ್ಷಗಳ ಹಿಂದೆ ಪ್ರತಿ ತಿಂಗಳು 10,000 ರುಪಾಯಿಗಳನ್ನು ಹೂಡಿಕೆ ಮಾಡಿರುತ್ತಿದ್ದರೆ, ಈಗ 9 ಲಕ್ಷದ 21 ಸಾವಿರ ರುಪಾಯಿಗೆ ಬೆಳೆದಿರುತ್ತಿತ್ತು. ಅಂದರೆ ನೀವು ಹೂಡಿಕೆ ಮಾಡಿದ ಹಣ 6 ಲಕ್ಷ ರುಪಾಯಿಗಳು 9 ಲಕ್ಷದ 21 ಸಾವಿರ ಕೋಟಿ ರುಪಾಯಿಗಳಾಗಿರುತ್ತಿತ್ತು.

ನೀವು ಐದು ವರ್ಷಗಳ ಹಿಂದೆ ಎಕ್ಸಿಸ್‌ ಗೋಲ್ಡ್‌ ಇಟಿಎಫ್‌ನಲ್ಲಿ 10,000 ರುಪಾಯಿಗಳನ್ನು ಸಿ ಮೂಲಕ ಪ್ರತಿ ತಿಂಗಳು ಹೂಡಿಕೆ ಮಾಡಿರುತ್ತಿದ್ದರೆ ಈಗ 9 ಲಕ್ಷದ 19 ಸಾವಿರ ರುಪಾಯಿ ಆಗಿರುತ್ತಿತ್ತು. ಒಂದು ವೇಳೆ ನೀವು ಆದಿತ್ಯ ಬಿರ್ಕಾ ಎಸ್‌ಎಲ್‌ ಮತ್ತು ಕೋಟಕ್‌ ಗೋಲ್ಡ್‌ ಇಟಿಎಫ್‌ನಲ್ಲಿ ಹೂಡಿಕೆ ಮಾಡಿರುತ್ತಿದ್ದರೂ, ತಲಾ 9 ಲಕ್ಷದ 16 ಸಾವಿರ ರುಪಾಯಿಗೆ ಬೆಳೆದಿರುತ್ತಿತ್ತು. ಎಸ್‌ಬಿಐ ಗೋಲ್ಡ್‌ ಇಟಿಎಫ್‌ನಲ್ಲಿ ಹೂಡಿದ್ದರೆ 9 ಲಕ್ಷದ 14 ಸಾವಿರ ರುಪಾಯಿ ಸಿಗುತ್ತಿತ್ತು.

ನೀವು ಒಂದು ವೇಳೆ ಎಲ್‌ಐಸಿ ಎಂಎಫ್‌ ಗೋಲ್ಡ್‌ ಇಟಿಎಫ್‌ನಲ್ಲಿ ಐದು ವರ್ಷಗಳ ಹಿಂದೆ ಪ್ರತಿ ತಿಂಗಳು 10,000 ರುಪಾಯಿ ಹೂಡಿಕೆ ಮಾಡಿರುತ್ತಿದ್ದರೆ ಈಗ 9 ಲಕ್ಷದ 28 ಸಾವಿರ ರುಪಾಯಿಗೆ ಬೆಳೆದಿರುತ್ತಿತ್ತು. ಅಂದ್ರೆ 17.71 ಪರ್ಸೆಂಟ್‌ ರಿಟರ್ನ್ಸ್‌ ನಿಮ್ಮದಾಗುತ್ತಿತ್ತು. ಐದೇ ವರ್ಷಗಳಲ್ಲಿ ಗೋಲ್ಡ್‌ ಇಟಿಎಫ್‌ಗಳು ನೀಡಿರುವ ರಿಟರ್ನ್ಸ್‌ ಗಮನಾರ್ಹವಾಗಿದೆ. ಈ ವರ್ಷ ಜನವರಿಯಲ್ಲಿ ಗೋಲ್ಡ್‌ ಇಟಿಎಫ್‌ಗಳಿಗೆ 3,751 ಕೋಟಿ ರುಪಾಯಿ ಹೂಡಿಕೆ ಹರಿದು ಬಂದಿದೆ.

ಕೋವಿಡ್‌ ಬಂದು ಹೋದ ನಂತರ ಚಿನ್ನದ ದರದಲ್ಲಿ ಗಣನೀಯ ಏರಿಕೆಯಾಗಿದೆ. ಹೂಡಿಕೆದಾರರು ಕೂಡ ಈಕ್ವಿಟಿ ಮಾರುಕಟ್ಟೆಗಳಿಂದ ಸುರಕ್ಷಿತ ಹೂಡಿಕೆಯ ಸಾಧನವಾಗಿರುವ ಬಂಗಾರವನ್ನು ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿಸಿದ್ದಾರೆ. ಹೀಗಿದ್ದರೂ, ಈಗಲೂ ಕೆಲವರಿಗೆ ಗೋಲ್ಡ್‌ ಇಟಿಎಫ್‌ ಎಂದರೆ ಏನು ಎಂಬ ಪ್ರಶ್ನೆಯೂ ಇರಬಹುದು.

ಗೋಲ್ಡ್‌ ಇಟಿಎಫ್‌ಗಳು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಾಗಿವೆ. ಇವುಗಳು ಬಂಗಾರದ ದರವನ್ನು ಆಧರಿಸಿ ನಡೆಯುತ್ತವೆ. ಆದ್ದರಿಂದ ಚಿನ್ನದ ದರ ಏರಿದಾಗ ಇವುಗಳಲ್ಲಿ ನಿಮ್ಮ ಹೂಡಿಕೆಯೂ ಲಾಭದಾಯಕವಾಗುತ್ತದೆ. ಭೌತಿಕ ಬಂಗಾರದಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಇದು ಸುಲಭ. ಬಂಗಾರದ ಒಡವೆಗಳಲ್ಲಿ ಇನ್ವೆಸ್ಟ್‌ ಮಾಡಿದರೆ ಮೇಕಿಂಗ್‌ ಚಾರ್ಜ್‌ ಕೊಡಬೇಕಾಗುತ್ತದೆ. ಅದನ್ನು ಮಾರುವಾಗಲೂ ನಿಮಗೆ ಲಾಭಾಂಶದಲ್ಲಿ ಒಂದಷ್ಟು ಇಳಿಕೆಯಾಗುತ್ತದೆ. ಆದರೆ ಗೋಲ್ಡ್‌ ಇಟಿಎಫ್‌ನಲ್ಲಿ ಈ ಯಾವುದೇ ಸಮಸ್ಯೆ ಇರುವುದಿಲ್ಲ. ಹೂಡಿಕೆಯ ದೃಷ್ಟಿಯಿಂದ ಗೋಲ್ಡ್‌ ಇಟಿಎಫ್‌ ಉತ್ತಮ.

ವಿಶ್ವದ ಮೊದಲ ಗೋಲ್ಡ್‌ ಇಟಿಎಫ್‌, ಆಸ್ಟ್ರೇಲಿಯಾದಲ್ಲಿ 2003ರಲ್ಲಿ ಆರಂಭವಾಯಿತು. ಅಮೆರಿಕದಲ್ಲಿ 2004ರಲ್ಲಿ ಆರಂಭವಾಯಿತು. ಭಾರತದಲ್ಲಿ ಮೊದಲ ಗೋಲ್ಡ್‌ ಇಟಿಎಫ್‌ ಗೋಲ್ಡ್‌ ಬೀಸ್‌ 2007ರ ಮಾರ್ಚ್‌ನಲ್ಲಿ ಆರಂಭವಾಯಿತು.

ಈಗ ಕಳೆದ 5 ವರ್ಷಗಳಲ್ಲಿ ಗೋಲ್ಡ್‌ ETF ಸ್ಕೋರ್‌ ಬೋರ್ಡ್‌ ನೋಡೋಣ. ಈ ಗೋಲ್ಡ್‌ ಇಟಿಎಫ್‌ಗಳಲ್ಲಿ 5 ವರ್ಷಗಳಲ್ಲಿ ಮಾಸಿಕ 10,000 ರುಪಾಯಿಗಳ ಹೂಡಿಕೆಯು ಈಗ 9 ಲಕ್ಷ ರುಪಾಯಿಗೂ ಹೆಚ್ಚು ಮೌಲ್ಯಕ್ಕೆ ಬೆಳೆದಿದೆ.

  • ಎಲ್‌ಐಸಿ ಎಂಎಫ್‌ ಗೋಲ್ಡ್‌ ಇಟಿಎಫ್‌ : 9.28 ಲಕ್ಷ
  • ಯುಟಿಐ ಗೋಲ್ಡ್‌ ಇಟಿಎಫ್‌ : 9.24 ಲಕ್ಷ
  • ಇನ್ವೆಸ್ಕೊ ಇಂಡಿಯಾ ಗೋಲ್ಡ್‌ ಇಟಿಎಫ್‌ :9.22 ಲಕ್ಷ
  • ಎಚ್‌ಡಿಎಫ್‌ಸಿ ಗೋಲ್ಡ್‌ ಇಟಿಎಫ್:‌ 9.21 ಲಕ್ಷ
  • ಎಕ್ಸಿಸ್‌ ಗೋಲ್ಡ್‌ ಇಟಿಎಫ್‌ : 9.19 ಲಕ್ಷ
  • ಐಸಿಐಸಿಐ ಪ್ರುಡೆನ್ಷಿಯಲ್‌ ಗೋಲ್ಡ್‌ ಇಟಿಎಫ್‌ : 9.17 ಲಕ್ಷ
  • ಆದಿತ್ಯ ಬಿರ್ಲಾ ಎಸ್‌ಎಲ್‌ ಗೋಲ್ಡ್‌ ಇಟಿಎಫ್‌ : 9.16 ಲಕ್ಷ
  • ಕೋಟಕ್‌ ಗೋಲ್ಡ್‌ ಇಟಿಎಫ್:‌ 9.16 ಲಕ್ಷ
  • ಕ್ವಾಂಟಮ್‌ ಗೋಲ್ಡ್‌ ಫಂಡ್‌ ಇಟಿಎಫ್‌ : 9.15 ಲಕ್ಷ
  • ಎಸ್‌ಬಿಐ ಗೋಲ್ಡ್‌ ಇಟಿಎಫ್:‌ 9.14 ಲಕ್ಷ
  • ನಿಪ್ಪೊನ್‌ ಇಂಡಿಯಾ ಇಟಿಎಫ್‌ ಗೋಲ್ಡ್‌ ಬೀಸ್‌ : 9.12 ಲಕ್ಷ

ವಿಶ್ವಾದ್ಯಂತ ಚಿನ್ನವನ್ನು ಹೂಡಿಕೆಯ ಸುರಕ್ಷಿತ ಅಸೆಟ್‌ ಎನ್ನುತ್ತಾರೆ. ಭಾರತದಲ್ಲೂ ಬಂಗಾರವನ್ನು ಆಪದ್ಧನ ಎನ್ನುತ್ತಾರೆ. ಆದ್ದರಿಂದ ನಿಮ್ಮ ಹೂಡಿಕೆಯ ಖಾತೆಯಲ್ಲಿ ಚಿನ್ನಕ್ಕೂ ಜಾಗ ಇರಲಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅಮೂಲ್ಯವಾದ ಲೋಹಗಳಲ್ಲಿ ಹೂಡಿಕೆ ಮಾಡುವ ಪದ್ಧತಿ ರೂಢಿಯಲ್ಲಿತ್ತು. ನಮ್ಮವರಿಗೆ ಬಂಗಾರ, ಬೆಳ್ಳಿ, ವಜ್ರ ವೈಢೂರ್ಯಗಳಲ್ಲಿ ಹೂಡಿಕೆ ಮಾಡುವುದರ ಮಹತ್ವವೂ ಗೊತ್ತಿತ್ತು. ಈ ಬೆಲೆ ಬಾಳುವ ಲೋಹಗಳು ಅಪರೂಪದ ಲೋಹಗಳಾದ್ದರಿಂದ ಅವುಗಳಿಗೆ ಬೆಲೆ ಮತ್ತು ಬೇಡಿಕೆ ಎರಡೂ ಹೆಚ್ಚು. ಈಗಂತೂ ಇಂಡಸ್ಟ್ರಿಉ ಉದ್ದೇಶಗಳಿಗೂ ಚಿನ್ನ, ಬೆಳ್ಳಿಯ ವ್ಯಾಪಕ ಬಳಕೆಯಾಗುತ್ತಿದೆ.

ಈ ಸುದ್ದಿಯನ್ನೂ ಓದಿ: ಡಿಜಿಟ್ ಆರೋಗ್ಯ ವಿಮೆ ಅತಿ ಕಡಿಮೆ ಕಾಯುವ ಅವಧಿಯ ವಿಮೆಗಳಲ್ಲಿ ಒಂದಾಗಿದೆ

ಹಣದುಬ್ಬರದ ಎದುರು ನಿಮ್ಮ ಸಂಪತ್ತನ್ನು ರಕ್ಷಿಸಲು, ಹೂಡಿಕೆಯ ವೈವಿಧ್ಯತೆಗೆ ಚಿನ್ನ-ಬೆಳ್ಳಿಯ ಹೂಡಿಕೆ ಉಪಯುಕ್ತ. ಇದರ ಲಿಕ್ವಿಡಿಟಿಯೂ ಹೆಚ್ಚು. ಕಳೆದ 2000ನೇ ವರ್ಷದಲ್ಲಿ 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ಬೆಲೆ 4,400 ರುಪಾಯಿ ಇತ್ತು. ಈಗ 86, 600 ರುಪಾಯಿಗೆ ಏರಿಕೆಯಾಗಿದೆ. ಈಗ ನೀವೇ ಊಹಿಸಬಹುದು ಬಂಗಾರದ ಹೂಡಿಕೆ ಎಷ್ಟು ಮಹತ್ವದ್ದು ಎಂದು.‌

024ರಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸಿದ 5 ದೇಶಗಳು ಯಾವುದು ಎಂಬುದನ್ನೊ ನೋಡೋಣ.

  • ಚೀನಾ 370 ಮೆಟ್ರಿಕ್‌ ಟನ್‌ ಬಂಗಾರವನ್ನು ಉತ್ಪಾದಿಸಿ ಮೊದಲ ಸ್ಥಾನದಲ್ಲಿತ್ತು.
  • ಆಸ್ಟ್ರೇಲಿಯಾ 310 ಟನ್‌ ಚಿನ್ನ ಉತ್ಪಾದಿಸಿತ್ತು.
  • ರಷ್ಯಾ 310 ಟನ್‌ ಮತ್ತು ಕೆನಡಾ 200 ಟನ್‌ ಚಿನ್ನ ಉತ್ಪಾದಿಸಿತ್ತು.

2024ರಲ್ಲಿ ಅತಿ ಹೆಚ್ಚು ಚಿನ್ನವನ್ನು ಖರೀದಿಸಿದ ದೇಶ ಯಾವುದು ಎಂದರೆ ಭಾರತ. ಕಳೆದ ವರ್ಷ 802 ಟನ್‌ ಬಂಗಾರವನ್ನು ಭಾರತ ಖರೀದಿಸಿದೆ. ಭಾರತೀಯರ ಮನೆಗಳಲ್ಲಿ ಸುಮಾರು 25,000 ಟನ್‌ ಬಂಗಾರ ಇದೆ.