Pralhad Joshi: ಹುಬ್ಬಳ್ಳಿ ಜನಕ್ಕೆ ಮುದ ನೀಡಿದ ಧಾರವಾಡ ಸಂಸದರ ಸಾಂಸ್ಕೃತಿಕ, ಕ್ರೀಡಾ ಮಹೋತ್ಸವ
Pralhad Joshi: ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ʼಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವʼ ಅತ್ಯಾಕರ್ಷಿಣೀಯವಾಗಿತ್ತು. 2 ದಿನಗಳ ಈ ಗಾಳಿಪಟ ಉತ್ಸವಕ್ಕೆ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು. ಈ ಕುರಿತ ವಿವರ ಇಲ್ಲಿದೆ.


ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ಜರುಗಿದ ‘ಧಾರವಾಡ ಸಂಸದರ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ’ ಅತ್ಯಾಕರ್ಷಿಣೀಯವಾಗಿತ್ತು. ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಕಲರವ ಅತಿ ರಂಜನೀಯವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದ ಈ ಗಾಳಿಪಟ ಉತ್ಸವದಲ್ಲಿ ನೆರೆ ರಾಷ್ಟ್ರ, ನೆರೆ ರಾಜ್ಯ ಮತ್ತು ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಗಾಳಿಪಟ ಕಲಿಗಳು ನಾನಾ ಮಾದರಿಯ ಕಲರ್ ಫುಲ್ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹರಿಬಿಟ್ಟು ಕಣ್ಮನ - ಹೃನ್ಮನ ಸೆಳೆದರು. ಆಗಸದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳು ಪ್ರೇಕ್ಷಕರನ್ನು ಕಂಗೊಳಿಸಿದವು. ಎರಡು ದಿನಗಳ ಈ ಗಾಳಿಪಟ ಉತ್ಸವಕ್ಕೆ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಗಾಳಿಪಟ ಹಾರಿ ಬಿಡುವ ಮೂಲಕ ಚಾಲನೆ ನೀಡುತ್ತಲೇ ಅಮೆರಿಕ, ಸಿಂಗಾಪುರ, ಟರ್ಕಿ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಪಟುಗಳು ವಿಶಿಷ್ಟವಾಗಿ ಗಾಳಿಪಟ ಹಾರಿಸಿ ಆಕರ್ಷಿಸಿದರು.

ವಿದೇಶಿಪಟುಗಳೊಂದಿಗೆ ವಿದ್ಯಾರ್ಥಿಗಳ ಸ್ಪರ್ಧೆ
ಗಾಳಿಪಟ ಉತ್ಸವದಲ್ಲಿ ನಗರದ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾ ಮುಂದು, ತಾ ಮುಂದು ಎನ್ನುತ್ತ ಭಿನ್ನ, ವಿಭಿನ್ನ ಗಾಳಿಪಟಗಳನ್ನು ಹಾರಿಸುತ್ತ ವಿದೇಶಿಗರೊಂದಿಗೆ ಸ್ಪರ್ಧೆಯೊಡ್ಡಿ ಖುಷಿಪಟ್ಟರು. ಯುವಕರು, ಯುವತಿಯರು ಎನ್ನದೇ, ಪುಟಾಣಿ ಮಕ್ಕಳಾದಿಯಾಗಿ ಗಾಳಿಪಟ ತೇಲಿಬಿಟ್ಟು ಸಂಭ್ರಮಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರು ಸ್ವತಃ ಗಾಳಿಪಟ ಹಾರಿಸಿ ಖುಷಿಪಟ್ಟರು. ಇನ್ನು, ಸಂಜೆಯಾಗುತ್ತಲೇ ಬಾಲ ಪ್ರತಿಭೆ ಪ್ರಶಸ್ತಿ ಪ್ರಶಾಂತ ಆಡೂರು ಅವರ ಮನೋಜ್ಞ ಭಾರತ ನಾಟ್ಯ ಪ್ರದರ್ಶನದೊಂದಿಗೆ ಆರಂಭವಾದ ಸಾಂಸ್ಕೃತಿಕ ಮಹೋತ್ಸವ ಹೃನ್ಮನ ತಣಿಸಿತು. ಖ್ಯಾತ ಗಾಯಕ ಕೈಲಾಶ ಖೇರ್ ಮತ್ತು ಬಾಲ ಗಾಯಕಿ ಮಹನ್ಯಾ ಪಾಟೀಲ ಅವರ ಗಾಯನ ಮನಸೂರೆಗೊಳಿಸಿತು.
ಕೈಲಾಶ್ ಖೇರ್ ಜತೆ ಸ್ವರ ಸೇರಿಸಿದ ಸಚಿವ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೂ ಗಾಯಕ ಕೈಲಾಶ್ ಖೇರ್ ಜತೆ ಸ್ವರ ಸೇರಿಸಿ ಹಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು. ಸಂಗಿತ ಸಂಜೆಯ ಶುರುವಿನಲ್ಲೇ ಸಚಿವರು, ʼಗುರುವೇ ನಿನ್ನಾಟ ಬಲ್ಲವರು ಯಾರ್ ಯಾರೋ...ಶಿವನೇ ನಿನ್ನಾಟ ಬಲ್ಲವರ ಯಾರೋ..ʼ ಗಾಯನಕ್ಕೆ ಸ್ವರ ನೀಡಿ ಅಭಿಮಾನಿಗಳನ್ನು ಖುಷಿಪಡಿಸಿದರು. ಗಾಯಕ ಕೈಲಾಶ್ ಖೇರ್ ಸ್ವರದಲ್ಲೂ ಈ ಗಾಯನ ಹಾಡಿಸಿ ರಂಜಿಸಿದರು. ಬಳಿಕ ಸುಪ್ರಸಿದ್ಧ ಗಾಯಕ ಕೈಲಾಶ್ ಖೇರ್ ಮತ್ತು ಹುಬ್ಬಳ್ಳಿಯ ಕನ್ನಡದ ಕೋಗಿಲೆ ಎಂದೇ ಖ್ಯಾತಿಯಾದ ಮಹನ್ಯಾ ಪಾಟೀಲ ಅವರ ಕಂಠಸಿರಿಯಲ್ಲಿ ಮೂಡಿಬಂದ ಹಾಡು ಪ್ರೇಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು.

ಈ ಸುದ್ದಿಯನ್ನೂ ಓದಿ | Honnavar News: ನಾಳೆಯಿಂದ ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಮೈನವಿರೇಳಿಸಿದ ಮಲ್ಲಗಂಬ ಪ್ರದರ್ಶನ, ಕುಸ್ತಿ ಪಂದ್ಯ
ಶುಕ್ರವಾರ ಬೆಳಗ್ಗೆ ಏರ್ಪಡಿಸಿದ್ದ ದೇಸೀ ಕ್ರೀಡೆ ಮಲ್ಲಗಂಬ ಪ್ರದರ್ಶನದಲ್ಲಿ ಪುಟಾಣಿಗಳು ಅದ್ಭುತ ಪ್ರದರ್ಶನ ನೀಡಿದರು. ಅಲ್ಲದೇ, ಕುಸ್ತಿ ಪಂದ್ಯದಲ್ಲಿ ಪುಟಾಣಿ ಪಟುಗಳಿಂದ ಹಿಡಿದು ಯುನಿವರ್ಸಿಟಿ ಹಂತದ ಪ್ರಶಸ್ಟಿ ಪುರಸ್ಕೃತ ಕುಸ್ತಿಪಟುಗಳು ಮತ್ತು ರಾಜ್ಯ, ಅಂತಾರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿಪಟುಗಳ ಕಾದಾಟ ಕ್ರೀಡಾ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು.