Denotification case: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಎಚ್‌ಡಿಕೆಗೆ ಸಂಕಷ್ಟ; ಬಿ ರಿಪೋರ್ಟ್ ರದ್ದು ಆದೇಶ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ
Denotification case: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತದಿಂದ ಸಲ್ಲಿಸಿದ್ದಂತ ಬಿ-ರಿಪೋರ್ಟ್ ಅನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಎಚ್.ಡಿ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಎಚ್ಡಿಕೆ ಅರ್ಜಿಯನ್ನು ವಜಾಗೊಳಿಸಿದೆ.


ನವದೆಹಲಿ: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಂಕಷ್ಟ ಎದುರಾಗಿದೆ. ಲೋಕಾಯುಕ್ತದಿಂದ ಸಲ್ಲಿಕೆಯಾಗಿದ್ದ ಬಿ ರಿಪೋರ್ಟ್ ರದ್ದು ಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಎಚ್.ಡಿ ಕುಮಾರಸ್ವಾಮಿ ಅವರು 2006ರಿಂದ ಅಕ್ಟೋಬರ್ 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಕೇಸ್ ವಿಚಾರಣೆ ನಡೆಸಿದ್ದ ಹೈಕೋರ್ಟ್, ಲೋಕಾಯುಕ್ತದಿಂದ ಸಲ್ಲಿಸಿದ್ದಂತ ಬಿ-ರಿಪೋರ್ಟ್ ಅನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಚ್.ಡಿ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ, ರಾಜೇಶ್ ಬಿಂದಾರ್ ಅವರಿದ್ದ ನ್ಯಾಯಪೀಠವು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಲೋಕಾಯುಕ್ತ ಬಿ-ರಿಪೋರ್ಟ್ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬನಶಂಕರಿ ಬಳಿಯ ಹಲಗೆವಡೇರಹಳ್ಳಿ ಸರ್ವೆ ನಂ. 128, 137 ರಲ್ಲಿನ 2 ಎಕರೆ 24 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಡಿ ನೋಟಿಫಿಕೇಷನ್ ಮಾಡಿದ ಆರೋಪ ಕೇಳಿಬಂದಿತ್ತು. ಈ ಕುರಿತ ದಾಖಲೆಗಳ ಸಮೇತ ಮಹದೇವಸ್ವಾಮಿ 2012ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಕುಮಾರಸ್ವಾಮಿ ಜತೆಗೆ ಪದ್ಮಾ, ಶ್ರೀದೇವಿ, ಚೇತನ್‌ಕುಮಾರ್, ಕೆ.ಬಿ ಶಾಂತಮ್ಮ, ಎಸ್. ರೇಖಾ ಚಂದ್ರು, ಯೋಗ ಮೂರ್ತಿ, ಬಿ.ನರಸಿಂಹುಲು ನಾಯ್ಡು, ಆರ್. ಬಾಲಕೃಷ್ಣ, ಟಿ. ಮುರುಳಿಧರ್, ಜಿ. ಮಲ್ಲಿಕಾರ್ಜುನ, ಇ.ಎ ಯೋಗೇಂದ್ರನಾಥ, ಪಿ.ಜಗದೀಶ, ಡಿ.ಎಸ್ ದೀಪಕ್, ಎಂ.ಸುಬ್ರಮಣಿ, ಬಾಲಾಜಿ ಇನ್ಫ್ರಾ, ಶುಭೋಧಯ ಬಿಲ್ಡರ್ಸ್, ಸನ್‌ರೈಸ್ ಬಿಲ್ಡರ್ಸ್ ಮತ್ತು ಆರತಿ ಡೆವಲಪರ್ಸ್ ಪ್ರಮುಖರು ಆರೋಪಿತರಾಗಿದ್ದಾರೆ.
ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಅದನ್ನು ದೂರುದಾರ ಮಹಾದೇವಸ್ವಾಮಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದೀಗ ಸುಪ್ರೀಂಕೋರ್ಟ್ ಎಚ್ಡಿಕೆ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಕೇಂದ್ರ ಸಚಿವ ಕುಮಾರಸ್ವಾಮಿಗೆ ಹಿನ್ನಡೆಯಾಗಿದೆ.
ಈ ಸುದ್ದಿಯನ್ನೂ ಓದಿ | Irrigation Projects: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರ ಜಲ ಶಕ್ತಿ ಸಚಿವರಿಗೆ ಡಿಕೆಶಿ ಮನವಿ
ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ (Ladle mashaik Dargah) ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಸಲ್ಲಿಸುವ ವಿಚಾರವಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಾಶಿವರಾತ್ರಿ (Mahashivratri 2025) ಅಂಗವಾಗಿ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಹಿಂದು ಸಂಘಟನೆಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠ ತನ್ನ ತೀರ್ಪು ನೀಡಿದೆ. ಬುಧವಾರ (ಫೆಬ್ರವರಿ 26) ಮಧ್ಯಾಹ್ನ 2 ರಿಂದ ಸಾಯಂಕಾಲ 6 ಗಂಟೆವರೆಗೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ 15 ಹಿಂದು ಮುಖಂಡರಿಗೆ ಮಾತ್ರ ಶಿವಲಿಂಗ ಪೂಜೆ ನೆರವೇರಿಸಲು ಅವಕಾಶ ನೀಡಿದೆ. ಕಳೆದ ಬಾರಿ ನ್ಯಾಯಾಲಯ ಎರಡು ಸಮುದಾಯದ 15 ಜನರಿಗೆ ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ ನೀಡಿತ್ತು. ಕೋಮು ಗಲಭೆ ಮರುಕಳಿಸದಂತೆ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Crime News: ಮಲ್ಪೆ ಸಮುದ್ರದಲ್ಲಿ ವಿದೇಶಿ ಬೋಟ್ ಪತ್ತೆ, ಕೋಸ್ಟ್ ಗಾರ್ಡ್‌ನಿಂದ ಸೆರೆ
ಸಿದ್ರಾಮಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಯಿಂದ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ವೇಳೆ ವಕ್ಫ್ ಮಂಡಳಿ ಇಲ್ಲಿ ಶಿವಲಿಂಗವೇ ಇಲ್ಲ ಎಂದು ವಾದ ಮಂಡಿಸಿತ್ತು. ಆದರೆ, ಸ್ಥಳ ಪರಿಶೀಲನೆ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಂಡ ಕಲಬುರಗಿ ಹೈಕೋರ್ಟ್ ಪೀಠದಿಂದ ಮಹತ್ವ ಆದೇಶ ಹೊರಡಿಸಲಾಗಿದೆ. ಹಿಂದೂ ಮುಖಂಡರಿಂದ 500 ಜನರು ಶಿವಲಿಂಗ ಪೂಜೆಗೆ ಅನುಮತಿ ಕೇಳಿದ್ದನ್ನು ನಿರಾಕರಿಸಿ ಕೇವಲ 15 ಜನರಿಗೆ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಇನ್ನು ಶಿವರಾತ್ರಿಗೆ ಮುನ್ನ ಮುಂಜಾಗ್ರತಾ ಕ್ರಮವಾಗಿ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟವನ್ನು ಮಂಗಳವಾರ (ಫೆ.25) ರಾತ್ರಿ 11 ಗಂಟೆಯಿಂದ ಫೆ.27ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ಸಲ್ಲಿಸಲು ಹೈಕೋರ್ಟ್ ಕಲಬುರಗಿ ಪೀಠ ಅವಕಾಶ ನೀಡಿದೆ. ಈ ತೀರ್ಪನ್ನು ಎಲ್ಲ ಹಿಂದು ಸಂಘಟನೆಗಳು ಸ್ವಾಗತಿಸುತ್ತವೆ. ಕೋರ್ಟ್ ವರದಿ ತರಿಸಿಕೊಂಡು ಪರಿಶೀಲಿಸಿ, ವಾದ-ಪ್ರತಿವಾದ ಆಲಿಸಿ ಪೂಜೆಗೆ ಅನುಮತಿ ನೀಡಿದೆ. ಹೀಗಾಗಿ ನಮಗೆ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗ ಮಂದಿರ ನಿರ್ಮಿಸಲು ಮುಸ್ಲಿಮರು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಆಳಂದ ಪಟ್ಟಣದಲ್ಲಿ ಈ ಪ್ರಸಿದ್ದ ದರ್ಗಾ ಇದೆ. ಖ್ಯಾತ ಸೂಫಿ ಸಂತ ಲಾಡ್ಲೆ ಮಶಾಕ್ ಅವರ ದರ್ಗಾ ಇದಾಗಿದೆ. 14ನೇ ಶತಮಾನದಲ್ಲಿ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಪ್ರಸಿದ್ದಿ ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ 15ನೇ ಶತಮಾನದ ಸಂತ ರಾಘವ ಚೈತನ್ಯರ ಸಮಾಧಿಯೂ ಕೂಡ ಇದೆ. ಅದರ ಮೇಲೆ ಒಂದು ಶಿವಲಿಂಗ ಇದೆ. ಹೀಗಾಗಿ ಆ ಶಿವಲಿಂಗಕ್ಕೆ ಶ್ರೀ ರಾಘವ ಚೈತನ್ಯ ಶಿವಲಿಂಗ ಅಂತ ಕರೆಯಲಾಗುತ್ತದೆ.