ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kolkata Horror: ಸೂಟ್‌ಕೇಸ್‌ನಲ್ಲಿ ಶವ ತುಂಬಿಕೊಂಡು ಬಂದು ಗಂಗಾ ನದಿಯಲ್ಲಿ ಎಸೆಯಲು ಮುಂದಾದ ತಾಯಿ-ಮಗಳು; ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಪಶ್ಚಿಮ ಬಂಗಾಳದಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಮಹಿಳೆಯರಿಬ್ಬರು ಮಹಿಳೆಯೊಬ್ಬರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬಂದು ಅದನ್ನು ಗಂಗಾ ನದಿಯಲ್ಲಿ ಎಸೆಯಲು ಮುಂದಾಗಿ ಸಾರ್ವಜನಿಕರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಸೂಟ್‌ಕೇಸ್‌ನಲ್ಲಿ ಶವ ತುಂಬಿಕೊಂಡು ಬಂದ ತಾಯಿ-ಮಗಳು

Profile Ramesh B Feb 25, 2025 7:28 PM

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮಂಗಳವಾರ (ಫೆ. 24) ಭಯಾನಕ ಘಟನೆಯೊಂದು ನಡೆದಿದ್ದು, ಮಹಿಳೆಯರಿಬ್ಬರು ಮಹಿಳೆಯೊಬ್ಬರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಬಂದು ಅದನ್ನು ಗಂಗಾ ನದಿಯಲ್ಲಿ ಎಸೆಯಲು ಮುಂದಾಗಿ ಸಾರ್ವಜನಿಕರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ (Kolkata Horror). ತಾಯಿ-ಮಗಳ ಈ ಜೋಡಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಲು ಮುಂದಾಗಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. ಕೋಲ್ಕತಾದ ಕುಮಾರ್ತುಲಿ (Kumartuli) ಬಳಿಯ ಗಂಗಾ ಘಾಟ್‌ನಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಬೆಳಗ್ಗೆ ತಮ್ಮ ದೈನಂದಿನ ಯೋಗಕ್ಕಾಗಿ ನೆರೆದಿದ್ದ ಸ್ಥಳೀಯರು ಈ ಭೀಕರ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಕುಮಾರ್ತುಲಿ ದುರ್ಗಾ ಪೂಜೆಗಾಗಿ ವಿಗ್ರಹಗಳನ್ನು ನಿರ್ಮಿಸುವ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಗಂಗಾ ನದಿಯ ತಟದಲ್ಲಿನ ಈ ತಾಣ ಶಾಂತ ಪರಿಸರದಿಂದಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ಹಲವು ಮಂದಿ ಯೋಗಾಭ್ಯಾಸ ನಡೆಸುತ್ತಿರುತ್ತಾರೆ. ಆದರೆ ಮಂಗಳವಾರದ ಪರಿಸ್ಥಿತಿ ಇಲ್ಲಿ ಕೋಲಾಹಲವನ್ನೇ ಎಬ್ಬಿಸಿತು. ಸೂಟ್‌ಕೇಸ್‌ನಲ್ಲಿ ಕಂಡುಬಂದ ಮೃತದೇಹ ಮಗಳ ಅತ್ತೆಯದ್ದು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.



ಘಟನೆ ವಿವರ

ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಕುಮಾರ್ತುಲಿಗೆ ಬಂದ ಕ್ಯಾಬ್‌ನಿಂದ ಇಬ್ಬರು ಮಹಿಳೆಯರು ಭಾರವಾದ ಸೂಟ್‌ಕೇಸ್‌ ಹಿಡಿದು ಕೆಳಗಿಳಿದರು. ಈ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಜತೆಗೆ ಅನುಮಾನವೂ ಬಂದಿರಲಿಲ್ಲ. ಆದರೆ ಬಳಿಕ ಈ ಮಹಿಳೆಯರ ವರ್ತನೆ ಅಲ್ಲಿದ್ದವರನ್ನು ಅಚ್ಚರಿಗೆ ದೂಡಿತ್ತು. ಈ ಭಾರವಾದ್‌ ಸೂಟ್‌ಕೇಸ್‌ ಅನ್ನು ಇಬ್ಬರು ಸೇರಿ ನದಿಯತ್ತ ತಳ್ಳತೊಡಗಿದ್ದರು. ಆದರೆ ಅದು ಒಂದಿಂಚೂ ಚಲಿಸಲಿಲ್ಲ.

ಇದೇ ಕಾರಣಕ್ಕೆ ಅಲ್ಲಿ ನೆರದಿದ್ದವರಲ್ಲಿ ಸಂಶಯ ಮೂಡತೊಡಗಿತು. ಹೀಗಾಗಿ ಕೆಲವರು ಆ ಮಹಿಳೆಯರ ಬಳಿ ಬಂದು ವಿಚಾರಿಸತೊಡಗಿದರು. ಈ ವೇಳೆ ಇವರು ತಾಯಿ-ಮಗಳು ಎನ್ನುವ ಅಂಶ ಬೆಳಕಿಗೆ ಬಂತು. ಇವರಿಬ್ಬರೂ ಸೂಟ್‌ಕೇಸ್‌ ತೆರೆಯಲು ನಿರಾಕರಿಸಿದ್ದಾಗ ಸಂಶಯ ಇನ್ನೂ ದಟ್ಟವಾಯಿತು. ಅನುಮಾನದ ವಾಸನೆ ಇನ್ನೂ ದಟ್ಟವಾಗತೊಡಗಿತು. ಇದರೊಳಗೆ ಶ್ವಾನ ಇದೆ ಎಂದು ಅವರು ಸಮಾಜಾಯಿಷಿ ನೀಡಿದರೂ ಸ್ಥಳೀಯರು ನಂಬುವ ಸ್ಥಿತಿಯಲ್ಲಿರಲಿಲ್ಲ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂತು. ರಕ್ತದ ಕಲೆಗಳಿರುವ ಬಟ್ಟೆಯ ಜತೆಗೆ ಮಹಿಳೆಯೊಬ್ಬರ ಶವ ಸೂಟ್‌ಕೇಸ್‌ ಒಳಗೆ ಕಂಡು ಬಂತು.

ಈ ಸುದ್ದಿಯನ್ನೂ ಓದಿ: Kerala Horror: ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ

ಸ್ಥಳೀಯರು ಹೇಳಿದ್ದೇನು?

ಯೋಗ ಕ್ಯಾಂಪ್‌ ಆಯೋಜಿಸುವ ರಾಜ ಸೌ ಈ ಬಗ್ಗೆ ಮಾಹಿತಿ ನೀಡಿ, ʼʼಅವರು ಸೂಟ್‌ಕೇಸ್‌ ತೆರೆಯಲು ನಿರಾಕರಿಸಿದರು. ಇದರೊಳಗೆ ತಮ್ಮ ನಾಯಿ ಇದೆ ಎಂದು ಮೊದಲು ಅವರು ತಿಳಿಸಿದರು. ಇದನ್ನು ನಾವ್ಯಾರೂ ನಂಬಲು ತಯಾರಿರಲಿಲ್ಲ. ನಾಯಿ ಗರಿಷ್ಠ ಎಷ್ಟು ಭಾರ ಇರಬಹುದು? 30-40 ಕೆಜಿ ಇರಬಹುದು. ಆದರೆ ಇದರ ಭಾರ ಅದಕ್ಕಿಂತಲೂ ಹೆಚ್ಚಿನದ್ದಾಗಿತ್ತು. ಪೊಲೀಸರು ಸೂಟ್‌ಕೇಸ್‌ ತೆರೆದಾಗ ಅಸಲಿಯತ್ತು ಬಯಲಾಯ್ತು. ಕೊನೆಗೆ ಅವರು ಇದು ಆತ್ಮಹತ್ಯೆ ಮಾಡಿಕೊಂಡ ತಮ್ಮ ಸಂಬಂಧಿಕ ಮೃತದೇಹ ಎಂದು ತಿಳಿಸಿದರು. ಅದರೆ ಆತ್ಮಹತ್ಯೆ ಮಾಡಿಕೊಂಡವರ ಮೃತದೇಹವನ್ನು ಆಸ್ಪತ್ರಗೆ ಒಯ್ಯುವ ಬದಲು ಯಾಕೆ ವಿಲೇವಾರಿ ಮಾಡಬೇಕು?ʼʼ ಎಂದು ಪ್ರಶ್ನಿಸಿದರು.

ಸದ್ಯ ಈ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಇವರನ್ನು ಫಲ್ಗುಣಿ ಘೋಷ್‌ ಮತ್ತು ಆಕೆಯ ತಾಯಿ ಆರತಿ ಘೋಷ್‌ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಫಲ್ಗುಣಿ ಘೋಷ್‌ನ ಅತ್ತೆ ಸುಮಿತಾ ಘೋಷ್‌ ಎಂದು ತಿಳಿದು ಬಂದಿದೆ. ಮಧ್ಯಮಗ್ರಾಮ ಮೂಲದ ಈ ಮಹಿಳೆಯರು ರೈಲಿನ ಮೂಲಕ ಬಂದು ಬಳಿಕ ಕ್ಯಾಬ್‌ ಮೂಲಕ ಆಗಮಿಸಿದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ವಿವರ ಇನ್ನಷ್ಟೇ ಹೊರ ಬೀಳಬೇಕಿದೆ.