ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Maha Kumbh 2025: ಶಿವರಾತ್ರಿಯಂದು ಕುಂಭಮೇಳದಲ್ಲಿ ಕೊನೆಯ ಅಮೃತ ಸ್ನಾನ; ಹೆಚ್ಚುವರಿ 350 ರೈಲುಗಳ ವ್ಯವಸ್ಥೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಶಿವರಾತ್ರಿಯಂದು ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಭಕ್ತ ಜನ ಪ್ರವಾಹ ಹರಿದು ಬರುವ ಸಾಧ್ಯತೆ ಇದ್ದು, ಇದಕ್ಕಾಗಿ ಭಾರತೀಯ ರೈಲ್ವೆ ಹೆಚ್ಚುವರಿ 350 ರೈಲುಗಳನ್ನು ಒದಗಿಸಿದೆ.

ಶಿವರಾತ್ರಿಯಂದು ಕುಂಭಮೇಳದಲ್ಲಿ ಹೆಚ್ಚುವರಿ 350 ರೈಲು ವ್ಯವಸ್ಥೆ

ಮಹಾ ಕುಂಭಮೇಳ.

Profile Ramesh B Feb 25, 2025 11:04 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ಮುಕ್ತಾಯದ ಹಂತಕ್ಕೆ ತಲುಪಿದ್ದು, ಫೆ. 26ರ ಶಿವರಾತ್ರಿಯಂದು (Maha Shivaratri) ಕೊನೆಯ ಅಮೃತ ಸ್ನಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನ ಪ್ರವಾಹ ಹರಿದು ಬರುವ ಸಾಧ್ಯತೆ ಇದ್ದು, ಇದಕ್ಕಾಗಿ ವ್ಯಾಪಕ ಸಿದ್ಧತೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಭಾರತೀಯ ರೈಲ್ವೆ ಪ್ರಯಾಗ್‌ರಾಜ್‌ಗೆ ಹೆಚ್ಚುವರಿ 350 ರೈಲುಗಳನ್ನು ಓಡಿಸಲು ಮುಂದಾಗಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕಳೆದ 2 ದಿನಗಳಿಂದ ಪಾಟ್ನಾ, ಮುಜಾಫರ್ಪುರ, ಗಯಾ, ಗೋರಖ್‌ಪುರ, ವಾರಣಾಸಿ, ಲಖನೌ, ಜಬಲ್ಪುರ್ ಮತ್ತು ರಾಂಚಿ ಸೇರಿದಂತೆ ಅನೇಕ ನಗರಗಳ ರೈಲ್ವೆ ನಿಲ್ದಾಣಗಳಲ್ಲಿ ಭಾರಿ ಜನಸಂದಣಿ ಕಂಡು ಬಂದಿವೆ. ಲಕ್ಷಾಂತರ ಯಾತ್ರಾರ್ಥಿಗಳ ಸುಗಮ ಮತ್ತು ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಆಡಳಿತವು ಎಲ್ಲ ಸಂಪನ್ಮೂಲಗಳನ್ನು ಸಜ್ಜುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ನಿರೀಕ್ಷಿತ ಜನದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯ ರೈಲ್ವೆ, ಈಶಾನ್ಯ ರೈಲ್ವೆ ಮತ್ತು ಉತ್ತರ ರೈಲ್ವೆಗೆ ಹೆಚ್ಚಿನ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದೆ. ಈ ಹಿಂದೆ, ಮೌನಿ ಅಮಾವಾಸ್ಯೆಯಂದು (ಜ. 29) 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಅನುಕೂಲಕ್ಕಾಗಿ 360ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ನಿಯೋಜಿಸಲಾಗಿತ್ತು. ಮಹಾ ಶಿವರಾತ್ರಿಗಾಗಿ ಇದೇ ರೀತಿಯ ಯೋಜನೆಯನ್ನು ಜಾರಿಗೆ ತರಲಾಗಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಸತೀಶ್ ಕುಮಾರ್ ಕೂಡ ಕೈ ಜೋಡಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಿರಲು ರೈಲ್ವೆಯ 3 ವಲಯಗಳ ಜನರಲ್ ಮ್ಯಾನೇಜರ್‌ಗಳು ಸಿದ್ದತೆ ನಡೆಸಿದ್ದಾರೆ. ಅಗತ್ಯವಿದ್ದರೆ ಹೆಚ್ಚುವರಿ ವಿಶೇಷ ರೈಲುಗಳನ್ನು ಒದಗಿಸುವಂತೆಯೂ ರೈಲ್ವೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಗ್‌ರಾಜ್‌ನ ನಿಲ್ದಾಣಗಳಾದ್ಯಂತ 3,000ಕ್ಕೂ ಹೆಚ್ಚು ರೈಲ್ವೆ ಸಂರಕ್ಷಣಾ ಪಡೆ (RPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ರೈಲ್ವೆ ಸಂರಕ್ಷಣಾ ವಿಶೇಷ ಪಡೆಯ 29 ತಂಡಗಳು, ಮಹಿಳಾ ಆರ್‌ಪಿಎಸ್‌ಎಫ್‌ನ 2 ತಂಡಗಳು, 22 ಶ್ವಾನ ದಳಗಳು ಮತ್ತು 2 ಬಾಂಬ್ ನಿಷ್ಕ್ರಿಯ ದಳಗಳನ್ನು ಈ ಪ್ರದೇಶದಲ್ಲಿ ಸಜ್ಜುಗೊಳಿಸಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್, ಸಿವಿಲ್ ಡಿಫೆನ್ಸ್ ಮತ್ತು ಇತರ ಸಂಘಟನೆಗಳೂ ಕೈ ಜೋಡಿಸಿವೆ.

ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ವೈದ್ಯಕೀಯ ನೆರವಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೆಚ್ಚುವರಿಯಾಗಿ ಕುಂಭ ಅಪ್ಲಿಕೇಶನ್ ಮತ್ತು ರೈಲ್ವೆ ವೆಬ್‌ಸೈಟ್‌ಗಳಂತಹ ಡಿಜಿಟಲ್ ಸೇವೆಗಳು ಪ್ರಯಾಣಿಕರಿಗೆ ನೆರವಾಗಲಿವೆ.

ಭಾನುವಾರ (ಫೆ. 23) ಒಂದೇ ದಿನ ಭಾರತೀಯ ರೈಲ್ವೆ 335 ರೈಲು ಸೇವೆ ಒದಗಿಸಿದ್ದು, 16 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದರು. ಶಿವರಾತ್ರಿಯ ಮುನ್ನಾ ದಿನವಾದ ಮಂಗಳವಾರ (ಫೆ. 25) ಪ್ರಯಾಗರಾಜ್‌ನಲ್ಲಿರುವ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ 1.24 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಜ. 13ರಿಂದ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ 63.36 ಕೋಟಿ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.