Viral Video: ಕಾಶ್ಮೀರಿ ವಧುವಿನ ಲುಕ್‌ನಲ್ಲಿ ಕಂಗೊಳಿಸಿದ ಇಂಡೋ-ಅಮೆರಿಕನ್ ಮಹಿಳೆ
ಭಾರತ ವೈವಿಧ್ಯಮಯ ಸಂಸ್ಕೃತಿಯುಳ್ಳ ದೇಶ. ಇಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಾಷೆ, ನೋಟ, ಊಟ, ಉಡುಗೆ ತೊಡುಗೆಗಳು ಬದಲಾಗುತ್ತಲೇ ಇರುತ್ತದೆ. ಅಂತಹ ಒಂದು ವೈವಿಧ್ಯತೆಗಳಲ್ಲಿ ಕಾಶ್ಮೀರದ ಉಡುಗೆಯೂ ಒಂದು. ಅಮೆರಿಕನ್-ಭಾರತೀಯ ಮಹಿಳೆಯೊಬ್ಬರು ಕಾಶ್ಮೀರಿ ವಧುವಿನ ಲುಕ್‌ನಲ್ಲಿ ಕಂಗೊಳಿಸುವ ವಿಡಿಯೊ ವೈರಲ್ ಆಗಿದೆ.

ಕಾಶ್ಮೀರಿ ವಧುವಿನ ಲುಕ್ ನಲ್ಲಿ ಕಂಗೊಳಿಸಿದ ಅಮೆರಿಕನ್ ಮಹಿಳೆ ಪೈಗೆ ರೈಲಿ.

ಶ್ರೀನಗರ: ಅಮೆರಿಕನ್ ಮಹಿಳೆಯೊಬ್ಬರು ಕಾಶ್ಮೀರಿ ಸಾಂಪ್ರದಾಯಿಕ ಮದುಮಗಳ (Kashmiri Bridal Look) ಧಿರಿಸಿನಲ್ಲಿ ಕಂಗೊಳಿಸುತ್ತಿರುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಅಗುತ್ತಿದೆ. ಚಿಕಾಗೋ (Chicago) ಮೂಲದ ಮಹಿಳೆಯೊಬ್ಬರು ಕಾಶ್ಮೀರಿ ವಧುವಿನಂತೆ ಸಿಂಗಾರಗೊಂಡಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂ (Instagram)ನಲ್ಲಿ ಪೋಸ್ಟ್ ಮಾಡಿದ ಬಳಿಕ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಸಬಿಹಾ ಬೇಗ್ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಜಮ್ಮು (Jammu) ಮೂಲದ ಮೇಕಪ್ ಕಲಾವಿದೆ, ವಧು ಪೈಗೆ ರೈಲಿ ಭಾರತದಲ್ಲಿ ನಡೆಯುತ್ತಿರುವ ತನ್ನ ಮೆಹಂದಿ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಸಾಂಪ್ರದಾಯಿಕ ಕಾಶ್ಮೀರಿ ನವವಧುವಿನ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.
ಹೌಸ್ ಆಫ್ ಮಸಾಬಾ ಬ್ರ್ಯಾಂಡಿನ ಹಳದಿ ಲೆಹಂಗಾ ಧರಿಸಿದ ನವ ವಧುವಿನ ಈ ವಿಡಿಯೊ ಇದೀಗ ಇಂಟರ್‌ನೆಟ್‌ನಲ್ಲಿ ಕಿಚ್ಚು ಹಚ್ಚಿದೆ. ಹಳದಿ ಮತ್ತು ಪಿಂಕ್ ಬಣ್ಣದ ಲೆಹಂಗಾ ಜತೆಗೆ ಆಕೆ ಎಮರಾಲ್ಡ್ ನೆಕ್ಲೇಸ್ ಹಾಗೂ ಜುಮ್ಕಾ ಧರಿಸಿದ್ದಾಳೆ. ಇದು ಆಕೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದೆ. ಇನ್ನು ಆಕೆಯ ಕಿವಿಗಳನ್ನು ಸಾಂಪ್ರದಾಯಿಕ ಕಾಶ್ಮೀರಿ ಡೆಜ್ ಹೂರ್ ಆಭರಣ ಅಲಂಕರಿಸಿವೆ. ಇದು ಕಾಶ್ಮೀರಿ ಪಂಡಿತರ ಮಹಿಳೆಯರು ಧರಿಸುವ ವಿಶೇಷ ಕಿವಿಯ ಆಭರಣ. ಅಮೆರಿಕನ್ ವಧುವಿನ ಈ ಅಲಂಕಾರಗಳೆಲ್ಲಾ ಮುಗಿದ ಬಳಿಕ ಮೇಕಪ್ ಕಲಾವಿದರು ಆಕೆಯ ಅಭಿಪ್ರಾಯವನ್ನು ಕೇಳಿದಾಗ ಆಕೆ, ‘ನನಗಿದು ಇಷ್ಟವಾಯ್ತು..’ ಎಂದು ಹೇಳುತ್ತಾಳೆ.
ಇದನ್ನೂ ಓದಿ: Viral News: ಆಟೋದಲ್ಲೇ ದಿನವಿಡೀ ಟೌನ್ ಟ್ರಿಪ್ ಹೊಡೆಯೋ ಸಾಕು ನಾಯಿ- ಈ ವಿಡಿಯೊಗೆ ನೆಟ್ಟಿಗರು ಫಿದಾ!
ಈ ಸ್ಪೆಷಲ್ ವಿಡಿಯೋ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಅಮೆರಿಕನ್-ಭಾರತೀಯ ಈ ವಧುವಿನ ಪ್ಲಾಟಿನಂ ಬಣ್ಣದ ಶುಭ್ರ ಕೂದಲು ಆಕೆಗೆ ಕಾಲ್ಪನಿಕ ಕಥೆಯ ರಾಣಿಯ ನೋಟವನ್ನು ಆಕೆಗೆ ತಂದುಕೊಟ್ಟಿದೆ. ‘ಆಕೆ ಹಿಮದ ಯುವರಾಣಿಯಂತೆ ಕಂಗೊಳಿಸುತ್ತಿದ್ದಾಳೆ. ಅದ್ಭುತವಾಗಿದೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ.
ಇನ್ನೊಬ್ಬರು ಬಳಕೆದಾರರು ಆಕೆಯ ಗ್ರ್ಯಾಂಡ್ ಲುಕ್ ಅನ್ನು ಗೇಮ್ ಆಫ್ ಥ್ರೋನ್ಸ್‌ನಲ್ಲಿ ಬರುವ ಪ್ಲಾಟಿನಂ ಬಣ್ಣದ ಶುಭ್ರ ಕೂದಲಿನ ಪಾತ್ರವೊಂದಕ್ಕೆ ಹೋಲಿಸಿದ್ದಾರೆ. ‘ಅತ್ಯಪೂರ್ವ ಬಟ್ಟೆಯಲ್ಲಿ ಆಕೆ ಟರ್ಗಾರ್ಯೆನ್ ನಂತೆ ಕಂಗೊಳಿಸುತ್ತಿದ್ದಾಳೆ’ ಎಂದು ಹೇಳಿದ್ದಾರೆ.
‘ಈಕೆಯ ಚೆಂದಕ್ಕೆ ಮೇಕಪ್ ಒಂದು ನೆಪವಷ್ಟೇ. ಮತ್ತೀಕೆ ಅತ್ಯಕರ್ಷಕವಾಗಿ ಕಂಗೊಳಿಸುತ್ತಿದ್ದಾಳೆ.’ ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನನಗೆ ಈ ಚೆಂದವನ್ನು ನೋಡಿ ಹೊಟ್ಟೆತುಂಬಿ ಬಂತು. ಎಷ್ಟೊಂದು ಚೆಂದದ ಮದುಮಗಳು’ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ತನ್ನ ಚಾರ್ಮಿಂಗ್ ಲುಕ್ ಬಗ್ಗೆ ಆ ಅಮೆರಿಕಾ-ಇಂಡಿಯಾ ವಧು ಸಹ ಕಮೆಂಟ್ ಮಾಡಿದ್ದು, ತನ್ನ ಈ ಅನುಪಮ ಲುಕ್‌ನ ಸಂಪೂರ್ಣ ಕ್ರೆಡಿಟನ್ನು ತನ್ನ ಮೇಕಪ್ ಆರ್ಟಿಸ್ಟ್‌ಗೆ ನೀಡಿ ಸಹೃದಯತೆಯನ್ನು ಮೆರೆದಿದ್ದಾರೆ. ‘ನಿಮ್ಮ ಕೆಲಸ ಅದ್ಭುತವಾಗಿದೆ! ನಾನೇನು ಮಾಡುತ್ತಿದ್ದೇನೆಂಬ ಯೋಚನೆಯೂ ನನಗಿರಲಿಲ್ಲ ಮತ್ತು ನೀವು ನನ್ನನ್ನು ಅದ್ಭುತ ವ್ಯಕ್ತಿಯನ್ನಾಗಿ ಕಂಗೊಳಿಸುವಂತೆ ಮಾಡಿದ್ದೀರಿ’ ಎಂದು ಆ ನವವಧು ಹೇಳಿಕೊಂಡಿದ್ದಾರೆ.