ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ನಾಯಕನಾಗಲು 5 ಕಾರಣಗಳು ಇಲ್ಲಿವೆ!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿನ ನಿರಾಶಾದಾಯಕ ಪ್ರದರ್ಶನದ ತೋರಿದ ಪಾಕಿಸ್ತಾನ ತಂಡ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ರಚನೆಯಲ್ಲಿ ಬದಲಾವಣೆಯನ್ನು ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚಿಂತನೆ ನಡೆಸುತ್ತಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಪಾಕಿಸ್ತಾನ ತಂಡದ ನಾಯಕತ್ವ ಬದಲಾಯಿಸುವುದು ಬಹುತೇಕ ಖಚಿತ. ಅಂದ ಹಾಗೆ ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ನಾಯಕರಾಗಲಿದ್ದಾರೆಂದು ಹೇಳಲಾಗುತ್ತಿದೆ.

ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಮುಂದಿನ ನಾಯಕ?

ಲಾಹೋರ್: ಮೊಹಮ್ಮದ್ ರಿಝ್ವಾನ್ ನಾಯಕತ್ವದ ಪಾಕಿಸ್ತಾನ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದೆ. ಪಾಕಿಸ್ತಾನ ತಂಡದ ಈ ಕಳಪೆ ಪ್ರದರ್ಶನದಿಂದ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಪಾಕ್ ತಂಡದ ನಾಯಕತ್ವದ ರೇಸ್‌ನಲ್ಲಿ ವೇಗಿ ಶಾಹೀನ್ ಶಾ ಅಫ್ರಿದಿ ಮುಂಚೂಣಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ತಂಡ ಸೋಲು ಅನುಭವಿಸಿದೆ. ತನ್ನ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ನಂತರ ತನ್ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ದವೂ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಸೆಮಿಫೈನಲ್ ರೇಸ್‌ನಿಂದ ಹೊರ ಬಿದ್ದಿದೆ.
ʻಟೀಮ್ ಮ್ಯಾನೇಜ್‌ಮೆಂಟ್‌ಗೆ ಬುದ್ದಿ ಇಲ್ಲʼ: ಪಾಕಿಸ್ತಾನ ತಂಡದ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ನಾಯಕನಾಗಲು ಐದು ಕಾರಣಗಳು
1.ಆಟಗಾರರೊಂದಿಗೆ ಉತ್ತಮ ಸಂಬಂಧ
ಪಾಕಿಸ್ತಾನ ಕ್ರಿಕೆಟ್ ತಂಡದ ಹೆಚ್ಚಿನ ಆಟಗಾರರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಆಟಗಾರರಲ್ಲಿ ಶಾಹೀನ್ ಶಾ ಅಫ್ರಿದಿ ಒಬ್ಬರು. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವಲ್ಲಿ ಶಾಹೀನ್ ಅಫ್ರಿದಿ ಪ್ರಮುಖ ಪಾತ್ರ ವಹಿಸಬಹುದು. ವಿಶೇಷವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ, ಶಾಹೀನ್ ಅಫ್ರಿದಿ ಅವರ ನಾಯಕತ್ವದ ಲಕ್ಷಣಗಳು ಬಲಗೊಂಡಿವೆ.
2.ಮಾಜಿ ಕ್ರಿಕೆಟಿಗರಿಂದಲೂ ಬೆಂಬಲ
ಪ್ರಸ್ತುತ ಪಾಕಿಸ್ತಾನ ತಂಡವನ್ನು ಟೀಕಿಸುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆ ದೇಶದ ಮಾಜಿ ಕ್ರಿಕೆಟಿಗರು. ಶಾಹೀನ್ ಅಫ್ರಿದಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಅಳಿಯ. ಹೀಗಾಗಿ ಶಾಹೀನ್ ಅಫ್ರಿದಿ ತಂಡದ ಹೊಸ ನಾಯಕನಾದರೂ ಅವರಿಗೆ ಖಂಡಿತವಾಗಿಯೂ ಒಂದಲ್ಲ ಒಂದು ರೂಪದಲ್ಲಿ ಮಾಜಿ ಕ್ರಿಕೆಟಿಗರ ಬೆಂಬಲ ಸಿಗುತ್ತದೆ. ಇದರಿಂದಾಗಿ, ಪಾಕಿಸ್ತಾನ ತಂಡಕ್ಕೆ ಶಾಹೀನ್ ನಾಯಕನಾಗಬಹುದು.
Virat Kohli: ಪಾಕಿಸ್ತಾನದಲ್ಲೂ ಕೊಹ್ಲಿಯ ಶತಕ ಸಂಭ್ರಮಿಸಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ
3.ಶಾಹೀನ್ ನಾಯಕತ್ವದಲ್ಲಿ ಎರಡು ಬಾರಿ ಚಾಂಪಿಯನ್
ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನಾಯಕನಾಗಿ ಶಾಹೀನ್ ಅಫ್ರಿದಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಈ ಲೀಗ್‌ನಲ್ಲಿ ಶಾಹೀನ್ ಲಾಹೋರ್ ಖಲಂದರ್ಸ್ ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ. ಇದಕ್ಕಾಗಿಯೇ ಶಾಹೀನ್ ಶಾ ಅಫ್ರಿದಿ ಪ್ರಸ್ತುತ ಚದುರಿಹೋಗಿರುವ ಪಾಕಿಸ್ತಾನ ತಂಡವನ್ನು ಒಂದುಗೂಡಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ.
4.ಶಾಹೀನ್ ನಾಯಕತ್ವದಲ್ಲಿ ವೇಗದ ಬೌಲಿಂಗ್ ವಿಭಾಗ ಬಲಗೊಳ್ಳಲಿದೆ
ಶಾಹೀನ್ ಶಾ ಅಫ್ರಿದಿ ಸ್ವತಃ ವೇಗದ ಬೌಲರ್. ಪಾಕಿಸ್ತಾನ ಕ್ರಿಕೆಟ್ ತಂಡದ ಇತಿಹಾಸದ ಪ್ರಕಾರ ಅದರ ದೊಡ್ಡ ಶಕ್ತಿ ಪೇಸ್ ಬೌಲಿಂಗ್. ಹಾಗಾಇ ಶಾಹೀನ್ ಅಫ್ರಿದಿ ಪಾಕಿಸ್ತಾನ ತಂಡದ ಹೊಸ ನಾಯಕನಾದರೆ ಖಂಡಿತವಾಗಿಯೂ ವೇಗದ ಬೌಲರ್‌ಗಳ ಬಲ ಹೆಚ್ಚಾಗುತ್ತದೆ.
5.ಯಶಸ್ವಿ ಇತಿಹಾಸ ಹೊಂದಿರುವ ಬೌಲರ್ ನಾಯಕ
ಪಾಕಿಸ್ತಾನ ಕ್ರಿಕೆಟ್ ತಂಡವು ಬೌಲಿಂಗ್ ನಾಯಕನಾಗಿ ಯಶಸ್ವಿ ಇತಿಹಾಸವನ್ನು ಹೊಂದಿದೆ. 1992 ರಲ್ಲಿ ಪಾಕಿಸ್ತಾನ ತಂಡ, ಮಾಜಿ ವೇಗಿ ಇಮ್ರಾನ್ ಖಾನ್ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ತಂಡದ ಟೀಮ್ ಮ್ಯಾನೇಜ್‌ಮೆಂಟ್ ಶಾಹೀನ್ ಶಾ ಅಫ್ರಿದಿ ಅವರನ್ನು ಹೊಸ ನಾಯಕನನ್ನಾಗಿ ನೇಮಿಸಬಹುದು.