ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ʻಜಿಂಬಾಬ್ವೆ ವಿರುದ್ಧ ಮಾತ್ರ ರನ್‌ ಗಳಿಸೋದುʼ: ಬಾಬರ್‌ ಆಝಮ್‌ ವಿರುದ್ಧ ದಾನಿಶ್‌ ಕನೇರಿಯಾ ಕಿಡಿ!

Danish Kaneria on Babar Azam: ಭಾರತದ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಾಬರ್‌ ಆಝಮ್‌ ಅವರನ್ನು ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಟೀಕಿಸಿದ್ದಾರೆ. ಬಾಬರ್‌ ಆಝಮ್‌ ಕೇವಲ ಜಿಂಬಾಬ್ವೆನಂತಹ ಸಣ್ಣ ತಂಡಗಳ ವಿರುದ್ಧ ಮಾತ್ರ ರನ್‌ ಗಳಿಸುತ್ತಾರೆಂದು ಆರೋಪ ಮಾಡಿದ್ದಾರೆ.

ಬಾಬರ್‌ ಕೇವಲ ಜಿಂಬಾಬ್ವೆ ವಿರುದ್ದ ಮಾತ್ರ ರನ್‌ ಗಳಿಸ್ತಾರೆ: ಕನೇರಿಯಾ

ಬಾಬರ್‌ ಆಝಮ್‌ ವಿರುದ್ಧ ದಾನಿಶ್‌ ಕನೇರಿಯಾ ಆಕ್ರೋಶ!

Profile Ramesh Kote Feb 26, 2025 12:23 AM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್‌ ಆಝಮ್‌ ವಿರುದ್ಧ ಮಾಜಿ ಸ್ಪಿನ್ನರ್‌ ದಾನಿಶ್‌ ಕನೇರಿಯಾ ಕಿಡಿಕಾರಿದ್ದಾರೆ. ಆಝಮ್‌ ಕೇವಲ ಜಿಂಬಾಬ್ವೆನಂತಹ ಸಣ್ಣ ತಂಡಗಳ ವಿರುದ್ಧ ಮಾತ್ರ ರನ್‌ ಗಳಿಸುವುದು ಎಂದು ಅವರು ವ್ಯಂಗ್ಯವಾಡಿದ್ದಾರೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಬರ್‌ ಆಝಮ್‌ ಅವರು 26 ಎಸೆತಗಳಲ್ಲಿ ಕೇವಲ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಹಾರ್ದಿಕ್‌ ಪಾಂಡ್ಯ ಎಸೆತದಲ್ಲಿ ಅವರು ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಟ್ಟು ನಿರ್ಗಮಿಸಿದ್ದರು. ಆ ಮೂಲಕ ಭಾರತದ ವಿರುದ್ಧ ಆಡಿದ 8 ಇನಿಂಗ್ಸ್‌ಗಳಿಂದ ಅವರು 30.12ರ ಸರಾಸರಿಯಲ್ಲಿ ಕೇವಲ 241 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇದರಲ್ಲಿ ಅವರು ಒಂದೇ ಒಂದು ಅರ್ಧಶತಕ ಗಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿಯೂ ಬಾಬರ್‌ ಆಝಮ್‌ ಅವರಿಂದ ಉತ್ತಮ ಇನಿಂಗ್ಸ್‌ ಮೂಡಿ ಬಂದಿಲ್ಲ. ನ್ಯೂಜಿಲೆಂಡ್‌ ವಿರುದ್ದದ ತಮ್ಮ ಮೊದಲನೇ ಪಂದ್ಯದಲ್ಲಿ ಆಝಮ್‌ 90 ಎಸೆತಗಳಲ್ಲಿ 64 ರನ್‌ಗಳನ್ನು ಗಳಿಸಿದ್ದರು. ಆದರೂ ಕಿವೀಸ್‌ ನೀಡಿದ್ದ 321 ರನ್‌ಗಳ ಗುರಿಯನ್ನು ಪಾಕಿಸ್ತಾನ ತಲುಪಲಿಲ್ಲ. ಈ ಹಿನ್ನೆಲೆಯಲ್ಲಿ ಬಾಬರ್‌ ಆಝಮ್‌ ಅವರು ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಭಾರತ ದಂತಹ ದೊಡ್ಡ ತಂಡಗಳ ಎದುರು ರನ್‌ ಗಳಿಸುವುದಿಲ್ಲ, ಆದರೆ, ಜಿಂಬಾಬ್ವೆ ನಂತಹ ಸಣ್ಣ ತಂಡಗಳ ವಿರುದ್ಧ ಅವರು ರನ್‌ ಗಳಿಸುತ್ತಾರೆಂದು ದಾನಿಶ್‌ ಕನೇರಿಯಾ ಆರೋಪ ಮಾಡಿದ್ದಾರೆ.

PAK vs NZ: ನಿಧಾನಗತಿಯ ಅರ್ಧಶತಕ ಸಿಡಿಸಿದ ಬಾಬರ್‌ ಆಝಮ್‌ ವಿರುದ್ದ ಫ್ಯಾನ್ಸ್‌ ಗರಂ!

"ದೀರ್ಘಾವಧಿಯಿಂದ ಬಾಬರ್‌ ಆಝಮ್‌ ರನ್‌ ಗಳಿಸುತ್ತಿಲ್ಲ. ಆದರೆ, ಜಿಂಬಾಬ್ವೆ ಅಥವಾ ಸಣ್ಣ ತಂಡಗಳ ವಿರುದ್ಧ ಅವರು ದೊಡ್ಡ ಮೊತ್ತವನ್ನು ಕಲೆ ಹಾಕುತ್ತಾರೆ. ಒಂದು ವೇಳೆ ಅವರು ದೊಡ್ಡ ತಂಡಗಳ ವಿರುದ್ಧ ರನ್‌ ಗಳಿಸಿದರೆ, ಇದರಲ್ಲಿ ಯಾವುದೇ ಉದ್ದೇಶ ಇರುವುದಿಲ್ಲ," ಎಂದು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್‌ ದಾನಿಶ್‌ ಕನೇರಿಯಾ ತಿಳಿಸಿದ್ದಾರೆ.

ರನ್‌ ಗಳಿಸಲು ಪರದಾಡುತ್ತಿರುವ ಆಝಮ್‌

2023ರಿಂದ ಬಾಬರ್‌ ಆಝಮ್‌ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರು. ಆದರೆ, ಇತ್ತೀಚೆಗೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಪಾಕ್‌ ಮಾಜಿ ನಾಯಕನನ್ನು ಹಿಂದಿಕ್ಕಿದ್ದಾರೆ. 2023ರಿಂದ ಬಾಬರ್‌ ಆಝಮ್‌ ಆಡಿದ 35 ಇನಿಂಗ್ಸ್‌ಗಳಿಂದ 45,06ರ ಸರಾಸರಿಯಲ್ಲಿ 1442 ರನ್‌ಗಳನ್ನು ಕಲೆ ಹಾಕಿದ್ದಾರೆ.

ಮೊಹಮ್ಮದ್‌ ರಿಝ್ವಾನ್‌ ವಿರುದ್ಧವೂ ಗುಡುಗಿದ ಕನೇರಿಯಾ

"ಪಾಕಿಸ್ತಾನ ತಂಡದಲ್ಲಿ ಡೆಪ್ತ್‌ ಬ್ಯಾಟಿಂಗ್‌ ಇಲ್ಲ. ಸಲ್ಮಾನ್‌ ಅಘಾ ಮತ್ತು ಖುಷ್ದಿಲ್‌ ಶಾ ಸ್ವಲ್ಪ ತಂಡಕ್ಕೆ ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. ಸೌದ್‌ ಶಕೀಲ್‌ ತಾಂತ್ರಿಕವಾಗಿ ಸರಿಯಾದ ಬ್ಯಾಟರ್‌. ಆದರೆ, ಮೊಹಮ್ಮದ್‌ ರಿಝ್ವಾನ್‌ ಅವರ ಬ್ಯಾಟ್‌ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತಂಡವನ್ನು ಘೋಷಿಸಿದಾಗ, ಈ ತಂಡ ಟೂರ್ನಿಯಿಂದ ಬಹುಬೇಗ ಹೊರಬೀಳುವುದನ್ನು ಎಂದು ಹೇಳಬಹುದಿತ್ತು," ಎಂದು ದಾನಿಶ್‌ ಕನೇರಿಯಾ ಟೀಕಿಸಿದ್ದಾರೆ.