300 ಮಕ್ಕಳ ಮೇಲೆ ಫ್ರಾನ್ಸ್‌ನ ಮಾಜಿ ಸರ್ಜನ್ನಿಂದ ಲೈಂಗಿಕ ದೌರ್ಜನ್ಯ; ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ಫ್ರಾನ್ಸ್‌ನ ಮಾಜಿ ಶಸ್ತ್ರಚಿಕಿತ್ಸಕನೊಬ್ಬ 300 ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ (ಫೆ. 24) ನ್ಯಾಯಾಲಯದಲ್ಲಿ 74 ವರ್ಷದ ಈ ಶಿಶುಕಾಮಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಲೆ ಸ್ಕೌರ್ನೆಕ್ ಎಂದು ಗುರುತಿಸಲಾಗಿದೆ.


ಪ್ಯಾರಿಸ್: ಫ್ರಾನ್ಸ್ (France)ನಲ್ಲಿ ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಮಾಜಿ ಶಸ್ತ್ರಚಿಕಿತ್ಸಕನೊಬ್ಬ 300 ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ (ಫೆ. 24) ನ್ಯಾಯಾಲಯದಲ್ಲಿ 74 ವರ್ಷದ ಈ ಶಿಶುಕಾಮಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತರಲ್ಲಿ ಬಹುತೇಕರು ಆತನ ರೋಗಿಗಳೇ ಎಂಬುದು ತಿಳಿದುಬಂದಿದೆ. ವರದಿಗಳ ಪ್ರಕಾರ ಈತ ಬಾಲಕ ಮತ್ತು ಬಾಲಕಿಯರು ಇಬ್ಬರ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಸ್ಪತ್ರೆಯ ಕೊಠಡಿಯಲ್ಲಿ ಈತ ಅತ್ಯಾಚಾರ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
74 ವರ್ಷದ ಮಾಜಿ ಶಸ್ತ್ರಚಿಕಿತ್ಸಕನನ್ನು ಫೆ. 24ರಂದು ವಿಚಾರಣೆಗೆ ಒಳಪಡಿಸಲಾಯಿತು. ತನಿಖಾಧಿಕಾರಿಗಳು ಆತನ ಮನೆಯನ್ನು ಶೋಧಿಸುವ ವೇಳೆ ಆತನ ನೋಟ್‌ಬುಕ್ ಪತ್ತೆಯಾಗಿದೆ. ಆರೋಪಿಯು ಮಕ್ಕಳ ಮೇಲೆ ಎಸಗಿರುವ ದೌರ್ಜನ್ಯದ ಮಾಹಿತಿ ಈ ನೋಟ್‌ಬುಕ್‌ನಲ್ಲಿ ಕಂಡು ಬಂದಿದೆ. ಇದರಲ್ಲಿ ಆತ ತನ್ನನ್ನು ಶಿಶುಕಾಮಿ ಎಂದು ಕರೆದುಕೊಂಡಿದ್ದಾನೆ. ಜತೆಗೆ ತನ್ನ ಕೃತ್ಯಗಳನ್ನು ವಿವರಿಸಿದ್ದಾನೆ ಎನ್ನಲಾಗಿದೆ.
ತಪ್ಪೊಪ್ಪಿಕೊಂಡ ಶಿಶುಕಾಮಿ
ಆರೋಪಿಯನ್ನು ಲೆ ಸ್ಕೌರ್ನೆಕ್ (Le Scouarnec) ಎಂದು ಗುರುತಿಸಲಾಗಿದೆ. 3 ದಶಕಗಳಿಂದ ತಾನು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾನೆ. ತಾನು ಅಸಹ್ಯಕರ ಕೃತ್ಯಗಳನ್ನು ಎಸಗಿದ್ದೇನೆ ಎಂದು ಲೆ ಸ್ಕೌರ್ನೆಕ್ ವ್ಯಾನೆಸ್‌ನ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಇವರೆಲ್ಲರೂ ಮಕ್ಕಳಾಗಿದ್ದರು ಎಂದೂ ಹೇಳಿದ್ದಾನೆ.
ಲೆ ಸ್ಕೌರ್ನೆಕ್ ಹೇಳಿದ್ದೇನು?
"ನಾನು ಬಹಳಷ್ಟು ಹೇಯ ಕೃತ್ಯಗಳನ್ನು ಎಸಗಿದ್ದೇನೆ. ಸಂತ್ರಸ್ತರೆಲ್ಲ ಮಕ್ಕಳಾಗಿದ್ದರು" ಎಂದು ವ್ಯಾನ್ಸ್‌ನ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಅದಾಗ್ಯೂ ಕೆಲವು ಪ್ರಕರಣಗಳಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಸಮರ್ಥನೆಯನ್ನೂ ನೀಡಿದ್ದಾನೆ. ʼʼನನಗೆ ಗೊತ್ತು ಈ ಗಾಯಗಳನ್ನು ವಾಸಿ ಮಾಡಲು ಸಾಧ್ಯವಿಲ್ಲ. ಜತೆಗೆ ಆ ತಪ್ಪನ್ನು ಸರಿಪಡಿಸಲು ಸಾಧ್ಯವಿಲ್ಲ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆʼʼ ಎಂದು ಹೇಳಿದ್ದಾನೆ.
ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದರೆ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಕೆಲವು ಸಂತ್ರಸ್ತರಿಗೆ ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಾಹಿತಿ ತಿಳಿದಿಲ್ಲ. ಕೆಲವರು ಈ ವೇಳೆ ಪ್ರಜ್ಞೆ ತಪ್ಪಿದ್ದರು ಎನ್ನಲಾಗಿದೆ. 30 ವರ್ಷದ ವ್ಯಕ್ತಿಯೊಬ್ಬ ಈ ಬಗ್ಗೆ ಸಾಕ್ಷಿ ನುಡಿದಿದ್ದು, 1995ರಲ್ಲಿ ತಾನು ಚಿಕ್ಕ ಹುಡುಗನಾಗಿದ್ದಾಗ ವೈದ್ಯಕೀಯ ಸಮಾಲೋಚನೆಯ ಸಮಯದಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: New Visa Rule: ಭಾರತೀಯ ವಿದ್ಯಾರ್ಥಿಗಳಿಗೆ ಹೊಡೆತ ಕೊಡುತ್ತಾ ಕೆನಡಾದ ಈ ಹೊಸ ವೀಸಾ ನೀತಿ?
"ರಿಕವರಿ ರೂಮ್‌ನಲ್ಲಿ ನಡೆದ ಕೆಲವು ವಿಷಯಗಳು ನನಗೆ ನೆನಪಿವೆ. ಆಗ ನಾನು ಸಂಪೂರ್ಣ ಭಯಭೀತನಾಗಿದ್ದೆ. ಆ ವೇಳೆ ನಾನು ತಂದೆಗೆ ಕರೆ ಮಾಡಿದ್ದೆ" ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸದ್ಯ ಲೆ ಸ್ಕೌರ್ನೆಕ್ ಕೃತ್ಯ ಬೆಳಕಿಗೆ ಬಂದಿದ್ದು, ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ.