ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಬಹಿಷ್ಕೃತರ ಸಂತತನ ಮತ್ತು ಸಂತಸ

ಇದೇ ವಾರ ದಲೈಲಾಮ ಅವರಿಗೆ 90 ವರ್ಷ ತುಂಬಿತಂತೆ. 1935ರಲ್ಲಿ ಹುಟ್ಟಿದ ಅವರಿಗೆ ಭಾರತಕ್ಕೆ ಬರುವಾಗ 24 ವರ್ಷ. ನಿಮಗೆ ಗೊತ್ತೋ ಇಲ್ಲವೋ, ದಲೈಲಾಮ ಎಂಬುದು ಅವರ ಹೆಸರಲ್ಲ. ಅದು ಪದನಾಮ. ನಮ್ಮ ಜಗದ್ಗುರುಗಳು ಇದ್ದಂತೆ ಅವರು ಟಿಬೆಟಿಯನ್ನರ 14ನೇ ದಲೈ ಲಾಮ. ತೆಂಜಿನ್‌ ಗ್ಯಾತ್ಸೋ ಎಂಬುದು ಮೂಲ ಹೆಸರು.

ಬಹಿಷ್ಕೃತರ ಸಂತತನ ಮತ್ತು ಸಂತಸ

ಹರೀಶ್‌ ಕೇರ ಹರೀಶ್‌ ಕೇರ Jul 10, 2025 6:00 AM

ಕಾಡುದಾರಿ

ಇದೇ ವರ್ಷ ಜನವರಿಯಲ್ಲಿ ಬೌದ್ಧ ಧರ್ಮ ಗುರು ದಲೈಲಾಮ ಕೊಡಗಿನ ಕುಶಾಲನಗರದ ಬಳಿ ಇರುವ ಬೈಲುಕುಪ್ಪೆಯ ಟಿಬೆಟಿಯನ್ನರ ಶಿಬಿರಕ್ಕೆ ಭೇಟಿ ಕೊಟ್ಟರು. ಅವರು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಹಾಗೆ ಭೇಟಿ ಕೊಡುವುದು ರೂಢಿ. ಈ ಬಾರಿ ಅವರು ಎಪ್ಪತ್ತು ದಾಟಿದ ವೃದ್ಧ ರನ್ನೆಲ್ಲ ಭೇಟಿ ಮಾಡಿದ್ದು ವಿಶೇಷ. ಬಹುಶಃ ಅವರೆಲ್ಲ ದಲೈಲಾಮ ಟಿಬೆಟ್‌ ತೊರೆದು ಭಾರತಕ್ಕೆ ಓಡಿ ಬಂದ ಕಾಲದಲ್ಲೇ ಇತ್ತ ಬಂದವರಿರಬೇಕು. ಲಾಮ ಇಲ್ಲಿಗೆ ಬಂದೇ 66 ವರ್ಷಗಳಾಗಿವೆ.

1959ರಲ್ಲಿ ಟಿಬೆಟನ್ನು ಚೀನಾ ಪೂರ್ಣವಾಗಿ ಆಕ್ರಮಿಸಿಕೊಂಡಾಗ ಅವರು ತಮ್ಮ ಕೆಲವೇ ಅನುಯಾಯಿಗಳ ಜೊತೆಗೆ ಭಾರತಕ್ಕೆ ಧಾವಿಸಿದರು. ಆಗಿನ ಪ್ರಧಾನಿ ನೆಹರೂ ಸರಕಾರ ಅವರಿಗೆಲ್ಲ ಆಶ್ರಯ ಕೊಟ್ಟಿತು. ಹಾಗೆ ಬಂದಾಗ, ಮುಂದೆ ಎಂದಾದರೂ ತಾಯ್ನಾಡಿಗೆ ಮರಳಿ ಹೋದೇವು ಎಂಬ ವಿಶ್ವಾಸ ಅವರಲ್ಲಿ ಇದ್ದಿರಬೇಕು. ಆದರೆ ಇಂದು ಆ ಯಾವ ಭರವಸೆಯೂ ಉಳಿದಿಲ್ಲ. ಹೀಗಾಗಿ ಆ ವೃದ್ಧರನ್ನು ಲಾಮ ಕರೆದು ತಲೆ ತಡವಿ ನಮಸ್ಕರಿಸಿ ಬೀಳ್ಕೊಟ್ಟ ನಂತರ ಅಲ್ಲಿ ಒಂದು ಕಣ್ಣೀರು ಮತ್ತು ವಿಷಾದ ಮಾತ್ರ ಉಳಿದಿರಬಹುದು. ಅದೇನೂ ವಸ್ತುಸ್ಥಿತಿಯನ್ನು ಬದಲಾಯಿಸ ಲಿಕ್ಕಿಲ್ಲ. ಆದರೆ, ನಾವೆಲ್ಲರೂ ಒಂದೇ ರೀತಿ ನೊಂದವರು ಎಂಬ ಒಂದು ಸಮಾಧಾನ ಇದರಿಂದ ಪ್ರಾಪ್ತಿಯಾಗುತ್ತದಲ್ಲ.

ಇದೇ ವಾರ ದಲೈಲಾಮ ಅವರಿಗೆ 90 ವರ್ಷ ತುಂಬಿತಂತೆ. 1935ರಲ್ಲಿ ಹುಟ್ಟಿದ ಅವರಿಗೆ ಭಾರತಕ್ಕೆ ಬರುವಾಗ 24 ವರ್ಷ. ನಿಮಗೆ ಗೊತ್ತೋ ಇಲ್ಲವೋ, ದಲೈಲಾಮ ಎಂಬುದು ಅವರ ಹೆಸರಲ್ಲ. ಅದು ಪದನಾಮ. ನಮ್ಮ ಜಗದ್ಗುರುಗಳು ಇದ್ದಂತೆ ಅವರು ಟಿಬೆಟಿಯನ್ನರ 14ನೇ ದಲೈ ಲಾಮ. ತೆಂಜಿನ್‌ ಗ್ಯಾತ್ಸೋ ಎಂಬುದು ಮೂಲ ಹೆಸರು. ಟಿಬೆಟಿಯನ್‌ ಬೌದ್ಧರು ಪುನರ್ಜನ್ಮವನ್ನು ನಂಬುತ್ತಾರೆ. ಸಾಮಾನ್ಯ ಹುಡುಗನೊಬ್ಬ ದಲೈ ಲಾಮ ಆಗಬೇಕಾದರೆ ಆತ ಪೂರ್ವಜನ್ಮದಲ್ಲಿ ಕೂಡ ಲಾಮ ಆಗಿದ್ದ ಎಂಬುದು ರುಜುವಾತಾಗಬೇಕು. ಇದನ್ನು ಪತ್ತೆ ಹಚ್ಚುವುದಕ್ಕೆ ಕಠಿಣವಾದ ಕೆಲವು ಸಂಪ್ರದಾಯಗಳಿವೆ.

ಮರಣ ಹೊಂದಲಿರುವ ಲಾಮಾ, ತನ್ನ ಕೆಲಸ ಮುಂದುವರಿಸಬೇಕು ಎಂದಿದ್ದರೆ ಪುನರ್ಜನ್ಮ ಪಡೆಯುತ್ತಾನೆ. ಹಾಗೆ ಜನ್ಮ ಪಡೆದ ಮಗುವನ್ನು ಹುಡುಕಲಾಗುತ್ತದೆ. ಪರೀಕ್ಷೆಗಳ ಸರಣಿಯಲ್ಲಿ ಉತ್ತೀರ್ಣನಾದ ಮಗುವನ್ನು ಟುಲ್ಕು ಎಂದು ಗುರುತಿಸಲಾಗುತ್ತದೆ. ಮರಗಳು ಪಲ್ಲವಿಸುವುದು, ಭೂಮಿಯ ಕಂಪನಗಳು, ದಹನದ ಹೊಗೆ ಸಾಗುವ ದಿಕ್ಕು, ಮಗುವಿನ ಪೋಷಕರು ಕಾಣುವ ಶಕುನಗಳು, ಕನಸುಗಳು- ಇವೆಲ್ಲ ಸೂಚನೆಗಳಾಗುತ್ತವೆ. ಮತ್ತಷ್ಟು ಪರೀಕ್ಷೆಗಳಲ್ಲಿ ಮಗುವಿನ ವ್ಯಕ್ತಿತ್ವವನ್ನು ಹಿಂದಿನ ಲಾಮಾ ಜೊತೆಗೆ ಹೋಲಿಸಲಾಗುತ್ತದೆ. ಹಿಂದಿನ ಲಾಮಾನ ಯಾವುದಾ ದರೂ ಸ್ವತ್ತಿನ ಬಗ್ಗೆ ಮಗು ಆಸಕ್ತಿ ತೋರುವುದು, ಅವರ ಯಾವುದಾದರೂ ವರ್ತನೆಯನ್ನು ಕಾಣಿಸುವುದು, ಲಾಮಾನ ನಿಕಟ ಸಹಚರರನ್ನು ಗುರುತಿಸುವುದು ಅಥವಾ ನೆನಪಿಸಿಕೊಳ್ಳುವುದು- ಇವನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಈ ಎಲ್ಲದರ ಮೇಲೆ ಅಂತಿಮವಾಗಿ ಹೊಸ ಲಾಮಾನ ಆಯ್ಕೆ.

ಸದ್ಯದ ದಲೈ ಲಾಮಾರ ಪರಿಸ್ಥಿತಿ ವಿಲಕ್ಷಣವಾಗಿದೆ. ಇದುವರೆಗೂ ಹೊಸ ಲಾಮಾನ ಆಯ್ಕೆ ಟಿಬೆಟ್‌ ನಲ್ಲಿಯೇ ನಡೆಯುತ್ತಿತ್ತು. ಆದರೆ ದಲೈ ಲಾಮಾ ಟಿಬೆಟ್‌ಗೆ ಹೋಗುವಂತಿಲ್ಲ ಹಾಗೂ ಅವರು ಸ್ಥಾಪಿಸಿರುವ ಬಹಿಷ್ಕೃತ ಟಿಬೆಟ್‌ ಸರ್ಕಾರ ಭಾರತದ ಧರ್ಮಶಾಲಾದಿಂದಲೇ ಕಾರ್ಯಾಚರಿಸುತ್ತಿದೆ.

90 ವರ್ಷ ತುಂಬಿದಾಗ ʼನಾನು 130 ವರ್ಷ ಬದುಕುತ್ತೇನೆʼ ಎಂದು ಲಾಮಾ ಘೋಷಿಸಿದ್ದಾರೆ. ʼಈ ಸಲ ಹೊಸ ಲಾಮಾನ ಆಯ್ಕೆ ಟಿಬೆಟ್‌ಗೆ ಹೊರಗೆ ನಡೆಯಲಿದೆʼ ಎಂದಿದ್ದಾರೆ. ಆದರೆ ಟಿಬೆಟನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡು, ಟಿಬೆಟಿಯನ್‌ ಬೌದ್ಧ ಸಂಸ್ಕೃತಿಯ ನಾಶಕ್ಕೆ ಪಣತೊಟ್ಟಿರುವ ಚೀನಾ ಇದನ್ನು ಎಂದೂ ಒಪ್ಪಿಲ್ಲ. ತಾನೇ ಹೊಸ ಲಾಮನ ಆಯ್ಕೆ ಮಾಡುತ್ತೇನೆಂದಿದೆ. ಚೀನಾದ ರಾಜವಂಶ ಹಿಂದೆಂದೋ ಜಾರಿಗೆ ತಂದಿದ್ದ ʼಸುವರ್ಣ ಕರಂಡಕʼ ಪದ್ಧತಿಯ ಮೂಲಕವೇ ಹೊಸ ಲಾಮಾ ಆಯ್ಕೆಯಾಗಬೇಕು ಎಂದಿದೆ. ಈ ಸುವರ್ಣ ಕರಂಡಕದ ಪದ್ಧತಿಯು ಪುನರ್ಜನ್ಮವನ್ನು ಒಪ್ಪಿ ನಡೆಸುವ ರೂಢಿ. ಪುನರ್ಜನ್ಮ ಎಂಬ ಪರಿಕಲ್ಪನೆಯಲ್ಲಿ ನಂಬಿಕೆಯಿಲ್ಲದ ಚೀನಾದ ಕಮ್ಯು ನಿಸ್ಟರು ಇದಕ್ಕೆ ಮಾತ್ರ ಈ ರೂಢಿಯನ್ನು ಬಳಸುತ್ತೇವೆನ್ನುವುದು ಪರಿಸ್ಥಿತಿಯ ವ್ಯಂಗ್ಯ.

ʼದಲೈ ಲಾಮಾ ಎಂಬ ವ್ಯವಸ್ಥೆ ಮುಂದುವರಿಯಬೇಕೆ ಬೇಡವೇ ಎಂಬುದು ಟಿಬೆಟಿನ ಜನರಿಗೆ ಬಿಟ್ಟದ್ದು. ಅದು ಅಪ್ರಸ್ತುತ ಎಂದು ಅವರು ಭಾವಿಸಿದರೆ ಪದ್ಧತಿ ನಿಂತು ಹೋಗುತ್ತದೆ. 15ನೇ ದಲೈ ಲಾಮಾ ಇರುವುದಿಲ್ಲ. ಆದರೆ ನಾನು ಇಂದು ಸತ್ತರೆ ಅವರು ಇನ್ನೊಬ್ಬ ದಲೈ ಲಾಮಾನನ್ನು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಿಂದಿನ ಜನ್ಮದ ಕ್ರಿಯೆಯ ಉದ್ದೇಶವನ್ನು ಪೂರೈಸು ವುದೇ ಪುನರ್ಜನ್ಮದ ಉದ್ದೇಶ. ನನ್ನ ಜೀವನ ಟಿಬೆಟ್‌ನ ಹೊರಗೆ ನಡೆದಿದೆ. ಆದ್ದರಿಂದ ತಾರ್ಕಿಕ ವಾಗಿ ನನ್ನ ಪುನರ್ಜನ್ಮ ಹೊರಗೇ ಕಂಡುಬರಲಿದೆ. ಆದರೆ ಮುಂದಿನ ಪ್ರಶ್ನೆ- ಚೀನಿಯರು ಇದನ್ನು ಸ್ವೀಕರಿಸುತ್ತಾರಾ? ಚೀನಾ ಸ್ವೀಕರಿಸುವುದಿಲ್ಲ. ಚೀನೀ ಸರ್ಕಾರ ಬೇರೆ ಪಂಚೆನ್ ಲಾಮಾನನ್ನು ಮಾಡಿದಂತೆ ಇನ್ನೊಬ್ಬ ದಲೈ ಲಾಮಾ ನೇಮಿಸುವ ಸಾಧ್ಯತೆಯಿದೆ. ಹಾಗೆ ಆದರೆ ಇಬ್ಬರು ದಲೈ ಲಾಮಾಗಳು ಇರುತ್ತಾರೆ- ಒಬ್ಬರು ಟಿಬೆಟಿಯನ್ನರ ಹೃದಯದ ದಲೈ ಲಾಮಾ. ಇನ್ನೊಬ್ಬರು ಚೀನಾದಿಂದ ನೇಮಕಗೊಂಡವರುʼ ಎಂದು ಲಾಮಾ ಇತ್ತೀಚೆಗೆ ಹೇಳಿದ್ದರು.

ದಲೈ ಲಾಮಾ ಅವರಿಗೆ ಭಾರತ ಆಶ್ರಯ ಕೊಟ್ಟಿದ್ದು ಸದಾ ಚೀನಾದ ಉರಿಗಣ್ಣಿಗೆ ಕಾರಣವಾಗಿರುವ ಸಂಗತಿ. ಇದೀಗ ಲಾಮಾರನ್ನು ಅಭಿನಂದಿಸಲು ಕೇಂದ್ರ ಸರಕಾರದ ಸಚಿವರು ಹೋಗಿರುವುದೂ ಅದರ ಸಿಟ್ಟಿಗೆ ಕಾರಣವಾಗಿದೆ. ಟಿಬೆಟ್‌ನ ಹೊರಗೆ ಹೊಸ ಲಾಮಾನ ಆಯ್ಕೆ ನಡೆಯಲಿದೆ ಎಂದರೆ ಭಾರತ, ನೇಪಾಳ ಅಥವಾ ಭೂತಾನ್‌ನಲ್ಲಿ ಆಗಬೇಕಷ್ಟೇ. 45ಕ್ಕೂ ಹೆಚ್ಚು ವಸಾಹತುಗಳಿರುವ ಭಾರತದಲ್ಲೇ ಅತ್ಯಧಿಕ ಟಿಬೆಟಿಯನ್ನರು, ಅಂದರೆ ಸುಮಾರು ಒಂದೂವರೆ ಲಕ್ಷ ಮಂದಿ ಇರುವುದು. ಅಂದರೆ ಭಾರತದಲ್ಲಿಯೇ ಹೊಸ ಲಾಮನ ಆಯ್ಕೆ ಮಾಡುವ ಸಾಧ್ಯತೆ ಅಧಿಕ. ಹಾಗೇನಾದರೂ ಅದರೆ ಚೀನಾ ಕೋಪದಿಂದ ಕುದ್ದುಹೋಗಲಿದೆ. ಇದರಿಂದ ಭಾರತದೊಂದಿಗೆ ಚೀನಾದ ಡಿಪ್ಲೊಮಸಿ ಇನ್ನಷ್ಟು ಹಳಸಬಹುದು. ಇದು ಕೇಂದ್ರ ಸರಕಾರದ ಚಿಂತೆಗೆ ಕಾರಣ. ಹೀಗಾಗಿ ಟಿಬೆಟಿಯನ್ನ ರೊಂದಿಗೆ ನೇರವಾಗಿ ಕಾಣಿಸಿಕೊಳ್ಳಬೇಡಿ ಎಂದು ತನ್ನ ಅಧಿಕಾರಿಗಳು, ಸಚಿವರಿಗೆ ಸರ್ಕಾರ ಪರೋಕ್ಷವಾಗಿ ತಿಳಿಸುತ್ತಾ ಇರುತ್ತದೆ. ಇದು ಭಾರತದಲ್ಲಿರುವ ಟಿಬೆಟಿಯನ್ನರು ನರ್ವಸ್‌ ಆಗುವುದಕ್ಕೂ ಕಾರಣವಾಗಿದೆ.

ಹಾಗೆ ನೋಡಿದರೆ ಟಿಬೆಟಿಯನ್ನರು ಅತ್ಯಂತ ಶಾಂತಿಯುತ ಸಮುದಾಯ. ಭಾರತದಲ್ಲಿರುವ ಅನ್ಯ ನಿರಾಶ್ರಿತ ವಲಸಿಗರಿಗೆ ಹೋಲಿಸಿದರೆ, ಟಿಬೆಟಿಯನ್ನರಷ್ಟು ಶಾಂತಿಪ್ರಿಯರು ಇನ್ಯಾರೂ ಸಿಗಲಿಕ್ಕಿಲ್ಲ. ಬೈಲುಕುಪ್ಪೆಯ ಸುಮಾರು ಮೂರು ಸಾವಿರ ಎಕರೆಗಳಲ್ಲಿ ಹರಡಿಹೋಗಿರುವ ಇವರು ಸ್ಥಳೀಯ ಸಮುದಾಯದ ಜೊತೆಗೆ ಯಾವುದೇ ಗಲಾಟೆ ಗೊಂದಲಗಳಿಲ್ಲದೆ ಬೆರೆತುಹೋಗಿದ್ದಾರೆ. ತಮ್ಮ ಬೆಳೆ ತಾವೇ ಬೆಳೆದುಕೊಳ್ಳುತ್ತಾರೆ, ಸಣ್ಣಪುಟ್ಟ ಕೆಲಸಗಳಲ್ಲಿದ್ದಾರೆ. ಆದರೆ ಪೂರ್ತಿ ಸುಖವಾಗಿದ್ದಾರೆ ಎಂದೂ ಅಲ್ಲ. ಅವರು ಕಾನೂನಾತ್ಮಕವಾಗಿ ಭಾರತದ ʼಪೌರʼರಲ್ಲ. ವಿದೇಶಿಗರು ಅಷ್ಟೇ. ಹೀಗಾಗಿ ಸರಕಾರಿ ನೌಕರಿಗಳು ಅವರಿಗೆ ಲಭ್ಯವಿಲ್ಲ. ಕೃಷಿ ಹಾಗೂ ಧಾರ್ಮಿಕತೆಯನ್ನು ನೆಚ್ಚಿರುವ ಅವರು ಪರಂಪರೆಯಿಂದ ಉದ್ಯಮಶೀಲರೂ ಅಲ್ಲ. ಹೀಗಾಗಿ, ಇಲ್ಲಿ ಹುಟ್ಟುತ್ತಿರುವ ಹೊಸ ಪೀಳಿಗೆಗಳು ಭಾರತದಾಚೆಗೆ ಮುಖ ಮಾಡುತ್ತಿವೆ. ಇಡೀ ಸಮುದಾಯಕ್ಕೆ ತಾವು ಎತ್ತ ಹೋಗುತ್ತಿದ್ದೇವೆ ಎಂಬುದು ಸ್ಪಷ್ಟವಿಲ್ಲ.

ದಲೈ ಲಾಮ ತಮ್ಮ ಸ್ಥಾನಕ್ಕೆ ಅನುಗುಣವಾದ ರೀತಿನೀತಿಗಳನ್ನು ಕಾಯ್ದುಕೊಂಡಿದ್ದಾರೆ. ಅವರನ್ನು ʼರಾಜಕೀಯ ಸಂತʼ ಎಂದು ಹೇಳಬಹುದು. ಏಕಕಾಲಕ್ಕೆ ಟಿಬೆಟಿಯನ್ನರ ಧರ್ಮಗುರುವೂ, ರಾಜಕೀಯ ಮುಖಂಡನೂ ಆಗಿರಬೇಕಾದ ಪಾಡು ಅವರದು. ಸದಾ ಕಾಲ ಬೇರೊಂದು ದೇಶದ ಆಶ್ರಯದಲ್ಲಿರಬೇಕಾಗಿ ಬಂದಿರುವುದರಿಂದಲೋ ಏನೋ, ಅವರ ಮಾತುಗಳು ತುಂಬಾ ವಿನಯ ಶೀಲವಾಗಿರುತ್ತವೆ. ಒಂದು ಸಲ ಅವರು ತಮ್ಮನ್ನು ʼಭಾರತದ ಶಿಷ್ಯʼ ಎಂದು ಕರೆದುಕೊಂಡಿದ್ದರು. ʼನಾನು ಹೊಸದೇನನ್ನೂ ಹೇಳುತ್ತಿಲ್ಲ. ಭಾರತ ಶತಮಾನಗಳಿಂದ ಪ್ರತಿಪಾದಿಸುತ್ತ ಬಂದಿರುವ ಕೆಲವು ತತ್ವಗಳನ್ನಷ್ಟೇ ನಾನು ಮರಳಿ ಹೇಳುತ್ತಿದ್ದೇನೆ. ಅವು ಅಹಿಂಸೆ, ಕರುಣೆ ಮತ್ತು ಸಹಬಾಳ್ವೆ. ಜಗತ್ತಿನ ಎಲ್ಲಿ ಹೋದರೂ ನಾನು ಇದನ್ನು ಭಾರತದಿಂದ ಕಲಿತದ್ದು ಎಂದು ಹೇಳುತ್ತೇನೆʼ ಎನ್ನುವ ಲಾಮಾ, ಸದಾ ಎತ್ತಿ ಹಿಡಿಯುವ ಭಾರತದ ಎರಡು ಮಹಾನ್‌ ವ್ಯಕ್ತಿತ್ವಗಳೆಂದರೆ ಬುದ್ಧ ಮತ್ತು ಗಾಂಧಿ.

ಅವರ ಆತ್ಮಕತೆ ʼಫ್ರೀಡಂ ಇನ್‌ ಎಕ್ಸೈಲ್‌ʼ ಹೀಗೆ ಶುರುವಾಗುತ್ತದೆ: ʼಟಿಬೆಟ್‌ ಸ್ವತಂತ್ರವಾಗಿ ಇದ್ದಾಗಿನ ದಿನಗಳನ್ನು ಹಿಂದಿರುಗಿ ನೋಡಿದರೆ, ಅವು ನನ್ನ ಜೀವನದ ಅತ್ಯುತ್ತಮ ದಿನಗಳೆಂದುಕೊಳ್ಳುತ್ತೇನೆ. ಇಂದೂ ನಾನು ಸಂತೋಷವಾಗಿದ್ದೇನೆ, ಇಲ್ಲವೆಂದಲ್ಲ. ಆದರೆ ಅಂದಿನ ಸ್ಥಿತಿಗತಿಗಳೇ ಬೇರೆ ಇದ್ದವು. ಹಳಹಳಿಕೆಯಲ್ಲಿ ಮುಳುಗುವುದರಿಂದ ಏನೂ ಲಾಭವಿಲ್ಲ ಎಂದು ನಾನು ಬಲ್ಲೆ. ಆದರೆ ಭೂತಕಾಲ ವನ್ನು ನೆನೆದುಕೊಂಡಾಗ ಆಗುವ ಬೇಸರವನ್ನು ತಪ್ಪಿಸಲಾರೆ. ನನ್ನ ಜನಗಳು ಅನುಭವಿಸಿದ ಭಯಾನಕ ಯಾತನೆ. ಹಳೆ ಟಿಬೆಟ್‌ ಪರಿಪೂರ್ಣವಾಗಿರಲಿಲ್ಲ ನಿಜ. ಆದರೂ ನಮ್ಮ ಬದುಕಿನ ರೀತಿ ಗಮನಾರ್ಹ, ಗೌರವಾರ್ಹವಾಗಿತ್ತು. ಎಂದೆಂದಿಗೂ ಕಳೆದುಹೋದ ಅವುಗಳಲ್ಲಿ ಕೆಲವನ್ನಾದರೂ ಉಳಿಸಿಕೊಳ್ಳುವುದು ಅಗತ್ಯವಾಗಿತ್ತು.ʼ

ದುಃಖ, ಯಾತನೆಗಳಿವೆ ನಿಜ. ಆದರೆ ಬದುಕಿನ ಉದ್ದೇಶ ಸಂತಸದಿಂದ ಇರುವುದು. ಅಂದರೆ ಯಾವಾಗಲೂ ನಗುತ್ತಿರುವುದು, ಸಮಸ್ಯೆಗಳೇ ಇಲ್ಲದಿರುವುದು ಅಂತಲೂ ಅಲ್ಲ. ಶಾಂತ ಮನಸ್ಥಿತಿ, ಭಾವನೆಗಳ ಸಮನ್ವಯ, ವಾತ್ಸಲ್ಯಭರಿತ ಹೃದಯವನ್ನು ಬೆಳೆಸಿಕೊಳ್ಳುವುದು. ಅದೇನೂ ಅದೃಷ್ಟ ವಂತರಿಗೆ ಮಾತ್ರ ಸಾಧ್ಯವೆಂದಲ್ಲ, ಎಲ್ಲರೂ ಪರಿಶ್ರಮಪಟ್ಟರೆ ಅದನ್ನು ಬೆಳೆಸಿಕೊಳ್ಳಬಹುದು.

ದಿನನಿತ್ಯ ವ್ಯಾಯಾಮ ಮಾಡಿ ದೇಹವನ್ನು ಸೊಗಸಾಗಿ ಇಟ್ಟುಕೊಳ್ಳುವಂತೆಯೇ ಮನೋ ನೆಮ್ಮದಿ ಯನ್ನೂ ಕೃಷಿ ಮಾಡಿಕೊಳ್ಳಬಹುದು. ಜಗತ್ತು ನಿರಂತರ ಸ್ಪರ್ಧೆ, ಸ್ವಾರ್ಥಗಳಿಂದ ತಳಮಳಿಸುತ್ತಿರು ತ್ತದೆ. ನಾವೆಲ್ಲರೂ ಸಿಟ್ಟಾಗುತ್ತೇವೆ. ಆದರೆ ಸಿಟ್ಟಿನ ಮೂಲವನ್ನು ನೋಡಿ. ಥಟ್ಟನೆ ಪ್ರತಿಕ್ರಿಯಿಸುವು ದಕ್ಕಿಂತಲೂ ಒಂದರೆಗಳಿಗೆ ನಿಂತು ಯೋಚಿಸಿ. ಎದುರಿನವನ ದೃಷ್ಟಿಕೋನ ಅವಲೋಕಿಸಿ. ಬಹುಶಃ ನಿಮ್ಮಂತೆಯೇ ಅವನೂ ಬಿಕ್ಕಟ್ಟಿನಲ್ಲಿರಬಹುದು. ತಾಳ್ಮೆಯೆಂಬುದು ದೌರ್ಬಲ್ಯವಲ್ಲ, ಅದು ಶಕ್ತಿ. ಆಧುನಿಕರಾದ ನೀವು ಕೆಲಸ, ಪರೀಕ್ಷೆ, ಆರೋಗ್ಯ, ಸಂಬಂಧ ಎಲ್ಲದರಲ್ಲೂ ಆತಂಕ ಅನುಭವಿಸು ತ್ತಿದ್ದೀರಿ.

ಭವಿಷ್ಯದ ಭಯ ನಿಮ್ಮ ನೆಮ್ಮದಿಯನ್ನು ಕಿತ್ತುಕೊಂಡಿದೆ. ಈ ಕ್ಷಣದಲ್ಲಿ ಬದುಕಿ. ನಿಮ್ಮನ್ನೂ ಇತರ ರನ್ನೂ ಪ್ರೀತಿಸಲು ಕಲಿಯಿರಿ- ಎಂದೆಲ್ಲ ಹೇಳುವ ದಲೈ ಲಾಮಾ ಮಾತುಗಳಲ್ಲಿ ಹೊಸ ಹೊಳಹು ಗಳೇನೂ ಕಾಣಿಸಲಿಕ್ಕಿಲ್ಲ. ಆದರೆ ಒಂಬತ್ತು ದಶಕಗಳ ಬಹಿಷ್ಕೃತ ಬದುಕು ನೀಡಿದ ಅನುಭವದ ಹೊಳಪಂತೂ ಖಂಡಿತ ಇದೆ.