AA22xA6: ಮತ್ತೊಂದು ಅಲ್ಲು ಅರ್ಜುನ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ? ಮೋಡಿ ಮಾಡಲು ಸಜ್ಜಾದ ʼಪುಷ್ಪʼ ಜೋಡಿ
Rashmika Mandanna: ಈಗಾಗಲೇ ಭಾರಿ ಕುತೂಹಲ ಕೆರಳಿಸಿರುವ ಅಲ್ಲು ಅರ್ಜುನ್-ದೀಪಿಕಾ ಪಡುಕೋಣೆ-ಅಟ್ಲಿ ಕಾಂಬಿನೇಷನ್‌ನ ಚಿತ್ರಕ್ಕೆ ಮತ್ತೊಬ್ಬ ಸ್ಟಾರ್ ನಟಿಯ ಎಂಟ್ರಿಯಾಗಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಈ ಸಿನಿಮಾದ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ.

ಹೈದರಾಬಾದ್: 2021 ಮತ್ತು ಕಳೆದ ವರ್ಷ ತೆರೆಕಂಡ ಪ್ಯಾನ್ ಇಂಡಿಯಾ ಚಿತ್ರ ʼಪುಷ್ಪʼ ಮತ್ತು ʼಪುಷ್ಪ 2ʼ ಮೂಲಕ ಪ್ರೇಕ್ಷಕರ ಗಮನ ಸೆಳೆದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಮತ್ತೊಮ್ಮೆ ತೆರೆಮೇಲೆ ಒಂದಾಗಲಿದೆ. ಹೌದು, ಭಾರತೀಯ ಚಿತ್ರರಂಗದ ಫೆವರೇಟ್ ಜೋಡಿಗಳಲ್ಲಿ ಒಂದಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮತ್ತೊಮ್ಮೆ ಜತೆಯಾಗಿ ನಟಿಸಲಿದ್ದಾರೆ. ಅದೂ ಹೈ ಬಜೆಟ್ ಚಿತ್ರದಲ್ಲಿ ಎನ್ನುವುದು ವಿಶೇಷ. ಹಾಗಾದರೆ ಯಾವುದು ಈ ಪ್ರಾಜೆಕ್ಟ್? ನಿರ್ದೇಶಕ ಯಾರು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
2023ರಲ್ಲಿ ರಿಲೀಸ್ ಆದ ಅಟ್ಲಿ ನಿರ್ದೇಶನದ ಹಿಂದಿಯ ʼಜವಾನ್ʼ ಮತ್ತು ಕಳೆದ ವರ್ಷ ಬಿಡುಗಡೆಯಾದ ಅಲ್ಲು ಅರ್ಜುನ್ ನಟನೆಯ ʼಪುಷ್ಪ 2ʼ ಚಿತ್ರಗಳು ಭಾರಿ ಯಶಸ್ಸು ಕಂಡಿವೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಇಂತಹ ದಿಗ್ಗಜರು ಮೊದಲ ಬಾರಿಗೆ ಒಂದಾಗುತ್ತಿರುವ ತೆಲುಗು ಚಿತ್ರ ಇತ್ತೀಚೆಗೆ ಘೋಷಣೆಯಾಗಿದೆ. ಟೈಟಲ್ ಇನ್ನೂ ಅಂತಿಮವಾಗದ ಭಾರಿ ಬಜೆಟ್‌ನ ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇದರ ಜತೆಗೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಈ ಸುದ್ದಿಯನ್ನೂ ಓದಿ: Dipika Padukone: ಅಲ್ಲು ಅರ್ಜುನ್ ಬಿಗ್ ಬಜೆಟ್ ಸಿನಿಮಾಕ್ಕೆ ದೀಪಿಕಾ ಹೀರೋಯಿನ್- ಶೂಟಿಂಗ್ ಶುರುವಾಯ್ತಾ? ವಿಡಿಯೊ ಫುಲ್ ವೈರಲ್
ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರ ರಶ್ಮಿಕಾ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದೆ. ʼʼಕೊಡಗಿನ ಬೆಡಗಿ ರಶ್ಮಿಕಾ ಕೂಡ ಈ ಪ್ರಾಜೆಕ್ಟ್‌ನ ಭಾಗವಾಗಲಿದ್ದಾರೆ. ಇದುವರೆಗೆ ಮಾಡಿರದ ಪಾತ್ರದಲ್ಲಿ, ವಿಭಿನ್ನ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆʼʼ ಎಂದು ವರದಿಯೊಂದು ತಿಳಿಸಿದೆ. ಅದಾಗ್ಯೂ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬೀಳಬೇಕಿದೆ.
ಭಾರಿ ಬಜೆಟ್, ವಿಭಿನ್ನ ಕಥೆ, ಹೊಸ ಮಾದರಿಯ ಚಿತ್ರಕಥೆ ಮೂಲಕ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಭಾಷ್ಯ ಬರೆಯಲು ಸಜ್ಜಾಗಿದೆ. ಸೈನ್ಸ್ ಫಿಕ್ಷನ್ ಇದಾಗಿದ್ದು, ಅಲ್ಲು ಅರ್ಜುನ್ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಿಂಕಿವಿಲ್ಲಾ ಸುದ್ದಿಸಂಸ್ಥೆಯ ಪ್ರಕಾರ ಈ ಚಿತ್ರದ ಮುಖ್ಯ ಪಾತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ. ʼʼಅಟ್ಲಿ ಅವರ ಕನಸಿನ ಪ್ರಾಜೆಕ್ಟ್‌ಗೆ ರಶ್ಮಿಕಾ ಸೇರ್ಪಡೆಯಾಗಿದ್ದಾರೆ. ಅತ್ಯಂತ ಸವಾಲಿನ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ʼಪುಷ್ಪʼ ಸರಣಿಯ ಪಾತ್ರಕ್ಕಿಂತ ಭಿನ್ನವಾಗಿ ಅವರು ಮತ್ತು ಅಲ್ಲು ಅರ್ಜುನ್ ತೆರೆಮೇಲೆ ಪ್ರತ್ಯಕ್ಷವಾಗಲಿದ್ದಾರೆʼʼ ಎಂದು ಪಿಂಕಿವಿಲ್ಲಾ ತಿಳಿಸಿದೆ.
ಅಮೆರಿಕದಲ್ಲಿ ಈಗಾಗಲೇ ರಶ್ಮಿಕಾ ಅವರ ಲುಕ್ ಟೆಸ್ಟ್ ಪೂರ್ಣಗೊಂಡಿದೆಯಂತೆ. 2 ಭಿನ್ನ ಜಗತ್ತಿನಲ್ಲಿ ಕಥೆ ಸಾಗಲಿದ್ದು, ಕಲಾವಿದರನ್ನು ಅಳೆದೂ ತೂಗಿ ಆಯ್ಕೆ ಮಾಡಲಾಗುತ್ತಿದೆ. ʼʼಆ್ಯಕ್ಷನ್ ಪ್ಯಾಕ್ಡ್ ಚಿತ್ರ ಇದಾಗಿದ್ದು, ಹಾಲಿವುಡ್‌ನ 'ಅವತಾರ್' ಮಾದರಿಯಲ್ಲಿ ತಯಾರಾಗಲಿದೆ. ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆʼʼ ಎಂದು ಮೂಲಗಳು ಹೇಳಿವೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ ಸುಮಾರು 800 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಲಿದ್ದು, ಚಿತ್ರೀಕರಣ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಶೂಟಿಂಗ್ ಜತೆಗೆ ಜತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಕೈಗೆತ್ತಿಕೊಳ್ಳಲು ಚಿತ್ರತಂಡ ಮುಂದಾಗಿದ್ದು, ಇದು 2026ರ ಕೊನೆ ಭಾಗದಲ್ಲಿ ಅಥವಾ 2027ರ ಆರಂಭದಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ.