Yashasvi Jaiswal: ಮುಂಬೈ ತೊರೆದು ಗೋವಾ ತಂಡ ಸೇರಲಿದ್ದಾರೆ ಜೈಸ್ವಾಲ್
Yashasvi Jaiswal Quits Mumbai: 'ವೈಯಕ್ತಿಕ ಕಾರಣ ಎಂದು ಉಲ್ಲೇಖಿಸಿ ಜೈಸ್ವಾಲ್ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕೇಳಿದ್ದಾರೆ. ಅವರು ಗೋವಾ ಪರ ಆಡಲು ಇಚ್ಚಿಸಿದ್ದಾರೆ' ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.


ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಯುವ ಪ್ರತಿಭಾನ್ವಿತ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಮುಂಬೈ ತಂಡ(Mumbai Team)ವನ್ನು ತೊರೆದು ಗೋವಾ(Goa) ಸೇರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಜೈಸ್ವಾಲ್ ತಮ್ಮ ಕ್ರಿಕೆಟ್ ರಾಜ್ಯ ತಂಡವನ್ನು ಬದಲಾಯಿಸಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಕೋರಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗೆ ಇಮೇಲ್ ಬರೆದಿದ್ದಾರೆ ಎಂದು ಹೇಳಲಾಗಿದೆ. ಅರ್ಜುನ್ ತೆಂಡೂಲ್ಕರ್ ಮತ್ತು ಸಿದ್ಧೇಶ್ ಲಾಡ್ ಇತ್ತೀಚೆಗೆ ಮುಂಬೈ ತಂಡವನ್ನು ತಿರೆದು ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದರು.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಹಿಂದಿರುಗಿದ ನಂತರ ಜೈಸ್ವಾಲ್ ಇತ್ತೀಚೆಗೆ 2024-25ರ ರಣಜಿ ಟ್ರೋಫಿ ಅಭಿಯಾನದಲ್ಲಿ ಮುಂಬೈ ಪರ ಆಡಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೇಶೀಯ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ತಾರೆಯರು ಭಾಗವಹಿಸುವುದನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ಜೈಸ್ವಾಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದವರು ತಮ್ಮ ತಮ್ಮ ರಾಜ್ಯ ತಂಡಗಳಿಗೆ ಮರಳಿದ್ದರು. ಆದರೆ, ಮುಂದಿನ ಋತುವಿನಿಂದ ಜೈಸ್ವಾಲ್ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
'ವೈಯಕ್ತಿಕ ಕಾರಣ ಎಂದು ಉಲ್ಲೇಖಿಸಿ ಜೈಸ್ವಾಲ್ ನಮ್ಮಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಕೇಳಿದ್ದಾರೆ. ಅವರು ಗೋವಾ ಪರ ಆಡಲು ಇಚ್ಚಿಸಿದ್ದಾರೆ' ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೂಲವೊಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದೆ.
ಇದನ್ನೂ ಓದಿ IPL 2025: ಐಪಿಎಲ್ ಅಭಿಮಾನಿಗಳಿಗೆ ಬಿಎಂಟಿಸಿಯಿಂದ ವಿಶೇಷ ಬಸ್ ಸೌಲಭ್ಯ
ಜೈಸ್ವಾಲ್ ಮುಂಬೈ ಪರ 36 ಪ್ರಥಮ ದರ್ಜೆ ಕ್ರಿಕೆಟ್ ಆಡಿ 3712 ರನ್ ಬಾರಿಸಿದ್ದಾರೆ. ಈ ವೇಳೆ 13 ಶತಕ ಕೂಡ ಸಿಡಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 7 ಶತಕ ಒಳಗೊಂಡಂತೆ 1526 ರನ್ ಬಾರಿಸಿದ್ದಾರೆ.