SRH vs GT: ಇಂದು ಹೈದರಾಬಾದ್-ಗುಜರಾತ್ ಸೆಣಸು
ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಆ ಬಳಿಕ ಎರಡಂಕಿ ಮೊತ್ತ ಗಳಿಸಿಲ್ಲ. ಅಭಿಷೇಕ್ ಶರ್ಮ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ಈ ಪಂದ್ಯದಲ್ಲಿ ಇವರೆಲ್ಲ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.


ಹೈದರಾಬಾದ್: ಸತತ 3 ಸೋಲುಗಳಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್(SRH vs GT) ತಂಡ ಇಂದು(ಭಾನುವಾರ) ನಡೆಯುವ ಐಪಿಎಲ್(IPL 2025) 18ನೇ ಆವೃತ್ತಿಯ ತನ್ನ 5ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇತ್ತಂಡಗಳ ಈ ಕಾದಾಟಕ್ಕೆ ಆರ್‌ಜಿಐ ಕ್ರೀಡಾಂಗಣ ಅಣಿಯಾಗಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿರುವ ಪ್ಯಾಟ್ ಕಮ್ಮಿನ್ಸ್ ಬಳಗ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ.
ಟೂರ್ನಿ ಆರಂಭಕ್ಕೂ ಮುನ್ನ 300 ಪ್ಲಸ್ ರನ್‌ಗಳಿಸುವ ಗುರಿ ಹೊಂದಿದ್ದ ಸನ್‌ರೈಸರ್ಸ್ ಹೈದರಾಬಾದ್ ಹಿಂದಿನ ಪಂದ್ಯದಲ್ಲಿ 100 ರನ್‌ಗಳಿಸಲು ಪರದಾಡಿತ್ತು. ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿದ್ದರೂ ಕೂಡ ಇವರೆಲ್ಲರ ಪ್ರದರ್ಶನ ಕೇವಲ ಒಂದು ಪಂದ್ಯಕ್ಕೆ ಸೀಮಿತವಾದದ್ದು ಸರಣಿ ಸೋಲಿಗೆ ಕಾರಣವಾಗಿದೆ. ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಆ ಬಳಿಕ ಎರಡಂಕಿ ಮೊತ್ತ ಗಳಿಸಿಲ್ಲ. ಅಭಿಷೇಕ್ ಶರ್ಮ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ಈ ಪಂದ್ಯದಲ್ಲಿ ಇವರೆಲ್ಲ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
ಹೈದರಾಬಾದ್ ಬೌಲಿಂಗ್ ಕೂಡ ಅಷ್ಟು ಘಾತಕವಾಗಿಲ್ಲ. ಅನುಭವಿ ಆಟಗಾರರಾದ ಮೊಹಮ್ಮದ್ ಶಮಿ, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್ ಪ್ರತಿ ಪಂದ್ಯದಲ್ಲೂ ದುಬಾರಿಯಾಗುತ್ತಿದ್ದಾರೆ. ಹೀಗಾಗಿ ಇವರೆಲ್ಲ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.
ಇದನ್ನೂ ಓದಿ IPL 2025 Points Table: ಡೆಲ್ಲಿಗೆ ಅಗ್ರಸ್ಥಾನ, ಏಳಕ್ಕೇರಿದ ರಾಜಸ್ಥಾನ್
ಆರ್‌ಸಿಬಿ ತಂಡವನ್ನು ಅದರ ತವರಿನಲ್ಲೇ ಮಣಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಗುಜರಾತ್ ಇದೀಗ ಹೈದರಾಬಾದ್ ತಂಡವನ್ನೂ ಕೂಡ ಅವರದೇ ತವರಿನಲ್ಲಿ ಮಣಿಸುವ ವಿಶ್ವಾಸದಲ್ಲಿದೆ. ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್, ಜಾಸ್ ಬಟ್ಲರ್ ಮತ್ತು ಇಂಪ್ಯಾಕ್ಟ್ ಆಟಗಾರ ರುದರ್‌ಫೋರ್ಡ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಇನ್ನೂ ಬೌಲಿಂಗ್ ಲಯ ಕಂಡುಕೊಳ್ಳದೇ ಇರುವುದು ತಂಡಕ್ಕಿರುವ ಸದ್ಯದ ಚಿಂತೆಯಾಗಿದೆ.
ಪಿಚ್ ರಿಪೋರ್ಟ್
ಹೈದರಾಬಾದ್‌ನ ಉಪ್ಪಾಳ ಸ್ಟೇಡಿಯಂ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಈ ಪಂದ್ಯವನ್ನು ಹೈಸ್ಕೋರಿಂಗ್ ಎಂದು ನಿರೀಕ್ಷೆ ಮಾಡಬಹುದು. ಪಂದ್ಯಕ್ಕೆ ಯಾವುದೇ ಮಳೆ ಆತಂಕ ಇಲ್ಲದ ಕಾರಣ ಪಂದ್ಯ ಸಂಪೂರ್ಣವಾಗಿ ಸಾಗಲಿದೆ.
ಮುಖಾಮುಖಿ
ಉಭಯ ತಂಡಗಳ ಐಪಿಎಲ್ ಮುಖಾಮುಖಿ ದಾಖಲೆ ನೋಡುವಾಗ ಗುಜರಾತ್ ಬಲಿಷ್ಠವಾಗಿದೆ. ಇದುವರೆಗೆ ಆಡಿದ 5 ಪಂದ್ಯಗಳಲ್ಲಿ ಗುಜರಾತ್ ತಂಡ 3 ಗೆಲುವು ಸಾಧಿಸಿದರೆ, ಹೈದರಾಬಾದ್ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ.