ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gaurav Khanna: ಸೆಲೆಬ್ರಿಟಿ ಮಾಸ್ಟರ್‌ಶೆಫ್‌ನಲ್ಲಿ ವಿದೇಶಿ ಶೆಫ್‌ನ ಖಾದ್ಯ ನಕಲು ಮಾಡಿದರೇ ಗೌರವ್ ಖನ್ನಾ?

Celebrity MasterChef India: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸೆಲೆಬ್ರಿಟಿ ಮಾಸ್ಟರ್‌ಶೆಫ್‌ ರಿಯಾಲಿಟಿ ಶೋ ಹೊಸ ವಿವಾದ ಹುಟ್ಟು ಹಾಕಿದೆ. ಭಾರತದ ಖ್ಯಾತ ಟಿವಿ ನಟ ಗೌರವ್‌ ಖನ್ನಾಅವರು ಮಾಡಿದ ಒಂದು ವಿಶಿಷ್ಟ ಸಿಹಿ ಖಾದ್ಯದ ನಿಜವಾದ ಸೃಷ್ಟಿಕರ್ತ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ವಿದೇಶಿ ಶೆಫ್‌ನ ಖಾದ್ಯ ನಕಲು ಮಾಡಿದರೇ ಗೌರವ್ ಖನ್ನಾ?

ಗೌರವ್‌ ಖನ್ನಾ.

Profile Sushmitha Jain Apr 5, 2025 11:13 PM

ಹೊಸದಿಲ್ಲಿ: ಅಡುಗೆ ಸಂಬಂಧಿಸಿದ ರಿಯಾಲಿಟಿ ಶೋಗಳನ್ನು ಇಷ್ಟಪಟ್ಟು ನೋಡುವ ಜನರು ಸಾಕಷ್ಟಿದ್ದಾರೆ. ಕೆಲವರು ದೇಶ-ವಿದೇಶಗಳ ವಿವಿಧ ಖಾದ್ಯಗಳನ್ನು ಮಾಡುವುದು ಹೇಗೆ ಎಂದು ತಿಳಿದು ಅದನ್ನು ತಮ್ಮ ಮನೆಯವರಿಗೆಲ್ಲಾ ಮಾಡಿ ತಿನ್ನಿಸುವ ಹವ್ಯಾಸ ಹೊಂದಿದ್ದಾರೆ. ಆದರೆ ಕೆಲವೊಮ್ಮೆ ಯಾವ ಖಾದ್ಯವನ್ನು ಯಾರು ಮೊದಲು ಮಾಡಿದ್ದು? ಯಾರು ಈ ಖಾದ್ಯದ ನಿಜವಾದ ಸೃಷ್ಟಿಕರ್ತ? ಎಂಬ ಗೊಂದಲ, ವಿವಾದ ಸೃಷ್ಟಿಯಾಗುತ್ತಲೇ ಇರುತ್ತದೆ. ಭಾರತದ ಖಾಸಗಿ ವಾಹಿನಿ ನಡೆಸಿ ಕೊಡುವ ಸೆಲೆಬ್ರಿಟಿ ಮಾಸ್ಟರ್‌ಶೆಫ್‌ ಇಂಡಿಯಾ (Celebrity MasterChef India) ರಿಯಾಲಿಟಿ ಶೋ ಈಗ ವಿವಾದದಿಂದಾಗಿ ಸುದ್ದಿಯಾಗಿದೆ.

ಭಾರತದ ಖ್ಯಾತ ಟಿವಿ ನಟ ಗೌರವ್‌ ಖನ್ನಾ (Gaurav Khanna) ಅವರು ಮಾಡಿದ ಒಂದು ವಿಶಿಷ್ಟ ಸಿಹಿ ಖಾದ್ಯದ ನಿಜವಾದ ಸೃಷ್ಟಿಕರ್ತ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಗೌರವ್‌ ಖನ್ನಾ ಈ ಖಾದ್ಯವನ್ನು ವಿದೇಶಿ ಶೆಫ್‌ನಿಂದ ಕದ್ದಿದ್ದಾರೆ ಎಂದು ಹಲವು ನೆಟ್ಟಿಗರು ಆರೋಪಿಸಿದ್ದಾರೆ. ಇದು ಮುಜುಗರ ತರುವ ಸಂಗತಿ ಎಂದು ಕೆಲವರು ಹೇಳಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Laapataa Ladies Movie: ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆದ ʼಲಾಪತಾ ಲೇಡೀಸ್‌ʼ ಚಿತ್ರಕ್ಕೆ ಕೃತಿ ಚೌರ್ಯದ ಕಳಂಕ; ಕಥೆ ಬರೆದ ಬಿಪ್ಲಬ್ ಗೋಸ್ವಾಮಿ ಸ್ಪಷ್ಟನೆ ಏನು?

ಇತ್ತೀಚೆಗೆ ಬಿಡುಗಡೆಯಾದ ಈ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದರಲ್ಲಿ ಗೌರವ್ ಜೇನುತುಪ್ಪ ಹನಿ ಹನಿಯಾಗಿ ತೊಟ್ಟಿಕ್ಕುವ, ನೋಡಲು ಅದ್ಭುತವಾಗಿರುವಂತಹ ಸಿಹಿತಿಂಡಿಯನ್ನು ತಂದು ಜಡ್ಜ್‌ಗಳ ಮುಂದೆ ಇಟ್ಟಿದ್ದಾರೆ. ಇದನ್ನು ನೋಡಿದ ತಕ್ಷಣವೇ ಜಡ್ಜ್‌ಗಳು ಪುಂಖಾನುಪುಂಖವಾಗಿ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಈ ಸಿಹಿತಿಂಡಿಯನ್ನು ನೋಡಿದ ತಕ್ಷಣವೇ ನೆಟ್ಟಿಗರು, ಇದರ ಮೂಲ ಸೃಷ್ಟಿಕರ್ತ ಸ್ವಿಸ್ ಬಾಣಸಿಗ ಡೈವ್ಸ್ ಜೋಶ್ ಎಂದು ಕಾಮೆಂಟ್‌ ಮಾಡಿದ್ದಾರೆ. ಇದು ಅವರು ಮಾಡಿದ ಸಿಹಿತಿಂಡಿಯೊಂದಿಗೆ ಸಾಮ್ಯತೆ ಇದೆ ಎಂದು ಎರಡೂ ಫೋಟೋಗಳನ್ನು ಹೋಲಿಕೆ ಮಾಡಿದ್ದಾರೆ.

ಕೆಲವರು ಗೌರವ್‌ ಖನ್ನಾ ಬೆಂಬಲಕ್ಕೆ ನಿಂತಿದ್ದು, ಗೌರವ್‌ ವೃತ್ತಿಪರ ಶೆಫ್‌ ಅಲ್ಲ. ಆದರೂ ಅವರು ಇಷ್ಟು ಚೆಂದದ ಖಾದ್ಯ ತಯಾರಿಸಿದ್ದು ಶ್ಲಾಘನೀಯ. ಒಬ್ಬರು ಮಾಡಿದ ಅಡುಗೆಯಿಂದ ಪ್ರೇರೇಪಿತರಾಗಿ ಮತ್ತೊಬ್ಬರು ಅದನ್ನೇ ತಯಾರಿಸುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

ಬೆಂಕಿಗೆ ತುಪ್ಪ ಸುರಿದ ಅಮೆರಿಕದ ಶೆಫ್

ಇವೆಲ್ಲಾ ವಿವಾದಗಳು ನಡೆಯುತ್ತಿರುವ ಸಮಯದಲ್ಲಿಯೇ ಅಮೆರಿಕದ ಶೆಫ್‌ ಒಬ್ಬರು ಕಾಮೆಂಟ್‌ ಮಾಡಿ, ಈ ಖಾದ್ಯವನ್ನು ಮೊದಲು ಮಾಡಿದ್ದು ನಾನೇ ಎಂದು ಹೇಳಿದ್ದಾರೆ. “ನನ್ನ ಸಿಹಿತಿಂಡಿ ಪ್ರಪಂಚದಾದ್ಯಂತ ಹರಡಿರುವುದನ್ನು ನಾನು ಇಷ್ಟಪಡುತ್ತೇನೆ. ನಾನೇ ಇದನ್ನು ಮೊದಲು ಮಾಡಿದ್ದು. ಈ ಪರಿಕಲ್ಪನೆಯನ್ನು ಜಗತ್ತಿಗೆ ತೋರಿಸಿದವರಿಗೆ ಕನಿಷ್ಠ ಕ್ರೆಡಿಟ್ ನೀಡಬೇಕು” ಎಂದು ಅಮೆರಿಕನ್‌ ಶೆಫ್‌ ಆರನ್ ಕ್ಲೌಸ್ ಹೇಳಿದ್ದಾರೆ.

ಕಳೆದ ವರ್ಷ ಮಾಸ್ಟರ್‌ಶೆಫ್‌ ಟರ್ಕಿಯಲ್ಲೂ ನನ್ನ ಸಿಹಿತಿಂಡಿಯನ್ನು ಕದಿಯಲಾಗಿತ್ತು. ಕನಿಷ್ಠ ಪಕ್ಷ ನಾನು ಪಟ್ಟ ಪರಿಶ್ರಮಕ್ಕಾದರೂ ಕ್ರೆಡಿಟ್‌ ನೀಡಬೇಕಲ್ಲವೇ ಎಂದು ಆರನ್‌ ಕಾಮೆಂಟ್‌ ಮಾಡಿದ್ದಾರೆ.

ಏನೇ ಇದ್ದರೂ, ಸದ್ಯಕ್ಕೆ ಗೌರವ್‌ ಖನ್ನಾ ಅಡುಗೆ ಮಾಡಲು ಹೋಗಿ ವಿವಾದವನ್ನು ಬೇಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ ಬಾಕ್ಸ್‌ಗಳು ಕುಕ್ಕರ್‌ನ ವಿಷಲ್‌ನಂತೆ ಸೀಟಿ ಹೊಡೆಯುತ್ತಿವೆ. ಈ ವಿವಾದ ಎಲ್ಲಿಗೆ ಹೋಗಿ ನಿಲ್ಲುತ್ತದೋ ಎಂದು ಕಾದುನೋಡಬೇಕಿದೆ.