Job fair: ಏ.16ರಂದು ಕಲಬುರ್ಗಿಯಲ್ಲಿ ಬೃಹತ್ ಉದ್ಯೋಗ ಮೇಳ
ಏ.16ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದಾದ ಬಳಿಕ ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.


ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಕಲ್ಪಿಸಲು ಈಗಾಗಲೇ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಈಗ ಏ.16ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ(Job fair) ಮೇಳ ಆಯೋಜಿಸಲಾಗಿದೆ. ಇದಾದ ಬಳಿಕ ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್.ಕೆ.ಸಿ.ಸಿ.ಐ.) ವತಿಯಿದ ಸಂಸ್ಥೆಯ ಸರ್.ಎಂ.ವಿ. ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಿದ್ದ “ಎಫ್.ಕೆ.ಸಿ.ಸಿ.ಐ ಉದ್ಯೋಗ ಉತ್ಸವ್ 2025-26” ಉದ್ಘಾಟಿಸಿ ಸಚಿವರು ಮಹತ್ವದ ಘೋಷಣೆ ತಿಳಸಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸಮಸ್ಯೆಗಿಂತಲೂ ಕೌಶಲ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೌಶಲಭರಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಕಲಬುರಗಿ, ಕೊಪ್ಪಳ ಮತ್ತು ಮೈಸೂರನ್ನು ಕೇಂದ್ರೀಕರಿಸಿ ‘ಮಲ್ಟಿ ಸ್ಕಿಲ್ ಡೆವಲಪ್ ಮಂಟ್ ಸೆಂಟರ್’ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರದ ವತಿಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಜತೆಗೆ ಆರೋಗ್ಯ ವೃತ್ತಿಪರರಿಗಾಗಿ ಸಾಗರೋತ್ತರ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. “ಜರ್ಮನಿ, ಜಪಾನ್, ಇಟಲಿ ಮತ್ತಿತರ ರಾಷ್ಟ್ರಗಳಿಂದ ನರ್ಸ್, ಅರೆ ವೈದ್ಯಕೀಯ ಮುಂತಾದ ಆರೋಗ್ಯ ವೃತ್ತಿಪರರಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಈ ಆರೋಗ್ಯ ವೃತ್ತಿಪರರಿಗಾಗಿಯೇ ಸಾಗರೋತ್ತರ ಉದ್ಯೋಗ ಮೇಳವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Transfer Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ; ರಾಜ್ಯ ಸರ್ಕಾರ ಮಹತ್ವದ ಆದೇಶ
ರಾಜ್ಯದ ಆರೋಗ್ಯ ವೃತ್ತಿಪರರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಭಾಷೆ ಎಂಬುದು ಅವರಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಜರ್ಮನ್ ಮತ್ತು ಜಾಪಾನೀಸ್ ಭಾಷೆಯನ್ನು ಪರಿಚಯಿಸಲು ಕೂಡ ನಿರ್ಧರಿಸಲಾಗಿದೆ. ಆ ಮೂಲಕ ಭಾಷಾ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.