Kannappa Movie: ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಚಿತ್ರದ ʼಶಿವಶಿವ ಶಂಕರʼ ಹಾಡು ರಿಲೀಸ್
Kannappa Movie: ಖ್ಯಾತ ನಟ ಮೋಹನ್ ಬಾಬು ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ಮುಖ್ಯಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ʼಕಣ್ಣಪ್ಪʼ ಚಿತ್ರದ ʼಶಿವಶಿವ ಶಂಕರʼ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಈ ಹಾಡನ್ನು ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.
![ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಚಿತ್ರದ ʼಶಿವಶಿವ ಶಂಕರʼ ಹಾಡು ರಿಲೀಸ್](https://cdn-vishwavani-prod.hindverse.com/media/original_images/Kannappa_Movie_ZtTmleN.jpg)
ʼಕಣ್ಣಪ್ಪʼ ಚಿತ್ರದ ʼಶಿವಶಿವ ಶಂಕರʼ ಹಾಡನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಬಿಡುಗಡೆ ಮಾಡಿದರು.
![Profile](https://vishwavani.news/static/img/user.png)
ಬೆಂಗಳೂರು: ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಖ್ಯಾತ ನಟ ಮೋಹನ್ ಬಾಬು (Mohan Babu) ನಿರ್ಮಾಣದ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು (Vishnu Manchu) ಮುಖ್ಯಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ ʼಕಣ್ಣಪ್ಪʼ ಚಿತ್ರದ (Kannappa Movie) ʼಶಿವಶಿವ ಶಂಕರʼ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ (Ravi Shankar Guruji) ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಮೋಹನ್ ಬಾಬು, ವಿಷ್ಣು ಮಂಚು, ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಮುಂತಾದ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್,ಸುಮಲತ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೆ ʼಕಣ್ಣಪ್ಪʼ ಅಂದಕೂಡಲೆ ನೆನಪಿಗೆ ಬರುವುದು ಡಾ. ರಾಜಕುಮಾರ್ ಅವರು ಎಂದು ಮಾತು ಆರಂಭಿಸಿದ ನಟ, ನಿರ್ಮಾಪಕ ಮೋಹನ್ ಬಾಬು, ಇಂದು ಶ್ರೀರವಿಶಂಕರ್ ಗುರೂಜಿ ಅವರು ನನ್ನ ಮಗ ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ. ಅವರಿಗೆ ಅನಂತ ಧನ್ಯವಾದ. ಇನ್ನು, ನನ್ನ ಆತ್ಮೀಯ ಗೆಳೆಯರಾದ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಪತ್ನಿಯರಾದ ಭಾರತಿ ವಿಷ್ಣುವರ್ಧನ್ ಹಾಗೂ ಸುಮಲತ ಅಂಬರೀಶ್ ಅವರು ಬಂದಿರುವುದು ಬಹಳ ಖುಷಿಯಾಗಿದೆ. ರಾಕ್‌ಲೈನ್ ವೆಂಕಟೇಶ್ ಅವರು ಕರ್ನಾಟಕದಲ್ಲಿ ʼಕಣ್ಣಪ್ಪʼ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
![1](https://cdn-vishwavani-prod.hindverse.com/media/images/1_66Nio7e.max-1200x800.jpg)
ಸೋಮವಾರದ ದಿನ ನಮ್ಮ ಚಿತ್ರದ ʼಶಿವಶಿವ ಶಂಕರʼ ಹಾಡು ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಗುರೂಜಿ ಅವರಿಗೆ, ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರಿಗೆ ಧನ್ಯವಾದ. ನಮ್ಮ ಚಿತ್ರ ಏಪ್ರಿಲ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ನೋಡಿ ಪ್ರೋತ್ಸಾಹ ನೀಡಿ ಎಂದರು ನಟ ವಿಷ್ಣು ಮಂಚು.
ಇಂದು ಬಿಡುಗಡೆಯಾದ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ನೋಡುವ ಕಾತುರ ಹೆಚ್ಚಾಗಿದೆ. ನಮ್ಮ ಯಜಮಾನರಿಗೆ ಮೋಹನ್ ಬಾಬು ಎಂದರೆ ಬಹಳ ಪ್ರೀತಿ. ಅವರಿಗೂ ನಮ್ಮ ಯಜಮಾನರೆಂದರೆ ಅಷ್ಟೇ ಪ್ರೀತಿ. ಹಾಗಾಗಿ ಮೋಹನ್ ಬಾಬು, ಅವರ ಮಗನಿಗೆ ನಮ್ಮ ಯಜಮಾನರ ಹೆಸರನ್ನೇ (ವಿಷ್ಣು) ಇಟ್ಟಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್.
ಅಂಬರೀಶ್ ಅವರಿಗೆ ಮೋಹನ್ ಬಾಬು ಬಹಳ ಆತ್ಮೀಯರು. ಅವರ ಮಗ ವಿಷ್ಣು ಅವರನ್ನು ಸಹ ನಾವು ಚಿಕ್ಕವಯಸ್ಸಿನಿಂದ ನೋಡಿಕೊಂಡು ಬಂದಿದ್ದೇವೆ. ಮೋಹನ್ ಬಾಬು ನಿರ್ಮಾಣದ ಹಾಗೂ ವಿಷ್ಣು ಮಂಚು ಅಭಿನಯದ ʼಕಣ್ಣಪ್ಪʼ ಚಿತ್ರದ ಹಾಡನ್ನು ನೋಡಿ ಬಹಳ ಖುಷಿಯಾಯಿತು. ಚಿತ್ರ ಯಶಸ್ವಿಯಾಗಲೆಂದು ಹಿರಿಯ ನಟಿ ಸುಮಲತ ಅಂಬರೀಶ್ ಹಾರೈಸಿದರು. ʼಕಣ್ಣಪ್ಪʼ ಚಿತ್ರವನ್ನು ನಾನು ಈಗಾಗಲೇ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ ಎಂದು ಕರ್ನಾಟಕದ ವಿತರಣೆ ಹಕ್ಕು ಪಡೆದುಕೊಂಡಿರುವ ರಾಕ್‌ಲೈನ್ ವೆಂಕಟೇಶ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Promise Finger Rings Fashion 2025: ಸೀಸನ್ ಜ್ಯುವೆಲ್ ಫ್ಯಾಷನ್‌ನಲ್ಲಿ ಪ್ರಾಮಿಸ್ ಫಿಂಗರ್ ರಿಂಗ್ಸ್ ಹಂಗಾಮ
ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್, ಹಾಡು ಬರೆದಿರುವ ರಾಮಜೋಗಿ ಶಾಸ್ತ್ರಿ ಹಾಗೂ ಸಂಗೀತ ನಿರ್ದೇಶಕ ಸ್ಟೀಫನ್ ದೇವಸ್ಸಿ ʼಕಣ್ಣಪ್ಪʼ ಚಿತ್ರದ ಕುರಿತು ಮಾತನಾಡಿದರು. ಹೆಸಾರಾಂತ ಗಾಯಕ ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದಾರೆ.