Sudha Murthy: ಶಾಲೆಗಳಲ್ಲಿ ನೀತಿಕಥೆಗಳ ಕ್ಲಾಸ್ ನಡೆಸಬೇಕು... ನೈತಿಕ ಮೌಲ್ಯ ಇಲ್ಲದ ಮಗು ಉತ್ತಮ ನಾಗರಿಕನಾಗಲು ಅಸಾಧ್ಯ- ಸುಧಾಮೂರ್ತಿ
ಮಕ್ಕಳ ಮನಸ್ಸು ಹಸಿ ಗೋಡೆ ಇದ್ದಂತೆ. ಅಲ್ಲಿ ನಾವು ಯಾವುದನ್ನು ಎಸೆಯುತ್ತೇವೆಯೋ ಅದೇ ಅಚ್ಚಳಿಯದೇ ಉಳಿಯುತ್ತದೆ. ಹಾಗಾಗಿ ಮಕ್ಕಳನ್ನು ಮಕ್ಕಳ ದಾರಿಯಲ್ಲೇ ಹೋಗಿ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳಿಗೆ ಹಲವು ನೀತಿ ಕಥೆಗಳ ಮೂಲಕ ಬದುಕಿನ ಏಳು-ಬೀಳುಗಳ ಬಗ್ಗೆಮನವರಿಕೆ ಮಾಡಬಹುದು ಎಂದು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದರು.
![ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಸುಧಾಮೂರ್ತಿ ಸಲಹೆ](https://cdn-vishwavani-prod.hindverse.com/media/original_images/Sudha_Murthy_21S9kql.jpg)
ರಾಜ್ಯಸಭೆಯಲ್ಲಿ ಮಾತನಾಡಿದ ಸುಧಾಮೂರ್ತಿ
![Profile](https://vishwavani.news/static/img/user.png)
ನವದೆಹಲಿ:ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡದೇ ಹೋದರೆ ಅವರು ಸುಶಿಕ್ಷಿತರಾಗುತ್ತಾರೆಯೇ ಹೊರತು ದೇಶಕ್ಕೆ ಉತ್ತಮ ನಾಗರಿಕರಾಗುವುದಿಲ್ಲ ಎಂದು ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ(Sudha Murthy) ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಬಗ್ಗೆ ಸಂಸತ್‌ನಲ್ಲಿ ಮಾತನಾಡಿದ ಅವರು, ನೈತಿಕ ಮೌಲ್ಯ ಇಲ್ಲದ ಮಗು ಉತ್ತಮ ನಾಗರಿಕನಾಗಲು ಅಸಾಧ್ಯ ಎಂದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Seetharaman) ಅವರ ಈ ಬಾರಿಯ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಲೇ ಮಾತು ಆರಂಭಿಸಿದ ಸುಧಾಮೂರ್ತಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡಬೇಕೆಂದರು. ಪ್ರಸ್ತುತ ನಾವು ಎಐ, ತಾಂತ್ರಿಕ, ವಿಜ್ಞಾನ, ಗಣಿತ ಹೀಗೆ ಹಲವಾರು ರೀತಿಯ ಶಿಕ್ಷಣ ಮಕ್ಕಳಿಗೆ ನೀಡುತ್ತಿದ್ದೇವೆ. ಆದರೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದ್ದಾರೆ.
ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡದೇ ಹೋದರೆ ಅವರು ಸುಕ್ಷಿತರಾಗುತ್ತಾರೆಯೇ ಹೊರತು ದೇಶಕ್ಕೆ ಉತ್ತಮ ನಾಗರಿಕರಾಗುವುದಿಲ್ಲ. ತಮ್ಮ ಮಕ್ಕಳು ಹೇಳಿದ ಮಾತು ಕೇಳುತ್ತಿಲ್ಲ ಎಂದು ಅನೇಕ ಪೋಷಕರು ದೂರುತ್ತಾರೆ. ಇದಕ್ಕೆ ಯಾವುದೇ ತಕ್ಷಣದ ಪರಿಹಾರ ಇಲ್ಲ. ಆದರೆ ಸಮಸ್ಯೆಗೆ ಪರಿಹಾರ ಅಂತು ಖಂಡಿತ ಇದ್ದೇ ಇದೆ. ಮಕ್ಕಳ ಮನಸ್ಸು ಹಸಿ ಗೋಡೆ ಇದ್ದಂತೆ. ಅಲ್ಲಿ ನಾವು ಯಾವುದನ್ನು ಎಸೆಯುತ್ತೇವೆಯೋ ಅದೇ ಅಚ್ಚಳಿಯದೇ ಉಳಿಯುತ್ತದೆ. ಹಾಗಾಗಿ ಮಕ್ಕಳನ್ನು ಮಕ್ಕಳ ದಾರಿಯಲ್ಲೇ ಹೋಗಿ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳಿಗೆ ಹಲವು ನೀತಿ ಕಥೆಗಳ ಮೂಲಕ ಬದುಕಿನ ಏಳು-ಬೀಳುಗಳ ಬಗ್ಗೆಮನವರಿಕೆ ಮಾಡಬಹುದು. ಕರ್ನಾಟಕದ ಒಂದು ಶಾಲೆಯಲ್ಲಿ ನಾವು ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿದ್ದೇವೆ ಎಂದರು.
ಸ್ಮೃತಿ ಮತ್ತು ಶ್ರುತಿ ಎರಡೂ ಬಹಳ ಮುಖ್ಯ. ಶಾಲೆಗಳಲ್ಲಿ ಪೌರಾಣಿಕ ಕಥೆಗಳು, ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಸುಲಭವಾಗಿ ಸೆಳೆಯಬಹುದು. ಇಂತಹ ಕಥೆಗಳನ್ನು ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಸರಿಯಾದ ರೀತಿಯಲ್ಲಿ ಹೇಳಬೇಕಿದೆ. ಆಮೂಲಕವೇ ಅವರಲ್ಲಿ ಮೌಲ್ಯಗಳು ಬೆಳೆಯಲು ಸಾಧ್ಯ. ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಶಾಲೆಯತ್ತ ಸೆಳೆಯಲು ಸಾಧ್ಯ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿದೆ. ಅದು ಪ್ರಶಂಸನೀಯ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Sudha Murthy: ವಿಜಯಪುರ ಏರ್‌ಪೋರ್ಟ್ ಯಾವಾಗ ಶುರು ಮಾಡ್ತೀರಿ? ರಾಜ್ಯಸಭೆಯಲ್ಲಿ ಸುಧಾ ಮೂರ್ತಿ ಪ್ರಶ್ನೆ
ಶಾಲೆಗಳಲ್ಲಿ ನೀತಿಕಥೆ ಹೇಳುವ ತರಗತಿಗಳನ್ನು ಕಡ್ಡಾಯವಾಗಿ ಪರಿಚಯಿಸಬೇಕಿದೆ. ಶಿಕ್ಷಕರ ತರಬೇತಿ ಕೋರ್ಸ್‌ಗಳಲ್ಲಿ ಇದನ್ನು ಸೇರಿಸಬೇಕಿದೆ. ಕಥಾಸರಿತ ಸಾಗರದಂತಹ ನೀತಿಕಥೆಗಳ ಪರಂಪರೆಯನ್ನು ಭಾರತ ಹೊಂದಿದೆ. ಕಥಾಸರಿತ ಸಾಗರ ಸಾವಿರಾರು ಕಥೆಗಳನ್ನು ಹೇಳುತ್ತದೆ. ಆದರೆ ನಾವು ಮಾತ್ರ ಅದರ ಮೌಲ್ಯ ಅರಿತಿಲ್ಲ. ನಾವು ಸದಾ ಪಾಶ್ಚಿಮಾತ್ಯ ರಾಷ್ಟ್ರಗಳು ಏನು ಕಥೆ ಹೇಳುತ್ತವೆ ಎಂಬುದಷ್ಟೇ ನೋಡುತ್ತೇವೆ. ಅತ್ಯದ್ಭುತ ಕಥೆಗಳನ್ನು ಮುಂದಿನ ಪೀಳಿಗೆ ರವಾನಿಸುವ ಪರಂಪರೆಯನ್ನು ಭಾರತ ಹೊಂದಿದೆ. ಹೀಗಾಗಿ ಕಥೆ ಹೇಳುವ ಪರಂಪರೆಯನ್ನು ನಾವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಎಲ್ಲಾ ಶಾಲೆಗಳನ್ನು ಕಥೆ ಹೇಳುವುದನ್ನು ಪಠ್ಯೇತರ ಚಟುವಟಿಕೆಯನ್ನಾಗಿ ಅಳವಡಿಸಬೇಕು ಎಂದು ಕರೆ ನೀಡಿದರು.
ಹಣಕಾಸು ಸಚಿವರಿಗೆ ಈ ಮೂಲಕ ನಾನು ಮನವಿ ಮಾಡಿಕೊಳ್ಳುವುದು ಏನೆಂದರೆ ಕಥೆಗಳ ಮೂಲಕ ಮಕ್ಕಳಿಗೆ ಪಾಠ ಮಾಡುವ ಕ್ರಮವನ್ನು ಪರಿಚಯಿಸಬೇಕು. ಇದಕ್ಕಾಗಿ ಎಲ್ಲಾ ಶಾಲೆಗಳಲ್ಲಿ ಒಂದು ದೊಡ್ಡ ಹವಾನಿಯಂತ್ರಿತ ಕೊಠಡಿಯನ್ನು ನಿರ್ಮಿಸಲು ಹೆಚ್ಚುವರಿ ಅನುದಾನ ನೀಡಬೇಕಿದೆ. ಕಥೆಗಳಿಂದ ಮಾತ್ರ ಮಕ್ಕಳಲ್ಲಿ ಕಲ್ಪನೆಯ ಕೌಶಲ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.