ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: 'ಕಾಂತಾರ: ಚಾಪ್ಟರ್‌ 1' ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದ್ರಾ ರಿಷಬ್‌ ಶೆಟ್ಟಿ?

Kantara: Chapter 1: ಸದ್ಯ ದೇಶದ ಗಮನ ಸೆಳೆದ ಸ್ಯಾಂಡಲ್‌ವುಡ್‌ ಚಿತ್ರ 'ಕಾಂತಾರ: ಚಾಪ್ಟರ್‌ 1' ರಿಲೀಸ್‌ಗೆ ಸಿದ್ಧವಾಗಿದೆ. ಅ. 2ರಂದು ವಿವಿಧ ಭಾಷೆಗಳಲ್ಲಿ ಇದು ತೆರೆಗೆ ಬರಲಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾಕ್ಕಾಗಿ ಅವರು ದಾಖಲೆಯ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದಾಗ್ಯೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

'ಕಾಂತಾರ: ಚಾಪ್ಟರ್‌ 1' ಚಿತ್ರಕ್ಕಾಗಿ ರಿಷಬ್‌ಗೆ 100 ಕೋಟಿ ರೂ. ಸಂಭಾವನೆ?

Profile Ramesh B Jul 9, 2025 6:50 PM

ಬೆಂಗಳೂರು: ಈ ವರ್ಷ ಕುತೂಹಲದಿಂದ ನಿರೀಕ್ಷಿಸುತ್ತಿರುವ ಚಿತ್ರ ಯಾವುದು ಎಂದು ಕೇಳಿದರೆ ಬಹುತೇಕ ಪ್ರೇಕ್ಷಕರ ಉತ್ತರ ʼಕಾಂತಾರ: ಚಾಪ್ಟರ್‌ 1ʼ (Kantara: Chapter 1) ಎಂದೇ ಆಗಿರುತ್ತದೆ. ಅಷ್ಟರಮಟ್ಟಿಗೆ ಈ ಸ್ಯಾಂಡಲ್‌ವುಡ್‌ ಚಿತ್ರ ನಿರೀಕ್ಷೆ ಹುಟ್ಟು ಹಾಕಿದೆ. ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty)-ಹೊಂಬಾಳೆ ಫಿಲ್ಮ್ಸ್‌ (Hombale Films)ನ ಈ ಕನಸಿನ ಕೂಸು ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. 2022ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡು, ಸ್ಯಾಂಡಲ್‌ವುಡ್‌ನ ಘಮ ಜಾಗತಿಕವಾಗಿ ಪಸರಿಸಿದ ʼಕಾಂತಾರʼ (Kantara) ಚಿತ್ರದ ಪ್ರೀಕ್ವೆಲ್‌ ಇದಾಗಿದೆ. ʼಕಾಂತಾರʼ ಚಿತ್ರದ ಕಥೆ ನಡೆಯುವುದಕ್ಕಿಂತ ಮೊದಲು ಏನಾಗಿತ್ತು ಎನ್ನುವುದನ್ನು ಈ ಭಾಗದಲ್ಲಿ ರಿಷಬ್‌ ಶೆಟ್ಟಿ ಹೇಳಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಗಮನ ಸೆಳೆದ ಈ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ʼಕಾಂತಾರʼ ಸಿನಿಮಾಕ್ಕೆ ಪಡೆದ ಸಂಭಾವನೆಗಿಂತ ಬರೋಬ್ಬರಿ ಶೇ. 2,400ರಷ್ಟು ಅಧಿಕ ಹಣವನ್ನು ಜೇಬಿಗಿಳಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ರಿಷಬ್‌ ಶೆಟ್ಟಿ ʼಕಾಂತಾರʼ ಚಿತ್ರವನ್ನು ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದರು. ಈ ಸಿನಿಮಾಕ್ಕಾಗಿ ಅವರಿಗೆ 4 ಕೋಟಿ ರೂ. ಸಂಭಾವನೆ ನೀಡಲಾಗಿತ್ತು ಎನ್ನಲಾಗಿದೆ. ಈ ಚಿತ್ರದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಇದು ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿತ್ತು. ಹೀಗಾಗಿ ಇದರ ಪ್ರೀಕ್ವೆಲ್‌ ಆದ ʼಕಾಂತಾರ: ಚಾಪ್ಟರ್‌ 1ʼ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದ್ದು, ಇದೇ ಕಾರಣಕ್ಕೆ ರಿಷಬ್‌ ಶೆಟ್ಟಿ ಅವರಿಗೆ ದಾಖಲೆಯ ಸಂಭಾವನೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Kantara-1: ಕಾಂತಾರ-1 ರಿಲೀಸ್‌ ಡೇಟ್‌ ಅನೌನ್ಸ್‌! ರಿಷಬ್‌ ಶೆಟ್ಟಿ ಬರ್ತ್‌ಡೇಗೆ ಸಿನಿಪ್ರಿಯರಿಗೆ ಗುಡ್‌ ನ್ಯೂಸ್‌

100 ಕೋಟಿ ರೂ. ಸಂಭಾವನೆ?

ʼಕಾಂತಾರ: ಚಾಪ್ಟರ್‌ 1ʼ ಚಿತ್ರದಲ್ಲಿಯೂ ರಿಷಬ್‌ ಶೆಟ್ಟಿ ನಟಿಸುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಇವರಿಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆಯನ್ನು ಹೊಂಬಾಳೆ ಫಿಲ್ಮ್ಸ್‌ ನೀಡಿದೆ ಎನ್ನಲಾಗುತ್ತದೆ. ಅಲ್ಲದೆ ರಿಷಬ್‌ ಲಾಂಭಾಂಶದಲ್ಲಿ ಷೇರು ಹೊಂದುವ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಈ ಮೂಲಕ ಚಿತ್ರದ ಕಲೆಕ್ಷನ್‌ ಆಧಾರದಲ್ಲಿ ಅವರು 50 ಕೋಟಿ ರೂ. ಹೆಚ್ಚುವರಿ ಆದಾಯ ಪಡೆದುಕೊಳ್ಳಲಿದ್ದಾರೆ ಎಂದೂ ಹೇಳಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಈ ಸುದ್ದಿ ಅಂತೆ-ಕಂತೆಯ ರೂಪದಲ್ಲಿ ಹರಿದಾಡುತ್ತಿದೆ. ಒಂದುವೇಳೆ ಇದು ನಿಜವಾದರೆ ರಿಷಬ್‌ ಶೆಟ್ಟಿ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರೆನಿಸಿಕೊಳ್ಳಲಿದ್ದಾರೆ.

ಅ. 2ರಂದು ತೆರೆಗೆ

ʼಕಾಂತಾರʼದ ಮೂಲಕ ರಿಷಬ್‌ ಶೆಟ್ಟಿ ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ಜಗತ್ತಿಗೇ ಪರಿಚಯಿಸಿದ್ದರು. ಈ ಭಾಗದಲ್ಲಿಯೂ ಹಲವು ವಿಶಿಷ್ಟ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಪ್ರಮುಖ ಭಾಗವಾಗಿರುವ ಯುದ್ಧದ ದೃಶ್ಯವನ್ನು ಬಹಳಷ್ಟು ಅದ್ಧೂರಿಯಾಗಿ ತೆರೆಮೇಲೆ ತರಲು ಅವರು ಮುಂದಾಗಿದ್ದು, ಇದರ ಚಿತ್ರೀಕರಣಕ್ಕಾಗಿ ಸುಮಾರು 500ರಷ್ಟು ನುರಿತ ಸಾಹಸ ಕಲಾವಿದರನ್ನು ಬಳಸಿಕೊಂಡಿದ್ದಾರೆ.

ʼಕಾಂತಾರ: ಚಾಪ್ಟರ್‌ 1ʼ ಸಿನಿಮಾ ಅ. 2ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕನ್ನಡದ ಜತೆಗೆ ಹಿಂದಿ, ತಮಿಳು, ಮಲಯಾಳಂ, ತೆಲುಗು, ಬೆಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ರಿಲೀಸ್‌ ಆಗಲಿದೆ. ಅಲ್ಲದೆ ಚಿತ್ರಕ್ಕಾಗಿ ರಿಷಬ್‌ ಶೆಟ್ಟಿ ಕಳರಿಪಟ್ಟು, ಕುದುರೆ ಸವಾರಿ ಮುಂತಾದ ವಿದ್ಯೆಗಳನ್ನು ಕಲಿತಿದ್ದು, ಹೊಸದೊಂದು ಪ್ರಪಂಚವನ್ನು ಪ್ರೇಕ್ಷಕರೆದುರು ತೆರೆದಿಡಲು ಸಜ್ಜಾಗಿದ್ದಾರೆ. ರಿಷಬ್‌ ಬಿಟ್ಟರೆ ಬೇರೆ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಇದುವರೆಗೆ ಬಿಟ್ಟುಕೊಟ್ಟಿಲ್ಲ.