Train Accident: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು; ಓರ್ವ ಸಾವು?
Bangalore-Kamakhya Express: ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲು ಒಡಿಶಾದ ಕಠಕ್ ಜಿಲ್ಲೆಯ ಚೌದ್ವಾರ ಬಳಿ ಭಾನುವಾರ (ಮಾ. 30) ಹಳಿ ತಪ್ಪಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರೈಲು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.

ಹಳಿ ತಪ್ಪಿದ ಬೆಂಗಳೂರು-ಕಾಮಾಖ್ಯ ಎಕ್ಸ್‌ಪ್ರೆಸ್ ರೈಲು.

ಭುವನೇಶ್ವರ: ದೇಶದಲ್ಲಿ ಮತ್ತೊಂದು ರೈಲು ದುರಂತ (Train Accident) ಸಂಭವಿಸಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ (Bangalore-Kamakhya Express) ರೈಲು ಒಡಿಶಾದ ಕಠಕ್ ಜಿಲ್ಲೆಯ ಚೌದ್ವಾರ ಬಳಿ ಭಾನುವಾರ (ಮಾ. 30) ಹಳಿ ತಪ್ಪಿ ಈ ದುರಂತ ಸಂಭವಿಸಿದೆ. ಬೆಂಗಳೂರು-ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಒಡಿಶಾದಲ್ಲಿ ಹಳಿ ತಪ್ಪಿವೆ ಎಂದು ವರದಿ ತಿಳಿಸಿವೆ. ʼʼಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲು ವೈದ್ಯರ 3 ತಂಡಗಳನ್ನು ನಿಯೋಜಿಸಲಾಗಿದೆ'' ಎಂದು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಸುಭಾಷ್ ಚಂದ್ರ ರೇ ತಿಳಿಸಿದ್ದಾರೆ. ಮೃತರ ಗುರುತು ಇನ್ನೂ ತಿಳಿದುಬಂದಿಲ್ಲ.
ನೆರ್ಗುಂಡಿ ನಿಲ್ದಾಣದ ಬಳಿ ಬೆಳಗ್ಗೆ 11: 54ರ ಸುಮಾರಿಗೆ ಬೋಗಿಗಳು ಹಳಿ ತಪ್ಪಿವೆ ಎಂದು ಪಿಟಿಐ ವರದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೊರಟ್ಟಿದ್ದ ರೈಲು ಇದಾಗಿತ್ತು. ರೈಲು ಅಸ್ಸಾಂ ಗವಾಹಟಿಯ ಕಾಮಾಕ್ಯ ರೈಲು ನಿಲ್ದಾಣಕ್ಕೆ ತೆರಳುತ್ತಿತ್ತು.
ಎಎನ್‌ಐ ಸುದ್ದಿ ಸಂಸ್ಥೆಯ ಪೋಸ್ಟ್ ಇಲ್ಲಿದೆ:
#WATCH | Cuttack, Odisha: 11 coaches of 12551 Bangalore-Kamakhya AC Superfast Express derailed near Nergundi Station in Cuttack-Nergundi Railway Section of Khurda Road Division of East Coast Railway at about 11:54 AM today. There are no injuries or casualties reported till now. pic.twitter.com/xBOMH4nRRh
— ANI (@ANI) March 30, 2025
ಈ ಸುದ್ದಿಯನ್ನೂ ಓದಿ: Viral News: ಇಬ್ಬರು ಯುವತಿಯನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ
ಸಹಾಯವಾಣಿ
ಸಹಾಯವಾಣಿ ಸಂಖ್ಯೆಗಳು: ಭುವನೇಶ್ವರ್ 8455885999 ಕಟಕ್ – 8991124238, 7205149591 ಭುವನೇಶ್ವರ್ – 8114382371 ಭದ್ರಕ್ – 9437443469 ಸಂಬಲ್ಪುರ ಜೂ. – 8249999674 ಖುರ್ದಾ ರಸ್ತೆ – 6742492245 ಜಾಜ್ಪುರ್ ಕಿಯೋಂಜರ್ – 9124639558.
ಸ್ಥಳಕ್ಕೆ ಧಾವಿಸಿದ ಎನ್‌ಡಿಆರ್‌ಎಫ್ ಪಡೆ
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಕಾರ್ಯ ಪ್ರವೃತ್ತವಾಗಿದೆ. ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು, ಅಗತ್ಯ ನೆರವು ನೀಡುತ್ತಿದ್ದಾರೆ.
"ನಮ್ಮ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಸಂತ್ರಸ್ತರಿಗೆ ಸುರಕ್ಷತೆ ಮತ್ತು ತ್ವರಿತ ಸಹಾಯವನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ರೈಲು ಹಳಿ ತಪ್ಪಲು ಕಾರಣ ಏನು ಎನ್ನುವುದು ತಿಳಿದ ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಹಿಮಂತ ಶರ್ಮಾ ಹೇಳಿದ್ದೇನು?
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ (Himanta Sarma) ಈ ಬಗ್ಗೆ ಒಡಿಶಾ ಸರ್ಕಾರದೊಂದಿಗೆ ಮಾತನಾಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ʼʼ12551 ಕಾಮಾಕ್ಯ ಎಕ್ಸ್‌ಪ್ರೆಸ್ ಒಡಿಶಾದಲ್ಲಿ ಹಳಿ ತಪ್ಪಿದೆ. ಒಡಿಶಾ ಸರ್ಕಾರ ಮತ್ತು ರೈಲ್ವೆಯ ಜತೆಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ. ಪ್ರತಿ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ. ಸಾವಿನ ಬಗ್ಗೆ ಭಾರತೀಯ ರೈಲ್ವೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.