Empuraan Controversy: 17 ಅಲ್ಲ 24 ಕಡೆ ಕತ್ತರಿ: ʼಎಂಪುರಾನ್ʼ ಚಿತ್ರದಲ್ಲಿ ಮಹತ್ತರ ಬದಲಾವಣೆ: ನಿರ್ಮಾಪಕ ಹೇಳಿದ್ದೇನು?
ಕೇರಳ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ʼಎಂಪುರಾನ್ʼ ಚಿತ್ರತಂಡ ಸದ್ಯ ಹಲವು ಬದಲಾವಣೆ ಮಾಡಿಕೊಂಡಿದೆ. ಈ ಹಿಂದೆ ಚಿತ್ರತಂಡ 17 ಕಡೆ ಬದಲಾವಣೆ ತರುವುದಾಗಿ ಹೇಳಿತ್ತು. ಆದರೆ ಇದೀಗ ಹೊರ ಬಂದಿರುವ ಮಾಹಿತಿ ಪ್ರಕಾರ 24 ಕಡೆ ಬದಲಾವಣೆ ಮಾಡಲಾಗಿದೆ.


ತಿರುವನಂತಪುರಂ: ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಮಲಯಾಳಂ ಚಿತ್ರ ʼಎಲ್ 2: ಎಂಪುರಾನ್ʼ (L2 Empuraan) 5 ದಿನಗಳಲ್ಲೇ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಮಾಲಿವುಡ್‌ನಲ್ಲಿ ಹೊಸತೊಂದು ಇತಿಹಾಸ ಬರೆದಿದೆ. ಇದರ ಜತೆ ಜತೆಗೆ ಸದ್ಯ ಕೇರಳ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ (L2 Empuraan Row). ಮೋಹನ್‌ಲಾಲ್ (Mohanlal) ನಟನೆಯ, ಪೃಥ್ವಿರಾಜ್ (Prithviraj Sukumaran) ನಿರ್ದೇಶನದ ಈ ಚಿತ್ರದಲ್ಲಿ ಗುಜರಾತ್ ಗಲಭೆ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಆಕ್ಷೇಪಾರ್ಹ ರೀತಿಯಲ್ಲಿ ಪ್ರದರ್ಶಿಸಲಾಗಿದೆ ಎಂದು ಬಲ ಪಂಥೀಯರು ಆಕ್ಷೇಪ ವ್ಯಕ್ತಪಡಿಸುವ ಮೂಲಕ ವಿವಾದ ಆರಂಭವಾಗಿತ್ತು. ಇದೀಗ ಕಾಂಗ್ರೆಸ್, ಎಡ ಪಂಥೀಯರು ಸಿನಿಮಾಕ್ಕೆ ಬೆಂಬಲ ಸೂಚಿಸುವ ಮೂಲಕ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ದೇಶಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಚಿತ್ರತಂಡ ಸ್ವಯಂಪ್ರೇರಿತವಾಗಿ ಹಲವು ದೃಶಗಳಿಗೆ ಕತ್ತರಿ ಪ್ರಯೋಗಿಸಿದರೆ, ಕೆಲವು ದೃಶ್ಯಗಳನ್ನು ಬದಲಾಯಿಸಿದೆ.
ಈ ಹಿಂದೆ ಚಿತ್ರತಂಡ 17 ಕಡೆ ಬದಲಾವಣೆ ತರುವುದಾಗಿ ಹೇಳಿತ್ತು. ಆದರೆ ಇದೀಗ ಹೊರ ಬಂದಿರುವ ಮಾಹಿತಿ ಪ್ರಕಾರ 24 ಕಡೆ ಬದಲಾವಣೆ ಮಾಡಲಾಗಿದೆ. ಬದಲಾದ ವರ್ಷನ್ ಬುಧವಾರ (ಏ. 2)ದಿಂದ ಪ್ರದರ್ಶನಗೊಳ್ಳಲಿದೆ.
ಪೃಥ್ವಿರಾಜ್ ಹಂಚಿಕೊಂಡ ಪೋಸ್ಟ್:
ಈ ಸುದ್ದಿಯನ್ನೂ ಓದಿ: L2 Empuraan Row: ಸಂಘ ಪರಿವಾರ ಕೋಮು ದ್ವೇಷ ಹರಡುತ್ತಿದೆ; ʼಎಂಪುರಾನ್ʼ ವಿವಾದಕ್ಕೆ ತುಪ್ಪ ಸುರಿದ ಕೇರಳ ಸಿಎಂ ಪಿಣರಾಯಿ ವಿಜಯನ್
ಏನೆಲ್ಲ ಬದಲಾವಣೆ?
ಧನ್ಯವಾದ ಟೈಟಲ್ ಕಾರ್ಡ್‌ನಲ್ಲಿದ್ದ ಕೇಂದ್ರ ಸಚಿವ, ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಹೆಸರನ್ನು ಡಿಲೀಟ್ ಮಾಡಲಾಗಿದ್ದು, ಚಿತ್ರದಲ್ಲಿದ್ದ ಮಹಿಳೆಯರ ಮೇಲಿನ ದೌರ್ಜನ್ಯದ ದೃಶ್ಯಗಳನ್ನು ಸಂಪೂರ್ಣ ತೆಗೆದು ಹಾಕಲಾಗಿದೆ, ಧಾರ್ಮಿಕ ಚಿಹ್ನೆಯ ಹಿನ್ನೆಲೆಯಲ್ಲಿ ವಾಹನಗಳು ಸಂಚರಿಸುವ ಸೀನ್ ಕಟ್ ಮಾಡಲಾಗಿದೆ. ಅಲ್ಲದೆ ಎನ್‌ಐಎ ಎನ್ನುವ ಪದವೂ ಅಪ್‌ಡೇಟೆಡ್ ವರ್ಷನ್‌ನಲ್ಲಿ ಇರುವುದಿಲ್ಲ. ಜತೆಗೆ ಮುಖ್ಯ ವಿಲನ್‌ನ ಭಜರಂಗಿ ಎನ್ನುವ ಹೆಸರಿನ ಬದಲು ಬಲ್‌ದೇವ್ ಎಂದು ಬದಲಾವಣೆ ಮಾಡಲಾಗಿದೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.
ನಿರ್ಮಾಪಕ ಆ್ಯಂಟನಿ ಪೆರುಂಬಾವೂರು ಹೇಳಿದ್ದೇನು?
ಇನ್ನು ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಆ್ಯಂಟನಿ ಪೆರುಂಬಾವೂರು ಸ್ವಯಂಪ್ರೇರಿತವಾಗಿ ಚಿತ್ರದಲ್ಲಿ ಬದಲಾವಣೆ ತಂದಿದ್ದಾಗಿಯೂ, ಯಾರ ಒತ್ತಡಕ್ಕೂ, ಬೆದರಿಕೆಗೂ ಮಣಿದಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼತಪ್ಪುಗಳನ್ನು ಸರಿಪಡಿಸುವುದೇ ನಮ್ಮ ಮುಖ್ಯ ಉದ್ದೇಶ. ಚಿತ್ರತಂಡದ ಎಲ್ಲರೂ ಸೇರಿ ರೀ ಎಡಿಟಿಂಗ್‌ಗೆ ಮುಂದಾಗಿದ್ದೇವೆ. ಇದರಲ್ಲಿ ನಿರ್ದೇಶಕ ಪೃಥ್ವಿರಾಜ್ ಅವರೊಬ್ಬರನ್ನೇ ಹೊಣೆಯಾಗಿಸುತ್ತಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಬಲ ಪಂಥೀಯರ ಒತ್ತಡಕ್ಕೆ ಮಣಿದು ಚಿತ್ರತಂಡ ಬದಲಾವಣೆಗೆ ಮುಂದಾಗಿದೆ ಎನ್ನುವ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಕಥೆ ಬರೆದ ಮುರಳಿ ಗೋಪಿ ಅವರಿಗೆ ಈ ಬದಲಾವಣೆಗಳ ಬಗ್ಗೆ ಅಸಮಾಧಾನವಿದೆ ಎಂದೂ ಕೆಲವೊಂದು ವರದಿ ತಿಳಿಸಿವೆ.
ಸುರೇಶ್ ಗೋಪಿ ಹೆಸರು ಮಾಯ
ಈ ಹಿಂದೆ ಚಿತ್ರ ಹೊರ ಬರಲು ಸಹಾಯ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಕೇಂದ್ರ ಸಚಿವ ಸುರೇಶ್ ಗೋಪಿ ಅವರ ಹೆಸರು ಟೈಟಲ್ ಕಾರ್ಡ್‌ನಲ್ಲಿ ನಮೂದಿಸಲಾಗಿತ್ತು. ಆದರೆ ಇದೀಗ ವಿವಾದ ಭಿಗಿಲೆದ್ದ ಹಿನ್ನೆೆಲೆಯಲ್ಲಿ ಅವರ ಸೂಚನೆ ಮೇರೆಗೆ ಹೆಸರು ತೆಗೆಯಲಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ
ಇದೇ ವೇಳೆ ಅತೀ ಹೆಚ್ಚು ಗಳಿಸಿದ 2ನೇ ಮಲಯಾಳಂ ಚಿತ್ರ ಎನ್ನುವ ಹೆಗ್ಗಳಿಕೆ ʼಎಂಪುರಾನ್ʼ ಪಾತ್ರವಾಗಿದೆ. ಈ ಹಿಂದೆ ಟೊವಿನೋ ಥಾಮಸ್ ಅವರ ʼ2018ʼ ಎನ್ನುವ ಸಿನಿಮಾದ ಹೆಸರಿನಲ್ಲಿತ್ತು ಈ ದಾಖಲೆ. ʼ2018ʼ ಚಿತ್ರ ಒಟ್ಟಾರೆಯಾಗಿ 175.4 ಕೋಟಿ ರೂ. ಗಳಿಸಿತ್ತು. 5 ದಿನಗಳಲ್ಲಿ 200 ಕೋಟಿ ರೂ. ಗಳಿಸುವ ಮೂಲಕ ʼಎಂಪುರಾನ್ʼ ಈ ದಾಖಲೆ ಸರಿಗಟ್ಟಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಸದ್ಯ 240 ಕೋಟಿ ರೂ. ಗಳಿಸಿದ ʼಮಂಜುಮ್ಮಲ್ ಬಾಯ್ಸ್ʼ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಚಿತ್ರ ಎನಿಸಿಕೊಂಡಿದ್ದು, ಇದನ್ನು ಕೆಲವೇ ದಿನಗಳಲ್ಲಿ ʼಎಂಪುರಾನ್ʼ ಈ ದಾಖಲೆ ಮುರಿಯಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.