ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ʼಭಾರತ ರತ್ನʼ ನೀಡಲು ಕೇಂದ್ರ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

DK Shivakumar: ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ʼಭಾರತ ರತ್ನʼ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಡಿಕೆಶಿ ಮನವಿ

Profile Siddalinga Swamy Apr 1, 2025 4:08 PM

ತುಮಕೂರು: ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ʼಭಾರತ ರತ್ನʼ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ಅವರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳ ಎಂದು ಹೇಳಿದರು.

ʼಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಹೀಗೆ ಮನುಷ್ಯತ್ವದ ಪ್ರತಿರೂಪವಾದ ಶಿವಕುಮಾರಸ್ವಾಮೀಜಿ ಅವರನ್ನು ನೆನೆಸಿಕೊಂಡು, ಅವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ನಾವು ಇಲ್ಲಿ ಸೇರಿದ್ದೇವೆʼ ಎಂದರು.

ʼಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆʼ ಎಂದರು.

ನಾವೆಲ್ಲರೂ ದೇವರ ಸ್ವರೂಪಿಯನ್ನು ಸ್ಮರಿಸುತ್ತಿದ್ದೇವೆ. ನಮ್ಮ ದೇಹಕ್ಕೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಮಾಡಬೇಕು. ಮನುಷ್ಯನ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನಾನು ಧರ್ಮ, ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವನೊಬ್ಬ ನಾಮ ಹಲವು. ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದು ನಾವು ಈ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ಮರಿಸುತ್ತಿದ್ದೇವೆ ಎಂದು ಹೇಳಿದರು.

ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಆಗಮಿಸಿದ್ದೆ. ಇಲ್ಲಿನ ಅನ್ನದಾಸೋಹ ಕಾರ್ಯಕ್ರಮ ನೋಡಿ ಎಸ್.ಎಂ. ಕೃಷ್ಣ ಅವರು ವಾಪಸ್ ತೆರಳುವಾಗ ಮಹತ್ವದ ನಿರ್ಧಾರ ಮಾಡಿದರು. ಸಿದ್ದಗಂಗಾ ಮಠದ ಅನ್ನದಾಸೋಹ ಕಾರ್ಯಕ್ರಮ ನಮ್ಮ ಸರ್ಕಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಬೇಕು ಎಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ʼಮಧ್ಯಾಹ್ನದ ಬಿಸಿಯೂಟ ಯೋಜನೆʼ ಆರಂಭಿಸಿದರು ಎಂದು ಅವರು ಸ್ಮರಿಸಿದರು.

ಈ ಸುದ್ದಿಯನ್ನೂ ಓದಿ | Second PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಕ್ಕೆ ದಿನಗಣನೆ, ಇಲ್ಲಿ ವೀಕ್ಷಿಸಿ

ಧರ್ಮ ಎಂದರೆ ಮನುಷ್ಯತ್ವ. ಮನುಷ್ಯತ್ವ ರೂಪಿಸುವ ಪವಿತ್ರ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ, ಮೇಲು ಕೀಳು ತಾರತಮ್ಯವಿಲ್ಲ. ಹೀಗಾಗಿ ಈ ಮಠಕ್ಕೆ ದೊಡ್ಡ ಹೆಸರಿದೆ. ಇದನ್ನು ನಾವು ನೀವು ಉಳಿಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.